Connect with us

ಕಲರ್ ಸ್ಟ್ರೀಟ್

ಜೀವನವ್ಯಾಮೋಹಿಯ ಸಾವಿನಿಂದ ದಿಕ್ಕೆಟ್ಟ ಯೋಗೇಶ್ ಮಾಸ್ಟರ್!

Published

on

ಲೇಖಕ ಯೋಗೇಶ್ ಮಾಸ್ಟರ್ ನಿರ್ದೇಶನದ ‘ಹಂಸಗೀತೆ ಚಿತ್ರ ಇನ್ನೂ ಸಂಕಲನದ ಹಂತದಲ್ಲಿದೆ. ಈ ಚಿತ್ರದಲ್ಲಿ ಪ್ರಮುಖವಾದೊಂದು ಪಾತ್ರ ನಿರ್ವಹಿಸುವ ಮೂಲಕ ಕ್ಯಾನ್ಸರ್ ಪೀಡಿತರಲ್ಲಿ ಆತ್ಮಸ್ಥೈರ್ಯ ಮೂಡಿಸಲು ಮುಂದಾಗಿದ್ದವರು ಬಂಟ್ವಾಳದ ಜಬ್ಬಾರ್ ಪೊನ್ನೋಡಿ. ಸ್ವತಃ ಕ್ಯಾನ್ಸರ್ ಕಾಯಿಲೆ ಪೀಡಿತರಾಗಿದ್ದುಕೊಂಡು, ಉತ್ಸಾಹದ ಚಿಲುಮೆಯಂತಿದ್ದ ಜಬ್ಬಾರ್ ಇದೀಗ ಮರಣ ಹೊಂದಿದ್ದಾರೆ.

ಕ್ಯಾನ್ಸರ್ ಕಾಯಿಲೆ ಬಂದಿರುವುದು ದೇಹಕ್ಕಷ್ಟೇ ಮನಸಿಗಲ್ಲ ಎಂಬಂತೆ ಲವಲವಿಕೆಯಿಂದ ಬದುಕಿದ್ದ ಜಬ್ಬಾರ್ ಅಖಂಡ ಹನ್ನೊಂದು ವರ್ಷಗಳ ಕಾಲ ಕ್ಯಾನ್ಸರ್ ಎಂಬ ಮಹಾಮಾರಿಯ ಜೊತೆ ಸೆಣೆಸಾಡಿದ್ದವರು. ಹತ್ತಿರದಿಂದ ಬಲ್ಲವರಿಗೆ ಬಿಟ್ಟರೆ, ಇವರಿಗೆ ಇಂಥಾದ್ದೊಂದು ಕಾಯಿಲೆ ಇದೆ ಎಂಬ ಸಣ್ಣ ಸುಳಿವನ್ನೂ ಬಿಟ್ಟು ಕೊಡದಂತೆ ಜೀವನೋತ್ಸಾಹ ಇಟ್ಟುಕೊಂಡಿದ್ದ ಜಬ್ಬಾರ್ ಕಡೆಗೂ ಸಾವಿನ ಮುಂದೆ ಮಂಡಿಯೂರಿದ್ದಾರೆ. ಗೆಳೆಯ ಹೀಗೆ ಅಕಾಲಿಕವಾಗಿ ಸಾವನ್ನಪ್ಪಿದ್ದರಿಂದ ಕಂಗಾಲಾಗಿರುವ ನಿರ್ದೇಶಕ ಯೋಗೇಶ್ ಮಾಸ್ಟರ್ ಈ ಬಗ್ಗೆ ನೋವು ತೋಡಿಕೊಂಡಿದ್ದಾರೆ. ‘ನೀನು ನಟಿಸಿರುವ ಚಿತ್ರವಿನ್ನೂ ಸಂಕಲನದ ಹಂತದಲ್ಲಿದೆ. ಆದರೆ ಅಷ್ಟರಲ್ಲಿಯೇ ನೀನಿಲ್ಲ. ಎಷ್ಟೋ ಜನರಿಗೆ ಪ್ರೇರಕನಾನಿ ನೀನಿರಬೇಕಿತ್ತು ಎಂದು ಯೋಗೇಶ್ ಮಾಸ್ಟರ್ ಸಂಕಟ ತೋಡಿಕೊಂಡಿದ್ದಾರೆ.

