One N Only Exclusive Cine Portal

ನೀನಾಸಂ ಅಶ್ವತ್ಥ್‌ಗೆ ಅಟಕಾಯಿಸಿಕೊಂಡಿದ್ದು ರಾಣಿಯ ಆತ್ಮವಂತೆ!

ಕನ್ನಡದ ಖ್ಯಾತ ಗೀತ ಸಾಹಿತಿ ಹೃದಯಶಿವ ನಿರ್ದೇಶನದ ಜಯಮಹಲ್ ಬಿಡುಗಡೆಯ ಕ್ಷಣಗಳು ಹತ್ತಿರಾಗುತ್ತಿವೆ. ಆರಂಭದಿಂದಲೂ ಪ್ರಚಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತಿರದ ಈ ಚಿತ್ರ ತನ್ನ ಪೋಸ್ಟರ್ ಮುಂತಾದವುಗಳಿಂದಲೇ ಪ್ರೇಕ್ಷಕರಲ್ಲೊಂದು ಕುತೂಹಲ ಹುಟ್ಟು ಹಾಕಿದೆ. ಅದರ ಜೊತೆ ಜೊತೆಗೇ ಈ ಚಿತ್ರದ ಕಥೆ ಏನಿರಬಹುದು? ಎಂಬುದರ ಸುತ್ತಲೂ ಚರ್ಚೆಗಳಾಗುತ್ತಿವೆ. ಅದರಲ್ಲಿಯೂ ಎಲ್ಲರ ಅಚ್ಚರಿಯ ಕೇಂದ್ರಬಿಂದುವಾಗಿರುವು ಈ ಚಿತ್ರದ ನಾಯಕ ನೀನಾಸಂ ಅಶ್ವತ್ಥ್ ಅವರ ಭಿನ್ನವಾದ ಗೆಟಪ್!

ಈವರೆಗೂ ಥರ ಥರದ ಪಾತ್ರಗಳಲ್ಲಿ, ಅದಕ್ಕೂ ಮಿಗಿಲಾಗಿ ನೆಗೆಟಿವ್ ಶೇಡಿನ ಪಾತ್ರಗಳಲ್ಲಿ ಮಿಂಚಿರುವವರು ನೀನಾಸಂ ಅಶ್ವತ್ಥ್. ಆದರೆ ಅವರ್‍ಯಾವತ್ತೂ ಹೀರೋ ಆಗಬೇಕೆಂಬ ಹಂಬಲ ಇಟ್ಟುಕೊಂಡವರಲ್ಲ. ಹೀರೋಯಿಸಮ್ಮಿನ ಹೊರತಾಗಿ ನಟನೆಗೆ ಅವಕಾಶವಿರುವ ಅಷ್ಟೂ ವೆರೈಟಿಯ ಪಾತ್ರಗಳಿಗೆ ಜೀವನೀಡಬೇಕೆಂಬ ತುಡಿತ ಹೊಂದಿರುವವರು ಅಶ್ವತ್ಥ್. ಸಿನಿಮಾ ವ್ಯಾಮೋಹಿಗಳು ಗಮನಿಸಿರುವಂತೆ ಕನ್ನಡದಲ್ಲಿ ಶಂಕರ್ ನಾಗ್, ಅನಂತ್ ನಾಗ್ ಅವರಂತೆ ಎಲ್ಲ ಪಾತ್ರಗಳನ್ನೂ ಲೀಲಾಜಾಲವಾಗಿ ನಿರ್ವಹಿಸುವ ಕಲಾವಿದರ ಸಂಖ್ಯೆ ಕಡಿಮೆ ಇದೆ. ಆದರೆ ಈ ತಲೆಮಾರಿನ ನಟರಲ್ಲಿ ಅಂಥಾ ಕೊರತೆ ನೀಗುವವರಿಗಾಗಿ ಹುಡುಕಾಡಿದರೆ ಮೊದಲು ಸಿಗುವವರು ನೀನಾಸಂ ಅಶ್ವತ್ಥ್.

