One N Only Exclusive Cine Portal

ಟಗರು ಡಾಲಿಯದ್ದು ಮಾಮೂಲಿ ವ್ಯಕ್ತಿತ್ವವಲ್ಲ!

ಸೂರಿ ನಿರ್ದೇಶನದ ಟಗರು ಚಿತ್ರದಲ್ಲಿ ಡಾಲಿಯಾಗಿ ಅಬ್ಬರಿಸಿರುವವರು ಧನಂಜಯ್. ಬಹುಶಃ ಅಂಥಾದ್ದೊಂದು ಪಾತ್ರವನ್ನು ಧನಂಜಯ್ ನಿರ್ವಹಿಸಿದ್ದಾರೆಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಸೂರಿ ರೂಪಿಸಿರೋ ಆ ಪಾತ್ರದಲ್ಲಿನ ಅಬ್ಬರದ ನಟನೆಯ ಮೂಲಕ ಧನಂಜಯ್ ಸಿನಿಮಾ ಜೀವನದ ಮತ್ತೊಂದು ಆಯಾಮದತ್ತ ಹೊರಳಿಕೊಳ್ಳೋ ಲಕ್ಷಣಗಳೂ ದಟ್ಟವಾಗಿವೆ. ಬಹುಶಃ ಆ ಪಾತ್ರವನ್ನು, ನಟನೆಯನ್ನು ಮೆಚ್ಚಿಕೊಳ್ಳದವರೇ ಇಲ್ಲವೇನೋ. ಈವರೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಧನಂಜಯ್ ಅವರಿಗೆ ಟಗರು ಚಿತ್ರ ಬೇರೆಯದ್ದೇ ಐಡೆಂಟಿಟಿಯನ್ನು ಕೊಡ ಮಾಡಿದೆ. ಈ ಮೂಲಕ ಅವಕಾಶಗಳೂ ದಂಡಿ ದಂಡಿಯಾಗಿ ಡಾಲಿಯನ್ನು ಹುಡುಕಿ ಬರಲಾರಂಭಿಸಿವೆ. ಈ ಹಿನ್ನೆಲೆಯಲ್ಲಿ ಧನಂಜಯ್ ಬದುಕಿನ ಕೆಲ ಇಂಟರೆಸ್ಟಿಂಗ್ ಮಾಹಿತಿಗಳು ಇಲ್ಲಿವೆ…