ಯೋಗೇಶ್ ಮಾಸ್ಟರ್ ತಮ್ಮ ಸಂಬಂಧಿಯೊಬ್ಬರು ಕ್ಯಾನ್ಸರ್ ಬಾಧೆಗೀಡಾಗಿದ್ದ ಘಟನೆಯನ್ನಾಧರಿಸಿ ಅಮೃತಾ ಎಂಬೊಂದು ಕಾದಂಬರಿ ಬರೆದಿದ್ದರು. ಕ್ಯಾನ್ಸರ್ ಈಗ ಸಾಮಾನ್ಯ ಎಂಬಂಥಾ ಕಾಯಿಲೆ ಆಗಿದ್ದರೂ ಅದರ ನರಳಿಕೆ ಸಾಮಾನ್ಯವಾದದ್ದೇನಲ್ಲ. ಇಂಥಾ ಕಾಯಿಲೆ ಅದರಿಂದ ಪೀಡಿತವಾದ ವ್ಯಕ್ತಿಯನ್ನು ಮಾತ್ರವಲ್ಲದೇ ಅವರ ಸುತ್ತಲಿನ ಜನರ ಮನೋಭೂಮಿಕೆಯ ಮೇಲೆಯೂ ಸಾಕಷ್ಟು ಪರಿಣಾಮ ಬೀರಿರುತ್ತದೆ. ಈ ಕಾಯಿಲೆಯ ಬಾಧೆಗೀಡಾದವರನ್ನು ಸಂತೈಸುವ, ಸಮ್ಮೋಹನಗೊಳಿಸಿ ಬದುಕಿನಲ್ಲಿ ಉತ್ಸಾಹ ಮೂಡಿಸುವ ಕಥಾ ಹಂದರ ಹೊಂದಿದ್ದ ತಮ್ಮ ಕಾದಂಬರಿ ‘ಅಮೃತಾವನ್ನು ಯೋಗೇಶ್ ಮಾಸ್ಟರ್ ‘ಹಂಸಗೀತೆ ಚಿತ್ರವಾಗಿಸಿದ್ದರು.

ಇದರಲ್ಲಿ ಬಹುಮುಖ್ಯವಾದೊಂದು ಪಾತ್ರ ಮಾಡಿದ್ದವರು ಜಬ್ಬಾರ್ ಪೊನ್ನೋಡಿ. ಹಂಸಗೀತೆಯ ಚಿತ್ರೀಕರಣದುದ್ದಕ್ಕೂ ಜಬ್ಬಾರ್ ಎಲ್ಲ ಸರಿಯಿರುವವರನ್ನೂ ನಾಚಿಸುವಂಥಾ ಉತ್ಸಾಹದಿಂದ ಪಾಲ್ಗೊಂಡಿದ್ದರು. ಸಣ್ಣದೊಂದು ರಿಯಾಯಿತಿಯನ್ನೂ ಅವರು ಬಯಸಿರಲಿಲ್ಲ. ಚಳಿಯಿದ್ದರೂ, ರಣರಣಾ ಬಿಸಿಲಿದ್ದರೂ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಲವಲವಿಕೆಯನ್ನು ಯೋಗೇಶ್ ಮಾಸ್ಟರ್ ಕಣ್ತುಂಬಿಕೊಂಡು ನೆನೆಸಿಕೊಳ್ಳುತ್ತಾರೆ.

