ಗಿರ್‌ಗಿಟ್ಲೆ ಸಿನಿಮಾ ಈ ವಾರ ತೆರೆಗೆ ಬಂದಿದೆ. ಥಿಯೇಟರಿನ ಮುಂದೆ ಹೀರೋಗಳ ಕಟೌಟಿನ ಬದಲು ದೊಡ್ಡ ಎತ್ತರದ ಲಾಂಗ್‌ವೊಂದನ್ನು ನಿಲ್ಲಿಸಿರೋದು ಸೇರಿದಂತೆ ಈ ಸಿನಿಮಾದ ಕುರಿತಾಗಿ ಪ್ರೇಕ್ಷಕರಲ್ಲಿ ನಾನಾ ಬಗೆಯ ಕುತೂಹಲಗಳಿದ್ದವು. ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳಲ್ಲೇ ಇದು ಭಿನ್ನ ಸಿನಿಮಾ. ಸಿನಿಮಾಗಳಲ್ಲಿ ಆರಂಭ, ಮಧ್ಯಂತರ ಮತ್ತು ಅಂತ್ಯಕ್ಕೆ ನಿರ್ದಿಷ್ಟವಾದ ಕಾರಣಗಳಿರುತ್ತವೆ. ಗಿರ್‌ಗಿಟ್ಲೆ ಸಿನಿಮಾದಲ್ಲಿ ಬರುವ ಮೂರು ಪ್ರಮುಖ ಪಾತ್ರಗಳಿಗೆ ಹಿಂದೆ-ಮುಂದೆಂಬುದಿರೋದಿಲ್ಲ. ಸಿನಿಮಾದ ಕಥೆಗೆ ಕೂಡಾ ಅದೇ ಗುಣವಿರೋದು ವಿಶೇಷ!

ಸಿಟಿಯಲ್ಲಿ ಸಿಕ್ಕಾಪಟ್ಟೆ ನೇಮು ಮಾಡಿರೋ ರೌಡಿಗಳನ್ನು ಎತ್ತಿಬಿಟ್ಟರೆ ಹೆಸರು ಮಾಡಬಹುದೆನ್ನುವ ಪ್ಲಾನು ನಡೆಯುತ್ತದೆ. ನಂತರ ಒಬ್ಬ ಡಾನ್‌ನನ್ನು ಎತ್ತುವುದಾಗಿ ಮತ್ತೊಬ್ಬ ಎದುರಾಳಿ ಬಳಿ ಸುಫಾರಿ ಪಡೆಯುತ್ತಾರೆ. ಹಾಗೆಯೇ ಮತ್ತೊಬ್ಬ, ಮಗದೊಬ್ಬನ ಬಳಿ ಹೋಗಿ ಪರಸ್ಪರ ವಿರೋಧಿಗಳನ್ನು ಮುಗಿಸುತ್ತೀವಿ ಎಂದು ಹೇಳಿ ಡೀಲ್ ಪಡೆಯುತ್ತಾರೆ. ಹಾಗೆ ಕಾಸು ಪಡೆದು ಒಪ್ಪಿಕೊಂಡ ಕೆಲಸವನ್ನು ಮಾಡುತ್ತಾರಾ? ಅಥವಾ ಇವರ ಕಥೆಯೇ ಮುಗಿಯುತ್ತದಾ? ಎಂಬ ಪ್ರಶ್ನೆಗೆ ಉತ್ತರ ಬೇಕಿದ್ದರೆ ‘ಗಿರ್‌ಗಿಟ್ಲೆಯನ್ನೊಮ್ಮೆ ನೋಡಬಹುದು.
ಬದುಕು ಏನೆಂದೇ ಗೊತ್ತಿಲ್ಲದೆ ಎತ್ತೆತ್ತಲೋ ಸಾಗುವ ಹುಡುಗರು, ಏನೇನೂ ಇಲ್ಲದೆ ಅನಾಥನಾಗಿ ಹುಟ್ಟಿ, ಅಪಾರವಾದ ವಿದ್ಯೆ, ಬುದ್ದಿ, ಎಲ್ಲವನ್ನೂ ಪಡೆದು, ಪಡೆದುಕೊಂಡದ್ದನ್ನೆಲ್ಲಾ ಕಳೆದುಕೊಂಡು ಬೀದಿಗೆ ಬಿದ್ದ ಮತ್ತೊಬ್ಬ ವ್ಯಕ್ತಿಯ ಜೊತೆಯಾಗುತ್ತಾರೆ. ಈ ನಾಲ್ಕು ಜನರ ಡೈಲಾಗುಗಳ ಜುಗಲ್‌ಬಂದಿ, ಜಗ್ಗಾಟಗಳೆಲ್ಲಾ ತ್ರಿವಿಕ್ರಮರ ಜೊತೆಗೆ ಬೇತಾಳವೊಂದು ತಗುಲಿಕೊಂಡ ಫೀಲು ಹುಟ್ಟಿಸುತ್ತದೆ.