ತನ್ನ ಸಿನಿಮಾ ಪಯಣದೊಳಗೆ ಎಲ್ಲ ಕಡೆಯೂ ಘಟಾನುಘಟಿಗಳ ಗರಡಿಯೊಳಗೆ ಪಳಗುವ ಅವಕಾಶಗಳನ್ನೇ ಕಸಿದುಕೊಂಡ ಯುವನಟ ಧನಂಜಯ್. ಧನು ಹುಟ್ಟಿದ್ದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಾಳೇನಹಳ್ಳಿ ಅನ್ನೋ ಗ್ರಾಮದಲ್ಲಿ, ತಂದೆ ಪ್ರೈಮರಿ ಮೇಷ್ಟ್ರು, ಜೊತೆಗೆ ಕೃಷಿಕರು. ಅತ್ಯಂತ ಸಾರ್ಥಕದ ಬಾಲ್ಯ, ಹರೆಯವನ್ನು ಕಳೆದ ಧನುಗೆ ತನ್ನ ಜೀವನದ ಬಗ್ಗೆ ಹೆಮ್ಮೆ ಇದೆ ಅಂತಾರೆ. ನಿಮ್ಮ ಸಿನಿಮಾ ಆಕರ್ಷಣೆಗೆ ಸ್ಪೂರ್ತಿ ಯಾರು ಅಂದ್ರೆ ನಂಗೆ ಮಾತ್ರ ಅಲ್ಲ, ಕನ್ನಡದ ಬಹುತೇಕ ಜನರಿ ಅಣ್ಣಾವ್ರೆ ಸ್ಪೂರ್ತಿ ಹಾಗೆ ನಂಗು ಕೂಡ, ಭಕ್ತ ಪ್ರಹ್ಲಾದ, ಬಬ್ರುವಾಹನ, ಯಾವತ್ತಿಗೂ ನನ್ನ ಮೆಚ್ಚಿನ ಸಿನಿಮಾಗಳು ಅಂತಾರೆ. ೬ ಅಡಿ ಎತ್ತರದ, ಕಟ್ಟು ಮಸ್ತಾದ ದೇಹ ಇವರನ್ನ ಹೀರೊ ತರ ಪ್ರೆಸೆಂಟ್ ಮಾಡತ್ತೆ. ಜೊತೆಗೆ ಗಾಢವಾದ ರಂಗಭೂಮಿ ಹಿನ್ನೆಲೆ, ಮೈಮ್ ರಮೇಶ್, ಕ್ರಿಶ್ಚಿಯನ್ ಸ್ಟುಕಲ್ ಅವರಿಂದ ಪಡೆದ ನಟನ ತರಬೇತಿ ಇವರನ್ನ ಪ್ರಬುದ್ಧ ನಟನ್ನನಾಗಿ ಮಾಡಿದೆ. ಆಟೋ ಡ್ರೈವರ್‌ಗಳೆ ನಂಗೆ ಆದರ್ಶ ಎನ್ನುತ್ತ ಸಿನಿಮಾ ನಿರ್ದೇಶಕನಾಗೊ ಕನಸು ಕಂಡಿರೊ ಧನುಗೆ ಇಲ್ಲಿ ಸಿಕ್ಕಿರುವ ಅನುಭವೀ ನಿರ್ದೇಶಕರಿಂದ ಕ್ಯಾಮರಾ ಮುಂದಿನ ನಟನೆ ಕಲಿಯೋದರ ಜೊತೆಗೆ ನಿರ್ದೇಶನದ ಪಟ್ಟುಗಳನ್ನು ಗಮನಿಸುತ್ತ ನಿರಂತರ ಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇವರ ಸಿನಿಮಾ ಚಿತ್ರಿಕರಣದ ಘಟನೆಗಳನ್ನು ಹಂಚಿಕೊಂಡ ಧನು ಖುಷಿಯಿಂದ ಹೀಗೆ ಹೇಳುತ್ತಾರೆ:

