ಈತ ಬರೆದ ಚಿತ್ರಗಳನ್ನೊಮ್ಮೆ ನೀವೇನಾದರೂ ನೋಡಿದರೆ ತಕ್ಷಣವೇ ಅಭಿಮಾನಿಯಾಗಿಬಿಡುತ್ತೀರಿ. ಇಂಥ ಅದ್ಭುತ ಚಿತ್ರಗಳ ಮೂಲಕವೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿರುವಾತ ಟಿ.ಎಫ್ ಹಾದಿಮನಿ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿಪಾಯಿ ಮತ್ತು ಕಲಾವಿದ ಸಿನಿಮಾಗಳ ಕತೆಗೆ ಪೂರಕವಾಗಿ ಪೇಂಟಿಂಗು ಮಾಡಿಕೊಟ್ಟಿದ್ದ ಅಸಾಧಾರಣ ಕಲಾವಿದನೀತ. ಬಹುಶಃ ಆ ಘನತೆಯನ್ನ ಉಳಿಸಿಕೊಂಡಿದ್ದರೆ ಊರು ತುಂಬಾ ಈತನನ್ನ ಆರಾಧಿಸುವವರೇ ತುಂಬಿರುತ್ತಿದ್ದರು. ಆದರೆ ಹಾದಿಮನಿಗೆ ನಿತ್ತರಿಸಿಕೊಳ್ಳಲಾಗದ ಕಾಮದ ಕಾಯಿಲೆಯೊಂದು ಲಾಗಾಯ್ತಿನಿಂದಲೂ ಬಾಧಿಸುತ್ತಿದೆ. ಆದರೆ ಕಲಾವಿದನೆಂಬ ಗೌರವವೇ ಕಾಪಾಡುತ್ತಲೂ ಬಂದಿದೆ. ಆದರೆ ಫೇಸ್ ಬುಕ್ ತುಂಬಾ ಬೀಜದ ಹೋರಿಯಂತೆ ಅಬ್ಬರಾಟ ಶುರುವಿಟ್ಟುಕೊಂಡಿರೋ ಹಾದಿಮನಿಯ ಮಾನವೀಗ ಅಕ್ಷರಶಃ ಬೀದಿಗೆ ಬಂದಿದೆ.

ಫೇಸ್ ಬುಕ್ ನಲ್ಲಿ ಹಾದಿಮನಿಯ ಹಾವಳಿ ಶುರುವಾಗಿ ಬಹು ಕಾಲವಾಗಿದೆ. ಅದೆಷ್ಟೋ ಮಾನವಂತ ಹೆಣ್ಣುಮಕ್ಕಳಿಗೆ ಈತನ ಕೀಚಕಾವತಾರದ ದರ್ಶನವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಕೆಲ ಮಂದಿ ಹಾದಿಮನಿಯನ್ನ ಕಾಪಾಡಿದ್ದೂ ಇದೆ. ಆದರೆ ಇದೆಲ್ಲದರಾಚೆಗೂ ಚೆಂಗಲು ಬುದ್ಧಿ ಮುಂದುವರೆಸಿರೋ ಹಾದಿಮನಿ ಮೇಲೆ ಆಶಾ ಜೋಯಿಸ್ ಎಂಬ ಮಾಡೆಲ್ ಕೇಸು ಜಡಿದಿದ್ದಾರೆ. ಇದರಿಂದಾಗಿ ಹಾದಿಮನಿಗೀಗ ಜೈಲು ದರ್ಶನವಾಗಿದೆ!

