One N Only Exclusive Cine Portal

ಇದು ಕನ್ನಡ ಸಿನಿಮಾನಾ???

ವಿಪರೀತ ಪ್ರಚಾರ, ಕುಂತಲ್ಲಿ ನಿಂತಲ್ಲಿಯೂ ಹೈಪ್ ಕ್ರಿಯೇಟ್ ಮಾಡುತ್ತಲೇ ನಿರೀಕ್ಷೆ ಹುಟ್ಟಿಸಿದ್ದ ಚಿತ್ರ ಹಂಬಲ್ ಪೊಲಿಟೀಷಿಯನ್ ನೊಗ್‌ರಾಜ್. ಇದುವರೆಗಿನ ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳನ್ನೂ ನಿರ್ನಾಮ ಮಾಡುತ್ತೆ ಎಂಬ ರೇಂಜಿನ ಅಬ್ಬರವನ್ನೇ ನಂಬಿಕೊಂಡು ಥೇಟರು ಹೊಕ್ಕವರಿಗೆ ತೆರೆ ಮೇಲೆ ಕಂಡಿದ್ದು ಹಳೇ ತೊಟ್ಟಿಯಿಂದ ನೀಟಾಗಿ ಆಯ್ದುಕೊಂಡು ಸಂಸ್ಕರಣೆ ಮಾಡಿದಂಥಾ ಥೇಟು ಗೊಬ್ಬರ!


ಹಂಬಲ್ ಪೊಲಿಟೀಷಿಯನ್ ನೋಗರಾಜ್ ಚಿತ್ರಕ್ಕೆ ಸಿಕ್ಕ ಭಯಾನಕ ಪ್ರಚಾರ ಕಂಡೇ ಪ್ರಜ್ಞಾವಂತ ಪ್ರೇಕ್ಷಕರಿಗೊಂದು ಗುಮಾನಿ ಇದ್ದದ್ದು ಸುಳ್ಳಲ್ಲ. ಯಾಕೆಂದರೆ ಆ ಪಾಟಿ ವಿಶ್ವಾದ್ಯಂತ ಪ್ರಚಾರ ಪಡೆದಿದ್ದ ರಜನೀಕಾಂತ್ ಅಭಿನಯದ ಕಬಾಲಿ ಚಿತ್ರವೇ ಮಕಾಡೆ ಮಲಗಿತ್ತು. ರಜನೀಕಾಂತ್ ಎಂಬ ಸೂಪರ್ ಸ್ಟಾರ್ ಕೂಡಾ ಅಂಥಾದ್ದೊಂದು ಸೋಲನ್ನು ಮೀರಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಂದಮೇಲೆ ಕಬಾಲಿಗೇ ಸೈಡು ಹೊಡೆಯುವಂತೆ ಪೋಸು ಕೊಡುತ್ತಾ ಬಂದಿದ್ದ ಹಂಬಲ್ ಪೊಲಿಟೀಷಯನ್ ಕಥೆ ಏನಾದೀತೋ ಅಂತೊಂದು ಕುತೂಹಲವಿತ್ತು. ಶೀರ್ಷಿಕೆ ಹಂಬಲ್ ಅಂತಿದ್ದರೂ ಈ ಚಿತ್ರದ ಸೃಷ್ಟಿಕರ್ತರಲ್ಲೊಂದು ಅಹಂ ಇದ್ದೇ ಇತ್ತು. ಅದು ಮೊದಲ ಶೋನಲ್ಲೇ ಮಕಾಡೆ ಮಲಗಿದೆ!


ಅಷ್ಟಕ್ಕೂ ಈ ಚಿತ್ರದ್ದು ಸೀಮೆಗಿಲ್ಲದ ಕಥೆಯೇನಲ್ಲ. ಓರ್ವ ಚಾಲಾಕಿ ಕಾರ್ಪೋರೇಟರ್ ವಿದ್ಯಾವಂತ ಸ್ಪರ್ಧಿಗೇ ಹೇಗೆಲ್ಲಾ ಮಣ್ಣು ಮುಕ್ಕಿಸಿ ಗೆದ್ದು ಶಾಸಕನಾಗುತ್ತಾನೆಂಬುದೇ ಈ ಚಿತ್ರದ ಪ್ರಧಾನ ಕಥಾ ಎಳೆ. ಆ ಹಂತದಲ್ಲಿ ಹಂಬಲ್ ಪೊಲಿಟೀಷಿಯನ್ ನಡೆಸೋ ಆಟಗಳು, ಪ್ರಯೋಗಿಸೋ ಪಟ್ಟುಗಳನ್ನು ಹಾಸ್ಯದ ಥರವೇ ತೋರಿಸಲು ಪ್ರಯತ್ನಿಸಲಾಗಿದೆ. ಆದರೆ ಇಂಥಾ ಕಥೆ ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ದಂಡಿ ದಂಡಿಯಾಗಿ ಬಂದು ಹೋಗಿದೆ. ಇದೆಲ್ಲ ಹಾಳು ಬಿದ್ದು ಹೋಗಲಿ, ಚಿತ್ರವಾದರೂ ಮಜವಾಗಿದೆಯಾ? ಕಾಮಿಡಿಯಂಥಾ ದೃಷ್ಯಗಳೂ ನಗೆ ಉಕ್ಕಿಸುವಂತಿದೆಯಾ ಅಂತ ನೋಡ ಹೋದರೆ ಪ್ರೇಕ್ಷಕರು ಇಂಥಾ ಚಿತ್ರಕ್ಕೆ ಇಷ್ಟೆಲ್ಲಾ ಕಾದು ಕಾಸು ಕೊಟ್ಟು ನೋಡಿದ ತಮ್ಮನ್ನೇ ಅಣಕಿಸಿಕೊಂಡು ತಾವೇ ನಗುವಂಥಾ ಚಿತ್ರವಾಗಿ ಹಂಬಲ್ ಪೊಲೀಟೀಷಿಯನ್ ಚಿತ್ರ ನಿಜಕ್ಕೂ ಕನ್ನಡ ಚಿತ್ರರಂಗದ ಈ ವರೆಗಿನ ದಾಖಲೆಗಳನ್ನು ಬ್ರೇಕ್ ಮಾಡಿದೆ.


ಇನ್ನು ಈ ಚಿತ್ರದುದ್ದಕ್ಕೂ ನಾವು ಕನ್ನಡ ಚಿತ್ರ ನೋಡುತ್ತಿದ್ದೇವೋ ಅಥವಾ ಇಂಗ್ಲಿಷ್ ಚಿತ್ರ ನೋಡುತ್ತಿದ್ದೇವೋ ಎಂಬ ಗೊಂದಲ ಕಾಡುತ್ತದೆ. ಹಾಗಾದರೆ ಹಾಲಿವುಡ್ ರೇಂಜಿನ ದೃಷ್ಯ ವೈಭೋಗ ಇದೆಯೇನೋ ಅಂದುಕೊಂಡರೆ ಮತ್ತೊಮ್ಮೆ ಯಾಮಾರಿದಂತಾಗುತ್ತೆ. ಅಂಥಾದ್ದೊಂದು ಫೀಲ್ ಹುಟ್ಟಲು ಕಾರಣ ನಾಯಕ ನಟ ದಾನಿಶ್ ಸೇಠ್ ಬಳಸೋ ಇಂಗ್ಲಿಷ್ ಭಾಷಾ ವರಸೆ. ಇಡೀ ಚಿತ್ರದಲ್ಲಿ ಅವರು ಕನ್ನಡ ಮಾತಾಡೋದೇ ಕಡಿಮೆ. ಈ ಮೂಲಕ ಕನ್ನಡ ಚಿತ್ರವಾದರೂ ಇಂಗ್ಲಿಷಿನಲ್ಲೇ ಸಂಭಾಷಣೆ ಎಸೆಯೋ ಮೂಲಕವೂ ಈ ಚಿತ್ರ ದಾಖಲೆ ಬರೆದಿದೆ! ಅಸಲಿಗೆ ಈ ನೆಲದ ನೇಟಿವಿಟಿಯಾಗಲೀ, ಸ್ಪರ್ಶವಾಗಲೀ ಇಲ್ಲ. ಹಾಗೆ ನೋಡಿದರೆ ದಾನಿಶ್ ಸೇಠ್ ಮುಖಭಾವದಲ್ಲೇ ನಟನೆಯನ್ನು ಹೊಮ್ಮಿಸುವ ಕಲಾವಿದ. ಈ ಪಾಟಿ ಕಂಗ್ಲಿಷ್ ಮಾತಾಡಿಸುವ ಅಗತ್ಯವೇ ಇರಲಿಲ್ಲ. ಈ ನಡುವೆಯೂ ಇಷ್ಟವಾಗೋದು ಶೃತಿ ಹರಿಹರನ್ ಮತ್ತು ರೋಜರ್ ನಾರಾಯಣ್ ಅವರ ತಣ್ಣಗಿನ ಅಭಿನಯ ಮತ್ತು ಕರಮ್ ಚಾವ್ಲಾ ಕ್ಯಾಮೆರಾ ತಂತ್ರಗಾರಿಕೆ.

ಭಾರೀ ಪ್ರಚಾರದ ಮೂಲಕವೇ ಚಿತ್ರವೊಂದನ್ನು ಗೆಲ್ಲಿಸಿಕೊಳ್ಳಬಹುದೆಂಬ ಹುಂಬ ಭ್ರಮೆಯಿಂದ ತಯಾರಾದ ಚಿತ್ರವೊಂದು ಹೇಗಿರುತ್ತದೆ ಎಂಬುದಕ್ಕೆ ಸಾರ್ವಕಾಲಿಕ ಉದಾಹರಣೆಯಂಥಾ ಚಿತ್ರ ಹಂಬಲ್ ಪೊಲಿಟೀಷಿಯನ್ ನೋಗರಾಜ್. ಈ ಮೂಲಕ ಕನ್ನಡದ ಖ್ಯಾತ ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನಯ್ಯನವರು ಆಂಗ್ಲ ಭಾಷೆಯೇ ಪ್ರಧಾನವಾದ ಪೆಡಸು ಚಿತ್ರವೊಂದನ್ನು ಕನ್ನಡ ಪ್ರೇಕ್ಷಕರ ಮಡಿಲಿಗಿಟ್ಟಿದ್ದಾರೆ. ಆದರೆ ಮೊದಲ ಶೋದಲ್ಲೇ ಪ್ರೇಕ್ಷಕರು ತಲೆ ಕೊಡವಿಕೊಂಡು ಥೇಟರಿಂದ ಹೊರ ಬಿದ್ದು ನಿರಾಳರಾಗಿದ್ದಾರೆ. ಹೊಸಾ ಪ್ರಯೋಗಗಳು ಅಂದ ಮೇಲೆ ಇಂಥಾ ವಿರೋಧಾಭಾಸಗಳೆಲ್ಲ ಮಾಮೂಲು ಅನ್ನೋ ಭೋಳೇ ಮನಸ್ಥಿತಿಯವರೇ ಈ ಚಿತ್ರದ ಸೃಷ್ಟಿ ಕಾರ್ಯದ ಹಿಂದಿರೋದರಿಂದ ಪ್ರೇಕ್ಷಕರೇನೂ ತಲೆಬಿಸಿ ಮಾಡಿಕೊಳ್ಳೋ ಅವಶ್ಯಕತೆಯಿಲ್ಲ!

Leave a Reply

Your email address will not be published. Required fields are marked *


CAPTCHA Image
Reload Image