One N Only Exclusive Cine Portal

ಹೆಸರೇ ಇಂಡಿಯನ್ ಸಿನಿಮಾ!

ಈಗಿನ ದಿನಗಳಲ್ಲಿ ಒಂದು ಚಿತ್ರ ನಿರ್ಮಾಣ ಮಾಡಿ ಬಿಡುಗಡೆ ಮಾಡುವುದೇ ಕಷ್ಟಕರವಾಗಿರುವ ಸಂದರ್ಭದಲ್ಲಿ ಹೊಸದಾಗಿ ಬಂದಿರುವ ತಂಡವೊಂದು ‘ಇಂಡಿಯನ್ ಸಿನಿಮಾ’ ಎಂಬ ಚಲನಚಿತ್ರವನ್ನು ಐದು ಭಾಗಗಳಲ್ಲಿ ನಿರ್ಮಾಣ ಮಾಡಿ ತೆರೆಗೆ ತರಲು ಯೋಜನೆ ಹಾಕಿಕೊಂಡಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಆಟೋರಾಜ ಈ ಚಿತ್ರತಂಡದ ಸೂತ್ರದಾರ. ಅಂದರೆ ಚಿತ್ರದ ನಿರ್ದೇಶಕ. ಮೊನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಚಿತ್ರ ತಂಡ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ನೀಡಿತು.

ನಿರ್ದೇಶಕ ಆಟೋರಾಜ ಮಾತನಾಡುತ್ತ ಒಂದು ಚಿತ್ರದ ಅವಧಿ ೧೫೦ ನಿಮಿಷ ಇದ್ದು, ಒಟ್ಟು ಐದು ಭಾಗಗಳಲ್ಲಿ ಇಂಡಿಯನ್ ಸಿನಿಮಾ ಮೂಡಿಬರುತ್ತಿದೆ. ಚಿತ್ರದ ಒಂದನೇ ಭಾಗದಲ್ಲಿ ಭಾರತೀಯ ಚಿತ್ರರಂಗದ ೧೦೦ ವರ್ಷಗಳ ಸಮಗ್ರ ಸಾಧನೆಯ ಕುರಿತಂತೆ ಕಥಾಹಂದರ ಇರುತ್ತದೆ. ಮುಂದಿನ ಭಾಗಗಳಲ್ಲಿ ಆಯಾ ರಾಜ್ಯಗಳ ಪ್ರಸಿದ್ದ ಕಲಾವಿದರು, ತಂತ್ರಜ್ಞರ ಬಗ್ಗೆ ಕಥೆ ಇರುತ್ತದೆ. ತೆಲುಗಿನ ಅಕ್ಕಿನೇನಿ ನಾಗೇಶ್ವರಾವ್, ಎನ್.ಟಿ ರಾಮರಾವ್, ತಮಿಳು ಚಿತ್ರರಂಗದ ಕರುಣಾನಿಧಿ, ಎಂಜಿಆರ್ ಮತ್ತು ಕನ್ನಡ ಚಿತ್ರರಂಗದ ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್ ಸೇರಿದಂತೆ ಹಲವರ ಸಾಧನೆಯನ್ನು ತೋರಿಸುವ ಪ್ರಯತ್ನ ಮಾಡಲಾಗುವುದು. ಒಟ್ಟು ಹದಿನೆಂಟು ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿದೆ. ಈಗಾಗಲೇ ಶೇಕಡ ೫೦ರಷ್ಟು ಭಾಗದ ಚಿತ್ರೀಕರಣ ಮುಗಿದಿದೆ. ಉಳಿದ ಭಾಗವನ್ನು ಸೆರೆಹಿಡಿಯಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಮ್ಮ ಮುಂದಿನ ಯೋಜನೆಯನ್ನು ಹೇಳಿಕೊಂಡರು.

ತಮ್ಮದು ನಾಯಕನ ಭಾವನೆಗಳನ್ನು ಬಿಂಬಿಸುವ ಪಾತ್ರವೆಂದು ಧನುಷ್ ಹೇಳಿಕೊಂಡರು. ನಮ್ಮ ಕಾಲದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿದ್ದವು. ಈಗ ಋಣಾತ್ಮಕ, ನಕರಾತ್ಮಕವಾದ ಚಿತ್ರಗಳು ಬರುತ್ತಿರುವುದು ಬೇಸರದ ಸಂಗತಿಯಾಗಿದೆ. ಹಿಂದಿನ ಕಾಲದಂಥ ಉತ್ತಮ ಚಿತ್ರಗಳನ್ನು ಮತ್ತೆ ತೆರೆಮೇಲೆ ತರಬೇಕಾಗಿದೆ ಎಂದು ಹಿರಿಯ ನಟ ರಾಜೇಶ್ ಹೇಳಿದರು. ನಂತರ ಹಿರಿಯ ನಟಿ ಜಯಶ್ರೀ ಮಾತನಾಡಿ ೧೯೭೩ರಲ್ಲಿ ತಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದನ್ನು ನೆನಪು ಮಾಡಿಕೊಂಡರು. ಗಿರಿಜಾ ಲೋಕೇಶ್ ಹೆಚ್ಚೇನು ಮಾತನಾಡಲಿಲ್ಲ. ನಂತರ ಮಾತನಾಡಿದ ಸಂಗೀತ ನಿರ್ದೇಶಕ ಕಾರ್ತಿಕ್ ವೆಂಕಟೇಶ್ ನಿರ್ದೇಶಕರ ಆಸಕ್ತಿಯನ್ನು ಗಮನಿಸಿ ನಾನು ಅತ್ಯಂತ ಕಡಿಮೆ ಸಂಭಾವನೆಯಲ್ಲಿ ಸಂಗೀತ ಸಂಯೋಜನೆ ಮಾಡಿದ್ದೇನೆ. ಚಿತ್ರದಲ್ಲಿ ಕೇವಲ ಎರಡು ಹಾಡುಗಳಿದ್ದು, ಒಂದನ್ನು ಸಾಹಿತಿ ದೊಡ್ಡರಂಗೇಗೌಡರು ಬರೆದಿದ್ದಾರೆ. ಮತ್ತೊಂದು ಹಾಡನ್ನು ಬಾಲಿವುಡ್ ನಟಿ ಶ್ರೀದೇವಿ ನಟಿಸಿದ ಚಿತ್ರಗಳ ಹಾಡನ್ನು ರಿಮಿಕ್ಸ್ ಮಾಡಲಾಗಿದ್ದು ಇದನ್ನು ಅವರಿಗೆ ಅರ್ಪಿಸಲಾಗುತ್ತಿದೆ ಎಂದು ಹೇಳಿದರು.

 

Leave a Reply

Your email address will not be published. Required fields are marked *


CAPTCHA Image
Reload Image