ಹೆಂಗಳೆಯರನ್ನು ಕಂಡರೆ ಮುಗಿ ಬೀಳೋ ಬುದ್ದಿ ಹಾದಿಮನಿ ಪಾಲಿಗೆ ಹಳೇ ಅಭ್ಯಾಸ. ಬಹುಶಃ ಆ ಕಾಲದಲ್ಲಿಯೇ ಹೆಣ್ಣು ಮಕ್ಕಳ್ಯಾರಾದರೂ ಕಪಾಳ ಚದುರುವಂತೆ ಯಕ್ಕಡ ಬೀಸಿದ್ದರೆ ಈ ಬೀಜದ ಹೋರಿ ಈ ಪಾಟಿ ಬಲಿಯುತ್ತಿರಲಿಲ್ಲವೇನೋ. ಆದರೆ ತನ್ನ ಕಾಮುಕ ಬುದ್ಧಿಯಿಂದ ಕಲೆಯನ್ನು ಮುಂದಿಟ್ಟು ಬಚಾವಾಗುತ್ತಾ ಬಂದಿರೋ ಹಾದಿಮನಿ ಪಕ್ಕಾ ಕಾಮುಕ ಅನ್ನೋದೀಗ ಸಾಬೀತಾಗಿದೆ. ಹೆಣ್ಣುಮಕ್ಕಳ ಫೇಸ್ ಬುಕ್ ಖಾತೆಯ ಇನ್ಬಾಕ್ಸಿಗೆ ಹೋಗಿ ಕೆಟ್ಟಾ ಕೊಳಕು ಫೋಟೋ ಕಳಿಸಿ, ಪೋಲಿ ಮಾತಾಡೋ ಇವನ ಬಗೆಗೀಗ ಎಲ್ಲರಿಗೂ ವಾಕರಿಕೆ ಬಂದು ಹೋಗಿದೆ. ಸದ್ಯ ರಾಜರಾಜೇಶ್ವರಿ ನಗರ ಪೊಲೀಸರು ಹಾದಿಮನಿಗೆ ಸ್ವಂತದ ಕುಂಚವೇ ಮರೆತು ಹೋಗುವಂತೆ ಟ್ರೀಟ್ಮೆಂಟನ್ನೂ ಕೊಡುತ್ತಿದ್ದಾರೆ. ಹಾಗಾದರೆ ಹಾದಿಮನಿಯೆಂಬ ಕಲಾವಿದೆ ಯಾಕೆ ಈ ಥರದ ಕಾಮುಕನಾದ ಎಂಬ ಪ್ರಶ್ನೆಗೆ ಆತನ ಇಹಿಹಾಸವೇ ಒಂದಷ್ಟು ಉತ್ತರಗಳನ್ನ ರವಾನಿಸುವಂತಿದೆ!

ಹಾದಿಮನಿ ಉತ್ತರ ಕರ್ನಾಟಕದ ಮೂಲದವರು. ಈತ ಹೆಚ್ಚು ಪ್ರಚಲಿತಕ್ಕೆ ಬಂದಿದ್ದು ಲಂಕೇಶ್ ಪತ್ರಿಕೆಯ ಮೂಲಕ. ಲಂಕೇಶ್ ಪತ್ರಿಕೆಯಲ್ಲಿ ಹಾದಿಮನಿ ರಚಿಸಿದ್ದ ಜೆ.ಹೆಚ್.ಪಟೇಲ್, ರಾಮಕೃಷ್ಣ ಹೆಗಡೆ, ಸೋನಿಯಾ ಗಾಂಧಿಯ ವ್ಯಂಗ್ಯಚಿತ್ರಗಳನ್ನೊಳಗೊಂಡ ಮುಖಪುಟಗಳು ಆ ಕಾಲಕ್ಕೆ ಸಾಕಷ್ಟು ಸುದ್ದಿ ಮಾಡಿದ್ದವು. ಆ ಕಾರಣದಿಂದಲೇ ಲಂಕೇಶ್ ಪತ್ರಿಕೆಯ ಪ್ರಸಾರದ ಸಂಖ್ಯೆಯೂ ಹೆಚ್ಚಿತ್ತು. ಲಂಕೇಶರ ನೀಲು ಕಾವ್ಯಕ್ಕೆ ಹಾದಿಮನಿ ಬರೆಯುತ್ತಿದ್ದ ರೇಖಾ ಚಿತ್ರಗಳಿದ್ದವಲ್ಲಾ? ಅಕ್ಷರಗಳಲ್ಲಿ ವರ್ಣಿಸಲಸಾಧ್ಯವಾದ ಗೆರೆಗಳವು. ಇಂಥ ಅಪರೂಪದ ಕಲೆಯಿಂದ ಲಂಕೇಶರ ತಂಡದ ಪ್ರಮುಖರಾಗಿದ್ದರು ಹಾದಿಮನಿ. ನಂತರ ಲಂಕೇಶರ ನಿಧನಾನಂತರ ಅವರ ಮಕ್ಕಳೊಂದಿಗೆ ಹಾದಿಮನಿಯ ಅಶಿಸ್ತು, ಉಡಾಫೆತನಗಳು ಸರಿಹೊಂದಲಿಲ್ಲ. ಹೀಗಾಗಿ ಸಂಸ್ಥೆಯಿಂದ ಏಕಾಏಕಿ ಹೊರಹಾಕಿದ್ದರು.