ಇಂಥಾ ಅಶ್ವತ್ಥ್ ಅವರ ಪಾಲಿಗೆ ತೃಪ್ತಿ ನೀಡುವಂಥಾ ಎರಡು ಶೇಡ್‌ಗಳಿರೋ ಪಾತ್ರ ಜಯಮಹಲ್ ಚಿತ್ರದಲ್ಲಿ ಸಿಕ್ಕಿದೆಯಂತೆ. ಇಲ್ಲಿ ಅವರದ್ದು ದೆವ್ವ ಭೂತಗಳೆಂಬುದೆಲ್ಲ ಬರೀ ಬೂಸಿ ಎಂದೇ ನಂಬುವ ಪರಮ ನಾಸ್ತಿಕನ ಪಾತ್ರ. ಅವರಿಲ್ಲಿ ಸೈಕಾಲಜಿ ಪ್ರೊಫೆಸರ್. ತನ್ನ ಮೂಲ ಹುಡುಕಿಕೊಂಡು ಹೊರಡುವ ಅನ್ವೇಷಕ ಮನಸ್ಥಿತಿಯ ಈ ಪಾತ್ರ ತನ್ನ ಮೂಲವಾದ ರಾಜಮನೆತನದ ಬೇರುಗಳನ್ನು ಹುಡುಕಿ ಗೆದ್ದಾಗ ಅಲ್ಲಿನ ರಾಣಿಯೊಬ್ಬಳ ಆತ್ಮ ನಾಸ್ತಿಕ ಪ್ರೊಫೆಸರ್‌ಗೆ ಅಟಕಾಯಿಸಿಕೊಳ್ಳುತ್ತದೆಯಂತೆ. ಅದರಾಚೆಗಿನ ಮಜವೇ ಚಿತ್ರದ ಅಸಲೀ ಆಂತರ್ಯ. ಅದೊಂದು ಮಾಮೂಲು ಶೈಲಿಯ ಆತ್ಮವಾ, ಅದನ್ನು ಸೈಕಾಲಾಜಿಕ್ ರೂಟಿನಲ್ಲಿ ಮೀರಿಕೊಳ್ಳುತ್ತಾರಾ ಎಂಬುದೆಲ್ಲ ಅಸಲೀ ಕುತೂಹಲ.

ಆದರೆ ಈ ಚಿತ್ರದಲ್ಲಿ ರಾಣಿಯಾಗಿಯೂ ಅಭಿನಯಿಸುವ ಸವಾಲನ್ನು ನೀನಾಸಂ ಅಶ್ವತ್ಥ್ ಸಮರ್ಥವಾಗಿಯೇ ನಿಭಾಯಿಸಿದ್ದಾರಂತೆ. ಬಹುಶಃ ಹೀರೋಯಿಸಂಮ್ಮಿನ ಹೊರತಾದ ನಟನಾ ಕಸುವಿಲ್ಲದೇ ಹೋದರೆ ಹೃದಯಶಿವ ಸೃಷ್ಟಿಸಿದ ಈ ಪಾತ್ರವನ್ನು ಆವಾಹಿಸಿಕೊಳ್ಳೋದು ಕನಸಿನ ಮಾತಾಗಿರುತ್ತಿತ್ತು. ಆದರೆ ಅಶ್ವತ್ಥ್ ರಂಗಭೂಮಿಯ ನಟನಾ ಕಸುವನ್ನೆಲ್ಲ ಬಸಿದುಕೊಂಡು ಈ ಪಾತ್ರವನ್ನು ನಿರ್ವಹಿಸಿದ್ದಾರಂತೆ.

ಅಂತೂ ಈ ಚಿತ್ರದ ಮೂಲಕ ನೀನಾಸಂ ಅಶ್ವತ್ಥ್ ಅವರು ಮೊದಲ ಸಲ ಪೂರ್ಣ ಪ್ರಮಾಣದ ನಾಯಕನಾಗಿ ಹೊರ ಹೊಮ್ಮಿದ್ದಾರೆ. ಮೊನಾಲೀಸಾ ಚಿತ್ರದ ಮೂಲಕ ಅವರು ಮೊದಲ ಸಲ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಆ ನಂತರ ನಾಗಾಭರಣರ ಸಿಂಗಾರೆವ್ವ ಚಿತ್ರದಲ್ಲಿ ನಟಿಸಿದ್ದರೂ ಭಾರೀ ಹೆಸರು ತಂದುಕೊಟ್ಟಿದ್ದು ಯೋಗರಾಜ ಭಟ್ಟರ ಮುಂಗಾರುಮಳೆ ಚಿತ್ರ. ಆ ನಂತರ ಸಾಲು ಸಾಲಾಗಿ ಅವಕಾಶಗಳು ಹರಿದು ಬಂದು ಈ ವರೆಗೆ ಅಶ್ವತ್ಥ್ ಹತ್ತತ್ತಿರ ನೂರಾ ಎಂಭತ್ತು ಚಿತ್ರಗಳಲ್ಲಿ ನಾನಾ ಪಾತ್ರಗಳನ್ನು ಮಾಡಿದ್ದಾರೆ. ಆದರೆ ಜಯಮಹಲ್ ಚಿತ್ರದ ಪಾತ್ರ ಅದೆಲ್ಲಕ್ಕಿಂತಲೂ ಭಿನ್ನವಂತೆ.

ಅದರ ವಿಶೇಷತೆ ಏನು? ನೀನಾಸಂ ಅಶ್ವತ್ಥ್ ಅವರ ಪಾತ್ರದ ಖದರ್ ಏನು ಎಂಬುದು ದಿನದೊಪ್ಪತ್ತಿನಲ್ಲಿಯೇ ಜಾಹೀರಾಗಲಿದೆ. ಈ ಚಿತ್ರದ ಪಾತ್ರದಿಂದಲೇ ಇನ್ನೊಂದಷ್ಟು ಭಿನ್ನವಾದ ಪಾತ್ರಗಳು ತಮ್ಮನ್ನರಸಿ ಬರುವ ನಿರೀಕ್ಷೆಯಲ್ಲಿ ಅಶ್ವತ್ಥ್ ಇದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image