One N Only Exclusive Cine Portal

ಕಾಮಿಡಿ ಕಿಲಾಡಿಗಳ ಜಂತರ್ ಮಂತರ್ ಫೆಬ್ರವರಿಗೆ ಪಕ್ಕಾ!

 

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬಂದಿದ್ದ ಕಾಮಿಡಿ ಕಿಲಾಡಿಗಳ ತಾರಾಗಣದೊಂದಿಗೆ ಕುತೂಹಲಕ್ಕೆ ಕಾರಣವಾಗಿರುವ ಚಿತ್ರ ಜಂತರ್‌ಮಂತರ್. ಈ ರಿಯಾಲಿಟಿ ಶೋನಲ್ಲಿ ರನ್ನರಪ್ ಆಗಿದ್ದ ಗೋವಿಂದೇಗೌಡ ಕಥೆ ಬರೆದು ನಿರ್ದೇಶನ ಮಾಡಿರೋ ಈ ಚಿತ್ರ ಅಂದುಕೊಂಡಿದ್ದಕ್ಕಿಂತ ಕೊಂಚ ತಡವಾಗಿ ಬಿಡುಗಡೆಯಾಗಲಿದೆ.

ಜಂತರ್‌ಮಂತರ್ ಚಿತ್ರ ಇದೇ ಜನವರಿ ೨೬ನೇ ತಾರೀಖಿನಂದು ಗಣರಾಜ್ಯೋತ್ಸವದಂದು ಬಿಡುಗಡೆಯಾಗುತ್ತದೆಂದು ಚಿತ್ರ ತಂಡ ಹೇಳಿಕೊಂಡಿತ್ತು. ಆದರೆ ಆ ದಿನ ಕನ್ನಡ ಸೇರಿದಂತೆ ಇತರೇ ಭಾಷೆಗಳ ಸಾಕಷ್ಟು ಚಿತ್ರಗಳು ತೆರೆ ಕಾಣುತ್ತಿವೆ. ಇದು ಈ ತಂಡದ ಮೊದಲ ಚಿತ್ರವಾದ್ದರಿಂದ ಅಂಥಾ ಪೈಪೋಟಿಯ ನಡುವೆ ರಿಸ್ಕು ತೆಗೆದುಕೊಳ್ಳೋದು ಬೇಡ ಎಂಬ ನಿರ್ಧಾರಕ್ಕೆ ಬಂದಿರೋ ಚಿತ್ರತಂಡ ಫೆಬ್ರವರಿ ೨ನೇ ತಾರೀಖಿನಂದು ತೆರೆಗೆ ಬರುವ ನಿರ್ಧಾರ ಮಾಡಿದೆ.
ಕನ್ನಡದ ರಿಯಾಲಿಟಿ ಶೋಗಳಲ್ಲಿಯೇ ಭಾರೀ ಕ್ರಿಯೇಟಿವಿಟಿಯಿಂದ, ಅಪ್ಪಟ ಟ್ಯಾಲೆಂಟೆಡ್ ಸ್ಫರ್ಧಿಗಳ ಕಾರಣದಿಂದ ಜನಪ್ರಿಯವಾಗಿದ್ದ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು. ಜಗ್ಗೇಶ್, ಯೋಗರಾಜ ಭಟ್ ಮತ್ತು ರಕ್ಷಿತಾ ಸಾರಥ್ಯದಲ್ಲಿ ಮೂಡಿ ಬಂದಿದ್ದ ಈ ಕಾರ್ಯಕ್ರಮದಲ್ಲಿ ಎಲ್ಲ ಸ್ಪರ್ಧಿಗಳೂ ಕೂಡಾ ಮುಂದೆ ಕನ್ನಡ ಚಿತ್ರರಂಗದಲ್ಲಿ ಹೊಸಾ ಅಲೆ ಸೃಷ್ಟಿಸುವ ಭರವಸೆ ಹುಟ್ಟಿಸಿದ್ದರು.


ಅಂಥಾ ಕಾಮಿಡಿ ಕಿಲಾಡಿ ಸ್ಪರ್ಧಿಗಳ ತಂಡವೇ ಈ ಚಿತ್ರದ ಭಾಗವಾಗಿದೆ. ಈ ಶೋನಲ್ಲಿ ಚೆಂದದ ಪ್ರದರ್ಶನ ನೀಡಿ ರನ್ನರ್ ಅಪ್ಪ ಆಗಿದ್ದ ಗೋವಿಂದೇಗೌಡ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಶೋ ವಿನ್ನರ್ ಶಿವರಾಜ್ ಕೆ ಆರ್ ಪೇಟೆ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜೂನಿಯರ್ ಉಮಾಶ್ರೀ ಎಂದೇ ಖ್ಯಾತಳಾಗಿರೋ ನಯನಾ ಡಿಫರೆಂಟ್ ಶೇಡ್ ಇರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳಂತೆ. ಅದಲ್ಲದೇ ನವರಸನಾಯಕ ಜಗ್ಗೇಶ್ ಹಾಡಿರೋ ರೆಟ್ರೋ ಹಾಡೊಂದರಲ್ಲಿ ಮಾಸ್ಟರ್ ಆನಂದ್ ಜೊತೆ ನಯನಾ ಹೆಜ್ಜೆ ಹಾಕಿದ್ದಾಳೆ.


ರಾಕಿ ಸೋನು ಸಂಗೀತ ನೀಡಿರೋ ಹಾಡುಗಳೂ ಕೂಡಾ ಈಗಾಗಲೇ ಜನಪ್ರಿಯಗೊಂಡಿವೆ. ಆರಂಭ ಕಾಲದಿಂದಲೂ ನಾಟಕದ ಸಾಂಗತ್ಯದಿಂದಲೇ ಬೆಳೆದು ಬಂದ ನಿರ್ದೇಶಕ ಗೋವಿಂದೇಗೌಡ ಕಥೆ ಕವಿತೆ ರಚಿಸೋ ಗೀಳು ಬೆಳೆಸಿಕೊಂಡಿದ್ದವರು. ಈ ಮೂಲಕ ಸಾಹಿತ್ಯದ ಅನುಭವವನ್ನೂ ಸೇರಿಸಿಕೊಂಡು ಈ ಚಿತ್ರವನ್ನವರು ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆಂಬ ಮೆಚ್ಚುಗೆ ಈಗಾಗಲೇ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *


CAPTCHA Image
Reload Image