ಲಂಕೇಶ್ ಪತ್ರಿಕೆಯಿಂದ ಹೊರಬಂದ ತಕ್ಷಣ ಹಾದಿಮನಿಯ ಕತೆ ಮುಗಿಯಿತು ಎನ್ನುವಂತಾಗಿತ್ತು. ಲಂಕೇಶರೊಟ್ಟಿಗೆ ಕೆಲಸ ಮಾಡಿದ್ದ ಕಾರಣಕ್ಕೋ ಏನೋ ಇಲ್ಲಿನ ದಿನಪತ್ರಿಕೆಗಳು ಆತನನ್ನು ತಮ್ಮಲ್ಲಿ ನೇಮಿಸಿಕೊಳ್ಳಲು ಹಿಂಜರಿದಿದ್ದವು. ಇನ್ನು ಆತನ ಕಲೆಗೆ ಬೆಲೆ ನೀಡುವ ಯಾವ ವಾರಪತ್ರಿಕೆಗಳೂ ಆಗಿರಲಿಲ್ಲ. ಹೀಗಿರುವಾಗ ಅದೇ ಸಮಯಕ್ಕೆ ಕೇರಳದ ಮಲಯಾಳ ಮನೋರಮಾ ಸಂಸ್ಥೆಯವರು ವ್ಯಂಗ್ಯಚಿತ್ರಗಾರರು ಬೇಕು ಎಂದು ಪ್ರಕಟಣೆ ಹೊರಡಿಸಿದ್ದವು. ಹಾದಿಮನಿಯ ಕುಂಚದ ಕೈಚಳಕವನ್ನು ಕಂಡ ಮನೋರಮಾ ಸಂಸ್ಥೆ ಹಿಂದೂ ಮುಂದೂ ನೋಡದೆ ಆತನಿಗೆ ಅಪಾಯಿಂಟ್‌ಮೆಂಟ್ ಆರ್ಡರ್ ನೀಡಿತ್ತು. ಜೊತೆಗೆ ದೊಡ್ಡ ಮಟ್ಟದ ಸಂಬಳ, ಓಡಾಡಲು ಕಾರು, ವಾಸಕ್ಕೆ ಮನೆ ಎಲ್ಲವನ್ನೂ ನೀಡಿತ್ತು. ಅಲ್ಲಿ ಎಂಟು-ಹತ್ತು ವರ್ಷ ಸೇವೆ ಸಲ್ಲಿಸುವ ಹೊತ್ತಿಗೆ ಹಾದಿಮನಿ, ಮನೋರಮಾ ಸಂಸ್ಥೆಯ ‘ದಿ ವೀಕ್’ ವಾರಪತ್ರಿಕೆಯಲ್ಲಿ ಚೀಫ್ ಇಲ್ಲಸ್ಟ್ರೇಟರ್ ಹುದ್ದೆಗೇರಿದ್ದ.

ತಾಜ್ ಹೋಟೇಲ್ ದಾಳಿಯಲ್ಲಿ ಸೆರೆಸಿಕ್ಕ ಕಸಬ್‌ನ ಅಧಿಕೃತ ಛಾಯಾಚಿತ್ರವಿನ್ನೂ ಆಗ ಬಿಡುಗಡೆಗೊಂಡಿರಲಿಲ್ಲ. ಆತ ಗನ್ ಹಿಡಿದು ರೈಲ್ವೇಸ್ಟೇಷನ್‌ನಲ್ಲಿ ಓಡಾಡಿದಾಗ ಸಿಸಿ ಟಿವಿಯಲ್ಲಿ ಸೆರೆಸಿಕ್ಕ ಫೋಟೋಗಳು ಮಾತ್ರ ಮಾಧ್ಯಮದಲ್ಲಿ ಹರಿದಾಡುತ್ತಿದ್ದವು. ಇಂಥ ಸಂದರ್ಭದಲ್ಲಿ ಆತನ ಎಕ್ಸ್‌ಕ್ಲೂಸಿವ್ ಫೋಟೋವನ್ನು ಪ್ರಕಟಿಸುವ ಪ್ಲಾನು ಮಾಡಿ ’ವೀಕ್’ ಪತ್ರಿಕೆ ಕೇಂದ್ರ ಸರ್ಕಾರದ ವಿಶೇಷ ಅನುಮತಿ ಪಡೆದು ಹಾದಿಮನಿ ಒಬ್ಬನನ್ನೇ ಕಸಬ್‌ನ ದರ್ಶನಕ್ಕೆ ಕಳುಹಿಸಿತ್ತು. ಜೈಲಿನಲ್ಲಿ ಎರಡು ನಿಮಿಷಗಳ ಕಾಲ ಕಸಬ್‌ನನ್ನು ನೋಡಿಬಂದ ಹಾದಿಮನಿ, ಹೊರಬಂದವರೇ ಕಸಬ್‌ನ ಭಾವಚಿತ್ರವನ್ನು ಯಥಾವತ್ತಾಗಿ ತಮ್ಮ ಕ್ಯಾನ್‌ವಾಸ್ ಮೇಲೆ ಮೂಡಿಸಿದ್ದರು. ಅದು ವೀಕ್ ಪತ್ರಿಕೆಯ ಮುಖಪುಟದಲ್ಲಿ ರಾರಾಜಿಸಿ ಪ್ರಪಂಚದೆಲ್ಲೆಡೆ ಚರ್ಚೆಯಾಯಿತು.