`ನಾನು ಚಿಕ್ ವಯಸ್ಸಿಂದಾನು ನಾಟಕ, ಸಿನಿಮಾ ಹುಚ್ಚಲ್ಲೆ ಬೆಳೆದೋನು. ನನಗೆ ಮನೆ, ಸ್ನೇಹಿತರಿಂದ ಒಳ್ಳೆ ಪ್ರೋತ್ಸಾಹ ಸಿಕ್ತು, ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ ಎಲ್ಲಾರಿಂದಾನು ನಾಟಕ ಕಲಿತೆ. ಆಮೇಲೆ ಮೈಸೂರಲ್ಲಿ ರಂಗಾಯಣ ಸಂಸ್ಥೆ ಬಗ್ಗೆ ತುಂಬಾ ಆಸಕ್ತಿ ಬೆಳೀತು, ಅಲ್ಲಿನ ಹವ್ಯಾಸಿ ರಂಗ ತಂಡವೊಂದರ ಜೊತೆ ನಾಟಕಗಳಲ್ಲಿ ಬೆರೆತೆ, ನಟನೆ ಪಳಗಿಸಿಕೊಂಡೆ, ನಂತರ ಮೊದಲ ನಾಟಕನು ಆಡಿದ್ವಿ, ಹೆಸರು ಏಕಲವ್ಯ, ನನ್ನ ರಂಗಭೂಮಿ ಗುರುಗಳಾದ ಮೈಮ್ ರಮೇಶ್ ಅದರ ನಿರ್ದೇಶಕರು, ನನ್ನ ಪಾತ್ರ ದೋರ್ಣಾಚಾರ್ಯ. ನಾಟಕದ ನನ್ನ ಪಾತ್ರ ನೋಡಿ ತುಂಬಾ ಮೆಚ್ಚಿ ನನಗೆ ಮತ್ತೊಂದು ನಾಟಕ ಶೇಕ್ಸ್‌ಪಿಯರ್ ಅವರ ಜೂಲಿಯಸ್ ಸೀಸರ್‌ನಲ್ಲೂ ಪ್ರಮುಖ ಪಾತ್ರ ಕೊಟ್ರು. ನಂತರ ರಂಗಭೂಮಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಹೆಸರುವಾಸಿ ನಿರ್ದೇಶಕ ಕ್ರಿಶ್ಚಿಯನ್ ಸ್ಟುಕಲ್ ಅವರ ಜೊತೆ ಜರ್ಮನಿಗೆ ಹೊರಟೆ, ಅಲ್ಲಿ ಒಂದು ತಿಂಗಳ ತರಬೇತಿ ಸಿಕ್ತು, ಲಕ್ಷಾಂತರ ಜರ್ಮನಿ ಜನರ ಮುಂದೆ ನಾಟಕ ಮಾಡಿದೆ, ಚಪ್ಪಾಳೆ ಬಂತು, ನಂಗು ಅತ್ಮವಿಶ್ವಾಸ ಸಿಕ್ತು, ಅಲ್ಲಿಂದ ಸೀದಾ ಮೈಸೂರ್ ಬಂದು ಬಿಇ ಮುಗಿಸಿ ಇನ್ಫೋಸಿಸ್ ಸೇರಿ ಒಂದು ವರ್ಷ ಕೆಲಸ ಮಾಡಿದೆ, ಆಮೇಲೆ ಅದನ್ ಬಿಟ್ಟು ಸಿನಿಮಾ ನಟ ಆಗ್ಬೇಕು ಅಂತ ಹಠಕ್ಕೆ ಬಿದ್ದೆ!

ಮೈಸೂರಿನಲ್ಲಿ ನನ್ ಸ್ನೇಹಿತ ಒಬ್ಬನ ಅನಿಮೇಷನ್ ಕಂಪನೀಲಿ ಕೆಲಸಕ್ಕೆ ಸೇರಿ ಅಲ್ಲಿ ಸ್ಕ್ರಿಪ್ಟ್ ವರ್ಕ್ ಕೆಲಸ ಮಾಡ್ತಾ ಇರೋವಾಗ ಗುರುಪ್ರಸಾದ್ ಭೇಟಿ ಆಯ್ತು, ಅವರಿಗೆ ಅನಿಮೇಷನ್ ರೆಫರ್ ಗೆ ಅಂತ ನಾನು ನಟನೆ ಮಾಡಿದೆ, ಅದರಿಂದ ಖುಷಿ ಆದ ಗುರು ಸಾರ್ ನನ್ಗೆ ಮಾತ್ ಕೊಟ್ರು ನಿನ್ನ ಹೀರೋ ಮಾಡ್ತೀನಿ ಎಲ್ಲು ಛಾನ್ಸ್ ಕೇಳೋಕೆ ಹೋಗ್ಬೇಡ ಅಂತ, ನಂತರ ಬೆಂಗಳೂರಿಗೆ ಬಂದು ೩ವರ್ಷ ಕಾದೆ. ಬೆಂಗಳೂರಲ್ಲಿ ಆ ೩ವರ್ಷ ಅದು ಇದು ಮಾಡ್ತಾನೆ ಇದ್ದೆ. ಕಥೆ ಬರೆದೆ, ಶಾರ್ಟ್ ಫಿಲ್ಮ್‌ಗಳಲ್ಲಿ ಕೆಲಸ ಮಾಡಿದೆ, ಎಲ್ಲಾ ಅದ್ಮೇಲೆ ಗುರು ಸಾರ್ ಕೋಮಲ್‌ಗೆ ಇದ್ದ ಪಾತ್ರನ ನಂಗೆ ಕೊಟ್ರು, ಅಲ್ಲಿಂದ ರಾಟೆಗೆ ಅರ್ಜುನ್ ಸಾರ್ ನನ್ನ ಹೀರೋ ಮಾಡಿದ್ರು, ಆಮೇಲೆ ಒಬ್ಬೊಬ್ಬರೇ ಸ್ಟಾರ್ ಡೈರೆಕ್ಟರ್‌ಗಳು ಅವಕಾಶ ಕೊಟ್ರು. ಇದೆಲ್ಲ ನನ್ನ ಅದೃಷ್ಟ ಅಂತಾನೇ ಭಾವಿಸ್ತೀನಿ.

