One N Only Exclusive Cine Portal

ಧೃವಾ ಸರ್ಜಾಗೆ ಗಿಮಿಕ್ಕು ಮಾಡೋ ಅವಶ್ಯಕತೆಯಿದೆಯಾ?

‘ಭರ್ಜರಿ ಚಿತ್ರ ಕೋಟಿ ಕೋಟಿ ಬಾಚಿಕೊಂಡಿದೆ ಅನ್ನೋದೆಲ್ಲ ಅವರವರು ತಂತಮ್ಮ ಮಾರ್ಕೆಟ್ ವ್ಯಾಲ್ಯೂ ಹೆಚ್ಚಿಸಿಕೊಳ್ಳಲು ಮಾಡುತ್ತಿರೋ ಗಿಮಿಕ್ಕು. ಆ ಚಿತ್ರದಿಂದ ಬಂದಿರೋ ಲಾಭ ಹೆಚ್ಚೆಂದರೆ ಮೂರು ಕೋಟಿ ಮಾತ್ರ’… ಇಂಥಾ ಮಾತಾಡಿದವರು ಬೇರ್‍ಯಾರೇ ಆಗಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸೋ ಅಗತ್ಯವೇನಿರಲಿಲ್ಲ. ಆದರೆ ಹೀಗಂದಿರುವವರು ಭರ್ಜರಿ ಚಿತ್ರದ ನಿರ್ಮಾಪಕರಾದ ಕನಕಪುರ ಶ್ರೀನಿವಾಸ್!

ಅಷ್ಟಕ್ಕೂ ಶ್ರೀನಿವಾಸ್ ಯಾಕೆ ಈ ಹೊತ್ತಿನಲ್ಲಿ ಇಂಥಾ ಮಾತಾಡಿದ್ದಾರೋ, ಇದರ ಹಿಂದೆ ಏನೇನು ಲೆಕ್ಕಾಚಾರಗಳಿವೆಯೋ ಅವರಿಗಷ್ಟೇ ಗೊತ್ತು. ಆದರೆ ಅವರೇ ತಾವು ಭರ್ಜರಿ ಚಿತ್ರಕ್ಕೆ ಹಡಿನೆಂಟು ಕೋಟಿ ಸುರಿದು ನಿರ್ಮಾಣ ಮಾಡಿದ್ದಕ್ಕೆ ಇಪ್ಪತ್ತೊಂದು ಕೋಟಿ ಮಾತ್ರ ವಾಪಾಸಾಗಿದೆ ಅಂತ ಲೆಕ್ಕ ಹೇಳಿಕೊಂಡಿದ್ದಾರಂತೆ. ಇನ್ನು ಮೂವತ್ತು ಕೋಟಿ, ನಲವತ್ತು ಕೋಟಿಗಳ ಲಾಭದ ಸುದ್ದಿಯೆಲ್ಲ ಸುಳ್ಳು ಅಂತಲೂ ಅಂದಿದ್ದಾರೆ!