ಹಾದಿಮನಿ ಚಿತ್ರಿಸಿದ ಖುಶ್ವಂತ್ ಸಿಂಗ್ ಗ್ಲಾಸು ಹಿಡಿದು ಕೂತ ಚಿತ್ರ, ಅಮಿತಾಬ್ ಬಚ್ಚನ್, ಲಾಲೂಪ್ರಸಾದ್ ಯಾದವ್, ಠಾಕ್ರೆ, ಜಯಪ್ರಧಾರಿಂದ ಹಿಡಿದು ರವಿಶಂಕರ್ ಗುರೂಜಿ ತನಕ ಎಲ್ಲರ ವ್ಯಂಗ್ಯಚಿತ್ರಗಳೂ ಅತ್ಯಾಕರ್ಷಕವಾಗಿದ್ದದ್ದು ಮಾತ್ರವಲ್ಲದೆ ಓದುಗರ ಮನಸೂರೆಗೊಂಡಿತ್ತು. ಪ್ರಜಾವಾಣಿ ಸೇರಿಂದಂತೆ ಅನೇಕ ದಿನಪತ್ರಿಕೆಗಳು ಹಾದಿಮನಿ ಅಪರೂಪಕ್ಕೊಮ್ಮೆ ಬೆಂಗಳೂರಿಗೆ ಬಂದಾಗ ಆತನ ಸಂದರ್ಶನಕ್ಕಾಗಿ ಕಸರತ್ತು ನಡೆಸುತ್ತಿದ್ದವು.

ಇಂಥ ಮಾಸ್ಟರ್ ಮೈಂಡ್ ಆರ್ಟಿಸ್ಟು ವೀಕ್ ಪತ್ರಿಕೆಯಿಂದಲೂ ಹೊರದಬ್ಬಿಸಿಕೊಂಡ. ಇಂಥ ಮಹಾನ್ ಕಲಾವಿದನನ್ನು ಆ ಸಂಸ್ಥೆ ಯಾಕೆ ಕಳೆದುಕೊಂಡಿತು ಎಂದು ಎಲ್ಲರೂ ಅಚ್ಛರಿಗೊಂಡರು. ಆಗ ಹಾದಿಮನಿಯ ಸುತ್ತ ಇದ್ದದ್ದು ಇದೇ ಸ್ತ್ರೀ ಪೀಡಕ ಪ್ರವೃತ್ತಿಯ ಗಬ್ಬುವಾಸನೆ. ಒಮ್ಮೆಲೇ ’ದಿ ವೀಕ್’ ಸಂಸ್ಥೆಯಿಂದ ಎತ್ತಾಕಿಸಿಕೊಂಡು ನೌಕರಿ ಕಳೆದುಕೊಂಡ ಹಾದಿಮನಿ ತನ್ನಿಬ್ಬರು ಗಂಡು ಮಕ್ಕಳು ಮತ್ತು ಪತ್ನಿಯ ಸಮೇತ ಬೆಂಗಳೂರಿಗೆ ಗಂಟುಮೂಟೆ ಕಟ್ಟಿಕೊಂಡು ಬಂದರು. ಆದರೆ ಪ್ರತಿಭೆಯೇ ಆತನಿಗೆ ಮತ್ತೊಮ್ಮೆ ಅನ್ನದ ಹಾದಿ ತೆರೆಸಿತ್ತು. ‘ದುನಿಯಾ’ ವಾರಪತ್ರಿಕೆಯ ಸಂಪಾದಕ ದಿವಂಗತ ಸಿದ್ದೇಗೌಡರು ಮತ್ತು ಹಾದಿಮನಿ ಹಳೇ ಸ್ನೇಹಿತರು. ಎಲ್ಲದಕ್ಕಿಂತ ಹೆಚ್ಚಾಗಿ ಸಿದ್ದೇಗೌಡ್ರು ಕೂಡಾ ಹಾದಿಮನಿ ಕಲೆಯ ಅಭಿಮಾನಿ. ಈ ಕಾರಣಕ್ಕಾಗಿ ಕೇರಳದಿಂದ ಕಾಲುಕಿತ್ತುಬಂದ ಹಾದಿಮನಿಗೆ ‘ದುನಿಯಾ’ದಲ್ಲಿ ತಾತ್ಕಾಲಿಕವಾಗಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದರು. ಹಾದಿಮನಿಯ ಮಕ್ಕಳು ಮತ್ತು ಪತ್ನಿ ಆಗಿನ್ನೂ ಕೇರಳದಲ್ಲೇ ಇದ್ದರು. ‘ದುನಿಯಾ’ ಗೂಡು ಸೇರಿದ ಹಾದಿಮನಿ ಅಲ್ಲೂ ತನ್ನ ವರಸೆ ತೋರಿಸಲು ಹೆಚ್ಚು ಸಮಯ ಕಾಯಲಿಲ್ಲ. ಆತ ಎಂಥಾ ವಿಕೃತಿಗಿಳಿದಿದ್ದನೆಂದರೆ, ತನ್ನ ಮರ್ಮಾಂಗದ ಫೋಟೋ ತೆಗೆದು ಅಲ್ಲಿನ ಮಹಿಳಾ ಉದ್ಯೋಗಿಗಳ ಮೊಬೈಲಿಗೆ ಎಂಎಂಎಸ್ ಕಳಿಸಿ, ತನ್ನೊಟ್ಟಿಗಿರಲು ಬುಲಾವ್ ನೀಡಿಬಿಟ್ಟಿದ್ದ. ಜಾಗೃತರಾದ ಆ ಹೆಣ್ಣುಮಕ್ಕಳು ಸೀದಾ ಸಹೋದ್ಯೋಗಿಗಳಿಗೆ ವಿಷಯ ತಿಳಿಸಿದ್ದೇ ಸ್ನೇಹ, ಅಭಿಮಾನಗಳನ್ನೆಲ್ಲಾ ಕಿತ್ತೆಸೆದು ಅಕ್ಷರಶಃ ನಾಯಿಗೆ ಬಂಡಿದಂತೆ ವಾಂಛಿ ’ದುನಿಯಾ’ದ ಕಡೆ ಮುಖ ಹಾಕದಂತೆ ಮಾಡಿ ಕಳಿಸಿದ್ದರು. ಆದರೆ ಇದನ್ನು ಸುದ್ದಿಯನ್ನಾಗಿ ಮಾಡದೆ ಹಾದಿಮನಿಯನ್ನು ಬದುಕುವ ಅವಕಾಶ ನೀಡಿ ಔದಾರ್ಯತೆ ಮರೆದಿದ್ದರು.

 

ಹಾದಿಮನಿಯ ಈ ಎಲ್ಲಾ ಕೊಳಕು ಮನಸ್ಥಿತಿ ತಿಳಿಯದ ‘ದಿ ಪ್ರಿಂಟರ‍್ಸ್ ಮೈಸೂರು’ ಸಂಸ್ಥೆ ತಮ್ಮ ಕಂಪೆನಿಯ ರೀತಿ ನೀತಿಗಳನ್ನೆಲ್ಲಾ ಬದಿಗಿಟ್ಟು, ಅಲ್ಲಿನ ರೂಲ್ಸುಗಳ ಪ್ರಕಾರ ಅದಾಗಲೇ ಏಜ್ ಬಾರ್ ಆಗಿ ಅಲ್ಲಿ ಕೆಲಸ ಪಡೆಯಲು ಅನರ್ಹನಾಗಿದ್ದ ಹಾದಿಮನಿಗೆ ವಿಶೇಷವಾದ ಹುದ್ದೆಯನ್ನು ಸೃಷ್ಟಿಸಿ, ಅತ್ಯಧಿಕ ಸಂಬಳವನ್ನೂ ಫಿಕ್ಸ್‌ಮಾಡಿ ಪ್ರಜಾವಾಣಿಯಲ್ಲಿ ಕೆಲಸ ನೀಡಿತು. ಹಾದಿಮನಿಯ ಹಸ್ತದ ರೇಖೆಗಳಂತೆ ಅವರ ಬುದ್ಧಿಯೂ ವಕ್ರವಾಗೇ ಇತ್ತು. ಬೇರೆ ಯಾರೇ ಆಗಿದ್ದರೂ ತಾವಾಯಿತು ತಮ್ಮ ಕೆಲಸವಾಯಿತು ಎಂದು ಸುಮ್ಮನಿದ್ದುಬಿಡುತ್ತಿದ್ದರು. ಆದರೆ ಹಾದಿಮನಿ ನೌಕರಿಗೆ ಸೇರಿದ ಎರಡೇ ಎರಡು ದಿನವೂ ನೆಟ್ಟಗೆ ಕೆಲಸ ಮಾಡಲಿಲ್ಲ. ಮನಸ್ಸು ಬಂದಾಗ ಕಛೇರಿಗೆ ಹಾಜರಾಗುತ್ತಿದ್ದರು. ಆಫೀಸಿನ ಅವಧಿಯಲ್ಲೇ ಕಂಠಮಟ್ಟ ಕುಡಿದುಕೊಂಡು ಹೋಗುವ ಪರಿಪಾಠ ಬೆಳೆಸಿಕೊಂಡರು. ಒಂದು ದಿನವೂ ಸಮಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗಲಿಲ್ಲ. ಸಿಕ್ಕ ಸಿಕ್ಕ ಹೆಂಗಸರು ಸೀದಾ ಆಫೀಸಿನ ಬಾಗಿಲಲ್ಲೇ ನಿಂತು ಹಾದಿಮನಿಗಾಗಿ ಕಾಯಲು ನಿಂತರು. ಇವೆಲ್ಲವನ್ನೂ ಕಂಡ ಪತ್ರಿಕೆಯ ಸಂಪಾದಕರಾಗಿದ್ದ ಪದ್ಮರಾಜ ದಂಡಾವತಿ ಮತ್ತು ಮುಖ್ಯಸ್ಥರಾದ ಶಾಂತಕುಮಾರ್ ಮೇಲಿಂದ ಮೇಲೆ ವಾರ್ನಿಂಗ್ ಮಾಡಿದರು. ಅಲ್ಲಿ ಕೆಲಸದಲ್ಲಿದ್ದಾಗಲೇ ಆಕಾಶವಾಣಿಯ ಉದ್ಯೋಗಿ ನಿರ್ಮಲಾ ಎಲಿಗಾರ್ ಎಂಬ ಹೆಣ್ಣುಮಗಳ ಫೋನಿಗೆ ಇದೇ ಹಾದಿಮನಿ ಕೆಟ್ಟಾ ಕೊಳಕು ಸಂದೇಶಗಳನ್ನು ಕಳುಹಿಸುತ್ತಿದ್ದ ವಿಚಾರ ಹೊರಬಿದ್ದು, ಆ ಪ್ರಕರಣ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ ನಂತರವೇ ಗೊತ್ತಾಗಿದ್ದು ಈತ ಜಸ್ಟ್ ಡಯಲ್ ಮೂಲಕ ಲೇಡೀಸ್ ಹಾಸ್ಟೆಲ್, ನರ್ಸಿಂಗ್ ಹೋಂಗಳ ನಂಬರ್ ಪಡೆದು ಅಲ್ಲಿನ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾನೆ ಎಂಬ ವಿಚಾರ. ಹೀಗಾಗಿ ಹಾದಿಮನಿ ಮೊದಲ ಬಾರಿಗೆ ಪರಪ್ಪನ ಅಗ್ರಹಾರದ ಅತಿಥಿಯಾದರು. ನಂತರ ಕರ್ನಾಟಕದ ಒಂದಿಷ್ಟು ಜನ ಪ್ರಗತಿಪರರು, ಯುವ ಬರಹಗಾರರೆಲ್ಲಾ ಒಂದುಸೇರಿ ಜಾಮೀನು ನೀಡಿ ಹಾದಿಮನಿಯನ್ನು ಹೊರತಂದರು.

 

ಇವೆಲ್ಲಾ ಗೊತ್ತಿದ್ದೂ, ಎಲ್ಲವನ್ನೂ ಕ್ಷಮಿಸಿದ ಪ್ರಜಾವಾಣಿ ಸಂಸ್ಥೆ ’ಲಾಸ್ಟ್ ವಾರ್ನಿಂಗ್’ ನೀಡಿ, ಹಾದಿಮನಿಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡರು. ಹಾದಿಮನಿ ಕೂಡಾ ’ದೀಪಾವಳಿ ವಿಶೇಷಾಂಕ’ದಲ್ಲಿ ತನ್ನ ಸುಂದರವಾದ ಕಲೆಯ ಮೂಲಕ ವಿಶೇಷಾಂಕವನ್ನು ಹಿಂದೆಂದಿಗಿಂತಲೂ ಆಷಕರ್ಷಕಗೊಳಿಸಿದರು. ಇನ್ನಾದರೂ ಈ ಮನುಷ್ಯ ಬದಲಾದರಲ್ಲಾ ಎನ್ನುವ ಹೊತ್ತಿಗೇ ಹೊರಬಿದ್ದದ್ದು ನಳಿನಾ ಎಂಬ ಹೆಣ್ಣುಮಗಳ ಪ್ರಕರಣ. ಈಕೆ ಪ್ರಜಾವಾಣಿಯಲ್ಲಿ ಕನಸುಗಳ ಕುರಿತಾದ ಲೇಖನವೊಂದನ್ನು ಬರೆದಿದ್ದರು. ಆ ಲೇಖನಕ್ಕೆ ಹಾದಿಮನಿ ಸ್ಕೆಚ್ ಕೂಡಾ ಬಳಸಲಾಗಿತ್ತು. ಇದೇ ನೆಪದಲ್ಲಿ ನಳಿನಾ ನಂಬರನ್ನು ಪಡೆದ ಹಾದಿಮನಿ ತನ್ನ ವಿಕೃತ ಸ್ಕೆಚ್ ಹಾಕಲು ಶುರು ಮಾಡಿದ್ದ. ’ನಾನು ನಿನ್ನೊಟ್ಟಿಗೆ ಮಲಗಬೇಕು, ನನ್ನ ಮರ್ಮಾಂಗ ದೊಡ್ಡದಾಗಿದೆ…’ ಎಂಬಿತ್ಯಾದಿಯಾಗಿ ತೀರಾ ಗಲೀಜು ಶಬ್ದಗಳಲ್ಲಿ ಮೆಸೇಜು ಕಳಿಸಿದ್ದ. ಮೇಲಿಂದ ಮೇಲೆ ಕರೆ ಮಾಡಿ ತನ್ನೊಟ್ಟಿಗೆ ಬರುವಂತೆ ಪೀಡಿಸಿದ್ದ. ಮಯಾದಸ್ಥ ಹೆಣ್ಣುಮಗಳು ಸೀದಾ ಬಂದು ಪತ್ರಿಕೆಯ ಸಂಪಾದಕರ ಗಮನಕ್ಕೆ ತಂದಿದ್ದರು. ಸಂಪಾದಕರು ಮತ್ತು ಪತ್ರಿಕೆಯ ಪ್ರಕಾಶಕರು ’ನಮಗೂ ಅವನಿಗೂ ಸಂಬಂಧವಿಲ್ಲ. ನೀವು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಿ’ ಎಂದು ಹೇಳಿ ಕಳಿಸಿದ್ದರು. ಮಾತ್ರವಲ್ಲ, ಹಾದಿಮನಿಯನ್ನು ಕರೆಯಿಸಿ, ಕಛೇರಿಯ ಮೆಟ್ಟಿಲನ್ನೂ ಹತ್ತದಂತೆ, ಸ್ವಾಗದ ಕೋಣೆಯಲ್ಲೇ ಆತನ ಐಡಿ ಕಾರ್ಡು ಇತ್ಯಾದಿಗಳನ್ನೆಲ್ಲಾ ವಾಪಾಸು ಪಡೆದು, ರಾಜೀನಾಮೆ ಪತ್ರಕ್ಕೆ ಸಹಿ ಹಾಕಿಸಿಕೊಂಡು ಕೆಟ್ಟ ಮರ್ಯಾದೆ ನೀಡಿಕಳಿಸಿದ್ದರು. ಅಷ್ಟಕ್ಕೂ ಮರ್ಯಾದೆಯಿಂದ ಹೊರಬರುವ ಕೆಲಸವನ್ನಾದರೂ ಹಾದಿಮನಿ ಎಲ್ಲಿ ಮಾಡಿದ್ದರು?

