Connect with us

ಬ್ರೇಕಿಂಗ್ ನ್ಯೂಸ್

ಬಿಗ್‌ಬಾಸ್ ಜಯಶ್ರೀಗೆ ಕಾಟ ಕೊಟ್ಟವರ ಕತೆ…

Published

on

ಕಲಾಸಕ್ತಿಯನ್ನು ಕಂಟ್ರೋಲು ಮಾಡಿಕೊಳ್ಳಲಾಗದೆ ಸಿನಿಮಾ ಮಾಡುತ್ತಿರೋದಾಗಿ ಪೋಸು ಕೊಡೋ ಪಡಪೋಶಿಗಳಿಗೇನೂ ಚಿತ್ರರಂಗದಲ್ಲಿ ಬರವಿಲ್ಲ. ಮಾತೆತ್ತಿದರೆ ಅಕಿರಾ ಕುರಸೋವಾನ ಕನ್ನಡಾವತಾರದಂತೆ ಪೋಸು ಕೊಡೋ ಪಡ್ಡೆಗಳೆಲ್ಲ ಯಾಕೆ ಆಗಾಗ ಬರಗೆಟ್ಟ ಸಿನಿಮಾ ಮಾಡುತ್ತಾರೆ? ಕೆಲ ಚಿತ್ರಗಳೇಕೆ ಆ ಪಾಟಿ ಖರಾಬಾಗಿರುತ್ತವೆ ಎಂಬ ಪ್ರಶ್ನೆ ಸಾಮಾನ್ಯ ಪ್ರೇಕ್ಷಕನನ್ನೂ ಕಾಡುತ್ತದೆ. ಇದೀಗ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಜಯಶ್ರೀ ಚಿತ್ರತಂಡವೊಂದರ ವಿರುದ್ಧ ಆರೋಪಗಳ ಮಳೆಗರೆಯುತ್ತಿದ್ದಾಳಲ್ಲಾ? ಅದರ ಹಿನ್ನೆಲೆಯಲ್ಲಿರೋದೇನೆಂಬುದನ್ನು ಹುಡುಕಾಡಿದರೆ ಪ್ರೇಕ್ಷಕರ ಪ್ರಶ್ನೆಗಳಿಗೆ ಅಸಹ್ಯ ಮೆಚ್ಚಿಕೊಂಡ ತಾಜಾ ಉತ್ತರಗಳು ಯಥೇಚ್ಛವಾಗಿಯೇ ಸಿಗುತ್ತವೆ!

ಜಯಶ್ರೀ ತನ್ನನ್ನು ಯಾವ ಸೂಚನೆಯನ್ನೂ ನೀಡದೆ ನಟ ನಟಿಯರು ಬೇಕಾಗಿದ್ದಾರೆ ಎಂಬ ಚಿತ್ರದಿಂದ ಕೈ ಬಿಟ್ಟಿದ್ದರ ವಿರುದ್ಧ ಸೆಟೆದು ನಿಂತಿದ್ದಾಳೆ. ಈ ಚಿತ್ರಕ್ಕೆ ತಾನೇ ನಾಯಕಿಯಾ ಎಂಬ ಅಗ್ರಿಮೆಂಟ್ ಆಗಿ, ಅಡ್ವಾನ್ಸ್ ಹಣವನ್ನೂ ಕೊಟ್ಟ ನಂತರ ತನ್ನನ್ನು ಚಿತ್ರದ ನಾಯಕಿ ಸ್ಥಾನದಿಂದ ಹೊರ ಹಾಕಲಾಗಿದೆ ಎಂಬುದು ಜಯಶ್ರೀಯ ಕಂಪ್ಲೇಂಟು. ಹೀಗೆ ಅಗ್ರಿಮೆಂಟ್ ಆದ ನಂತರ ನಾಯಕಿಯನ್ನು ಬದಲಾವಣೆ ಮಾಡೋ ಪ್ರಮೇಯ ಬಂದರೂ ಅದಕ್ಕೊಂದು ಸೌಜನ್ಯದ ಹಾದಿಯಿದೆ. ಅದನ್ಯಾಕೆ ಈ ಚಿತ್ರದ ನಿರ್ದೇಶಕ ಮಂಜು ಹೆದ್ದೂರ್ ಪಾಲಿಸಲಿಲ್ಲ? ಜಯಶ್ರೀಯನ್ನು ಅವಸರವಸರವಾಗಿ ಕೈ ಬಿಟ್ಟು ಬೇರೊಬ್ಬ ನಾಯಕಿಯನ್ನು ಫಿಕ್ಸು ಮಾಡಿ ಶೂಟಿಂಗಿಗಿಳಿದು ಬಿಡುವ ಅವಸರವೇನಿತ್ತು? ಇಂಥಾ ನಾನಾ ಗುಮಾನಿಗಳನ್ನಿಟ್ಟುಕೊಂಡು ತಲಾಷಿಗಿಳಿದರೆ ಅಸಹ್ಯದ ವಿಚಾರಗಳೇ ದಂಡಿ ದಂಡಿಯಾಗಿ ತಗುಲಿಕೊಳ್ಳುತ್ತವೆ.