ಒಂದಿನ ಸೆಟ್‌ನಲ್ಲಿ ಎಲ್ಲಾ ಕೆಲಸ ಮಾಡ್ಕೊಂಡಿದ್ವಿ, ನಂದು ಇನ್ನು ಟಾಕಿ ಪೋಷನ್ ಸೀನ್ ಶುರು ಆಗಿರಲಿಲ್ಲ, ರಿಯಾಕ್ಷನ್ ಸೀನ್ ಮಾತ್ರ ನಡೀತ ಇತ್ತು ಆಗ ಗುರುಪ್ರಸಾದ್ ಸರ್ ಬಂದು ಒಂದು ಮೊಬೈಲ್ ಗಿಫ್ಟ್ ಮಾಡಿ ಇದು ನಿನ್ನ ಅಭಿನಯ ನೋಡಿ ನಾನು ಮೆಚ್ಚಿ ಕೊಡ್ತಾ ಇರೋ ಗಿಫ್ಟ್ ಅಂದ್ರು, ನನಗೆ ಎಷ್ಟು ಖುಷಿ ಆಯ್ತು ಅಂದ್ರೆ ಪದಗಳಲ್ಲಿ ಹೇಳೊಕ್ ಆಗಲ್ಲ. ಮತ್ತೊಂದು ಸಾರಿ ಶೂಟಿಂಗ್ ಎಲ್ಲಾ ಮುಗಿದು ಡಬ್ಬಿಂಗ್ ನಡಿತಾ ಇತ್ತು, ನಾನು ರಂಗಾಯಣ ರಘು ಸರ್ ಅಕ್ಕಪಕ್ಕ ನಿಂತು ನೋಡ್ತ ಇದ್ವಿ. ನನ್ ಅಭಿನಯ ನೋಡಿದ ರಘು ಸಾರ್ ನನ್ನ ಬಿಗಿಯಾಗಿ ಅಪ್ಪಿ ಸಿನಿಮಾ ಹಿಟ್ ಆಗತ್ತೊ ಬಿಡತ್ತೊ, ನಿಂಗಂತು ಒಳ್ಳೆ ಭವಿಷ್ಯ ಇದೆ ಅಂದ್ರು. ಇವೆರಡು ನಾನು ಮರೆಯದ ಸನ್ನಿವೇಶಗಳು.

