One N Only Exclusive Cine Portal

ಮಲೆಯಾಳಿ ಸರ್ಪರಾಜನಾಗ್ತಾರಾ ಜಾಕಿಜಾನ್?

ಮಾರ್ಷಲ್ ಆರ್ಟ್‌ನ ಕಿಂಗ್ ಅಂತಲೇ ಹೆಸರಾಗಿರುವವರು ಜಾಕಿ ಚಾನ್. ಅವರು ಮಲೆಯಾಳಿ ಚಿತ್ರವೊಂದರಲ್ಲಿ ನಟಿಸುತ್ತಾರಾ? ಆ ಚಿತ್ರದಲ್ಲಿ ಜಾಕಿ ಚಾನ್ ಸರ್ಪರಾಜನ ಪಾತ್ರದಲ್ಲಿ ಅಬ್ಬರಿಸಲಿದ್ದಾರಾ? ಸದ್ಯ ಮಾಲಿವುಡ್ ತುಂಬಾ ಹರಿದಾಡುತ್ತಿರೋ ರೂಮರುಗಳ ಆಧಾರದಲ್ಲಿ ನೋಡ ಹೋದರೆ ಅಂಥಾ ಸಾಧ್ಯತೆಗಳೇ ಹೆಚ್ಚಿವೆ!

ವಾಸುದೇವನ್ ನಾಯರ್ ಅವರ ರ್‍ಯಾಂಡಮೂಜಮ್ ಎಂಬ ಚಿತ್ರದಲ್ಲಿನ ಸರ್ಪರಾಜನ ಪಾತ್ರಕ್ಕೆ ಜಾಕಿ ಚಾನ್ ಅವರನ್ನು ಕರೆತರುವ ಗಂಭೀರ ಪ್ರಯತ್ನಗಳು ನಡೆಯುತ್ತಿವೆ. ಈ ಚಿತ್ರದ ನಿರ್ದೇಶಕ ವಿ.ಎ ಶ್ರೀಕುಮಾರ್ ಜಾಕಿ ಚಾನ್ ಅವರನ್ನು ಹೇಗಾದರೂ ಮಾಡಿ ಒಪ್ಪಿಸಿ ಕರೆ ತಂದು ಸರ್ಪರಾಜನ ಪಾತ್ರವನ್ನು ಮಾಡಿಸಲು ಥರ ಥರದ ಕಸರತ್ತುಗಳನ್ನು ನಡೆಸುತ್ತಿದ್ದಾರಂತೆ.

ಅಂದಹಾಗೆ ಈ ಚಿತ್ರ ಬಹುತಾರಾಗಣವನ್ನು ಹೊಂದಿದೆ. ಪೌರಾಣಿಕ ಕಥಾ ಹಂದರ ಹೊಂದಿರೋ ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಣೆ ಮಾಡಲು ಮೋಹನ್‌ಲಾಲ್ ಒಪ್ಪಿಕೊಂಡಿದ್ದಾರೆ. ಅವರು ಈ ಚಿತ್ರದಲ್ಲಿ ಭೀಮನ ಪಾತ್ರ ಮಾಡಲಿದ್ದಾರಂತೆ. ಉಳಿದ ಮುಖ್ಯ ಪಾತ್ರಗಳಿಗೆ ಬೇರೆ ಬೇರೆ ಭಾಷೆಗಳ ಸೂಪರ್‌ಸ್ಟಾರ್‌ಗಳನ್ನು ಕರೆತರಲೂ ಪ್ರಯತ್ನಗಳು ನಡೆಯುತ್ತಿವೆ. ಅಜೆಯ್ ದೇವಗನ್, ಮಹೇಶ್ ಬಾಬು ಮುಂತಾದ ನಟರೂ ಮುಖ್ಯ ಪಾತ್ರಗಳನ್ನು ನಿರ್ವಹಿಸಲಿದ್ದಾರಂತೆ.

ಉದ್ಯಮಿ ಬಿ ಆರ್ ಶೆಟ್ಟಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಈ ಚಿತ್ರದ ಒಟ್ಟಾರೆ ಬಜೆಟ್ ಮೊತ್ತ ಕೂಡಾ ಬೆಚ್ಚಿ ಬೀಳಿಸುವಂತಿದೆ. ಭರ್ತಿ ಒಂದು ಸಾವಿರ ಕೋಟಿ ಮೊತ್ತದಲ್ಲಿ ಈ ಚಿತ್ರ ನಿರ್ಮಾಣವಾಗಲಿದೆಯಂತೆ. ಈ ಮೂಲಕ ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತೀ ದೊಡ್ಡ ಬಜೆಟ್ಟಿನ ಚಿತ್ರವಾಗಿ ದಾಖಲಾಗಲಿದೆ.

Leave a Reply

Your email address will not be published. Required fields are marked *


CAPTCHA Image
Reload Image