ಕಳೆದ ಹನ್ನೊಂದು ವರ್ಷಗಳಿಂದಲೂ ಕ್ಯಾನ್ಸರ್ ಕಾಯಿಲೆಯ ಜೊತೆ ಬಡಿದಾಡಿಕೊಂಡೇ ಬದುಕುತ್ತಾ ಬಂದಿದ್ದವರು ಜಬ್ಬಾರ್. ಅವರು ತಮಗೆ ಕ್ಯಾನ್ಸರ್ ಕಾಯಿಲೆ ಇದೆ ಎಂಬ ವಿಚಾರ ತಿಳಿದಾಗಿನಿಂದಲೂ ವೈದ್ಯಕೀಯ ಲೋಕವೇ ಅಚ್ಚರಿಗೊಳ್ಳುವಂತೆ ಜೀವನೋತ್ಸಾಹ ತುಂಬಿಕೊಂಡಿದ್ದರು. ಆ ಬಲದಿಂದಲೇ ಇತರೇ ರೋಗಿಗಳಿಗೂ ಮಾದರಿಯಂತೆ ಗುರುತಿಸಿಕೊಂಡಿದ್ದರು. ಇಂಥಾದ್ದೇ ಕಥಾ ಹಂದರ ಹೊಂದಿದ್ದ ಹಂಸಗೀತೆ ಚಿತ್ರದಲ್ಲಿನ ಪ್ರಧಾನವಾದ ಪಾತ್ರಕ್ಕೆ ಯೋಗೇಶ್ ಮಾಸ್ಟರ್ ಈ ಸೂಕ್ತ ವ್ಯಕ್ತಿಯನ್ನೇ ಆರಿಸಿಕೊಂಡಿದ್ದರು.

ತೀರಾ ಕಾಡುವಂತೆ ಬರೆಯಬಲ್ಲವರಾಗಿದ್ದ ಜಬ್ಬಾರ್ ಎಲೆಕ್ಷನ್ ಅನೌನ್ಸ್ ಆದ ದಿನದಿಂದ ಮೊನ್ನೆಯ ತನಕವೂ ಪ್ರತೀ ದಿನ ‘ಸಮರ್ಥರನ್ನು ಆಯ್ಕೆ ಮಾಡಬೇಕು’ ಅಂತಾ ಫೇಸ್ ಬುಕ್ಕಲ್ಲಿ ಬರೆಯುತ್ತಲೇ ಇದ್ದರು. ಇನ್ನೂ ಎಲೆಕ್ಷನ್ ನಡೆದು ಉತ್ತಮರು ಆಯ್ಕೆಯಾಗೋ ಮುನ್ನವೇ ಜಬ್ಬಾರ್ ಹೊರಟುಬಿಟ್ಟಿದ್ದಾರೆ!

ತಮ್ಮ ನಟನೆಯ ಚಿತ್ರವೀಗ ಸಂಕಲನ ಮುಗಿಸಿಕೊಂಡು ಆದಷ್ಟು ಬೇಗ ತೆರೆ ಕಾಣೋ ಹಂತದಲ್ಲಿದೆ. ಆದರೆ ಈ ಚಿತ್ರದ ಕೇಂದ್ರ ಬಿಂದುವಾಗಿದ್ದ ಜಬ್ಬಾರ್ ಮಾತ್ರ ಕಣ್ಮರೆಯಾಗಿದ್ದಾರೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಕಲರ್ ಸ್ಟ್ರೀಟ್

ಪರದೇಸಿ ಕೇರಾಫ್ ಲಂಡನ್ ಇದು ಎರಡನೇ ಸಲದ ಮಹಾ ಸಂಗಮ!

Published

on


ಸಾಮಾನ್ಯವಾಗಿ ಒಂದೇ ತಂಡ, ನಾಯಕ ಮತ್ತು ನಿರ್ದೇಶಕರು ಒಂದರ ಹಿಂದೆ ಮತ್ತೊಂದು ಚಿತ್ರದಲ್ಲಿ ಜೊತೆಯಾಗೋದು ವಿರಳ. ಎಷ್ಟೋ ಸಲ ಒಂದು ಸಿನಿಮಾ ಮುಕ್ತಾಯಕ್ಕೂ ಮುನ್ನವೇ ತಂಡದೊಳಗಿನ ವಿಶ್ವಾಸವೂ ಸಮಾಪ್ತಿಗೊಂಡಿರುತ್ತದೆ. ಆದರೆ ಪರದೇಸಿ ಕೇರಾಫ್ ಲಂಡನ್ ವಿಚಾರದಲ್ಲದು ಪಕ್ಕಾ ತದ್ವಿರುದ್ಧ!