ಅದೇನು ದುಷ್ಟತನವಾ, ಕಾಯಿಲೆಯಾ ಗೊತ್ತಿಲ್ಲ. ಹಾದಿಮನಿಯದ್ದು ಯಾರಾದರೂ ಹೆಣ್ಮಕ್ಕಳ ನಂಬರು ಸಿಕ್ಕರೆ ನಿತ್ತರಿಸಿಕೊಳ್ಳುವ ಮನಸ್ಥಿಯೇ ಅಲ್ಲ. ಇಂಥವನ ಕೈಗೆ ಇತ್ತೀಚೆಗೆ ಕನ್ನಡದ ಜನಪ್ರಿಯ ವೆಬ್ ಸೈಟ್ ಒಂದರಲ್ಲಿ ಕಾಲಂ ಬರೆಯುವ ಮಾನವಂತ ಹೆಣ್ಣುಮಗಳೊಬ್ಬಳ ಕಾಂಟ್ಯಾಕ್ಟು ಸಿಕ್ಕಿತ್ತು. ಆಕೆಗೆ ಹಾದಿಮನಿಯ ಕಲೆಯ ಕಸುವು ಗೊತ್ತಿತ್ತು. ಅದರೆಡೆಗೆ ಸಹಜವಾದ ಗೌರವ, ಅಭಿಮಾನವೂ ಇತ್ತು. ಅದೇ ಗೌರವದಿಂದ ಆಕೆ ಮಾತಾಡಿದರೆ ಈವಯ್ಯ ಅಸಲೀ ವರಸೆ ಶುರುವಿಟ್ಟಿದ್ದ. ಹೊತ್ತಲ್ಲದ ಹೊತ್ತಿನಲ್ಲಿ ತನ್ನ ಬಾಟಮ್ಮು ಬಾಧೆಗಳನ್ನ ಅಸಹ್ಯಕರವಾಗಿ ಆ ಹುಡುಗಿಗೆ ರವಾನಿಸಿದ್ದ. ಆದರೆ ಕಲೆಯ ಮೇಲಿನ ಗೌರವದಿಂದ ಹಾದಿಮನಿಯಿಂದ ಕಳಚಿಕೊಂಡ ಆಕೆ ಸುಮ್ಮನಾಗಿದ್ದರೆಂಬ ವಿಚಾರವೂ ಇದೀಗ ಎಲ್ಲೆಡೆ ಹರಿದಾಡಲಾರಂಭಿಸಿದೆ.

ಇದೆಲ್ಲದರ ಪರಿಣಾಮವೆಂಬಂತೆ ಈಗ ಹಾದಿಮನಿ ಮತ್ತೆ ಮಾಡೆಲ್ ಆಶಾ ಎಂಬಾಕೆಗೆ ವಿಕೃತ ಮೆಸೇಜು ಬಿಟ್ಟು ಅರೆಸ್ಟ್ ಆಗಿದ್ದಾನೆ. ಇನ್ನು ಹಾದಿಮನಿಯನ್ನು ಯಾರೂ ಕ್ಷಮಿಸುವ ದೊಡ್ಡ ಮನಸ್ಸಾಗಲಿ, ವಕಾಲತ್ತು ವಹಿಸುವ ಧಾರಾಳತನವನ್ನಾಗಲಿ ತೋರುವುದಿಲ್ಲ. ಆತನ ಕಲೆಯನ್ನು ಅಚ್ಚರಿಯಿಂದ ಆರಾಧಿಸುತ್ತಿದ್ದ ಅದೆಷ್ಟೋ ಜನ ಆತನ ಅಸಲಿ ಜಾತಕ ತಿಳಿದು ನೊಂದುಕೊಂಡಿದ್ದಾರೆ. ಒಟ್ಟಾರೆಯಾಗಿ ಹಾದಿಮನಿ ಸುಂದರ ಬದುಕನ್ನು, ಅದ್ಭುತ ಕಲೆಯನ್ನು ಕೈಯಾರೆ ಹಾಳುಗೆಡವಿಕೊಂಡಿದ್ದಾರೆ.

ಹಾದಿಮನಿಯೆಂಬ ಅದ್ಭುತ ಕಲಾವಿದನ ಕಾಮ ಖಯಾಲಿ, ದುಃಸ್ಥಿತಿ ಕಂಡು ಅನೇಕರು ಸುಂದರ ಚಿತ್ರವೊಂದು ಕಣ್ಣೆದುರೇ ವಿಕಾರವಾದಂಥಾ ಮನೋವ್ಯಾಕುಲಕ್ಕೆ ಬಿದ್ದಿರುವುದಂತೂ ನಿಜ.ಏನೇ ಆಗಲಿ, ಹಾದಿಮನಿ ತನ್ನ ವಿಕೃತ, ವಿಲಕ್ಷಣ ತೀಟೆಗಳನ್ನು ಬೇಗನೇ ನಿಲ್ಲಿಸಲಿ. ಮತ್ತೆ ಅವರ ಗೆರೆಗಳ ಮೋಡಿ ಸಾಂಸ್ಕೃತಿಕ ಜಗತ್ತಿಗೆ ಮುದ ನೀಡಲಿ…

#

Arun Kumar

ಅರ್ಜುನ್ ರೆಡ್ಡಿ’ ತಮಿಳು ರೀಮೇಕ್; ಮತ್ತೊಮ್ಮೆ ಸಂಪೂರ್ಣ ಚಿತ್ರೀಕರಣ!

Previous article

’ಇಂಡಿಯನ್ 2’ಗೆ ಅಡಚಣೆಯಾಗಿಲ್ಲ; ಕಮಲ್ ಹಾಸನ್ ಸ್ಪಷ್ಟನೆ

Next article

You may also like

Comments

Leave a reply

Your email address will not be published. Required fields are marked *