* * *

ಇನ್ನು ಧನಂಜಯ ಅವರ ಬಗ್ಗೆ ಕುತೂಹಲಕಾರಿಯಾದ ವಿಷಯ ಏನು ಅಂದ್ರೆ ಎಸ್ಸೆಸ್ಸೆಲ್ಸಿಯಲ್ಲಿ ಹಾಸನ ಜಿಲ್ಲೆಗೆ ಫಸ್ಟ್ ರ್‍ಯಾಂಕ್. ಇದರ ಜೊತೆಗೆ ರಾಷ್ಟ್ರೀಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ೨ ಬಾರಿ ಉತ್ತಮ ನಟ ಪ್ರಶಸ್ತಿ ಬಂದಿದೆ. ತರಾಸುರವರ ದುರ್ಗಾಸ್ತಮಾನ ಕಾದಂಬರಿಯನ್ನು ಸಿನಿಮಾ ಮಾಡೋ ಕನಸಿರುವ ಧನುಗೆ ಕನ್ನಡ ಸಾಹಿತ್ಯದ ಜ್ಞಾನವು ತಕ್ಕ ಮಟ್ಟಿಗೆ ಇದೆ. ತರಾಸು ಅವರ ಎಲ್ಲಾ ಕಾದಂಬರಿಯನ್ನು ಸುಮಾರು ಬಾರಿ ಓದಿ ಖುಷಿಪಟ್ಟಿದನ್ನು ತುಂಬಾ ಭಾವುಕರಾಗಿ ನೆನಪಿಸಿಕೊಳ್ಳುತ್ತಾರೆ. ತೇಜಸ್ವಿ ಅವರ ಕಥೆಗಳನ್ನು ಸಿನಿಮಾ ಚಿತ್ರಕಥೆಗೆ ಅಳವಡಿಸುವ ಆಸೆ ಧನುರವರದ್ದು. ಇದರ ಜೊತೆಗೆ ಧನಂಜಯ್ ಒಬ್ಬ ಕಥೆಗಾರ ಕೂಡ. ನನ್ನೊಳಗೊಬ್ಬ ಒಳ್ಳೆ ಕಥೆಗಾರ ಇದಾನೆ ಅಂತ ಹೆಮ್ಮೆಯಿಂದ ಹೇಳುವ ಇವರ ಆತ್ಮವಿಶ್ವಾಸ ಕಥೆ ಇಲ್ಲ ಎನ್ನುವ ಗಾಂಧಿನಗರಕ್ಕೆ ಪಾಠದಂತಿದೆ. ಧನಂಜಯರ ವ್ಯಕ್ತಿತ್ವವು ಕೂಡ ಆಕರ್ಷಕವಾದ್ದು. ನಿಮ್ಮ ಹಿನ್ನಲೆ ಏನು ಎಂದು ಗಾಂಧಿನಗರದ ಜನರನ್ನ ಕೇಳಿದರೆ ಕಣ್ಣೀರ ಕಥೆಗಳನ್ನು ಹೇಳಿ ಅನುಕಂಪ ಗಿಟ್ಟಿಸೋ ಜನರ ಮಧ್ಯೆ ನನ್ನದು ಸಂತೃಪ್ತಿಯ ಬದುಕು, ಅದರ ಬಗ್ಗೆ ನನಗೆ ಖುಷಿ ಇದೆ ಎನ್ನುತ್ತಾರೆ. ಕನ್ನಡ ಸಿನಿಮಾರಂಗವನ್ನು ಹೆಚ್ಚು ಪ್ರತಿಭಾವಂತ ನಿರ್ದೇಶಕರಿಂದ ತುಂಬಿಸೊ ಕನಸು ಇವರದ್ದು. ಇವರ ಮೆಚ್ಚಿನ ಲೇಖಕ Paul cohelo ಅವರು ಹೇಳೊ ಹಾಗೆ ಯಾವುದನ್ನ ನೀವು ಹೆಚ್ಚಾಗಿ ಇಷ್ಟ ಪಟ್ಟು ಅದರ ಸಾಧನೆಗೆ ಶತ ಪ್ರಯತ್ನ ಮಾಡ್ತೀರ ಆಗ ಇಡೀ ಪ್ರಕೃತಿ ನಿಮ್ಮ ಜತೆ ಹೆಜ್ಜೆ ಹಾಕುತ್ತೆ ಅನ್ನೋದು ಇವರ ಬದುಕಿನ ಧ್ಯೇಯ ವಾಕ್ಯ.

 

Leave a Reply

Your email address will not be published. Required fields are marked *


CAPTCHA Image
Reload Image