One N Only Exclusive Cine Portal

ರಮ್ಯಾ ವಿರುದ್ಧ ಕೆರಳಿದ ಜಗ್ಗೇಶ್!

ಈ ಬಾರಿ ರಾಜಕೀಯ ವಿದ್ಯಮಾನಗಳಲ್ಲಿ ಕನ್ನಡದ ನಟ ನಟಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಲಕ್ಷಣಗಳಿರೋದರಿಂದ ರಾಜಕೀಯ ಕೆಸರೆರಚಾಟಕ್ಕೆ ಗಾಂಧಿನಗರವೂ ವೇದಿಕೆಯಾಗೋ ಸಂಭವವಿದೆ. ಈವರೆಗೆ ಚಿತ್ರರಂಗದಲ್ಲಿ ಸ್ಟಾರ್‌ವಾರ್ ಮಾತ್ರವೇ ನಡೆಯುತ್ತಿತ್ತು. ಇದೀಗ ಪೊಲಿಟಿಕಲ್ ವಾರ್‌ಗೂ ಅಖಾಡ ಸಜ್ಜಾಗಿದೆ.

ಇದೀಗ ರಮ್ಯಾ ಮತ್ತು ನವರಸನಾಯಕ ಜಗ್ಗೇಶ್ ನಡುವೆ ಮತ್ತೊಂದು ಸುತ್ತಿನ ಆನ್‌ಲೈನ್ ಕದನ ಶುರುವಾಗಿದೆ. ಪ್ರಾಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿರೋ ನಟಿ ರಮ್ಯಾರನ್ನು ಜಗ್ಗೇಶ್ ಟ್ವೀಟ್ ಮೂಲಕವೇ ಮೂದಲಿಸಿದ್ದಾರೆ!

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವ ಹೊಂದುವ ಮೂಲಕ ಆನ್‌ಲೈನ್ ವಿಭಾಗವನ್ನು ನಿರ್ವಹಿಸುತ್ತಿರುವಾಕೆ ರಮ್ಯಾ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರವಾಗಿಯೇ ಟ್ವೀಟ್ ಮಾಡುತ್ತಲೇ ರಮ್ಯಾ ಪದೇ ಪದೆ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೂ ಆಕೆ ಪ್ರಧಾನಿಯನ್ನು ಕೆಣಕುವಂಥಾ ಮಾತಾಡಿದ್ದರು. ಇದರ ವಿರುದ್ಧ ಕೆರಳಿರೋ ಜಗ್ಗೇಶ್ `ಇಡೀ ವಿಶ್ವ ನಾಯಕರೇ ಮೋದಿಯವರನ್ನು ಮೆಚ್ಚಿಕೊಂಡಿದೆ. ದೊಡ್ಡವರ ಬಗ್ಗೆ ಮಾತಾಡುವಾಗ ತಿಳುವಳಿಕೆ ಬೇಕಾಗುತ್ತದೆ. ಇಂಥಾ ತಿಳುವಳಿಕೆ, ಅನುಭವದಿಂದ ಚರ್ಚೆ ಮಾಡಿದರೆ ಅದನ್ನು ಜನ ಒಪ್ಪಿಕೊಳ್ಳುತ್ತಾರೆ. ಆದರೆ ಮೋದಿ ವಿರುದ್ಧ ಮಾತಾಡಲು ಈಕೆ ಯಾರು? ಇವರ ಸಾಧನೆ ಏನು? ಅಂತೆಲ್ಲ ಜಗ್ಗೇಶ್ ತೀಕ್ಷ್ಣವಾಗಿಯೇ ಪ್ರಶ್ನಿಸಿದ್ದಾರೆ.

ರಮ್ಯಾ ಮೋದಿ ವಿರುದ್ಧ ಮಾಡಿರೋ ಮತ್ತೊಂದು ಟ್ವೀಟ್‌ಗೂ ಜಗ್ಗೇಶ್ `ಅಪ್ಪನ ಕಾಸಲ್ಲಿ ಸ್ಟಾರ್ ಹೋಟೆಲ್‌ನಲ್ಲಿ ಕೂತು ಪಾರ್ಟಿ ಕೊಟ್ಟು ಪಾರ್ಟು ಗಿಟ್ಟಿಸಿ, ಪ್ರತೀ ಚಿತ್ರವನ್ನು ಕ್ಯಾಚ್ ಹಾಕಿಕೊಳ್ಳಲು ಅದೇ ಸ್ಟಾರ್ ಹೋಟೆಲನ್ನು ಬಳಸಿಕೊಂಡು, ದೊಡ್ಡವರ ನೆರಳಲ್ಲಿ ರಾಜಕೀಯ ಮಾಡುತ್ತಾ, ಹೈಕಮಾಂಡನ್ನೇ ಕ್ಯಾಚ್ ಹಾಕಿಕೊಂಡವರು ಮೋದಿ, ಗಾಂಧಿ ಯಾರ ಬಗ್ಗೆ ಬೇಕಾದರೂ ಮಾತಾಡ್ತಾರೆ. ಯಾಕಂದ್ರೆ ಅವರು ಶ್ರಮವಿಲ್ಲದೆ ಪಲ್ಲಂಗ ಏರಿದೋರಲ್ಲವೇ? ಅಂತ ಜಗ್ಗೇಶ್ ಕಿಂಡಲ್ ಮಾಡಿದ್ದಾರೆ.

ಅಂತೂ ಈ ಮೂಲಕ ಜಗ್ಗೇಶ್ ಮತ್ತು ರಮ್ಯಾ ನಡುವಿನ ರಾಜಕೀಯ ಕಲಹ ಮೇರೆ ಮೀರುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಜಗ್ಗಣ್ಣನ ಮಾತುಗಳಲ್ಲಿ ಕೆಲ ಮಂದಿಗೆ ವರ್ಷಾಂತರಗಳ ಹಿಂದೆ ಸೀದು ಹೋಗಿದ್ದ ನೀರ್‌ದೋಸೆಯ ಕಮಟು ವಾಸನೆಯೂ ಬಡಿಯುತ್ತಿರೋದರಲ್ಲಿ ಬಹುಶಃ ರಾಜಕೀಯ ಕೈವಾಡ ಇರಲಾರದೇನೋ!

Leave a Reply

Your email address will not be published. Required fields are marked *


CAPTCHA Image
Reload Image