ಪರದೇಸಿ ಕೇರಾಫ್ ಲಂಡನ್ ಮೂಲಕ ನಿರ್ದೇಶಕ ರಾಜಶೇಖರ್ ಮತ್ತು ವಿಜಯ್ ರಾಘವೇಂದ್ರ ಎರಡನೇ ಸಲ ಒಂದಾಗಿದ್ದಾರೆ. ಈ ಹಿಂದೆ ಇದೇ ಜೋಡಿ ರಾಜ ಲವ್ಸ್ ರಾಧೆ ಚಿತ್ರದ ಮೂಲಕ ಗೆಲುವು ದಾಖಲಿಸಿತ್ತು. ಈಗ ಹೆಚ್ಚೂ ಕಮ್ಮಿ ಅದೇ ತಂಡವೇ ಸೇರಿಕೊಂಡು ಪರದೇಸಿ ಕೇರಾಫ್ ಲಂಡನ್ ಚಿತ್ರವನ್ನು ರೂಪಿಸಿದೆ.
ರಾಜ ಲವ್ಸ್ ರಾಧೆ ಚಿತ್ರ ಅಂತಿಮ ಹಂತ ತಲುಪೋ ಮುನ್ನವೇ ನಿರ್ದೇಶಕ ರಾಜಶೇಖರ್ ಹೊಸಾ ಕಥೆಯೊಂದಕ್ಕೆ ಕಾವು ಕೊಟ್ಟಿದ್ದರು. ಅದಕ್ಕೆ ವಿಜಯ್ ರಾಘವೇಂದ್ರ ಅವರೇ ನಾಯಕ ಎಂದೂ ಫಿಕ್ಸಾಗಿದ್ದರು. ಆ ಘಳಿಗೆಯಲ್ಲಿಯೇ ರಾಜಶೇಖರ್ ವಿಜಯ್ ರಾಘವೇಂದ್ರ ಅವರ ಜೊತೆ ಮತ್ತೊಂದು ಚಿತ್ರ ಮಾಡೋದಾಗಿಯೂ ಘೋಶಿಸಿದ್ದರು.

ಆ ಮಾತಿಗೆ ತಕ್ಕುದಾಗಿಯೇ ಪರದೇಸಿ ಕೇರಾಫ್ ಲಂಡನ್ ಅನ್ನು ರೂಪಿಸಿ ಬಿಡುಗಡೆಯ ಹೊಸ್ತಿಲಿಗೆ ತಂದು ನಿಲ್ಲಿಸಿದ್ದಾರೆ.
ವಿಜಯ್ ರಾಘವೇಂದ್ರರ ನಟನಾ ಚಾತುರ್ಯದ ಬಗ್ಗೆ ಬಿಡಿಸಿ ಹೇಳೋ ಅಗತ್ಯವೇನಿಲ್ಲ. ಈವರೆಗೂ ಅವರು ಥರ ಥರದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಎಂಥಾ ಪಾತ್ರಗಳಿಗಾದರೂ ಒಗ್ಗಿಕೊಳ್ಳುವ ಛಾತಿಯನ್ನೂ ಜಾಹೀರು ಮಾಡಿದ್ದಾರೆ. ಆದರೆ ಈ ಚಿತ್ರದಲ್ಲಿ ವಿಜಯ್ ಈ ಹಿಂದೆಂದೂ ಕಾಣಿಸದ ರೀತಿಯಲ್ಲಿ ಅವತರಿಸಲಿದ್ದಾರೆ ಅಂತ ರಾಜಶೇಖರ್ ಆರಂಭದಲ್ಲಿಯೇ ಹೇಳಿದ್ದಾರೆ. ಪರದೇಸಿ ಕೇರಾಫ್ ಲಂಡನ್ ಬಗ್ಗೆ ಈ ಪಾಟಿ ನಿರೀಕ್ಷೆ ಮೂಡಿರೋದಕ್ಕೆ ಅದೂ ಕೂಡಾ ಪ್ರಮುಖ ಕಾರಣ. ಅಂಥಾ ವಿಶೇಷತೆ ಏನಿದೆ ಎಂಬುದು ಈ ತಿಂಗಳ ಕಡೇಯ ಹೊತ್ತಿಗೆಲ್ಲ ಅನಾವರಣಗೊಳ್ಳಲಿದೆ.

Continue Reading

ಕಲರ್ ಸ್ಟ್ರೀಟ್

ಡಾ ರಾಜ್ ಮೊಮ್ಮಗನಿಗೊಲಿದ ಕೆಂಡಸಂಪಿಗೆ!

