One N Only Exclusive Cine Portal

ಅಂಬಿ ಮಗನ ಜಲೀಲ ಕ್ಯಾನ್ಸಲ್ಲಾ?

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಶೇಕ್ ನಟನೆಯ ಚಿತ್ರ ‘ಜಲೀಲ’ದ ಕೆಲಸ ಕಾರ್ಯಗಳು ಎಲ್ಲಿಗೆ ಬಂದಿವೆ ಅಂತ ಅಂಬಿ ಅಭಿಮಾನಿಗಳು ಕುತೂಹಲಗೊಂಡಿದ್ದಾರೆ. ಆದರೆ ಅಷ್ಟರಲ್ಲಿ ಈ ಚಿತ್ರದ ನಿರ್ದೇಶಕ ಚೇತನ್ ಅವರೇ ಚಿತ್ರತಂಡದಿಂದ ಹೊರ ಬಿದ್ದಿರೋ ಶಾಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ!

ಈ ಹಿಂದೆ ಬಹದ್ದೂರ್, ಭರ್ಜರಿಯಂಥಾ ಚಿತ್ರಗಳ ಮೂಲಕವೇ ಮುಖ್ಯ ನಿರ್ದೇಶಕರಾಗಿ ಹೊರ ಹೊಮ್ಮಿರುವವರು ಚೇತನ್. ಯಾವುದೇ ನಖರಾಬಾಜಿಗಳ ಆರೋಪಗಳೂ ಅವರ ಮೇಲಿಲ್ಲ. ಆದರೆ ಅಂಥಾ ಚೇತನ್ ರೆಬಲ್ ಸ್ಟಾರ್ ಅಂಬರೀಶ್ ಪುತ್ರನ ಚಿತ್ರದಿಂದ ಯಾಕೆ ಹೊರ ಬಿದ್ದರು ಎಂಬ ಪ್ರಶ್ನೆ ಹುಟ್ಟಿಕೊಳ್ಳೋದು ಸಹಜವೇ. ಈ ಬಗ್ಗೆ ಉತ್ತರ ಹುಡುಕುತ್ತಾ ಹೋದರೆ ಕೆಲ ಸೂಕ್ಷ್ಮ ಸಂಗತಿಗಳು ಹೊರ ಬೀಳುತ್ತವೆ.

Janardhan Maharshi

ಅಂಬಿ ಮಗ ಅಭಿಶೇಕ್ ಚಿತ್ರಕ್ಕೆ ನಿರ್ದೇಶನ ಮಾಡಲು ಚೇತನ್ ಕೂಡಾ ಉತ್ಸುಕರಾಗಿದ್ದರು. ಅದಕ್ಕೆ ಅಂಬಿಯ ಟ್ರೇಡ್‌ಮಾರ್ಕಿನಂತಿರೋ ಜಲೀಲ ಎಂಬ ಪಾತ್ರದ ಹೆಸರೂ ಫಿಕ್ಸಾಗಿತ್ತು. ಆದರೆ ತೆಲುಗಿನ ಕಥೆಗಾರ ಜನಾರ್ಧನ ಮಹರ್ಷಿ ಕಥೆಗೇ ನಿರ್ದೇಶನ ಮಾಡಬೇಕೆಂಬ ಒತ್ತಡವೂ ಶುರುವಾಗಿತ್ತಂತೆ. ಈ ಜನಾರ್ಧನ ಮಹರ್ಷಿ ಕಥೆಯನ್ನು ನಂಬಿ ಈವರೆಗೂ ಹಡಾಲೆದ್ದ ಕನ್ನಡ ಚಿತ್ರಗಳದ್ದೊಂದು ಪಟ್ಟಿಯೇ ಇದೆ. ಮಹರ್ಷಿಯ ತೆಲುಗು ಶೈಲಿಯ ರಸಾಯನ ಕನ್ನಡದ ಪ್ರೇಕ್ಷಕರಿಗೆ ಹಿಡಿಸಿದ ಉದಾಹರಣೆ ಕಡಿಮೆ.

ಇಂಥಾ ಜನಾರ್ಧನ ಮಹರ್ಷಿಯದ್ದೇ ಕಥೆ ಬೇಕೆಂಬ ಬೇಡಿಕೆ ಬಂದಾಗ ಚೇತನ್ ನಿರ್ದೇಶನದಿಂದ ಹಿಂದೆ ಸರಿದಿದ್ದಾರಂತೆ. ಚೇತನ್ ತಮ್ಮ ಕೆಲಸದಲ್ಲಿ ಬೇರೆಯವರ ತೊಡಗಿಸಿಕೊಳ್ಳುವಿಕೆಯನ್ನು ಸಹಿಸುವವರಲ್ಲ. ಒಂದು ಮೂಲದ ಪ್ರಕಾರ ಜಲೀಲನಿಗಾಗಿ ಅವರು ಬೇರೆಯದ್ದೇ ಕಥೆ ಮಾಡಿಕೊಂಡಿದ್ದರು. ಕಡೆಗೂ ಜನಾರ್ಧನ ಮಹರ್ಷಿಯದ್ದೇ ಕಥೆ ಬೇಕೆಂದಾದಾಗ ಅವರು ತಣ್ಣಗೆ ಹಿಂದೆ ಸರಿದಿದ್ದಾರೆ.

ಚೇತನ್ ಇಂಥಾ ಸಂದಿಗ್ಧ ಎದುರಾದಾಗ ಈ ಹಿಂದೆಯೂ ಚಿತ್ರದಿಂದಲೇ ಹೊರ ಬಂದ ಉದಾಹರಣೆ ಇದೆ. ಕುಮಾರಸ್ವಾಮಿಯವರ ಮಗ ನಿಖಿಲ್‌ನ ಎರಡನೇ ಚಿತ್ರವನ್ನು ಚೇತನ್ ನಿರ್ದೇಶನ ಮಾಡುವವರಿದ್ದರು. ಇದರ ಮುಹೂರ್ತವೂ ನಡೆದಿತ್ತು. ಆದರೆ ಅದಾಗಿ ಕೆಲವೇ ದಿನಗಳಲ್ಲಿ ಚೇತನ್ ಆ ಚಿತ್ರದಿಂದ ಹೊರ ಬಂದಿದ್ದರು. ಅದಕ್ಕೂ ಹೀರೋ ಓವರ್ ಇನ್ವಾಲ್ವ್‌ಮೆಂಟೇ ಕಾರಣವಾಗಿತ್ತಂತೆ!  ಜಲೀಲನ ಸಾವಾಸ ಬಿಟ್ಟುಬಂದ ಚೇತನ್ ಕುಮಾರ್ ಈಗ ಶ್ರೀ ಮುರಳಿಯ ಸಿನಿಮಾಗಾಗಿ ತಯಾರಿ ನಡೆಸಿದ್ದಾರೆ.

ಆರಂಭದಲ್ಲಿ ಪವನ್ ಒಡೆಯರ್  ಜಲೀಲ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಅನ್ನೋ ಮಾತು ಕೇಳಿಬಂದಿತ್ತು. ಆನಂತರ ಚೇತನ್ ಕುಮಾರ್ ಬಂದರು. ಈಗ ಚೇತನ್ ರಿಜೆಕ್ಟ್ ಮಾಡಿರೋ ಜಾಗಕ್ಕೆ ಯಾರು ಬರುತ್ತಾರೋ ಗೊತ್ತಿಲ್ಲ!

Leave a Reply

Your email address will not be published. Required fields are marked *


CAPTCHA Image
Reload Image