ನಿರ್ದೇಶಕ ರವಿಕಿರಣ್ ಅವರಿಗೆ ಜಗತ್ತಿನ ನಿಯಮಗಳು, ಬದುಕಿನ ರೀತಿಯ ಬಗ್ಗೆ ನಾನಾ ರೀತಿಯ ಪ್ರಶ್ನೆಗಳು, ಗೊಂದಲಗಳೆಲ್ಲಾ ಇವೆ. ಅವಕ್ಕೆಲ್ಲಾ ಈ ಸಿನಿಮಾದ ಮೂಲಕ ಉತ್ತರ ಹುಡುಕ ಹೊರಟಿದ್ದಾರೆ ಮತ್ತು ತಮಗೆ ಗೊತ್ತಿರೋದನ್ನೆಲ್ಲಾ ತೆರೆಯ ಮೂಲಕ ಹೇಳಲು ಮುಂದಾಗಿದ್ದಾರೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತದೆ; ಬಹುಶಃ ಇದು ಸಣ್ಣ ಎಡವಟ್ಟನ್ನೂ ಸೃಷ್ಟಿಸಿದೆ. ಸರಿಸುಮಾರು ಹತ್ತಾರು ಸಿನಿಮಾಗಳಲ್ಲಿ ಹೇಳಬೇಕಾದ ವೇದಾಂತ, ಸಿದ್ದಾಂತಗಳೆಲ್ಲಾ ಒಂದೇ ಸಿನಿಮಾದಲ್ಲಿ ಸೇರಿಕೊಂಡು, ಅದರ ಸೈಡೆಫೆಕ್ಟು ಅನ್ನುವಂತೆ ಹೇಳಬೇಕಾದ ಕಥೆಯೇ ದಾರಿತಪ್ಪಿದಂತಾಗಿದೆ. ಅಲ್ಲಿಲ್ಲಿ ಬರಬೇಕಿದ್ದ ಪ್ರಾಸ-ತ್ರಾಸದ ಡೈಲಾಗುಗಳು, ಬಿಲ್ಡಪ್ಪುಗಳು ಪದೇ ಪದೇ ಕಾಣಿಸೋದು ರೇಜಿಗೆ ಹುಟ್ಟಿಸುತ್ತದೆ.

ಇದರ ಹೊರತಾಗಿ ಗಿರ್‌ಗಿಟ್ಲೆಯಲ್ಲಿ ಬೇರೆ ಏನೋ ಇದೆ. ಅದು ನೋಡಿದವರ ಭಾವಕ್ಕೆ ಮಾತ್ರ ದಕ್ಕುವಂಥಾ ಅನುಭೂತಿ. ದಾರಿತಪ್ಪಿದವರ ಗೊಂದಲಗಳು, ದಿಕ್ಕೆಟ್ಟ ಭವಿಷ್ಯ, ಜಗತ್ತಿನ ಕುರಿತಾಗಿ ಏಳುವ ಪ್ರಶ್ನೆ, ಒಂದಿಷ್ಟು ಕಲ್ಪಿತ ಉತ್ತರ, ದುಡ್ಡು, ಕನಸು… ಹೀಗೆ ಏನೇನೋ ಸೇರಿಕೊಂಡು ಗಿರ್‌ಗಿಟ್ಲೆಯಂತೆ ಸುತ್ತುವ ಬದುಕಿನ ಅನಾವರಣ ಇಲ್ಲಿದೆ.

ಈ ಸಿನಿಮಾ ಶುರುವಾಗಿ ಬಿಡುಗಡೆಯಾಗುವ ಅಂತರ ಹೆಚ್ಚಾಗಿದ್ದರಿಂದಲೋ ಏನೋ ಉದಯ್, ಎ.ಆರ್. ಬಾಬು ಸೇರಿದಂತೆ ಅಗಲಿದ ಅರ್ಧ ಡಜನ್ ನಟರು ಇಲ್ಲಿ ಜೀವಂತವಾಗಿದ್ದಾರೆ. ನಿರ್ದೇಶಕ ರವಿ ಕಿರಣ್ ಸಿದ್ದತೆಗಳೊಂದಿಗೆ ನಿಂತರೆ ಸಾಹಸ ಪ್ರಧಾನವಾದ, ಪಕ್ಕಾ ಕಮರ್ಷಿಯಲ್ ಸಿನಿಮಾಗಳನ್ನು ಕಟ್ಟಿಕೊಡುವ ಶಕ್ತಿ ಹೊಂದಿದ್ದಾರೆ. ಪಳಗಿದ ನಟ ರಂಗಾಯಣ ರಘು ಅವರೊಟ್ಟಿಗೆ ಮೂವರು ಹೀರೋಗಳು ಮೈಮರೆತು ನಟಿಸಿದ್ದಾರೆ. ನಾಯಕಿಯರಿಬ್ಬರಿದ್ದರೂ ಒಂದು ಹಾಡು ಎರಡು ದೃಶ್ಯಗಳಲ್ಲಿ ಬಂದು ಮಾಯವಾಗುತ್ತಾರೆ. ಒಟ್ಟಾರೆ ಇದು ಕಮರ್ಷಿಯಲ್ ಸಿನಿಮಾ ಆದರೂ ಸಿದ್ದ ಸೂತ್ರಗಳನ್ನು ಬ್ರೇಕ್ ಮಾಡಿದ ಚಿತ್ರವಾಗಿದೆ!

Arun Kumar

ರೋಚಕ ಅನುಭವ ನೀಡುವ ಫೇಸ್ ಟು ಫೇಸ್!

Previous article

ಹುಟ್ಟುಹಬ್ಬದಂದು ಅಪ್ಪು ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್!

Next article

You may also like

Comments

Leave a reply

Your email address will not be published. Required fields are marked *