Published

on


ಕನ್ನಡದಲ್ಲಿ ಅಪಾರ ಅವಕಾಶಗಳನ್ನು ಗಳಿಸಿಕೊಳ್ಳುತ್ತಲೇ ಪರಭಾಷೆಗೂ ಜಿಗಿದ ಖುಷಿಯಲ್ಲಿರುವವಳು ಮಾನ್ವಿತಾ ಕಾಮತ್. ಇದೀಗ ಮಾನ್ವಿತಾ ಡಾ ರಾಜ್‌ಕುಮಾರ್ ಮೊಮ್ಮಗ ಧೀರೇನ್ ನಾಯಕನಾಗಿರೋ ದಾರಿ ತಪ್ಪಿದ ಮಗ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.

ಧೀರೇನ್ ಎಂಟ್ರಿ ಕೊಡುತ್ತಿರೋ ದಾರಿ ತಪ್ಪಿದ ಮಗನ ಬಗ್ಗೆ ಈ ಹಿಂದಿನಿಂದಲೂ ವ್ಯಾಪಕವಾಗಿ ಸುದ್ದಿಗಳು ಹರಿದಾಡುತ್ತಿದ್ದವು. ಈ ವಿಚಾರ ಅಧಿಕೃತವಾಗಿ ಜಾಹೀರಾದರೂ ನಾಯಕಿ ಯಾರಾಗಲಿದ್ದಾರೆಂಬ ಕುತೂಹಲ ಮಾತ್ರ ಹಾಗೆಯೇ ಉಳಿದುಕೊಂಡಿತ್ತು. ಇಲ್ಲಿ ನಾಯಕಿಯದ್ದು ಲವ ಲವಿಕೆಯಿಂದಿರೋ ಮುದ್ದಾದ ಪಾತ್ರ. ಅದಕ್ಕೆ ಹುಡುಕಾಟ ನಡೆಸಿದ ನಿರ್ದೇಶಕರು ಕಡೆಗೂ ಮಾನ್ವಿತಾಳನ್ನು ಆಯ್ಕೆ ಮಾಡಿದ್ದಾರೆ.

ರಾಜ್ ಮೊಮ್ಮಗ ಧೀರೇನ್ ಈಗಾಗಲೇ ಈ ಚಿತ್ರದ ಪಾತ್ರಕ್ಕಾಗಿ ಪಟ್ಟು ಹಿಡಿದು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ನಟನೆಯಲ್ಲಿ ತರಬೇತಿ ಪಡೆದು ಡ್ಯಾನ್ಸ್, ಫೈಟ್‌ಗಳಲ್ಲಿಯೂ ಪಳಗಿಕೊಂಡಿದ್ದಾರೆ. ನಿರ್ದೇಶಾಕ ಅನಿಲ್ ಕುಮಾರ್ ಕೂಡಾ ಎಲ್ಲ ಸಿದ್ಧತೆಗಳನ್ನೂ ಮುಗಿಸಿಕೊಂಡು ಚಿತ್ರೀಕರಣದತ್ತ ಮುಖ ಮಾಡಿದ್ದಾರೆ.
ನಟಿ ಮಾನ್ವಿತಾ ಕೆಂಡ ಸಂಪಿಗೆ ಮೂಲಕ ಎಂಟ್ರಿ ಕೊಟ್ಟು ಆ ನಂತರ ಟಗರು ಚಿತ್ರದ ಮೂಲಕ ಹೆಚ್ಚಿನ ಅವಕಾಶಗಳನ್ನು ತನ್ನದಾಗಿಸಿಕೊಳ್ಳುತ್ತಿದ್ದಾಳೆ. ಈ ಸಮಯದಲ್ಲಿಯೇ ಮರಾಠಿ ಚಿತ್ರಕ್ಕೆ ನಾಯಕಿಯಾಗೋ ಅವಕಾಶವೂ ಒಲಿದು ಬಂದಿದೆ. ಅದನ್ನೊಪ್ಪಿಕೊಂಡು ಮರಾಠಿಯಲ್ಲಿಯೂ ಸಕ್ರಿಯವಾಗಿರೋ ಮಾನ್ವಿತಾ ದಾರಿ ತಪ್ಪಿದ ಮಗನಿಗೂ ಸಾಥ್ ಕೊಡಲು ಮುಂದಾಗಿದ್ದಾಳೆ.

