One N Only Exclusive Cine Portal

ಎಡಕಲ್ಲು ಗುಡ್ಡದ ಮೇಲೀಗ ಹಾಡುಗಳ ಕಂಪು!

ವಿವಿನ್ ಸೂರ್ಯ ನಿರ್ದೇಶನದ `ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ಹಾಡುಗಳು ಲೋಕಾರ್ಪಣೆಗೊಂಡಿವೆ. ಮಲ್ಲೇಶ್ವರದ ಎಸ್ ಆರ್ ವಿಯಲ್ಲಿ ನಡೆದ ಚೆಂದದ ಕಾರ್ಯಕ್ರಮದಲ್ಲಿ ಹಾಡುಗಳನ್ನು ಅನಾವರಣಗೊಳಿಸಿರುವ ಚಿತ್ರ ತಂಡ ಈ ಚಿತ್ರದ ಬಗೆಗಿನ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದೆ.

ಮೈಸೂರಿನ ಉದ್ಯಮಿ ಜಿ ಪಿ ಪ್ರಕಾಶ್ ನಿರ್ಮಾಣದ ಎಡಕಲ್ಲು ಗುಡ್ಡದ ಮೇಲೆ ಈಗಾಗಲೇ ವ್ಯಾಪಕವಾಗಿ ಟಾಕ್ ಕ್ರಿಯೇಟ್ ಮಾಡಿದೆ. ಪ್ರಕಾಶ್ ಅವರು ಒಂದೊಳ್ಳೆ ಸಿನಿಮಾ ಮಾಡಬೇಕೆಂಬ ತುಡಿತದಿಂದ ಸಾಕಷ್ಟು ಕಥೆಗಳನ್ನು ಕೇಳಿ ಇಷ್ಟವಾಗದೆ ಕಡೆಗೂ ಇಷ್ಟಪಟ್ಟು ಮಾಡಿರುವ ಚಿತ್ರ ಎಡಕಲ್ಲು ಗುಡ್ಡದ ಮೇಲೆ. ಅದೇ ರೀತಿ ನಿರ್ದೇಶಕ ವಿವಿನ್ ಸೂರ್ಯ ವಿಭಿನ್ನವಾದೊಂದು ಕಥೆಯ ಮೂಲಕ ಈ ಚಿತ್ರವನ್ನು ರೂಪಿಸಿದ್ದಾರೆ.

ಇದೀಗ ಹಾಡು ಬಿಡುಗಡೆಯಾದ ಖುಷಿಯಲ್ಲಿ ನಿರ್ದೇಶಕ ವಿವಿನ್ ಸೂರ್ಯ ಎಡಕಲ್ಲು ಗುಡ್ಡದ ಮೇಲಿನ ಮನೋಜ್ಞ ಅನುಭವಗಳನ್ನು, ಚಿತ್ರದ ಬಗೆಗಿನ ಸಂಕ್ಷಿಪ್ತ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಅಂದಹಾಗೆ, ವಿವಿನ್ ಸೂರ್ಯ ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ನಟರಾಗಿ ಗುರುತಿಸಿಕೊಂಡಿದ್ದವರು. ದೊಡ್ಮನೆ ಹುಡುಗ, ಟೈಸನ್ ಮುಂತಾದ ಚಿತ್ರದಲ್ಲಿ ನೆಗೆಟಿವ್ ಶೇಡಿನ ಪಾತ್ರಗಳನ್ನು ಮಾಡುತ್ತಲೇ ಖಳನಟನಿಗೆ ಬೇಕಾದ ದೈಹಿಕ ಕಸರತ್ತುಗಳನ್ನೂ ಮಾಡಿ ದೇಹವನ್ನು ಸಜ್ಜುಗೊಳಿಸಿಕೊಂಡಿರುವವರು.

ಆದರೆ ನಿರ್ದೇಶನವನ್ನು ಪ್ರಧಾನ ಉದ್ದೇಶವಾಗಿಸಿಕೊಂಡಿದ್ದ ವಿವಿನ್ ಸೂರ್ಯ ನಿರ್ಮಾಪಕ ಜಿ ಪಿ ಪ್ರಕಾಶ್ ಖುಷಿಯಾಗುವಂಥಾದ್ದೊಂದು ಕಥೆಯ ಮೂಲಕ ಈ ಚಿತ್ರವನ್ನು ರೂಪಿಸಿದ್ದಾರೆ. ಆರಂಭದಲ್ಲಿ ಎಡಕಲ್ಲು ಗುಡ್ಡದ ಮೇಲೆ ಮೂಲ ಚಿತ್ರದಲ್ಲಿ ಮಿಂಚಿದ್ದ ಚಂದ್ರಶೇಖರ್, ಜಯಂತಿ, ಭಾರತಿಯವರನ್ನೆಲ್ಲ ಮತ್ತೆ ತಮ್ಮ ಚಿತ್ರದಲ್ಲಿ ಒಂದಾಗಿಸುವ ಕನಸು ವಿವಿನ್ ಅವರದ್ದಾಗಿತ್ತಂತೆ. ಆದರೆ ಆ ಹೊತ್ತಿಗೆಲ್ಲಾ ಅಭಿನಯ ಶಾರದೆ ಜಯಂತಿ ಅನಾರೋಗ್ಯದಿಂದ ಬಸವಳಿದಿದ್ದರು. ಈ ನಿರಾಸೆಯಲ್ಲಿಯೇ ಎಡಕಲ್ಲುಗುಡ್ಡದ ಮೇಲೆ ಚಂದ್ರಶೇಖರ್ ಅವರನ್ನು ಭೇಟಿಯಾದಾಗ ಅವರ ಕಡೆಯಿಂದ ಸ್ಫೂರ್ತಿದಾಯಕ ಪ್ರತಿಕ್ರಿಯೆ ಸಿಕ್ಕಿದ್ದರಿಂದ ನಿರ್ದೇಶಕರು ಮತ್ತು ನಿರ್ಮಾಪಕರಲ್ಲಿ ಹೊಸಾ ಹುರುಪು ತುಂಬಿಕೊಂಡಿತ್ತಂತೆ.

ಒಂದು ಕಾಲಕ್ಕೆ ತಮ್ಮ ಬದುಕಿಗೆ ಹೊಸಾ ತಿರುವು ಕೊಟ್ಟಿದ್ದ ಎಡಕಲ್ಲು ಗುಡ್ಡದ ಮೇಲೆ ಎಂಬ ಶೀರ್ಷಿಕೆ ಕೇಳುತ್ತಲೇ ಚಂದ್ರಶೇಖರ್ ಥ್ರಿಲ್ ಆಗಿ ಕಥಾ ಎಳೆಯನ್ನು ಕೇಳಿದೇಟಿಗೆ ತಾನು ಖಂಡಿತವಾಗಿಯೂ ಈ ಚಿತ್ರದಲ್ಲಿ ನಟಿಸೋದಾಗಿ ಭರವಸೆ ನೀಡಿದ್ದರಂತೆ. ಅದಕ್ಕೆ ಸರಿಯಾಗಿ ನಟಿಸಿದ್ದ ಚಂದ್ರಶೇಖರ್ ಮಗವಿನಂತೆ, ಹಿರೀಕನಂತೆ ಪ್ರತೀ ಹಂತದಲ್ಲೂ ಜೊತೆಗಿದ್ದರು. ಆದರೆ ಚಿತ್ರ ಅಂತಿಮ ಹಂತ ತಲುಪುವಷ್ಟರಲ್ಲಿ ಅವರೇ ಇಹದ ಯಾತ್ರೆ ಮುಗಿಸಿದ್ದರು.

ಒಟ್ಟಾರೆಯಾಗಿ ಈ ಚಿತ್ರ ದತ್ತಣ್ಣ, ಭಾರತಿ, ಶ್ರೀನಾಥ್ ಸೇರಿದಂತೆ ಒಂದು ಬೃಹತ್ ತಾರಾಗಣವನ್ನೇ ಹೊಂದಿದೆ. ಪ್ರಸ್ತುತ ದಿನಮಾನದಲ್ಲಿ ವಸ್ತುಗಳ ಮೇಲೆ ಮೋಹ ಹೆಚ್ಚಾಗಿ ಭಾವನೆಗಳಿಗೆ ಬೆಲೆ ಇಲ್ಲವಾಗಿದೆ. ಇಂಥಾ ವಾತಾವರಣದಲ್ಲಿ ಪೋಶಕರಿಗೂ ಕೂಡಾ ತಮ್ಮ ಮಕ್ಕಳ ಮೇಲೆ ಕಾಳಜಿ ಇಡುವಂಥಾ ಸಂಯಮ, ಸಮಯ ಇಲ್ಲವಾಗಿದೆ. ಈ ಥರದ ಸೂಕ್ಷ್ಮ ಕಥಾ ಹಂದರದೊಂದಿಗೆ ಎಳೇ ಜೀವಗಳ ತಲ್ಲಣ, ಶಿಕ್ಷಣ ವ್ಯವಸ್ಥೆ, ಸಂಬಂಧಗಳ ಸುತ್ತ ಹೆಣೆದಿರುವ ನವಿರಾದ ಕಥೆ ಈ ಚಿತ್ರದ್ದು.
ಇದೀಗ ಚೆಂದದ ಹಾಡುಗಳನ್ನು ಬಿಡುಗಡೆ ಮಾಡಿರುವ ಚಿತ್ರ ತಂಡ ಇಷ್ಟರಲ್ಲಿಯೇ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಲಿದೆ.

Leave a Reply

Your email address will not be published. Required fields are marked *


CAPTCHA Image
Reload Image