ಹಾಗಾದರೆ ಕೋಟಿ ಕೋಟಿ ಲಾಭದ ಬಗ್ಗೆ ಹೇಳಿಕೊಂಡು ಭರ್ಜರಿ ಚಿತ್ರದ ನಾಯಕ ಧೃವ ಸರ್ಜಾ ಬಿಲ್ಡಪ್ ತೆಗೆದುಕೊಳ್ಳುತ್ತಿದ್ದಾರಾ? ನಿರ್ದೇಶಕ ಚೇತನ್ ಕುಮಾರ್ ಅಂಥಾ ಕೆಲಸ ಮಾಡಿದ್ದಾರಾ? ಹಾಗೆ ನೋಡಿದರೆ ಭರ್ಜರಿ ಚಿತ್ರ ಶುರುವಾಗಿ ಮೂರು ವರ್ಷ ಕಳೆದರೂ ಅದು ಬಿಡುಗಡೆಯೇ ಆಗಿರಲಿಲ್ಲ. ಅದಕ್ಕೆ ಕಾರಣ ಕನಕಪುರ ಶ್ರೀನಿವಾಸ್ ಕೊಟ್ಟ ಕಾಟ ಎಂಬ ವಿಚಾರ ಈವತ್ತಿಗೂ ಗಾಂಧಿನಗರದಲ್ಲಿ ಚಾಲ್ತಿಯಲ್ಲಿದೆ. ಅದು ಹೇಳಿ ಕೇಳಿ ಧೃವಾ ಸರ್ಜಾಗೆ ಸಾಲು ಸಾಲಾಗಿ ಅವಕಾಶಗಳಿದ್ದ ಕಾಲ. ಅಂಥಾ ಹೊತ್ತಿನಲ್ಲಿ ನಾನಾ ಚೇಷ್ಟೆ ಮಾಡಿದ ಶ್ರೀನಿವಾಸ್ ಈತನಿಗಿದ್ದ ಎಲ್ಲ ಅವಕಾಶವನ್ನೆಲ್ಲ ನುಂಗಿ ಹಾಕಿದ್ದರು. ನಿರ್ದೇಶಕ ಚೇತನ್ ಕುಮಾರ್ ಅವರದ್ದೂ ಇಂಥಾದ್ದೇ ಸ್ಥಿತಿ. ದೃವ ಮತ್ತು ಚೇತನ್ ಆಗಿದ್ದಕ್ಕೆ ಮೂರು ವರ್ಷಗಳ ಕಾಲ ಯಾವ ಚಿತ್ರಗಳನ್ನೂ ಒಪ್ಪಿಕೊಳ್ಳದೆ ಕನಸಪುರ ಶ್ರೀನಿವಾಸ್ ಅವರ ಕಾಟವನ್ನೆಲ್ಲ ಅವುಡುಗಚ್ಚಿ ಸಹಿಸಿಕೊಂಡಿದ್ದರು.

ಇನ್ನುಳಿದಂತೆ ಕನಕಪುರ ಶ್ರೀನಿವಾಸ್ ವಿಚಾರದಲ್ಲಿ ಇಂಡಸ್ಟ್ರಿಯಲ್ಲಿ ಒಳ್ಳೆ ಮಾತುಗಳಿಗಿಂತ ಕಂಪ್ಲೇಂಟುಗಳ ಕಾರುಬಾರು ಬಲು ಜೋರಾಗಿದೆ. ಒಪ್ಪಿಕೊಂಡ ಕಾಸು ಕೊಡದೇ ಸತಾಯಿಸುತ್ತಾರೆಂಬುದು ಇವರ ಮೇಲಿರೇ ಘನ ಗಂಭೀರ ಆರೋಪ. ಬಹುಶಃ ಹೀಗೆ ಕಾಸು ಕೊಡದೇ ಸತಾಯಿಸೋ ಸಮಸ್ಯೆ ಶ್ರೀನಿವಾಸ್ ಅವರಿಗೆ ಸೋಂಕಿನಂತೆ ತಗುಲಿಕೊಂಡಿದೆಯೇನೋ. ಯಾಕೆಂದರೆ, ಈ ಹಿಂದೆ ಇವರು ಹೋಟೆಲೊಂದರಲ್ಲಿ ಪ್ರೆಸ್‌ಮೀಟು ಮಾಡಿ ಅದರ ಕಾಸನ್ನೂ ಕೊಡದೆ ಹೆಣ್ಣುಮಗಳೊಬ್ಬಳು ಕೆಲಸ ಕಳೆದುಕೊಳ್ಳುವಂತೆ ಮಾಡಿದ್ದಾರೆಂಬ ಆರೋಪವೂ ಇದೆ.

ಕನಕಪುರ ಶ್ರೀನಿವಾಸ್ ಅವರ ಕೀಟಲೆ ಎಂಥಾದ್ದೆಂಬುದಕ್ಕೆ ಯೋಗರಾಜ ಭಟ್ಟರಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲವೇನೋ. ಭಟ್ಟರು ವ್ಯವಹಾರದಲ್ಲಿ ನೀಟು. ಈ ವಿಚಾರವಾಗಿ ಯಾವ ಗದ್ದಲವನ್ನೂ ಮಾಡಿಕೊಂಡವರಲ್ಲ. ಇಂಥಾ ಯೋಗರಾಜಭಟ್ಟರೇ ದನ ಕಾಯೋನು ಚಿತ್ರಕ್ಕೆ ಸಂಭಾವನೆ ಕೊಡಲಿಲ್ಲವೆಂದು ಕನಕಪುರ ಶ್ರೀನಿವಾಸ್ ವಿರುದ್ಧ ಕಾನೂನು ಸಮರ ಸಾರುತ್ತಾರೆಂದರೆ ಇವರ ವ್ಯವಹಾರ ಶೈಲಿಯ ಬಗ್ಗೆ ಬೇರೇನೂ ಹೇಳೋ ಅಗತ್ಯವಿಲ್ಲ!

ಹಾಗಾದರೆ ಕನಕಪುರ ಶ್ರೀನಿವಾಸ್ ಈಗ ಇದ್ದಕ್ಕಿದ್ದಂತೆ ಯಾಕೆ ಭರ್ಜರಿ ಚಿತ್ರದಿಂದ ತಮಗೆ ಲಾಭವಾಗುತ್ತಿಲ್ಲ ಎಂಬರ್ಥದಲ್ಲಿ ಮಾತಾಡುತ್ತಿದ್ದಾರೆಂಬುದು ನಿಜಕ್ಕೂ ಅಚ್ಚರಿಯ ವಿಚಾರ. ಇದರ ಮೂಲ ಕೆದಕುತ್ತಾ ಹೋದರೆ ಶ್ರೀನಿವಾಸ್ ಅವರು ನಾನಾ ಕಾರಣಗಳಿಂದ ಬೆಳೆಸಿಕೊಂಡಿರೋ ಸಾಲದ ಹುತ್ತ ಕಣ್ಮುಂದೆ ನಿಲ್ಲುತ್ತದೆ. ಭರ್ಜರಿಯಂಥಾ ಚಿತ್ರ ಕೋಟಿ ಕೋಟಿ ಬಾಚಿಕೊಂಡರೂ ಕೊಡಬೇಕಿರೋ ಕಾಸು ಕೊಡಲು ಶ್ರೀನಿವಾಸರಿಗೇನು ಧಾಡಿ ಅಂತ ಸಾಲಗಾರರು ಆಗಾಗ ರೊಚ್ಚಿಗೇಳುತ್ತಿರುತ್ತಾರೆ. ಅಂಥವರಿಂದ ತಪ್ಪಿಸಿಕೊಳ್ಳಲು ಶ್ರೀನಿವಾಸ್ ಇದೀಗ ಭರ್ಜರಿ ನಷ್ಟದ ಆಟ ಕಟ್ಟುತ್ತಿದ್ದಾರೆಂದು ಅವರನ್ನು ಹತ್ತಿರದಿಂದ ಬಲ್ಲವರೇ ಹೇಳುತ್ತಿದ್ದಾರೆ!

ಭರ್ಜರಿ ಚಿತ್ರದ ವಿಚಾರಕ್ಕೆ ಬರೋದಾದರೆ ಶ್ರೀನಿವಾಸ್ ಧೃವ ತನ್ನ ಮಗನಿದ್ದಂತೆ ಅಂತೆಲ್ಲ ಪೋಸು ಕೊಡುತ್ತಿದ್ದರು. ಆದರೆ ಬೇಕೆಂದೇ ಆ ಚಿತ್ರವನ್ನು ಮೂರು ವರ್ಷಗಳ ಕಾಲ ಉಸಿರುಗಟ್ಟಿಸಿದ್ದರು. ಒಂದು ವೇಳೆ ಈ ಚಿತ್ರದಿಂದ ನಿರೀಕ್ಷಿತ ಲಾಭ ಬಂದಿಲ್ಲ ಅಂದರೂ ಅದಕ್ಕೆ ಅವರೇ ಕಾರಣ!

Leave a Reply

Your email address will not be published. Required fields are marked *


CAPTCHA Image
Reload Image