Continue Reading

ಕಲರ್ ಸ್ಟ್ರೀಟ್

ಕ್ರೇಜಿಸ್ಟಾರ್ ಪುತ್ರನಿಗೆ ಸಿಕ್ಕವಳು ಹುಬ್ಬಳ್ಳಿ ಹುಡುಗಿ!

Published

on


ರವಿಚಂದ್ರನ್ ಪುತ್ರ ಮನೋರಂಜನ್ ಸಾಕಷ್ಟು ತಯಾರಿ ಮಾಡಿಕೊಂಡ ಬಳಿಕ ಹೊಸಾ ಚಿತ್ರಕ್ಕೆ ರೆಡಿಯಾಗಿದ್ದಾರೆ. ಈ ಚಿತ್ರಕ್ಕೆ ಪ್ರಾರಂಭ ಎಂಬ ಹೆಸರೂ ನಿಗಧಿಯಾಗಿದೆ. ಸಾಕಷ್ಟು ಸಮಯದಿಂದ ಪ್ರಾರಂಭಕ್ಕೆ ನಾಯಕಿಯನ್ನು ಆಯ್ಕೆ ಮಾಡೋ ಕಾರ್ಯ ಚಾಲ್ತಿಯಲ್ಲಿತ್ತು. ಇದಕ್ಕಾಗಿ ದೊಡ್ಡ ಮಟ್ಟದಲ್ಲಿಯೇ ಸರ್ಕಸ್ಸು ನಡೆಸಿ ಕಡೆಗೂ ಕೀರ್ತಿ ಕಲಕೇರಿಯನ್ನು ನಾಯಕಿ ಪಾತ್ರಕ್ಕೆ ನಿಕ್ಕಿ ಮಾಡಲಾಗಿದೆ.

ಕೀರ್ತಿ ಕಲಕೇರಿ ಮಾಡೆಲಿಂಗ್ ಕ್ಷೇತ್ರದಲ್ಲಿ ಛಾಪು ಮೂಡಿಸಿರೋ ಹುಡುಗಿ. ಈಗಾಗಲೇ ಮಿಸ್ ಗೋವಾ ಕರೀಟವನ್ನೂ ಮುಡಿಗೇರಿಸಿಕೊಂಡಿರುವ ಈಕೆ ಪಕ್ಕಾ ಕನ್ನಡತಿ. ಹುಬ್ಬಳ್ಳಿಯ ಕೀರ್ತಿ ಈಗಿನ್ನೂ ಹದಿನೆಂಟರ ಹುಡುಗಿ. ಈ ಚಿತ್ರದ ನಾಯಕಿ ಪಾತ್ರಕ್ಕೆ ಮುಗ್ಧ ಮುಖ ಭಾವ ಹೊತ್ತ ತಾಜಾ ಮುಖವೊಂದು ಬೇಕಾಗಿತ್ತಂತೆ. ಅದಕ್ಕಾಗಿ ಆಡಿಷನ್ ನಡೆಸಿದ್ದ ಚಿತ್ರತಂಡ ಎಪ್ಪತ್ತಕ್ಕೂ ಅಧಿಕ ಹುಡುಗೀರಲ್ಲಿ ಕೀರ್ತಿಯನ್ನು ಆಯ್ಕೆ ಮಾಡಿಕೊಂಡಿದೆ.

ಪ್ರಾರಂಭವನ್ನು ಮನು ಕಲ್ಯಾಡಿ ನಿರ್ದೇಶನ ಮಾಡಲಿದ್ದಾರೆ. ಜಗದೀಶ್ ಕಲ್ಯಾಡಿ ಹಣ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಕೌಟುಂಬಿಕ ಕಥಾಹಂದರ ಹೊಂದಿರೋ ಈ ಚಿತ್ರಕ್ಕೆ ತಿಂಗಳೊಪ್ಪತ್ತಿನಲ್ಲಿಯೇ ಚಿತ್ರೀಕರಣ ಆರಂಭವಾಗಲಿದೆ.

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz