One N Only Exclusive Cine Portal

ಎಡಕಲ್ಲು ಗುಡ್ಡದ ಮೇಲೆ ಎಳೆಯ ಮನಸುಗಳ ಕಲರವ!

ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸಾ ಸಂಚಲನವನ್ನೇ ಸೃಷ್ಟಿಸಿದ್ದ ಚಿತ್ರ `ಎಡಕಲ್ಲು ಗುಡ್ಡದ ಮೇಲೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರದ ಹೆಸರನ್ನೇ ಶೀರ್ಷಿಕೆಯಾಗಿಸಿಕೊಂಡ ವಿವಿನ್ ಸೂರ್ಯ ನಿರ್ದೇಶನದ ಚಿತ್ರವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡಲಾರಂಭಿಸಿದೆ.

ಜಿ.ಪಿ ಪ್ರಕಾಶ್ ನಿರ್ಮಾಣದ ಹೊಸಾ `ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಪೋಸ್ಟರ್ ಈಗ ಎಲ್ಲರ ಕುತೂಹಲ ಕೆರಳಿಸಿದೆ. ಎಳೆಯ ಬಾಲೆಯೊಬ್ಬಳು ಹೊಂಬಿಸಿಲಿಗೆ ಅಭಿಮುಖವಾಗಿ ಗುಡ್ಡದ ಹಿನ್ನೆಲೆಯಲ್ಲಿ ನಿಂತಿರೋ ಆಕರ್ಷಕ ಪೋಸ್ಟರ್ ಮೆಚ್ಚುಗೆಯನ್ನೂ ಗಳಿಸಿಕೊಂಡಿದೆ. ಇಂಥಾ ಚೆಂದದ ಪೋಸ್ಟರ್ ಮೂಲಕವೇ ಈ ಚಿತ್ರವೀಗ ನಾನಾ ದಿಕ್ಕಿನಲ್ಲಿ ಕುತೂಹಲ ಕೆರಳಿಸಿದೆ.

ನಿರ್ದೇಶಕ ವಿವಿನ್ ಸೂರ್ಯ ಒಂದು ಭಿನ್ನವಾದ, ಕನ್ನಡ ಚಿತ್ರರಂಗದ ಪಾಲಿಗೆ ಹೊಸಾ ಬಗೆಯ ಕಥೆಯೊಂದನ್ನು ಈ ಚಿತ್ರದ ಮೂಲಕ ಹೇಳ ಹೊರಟಿದ್ದಾರಂತೆ. ಇದು ಹತ್ತು ವರ್ಷದ ಹುಡುಗಿಯೊಬ್ಬಳ ಸುತ್ತ ನಡೆಯುವ ಅಪ್ಪಟ ಮಹಿಳಾ ಪ್ರಧಾನ ಚಿತ್ರ. ಇದು ಹೇಳಿಕೇಳಿ ಸ್ಪರ್ಧಾತ್ಮಕ ಜಗತ್ತು. ವಿಶ್ವವೆಲ್ಲ ಹತ್ತಿರಾದರೂ ಹತ್ತಿರದ ಸಂಬಂಧಗಳೇ ದೂರ ದೂರ. ಕೆಲ ಹೆತ್ತವರಿಗಂತೂ ತಮ್ಮದೇ ಮಕ್ಕಳಿಗೂ ಒಂದಷ್ಟ ಸಮಯ ಎತ್ತಿಡಲಾರದಷ್ಟು ಒತ್ತಡ. ಇಂಥಾ ಸ್ಥಿತಿ ಮಕ್ಕಳ ಮೇಲೆ ಬೀರುವ ಪರಿಣಾಮ ಭೀಕರ.

ಇಂಥಾದ್ದೊಂದು ಸೂಕ್ಷ್ಮವಾದ ಎಳೆಯನ್ನಿಟ್ಟುಕೊಂಡು ಎಲ್ಲಾ ಸಮಸ್ಯೆಗಳ ಮೂಲವೊಂದನ್ನು ಕೆದಕಿ ಪರಿಹಾರ ಹೇಳೋ ಸಾಹಸವನ್ನು ಈ ಚಿತ್ರ ತಂಡ ಮಾಡಿದೆಯಂತೆ. ಅಂದಹಾಗೆ ನಾನಾ ವಿಶೇಷತೆಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ನುರಿತ ಕಲಾವಿದರದ್ದೊಂದು ದಂಡೇ ಇದೆ. ಕಿರುತೆರೆಯ ಸ್ಟಾರ್ ನಟಿ ಜ್ಯೋತಿ ಟೀಚರ್ ಆಗಿ ನಟಿಸಿದ್ದಾರೆ. ಈ ಹಿಂದೆ ಮನೆದೇವರು ಸೀರಿಯಲ್‌ನಲ್ಲಿ ನಟಿಸಿದ್ದ ಹುಡುಗಿ ಸ್ವಾತಿ ಇಲ್ಲಿನ ಪ್ರಧಾನವಾದ ಪಾತ್ರವೊಂದರಲ್ಲಿ ನಟಿಸಿದ್ದಾಳೆ. ಇನ್ನುಳಿದಂತೆ ಭಾರತಿ ವಿಷ್ಣುವರ್ಧನ್, ಎಡಕಲ್ಲು ಗುಡ್ಡದ ಮೇಲೆ ಚಂದ್ರಶೇಖರ್, ಶ್ರೀನಾಥ್, ಸುಮಿತ್ರಾ, ಸಿಹಿಕಹಿ ಚಂದ್ರು, ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ಲಕ್ಷ್ಮಿ, ಮನ್‌ದೀಪ್, ದತ್ತಣ್ಣ, ಉಷಾ ಭಂಡಾರಿ, ಧರ್ಮೇಂದ್ರ ಸೇರಿದಂತೆ ಘಟಾನುಘಟಿ ಕಲಾವಿದರ ದಂಡೇ ಈ ಚಿತ್ರದಲ್ಲಿ ನಟಿಸಿದೆ.

ಆದರೆ ಈ ಚಿತ್ರಕ್ಕೆ ಎಡಕಲ್ಲು ಗುಡ್ಡದ ಮೇಲೆ ಎಂಬ ಹೆಸರನ್ನು ಯಾಕಿಡಲಾಗಿದೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿಯೇ ಕಾಡುತ್ತದೆ. ಇಡೀ ಚಿತ್ರದ ಆಂತರ್ಯವೇ ಅದಾದ್ದರಿಂದ ಚಿತ್ರ ತಂಡ ಈ ವಿಚಾರದ ಬಗ್ಗೆ ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಆದರೆ ಈ ಶೀರ್ಷಿಕೆಯೇ ಇಡೀ ಚಿತ್ರದ ಅಂತರಾಳ ಎಂಬುದಂತೂ ಸತ್ಯ. ಯಾವುದೇ ಪ್ರಚಾರದ ಅಬ್ಬರವೂ ಇಲ್ಲದೇ ತಂತಾನೇ ಈ ಚಿತ್ರ ಪಡೆಯುತ್ತಿರುವ ಜನಪ್ರಿಯತೆಯೇ ಗೆಲುವಿನ ಮುನ್ಸೂಚನೆಯಂತೆ ಕಾಣಿಸುತ್ತಿದೆ!

Leave a Reply

Your email address will not be published. Required fields are marked *


CAPTCHA Image
Reload Image