One N Only Exclusive Cine Portal

ಚಮಕ್ ಚಮತ್ಕಾರ ಮಾಡುತ್ತದೆಂಬ ಗೋಲ್ಡನ್ ನಂಬಿಕೆ!


ನಮ್ಮ ನಡುವಿನ, ನಮ್ಮೊಳಗಿನ ಪಾತ್ರಗಳನ್ನೇ ತೆರೆ ಮೇಲೆ ಅಭಿನಯಿಸೋ ಮೂಲಕ ಎಲ್ಲ ವಿಧದ ಪ್ರೇಕ್ಷಕರನ್ನೂ ಸೆಳೆದುಕೊಂಡಿರುವವರು ಗೋಲ್ಡನ್ ಸ್ಟಾರ್ ಗಣೇಶ್. ಸಾಮಾನ್ಯವಾಗಿ ಜಾಲಿ ಮೂಡಿನ ಹುಡುಗನಾಗಿಯೇ ಕಾಣಿಸಿಕೊಳ್ಳುತ್ತಾ ಬಂದಿರೋ ಅವರು ಚಮಕ್ ಚಿತ್ರದ ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸಲಿದ್ದಾರಾ?
ಅವರೇ ಚಿತ್ರದ ಕಥಾ ಎಳೆಯನ್ನು ಬಚ್ಚಿಟ್ಟುಕೊಂಡೇ ಬಿಚ್ಚಿಟ್ಟ ಮಾಹಿತಿ, ಇಡೀ ಚಿತ್ರದ ಬಗ್ಗೆ ಅವರ ಧ್ವನಿಯಲ್ಲಿ ಜಿನುಗುತ್ತಿದ್ದ ಪ್ರೀತಿ, ವಿಶ್ವಾಸದ ಮಾತುಗಳೆಲ್ಲವೂ ಮೇಲಿನ ಪ್ರಶ್ನೆಗೆ ಹೌದೆಂಬ ಉತ್ತರವನ್ನೇ ರವಾನಿಸುತ್ತಿದೆ.
ಈ ಚಿತ್ರದಲ್ಲಿ ಗಣೇಶ್ ಗೈನಕಾಲಜಿಸ್ಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆಂಬುದು ಗೊತ್ತಿರೋ ವಿಚಾರ. ಓರ್ವ ಡಾಕ್ಟರ್ ಪಾತ್ರದಲ್ಲಿ ಗಣೇಶ್ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ ಅಂದುಕೊಂಡರೆ ನಿಜಕ್ಕೂ ತಪ್ಪಾಗುತ್ತದೆ. ಈ ಪಾತ್ರಕ್ಕೂ ಚಮಕ್ ಕೊಡುವಂಥಾದ್ದೇ ಶೇಡ್‌ಗಳಿವೆಯಂತೆ. ಅಷ್ಟಕ್ಕೂ ನಿರ್ದೇಶಕ ಸಿಂಪಲ್ ಸುನಿ ಒನ್‌ಲೈನಲ್ಲೇ ಈ ಚಿತ್ರದ ಕಥಾ ಹಂದರ ಮತ್ತು ಪಾತ್ರವನ್ನು ಪರಿಚಯ ಮಾಡಿದ್ದಾಗಲೇ ಗಣೇಶ್ ಥ್ರಿಲ್ ಆಗಿ ಒಪ್ಪಿಕೊಂಡಿದ್ದರಂತೆ.
ಸಿಂಪಲ್ ಸುನಿ ಚಮಕ್ ಪ್ರಪೋಸಲ್ ಮುಂದಿಟ್ಟು ಅದರತ್ತ ಗಣೇಶ್ ಆಕರ್ಷಿತರಾದ ನಂತರ ಒಂದಷ್ಟು ತಿಂಗಳ ಕಾಲ ಶುಷ್ಕ ವಾತಾವರಣ ಮುಂದುವರೆದಿತ್ತಂತೆ. ಆ ಬಳಿಕ ಸುನಿ ಸೀದಾ ಮೈಸೂರಿಗೆ ಹೋಗಿ ಗಣೇಶ್ ಅವರನ್ನು ಭೇಟಿಯಾಗಿ ಬೆಳಗಿನ ಜಾವ ನಾಲಕ್ಕೂ ವರೆಗೆ ರೀಡಿಂಗ್ ಕೊಟ್ಟ ರೀತಿ, ಆ ಕಥೆಯ ಕಸುವು ಕಂಡ ಗಣೇಶ್ ಉತ್ಸಾಹದಿಂದಲೇ ಒಪ್ಪಿಗೆ ಸೂಚಿಸಿದ್ದರಂತೆ.


ಸಿಂಪಲ್ ಸುನಿ ನಾನಾ ಮೊನೆಗಳನ್ನು ಒಟ್ಟಿಗೆ ಪೋಣಿಸಿ ಡೈಲಾಗು ಕಟ್ಟೋದರಲ್ಲಿ ನಿಸ್ಸೀಮರು. ಗಣೇಶ್ ಕೂಡಾ ಅದನ್ನು ಕೊಂಡಾಡಿದ್ದಾರೆ. ಡಬಲ್ ಮೀನಿಂಗಿನಾಚೆಗೆ ಸುನಿ ಹೊಸಾ ಬಗೆಯಲ್ಲಿ ಚಮಕ್ ಚಿತ್ರಕ್ಕಾಗಿ ಡೈಲಾಗ್ ಬರೆದಿದ್ದಾರಂತೆ. ಆ ಡೈಲಾಗ್‌ಗಳೆಲ್ಲವೂ ಸಖತ್ತಾಗಿವೆ ಎಂಬ ರಿಪೋರ್ಟು ಚಿತ್ರ ತಂಡದ ಕಡೆಯಿಂದಲೇ ಹೊರ ಬಿದ್ದಿದೆ. ಸಿಂಪಲ್ ಸುನಿ ಮತ್ತು ಗಣೇಶ್ ಜೋಡಿ ಚಮಕ್ ಮೂಲಕ ಚಮತ್ಕಾರ ಸೃಷ್ಟಿಸುತ್ತದೆ ಎಂಬುದಕ್ಕೆ ದಿನದೊಪ್ಪತ್ತಿನಲ್ಲೇ ಉತ್ತರ ಸಿಗಲಿದೆ.

Leave a Reply

Your email address will not be published. Required fields are marked *


CAPTCHA Image
Reload Image