ಬಿಗ್‌ಬಾಸ್ ಶೋ ಆದ ನಂತರದಲ್ಲಿ ಈ ಜಯಶ್ರೀ ನಟಿಯಾಗೋದರತ್ತಲೇ ಗಮನ ಹರಿಸಿದ್ದಳು. ಈಕೆ ಈಗಾಗಲೇ ಉಪ್ಪು ಹುಳಿ ಖಾರ ಮತ್ತು ಶಿರಾಡಿ ಘಾಟ್ ಚಿತ್ರದಲ್ಲಿ ನಟಿಸಿದ್ದಾಳೆ. ಖಾಸಗಿ ಕಂಪೆನಿಯೊಂದರಲ್ಲಿ ಎಚ್‌ಆರ್ ಆಗಿದ್ದರೂ ಮಾಡೆಲಿಂಗ್ ಸೆಳೆತದಿಂದ ಅತ್ತ ಸಾಗಿದ್ದ ಈ ಹುಡುಗಿ ಕನ್ನಡಿಗರಿಗೆ ಪರಿಚಿತಳಾಗಿದ್ದೇ ಬಿಗ್‌ಬಾಸ್ ಶೋನಿಂದ. ಆ ಶೋನಿಂದ ಹೊರ ಬಂದ ನಂತರ ಎರಡು ಚಿತ್ರಗಳಲ್ಲಿ ನಟಿಸಿದ್ದ ಜಯಶ್ರೀಗೆ ಮಂಜು ಹೆದ್ದೂರ್ ಎಂಬ ಚಟ ಸಾಮ್ರಾಟನನ್ನು ಪರಿಚಯ ಮಾಡಿಸಿದ್ದು ಆಕೆಯ ಸ್ನೇಹ ವಲಯ. ಮಾತೆತ್ತಿದರೆ ತಾನು ಪುಟ್ಟಣ್ಣ ಕಣಗಾಲ್ ಅವರನ್ನೇ ಮೀರಿಸುವ ಐಟಮ್ಮೆಂಬಂತೆ ಪೋಸು ಕೊಡೋ ಈತ ಈ ಹಿಂದೆ ಗ್ಯಾಪಲ್ಲೊಂದು ಸಿನಿಮಾ ಎಂಬ ಔಟ್ ಆಂಡ್ ಔಟ್ ತಗಡು ಚಿತ್ರವೊಂದನ್ನು ನಿರ್ದೇಶನ ಮಾಡಿದ್ದ. ರಾತ್ರಿಯೆಲ್ಲ ಎಣ್ಣೆ ಹೊಡೆದು ಸುಸ್ತಾಗಿದ್ದರೂ ಬೆಳಗ್ಗೆ ಬೇಗನೆದ್ದು ಮುಖಕ್ಕೆ ಹನಿ ನೀರೂ ಚಿಮುಕಿಸದೆ ಓಡೋಡಿ ಸೆಟ್ಟಿಗೆ ಬಂದುಬಿಡುವಂಥಾ ಅಪಾರ ಸಿನಿಮಾ ಪ್ರೀತಿ ಹೊಂದಿರುವಾತ ಹೆದ್ದೂರಿನ ಮಂಜ!

ಇಂಥವನು ಹೇಳಿದ ಕಥೆಯನ್ನು ಒಪ್ಪಿದ ಜಯಶ್ರೀಯನ್ನು ಮಂಜು ಹೆದ್ದೂರ ಮತ್ತವನ ಮ್ಯಾನೇಜರ್ ಮಣಿ ಸೇರಿಕೊಂಡು ನಾಯಕಿಯನ್ನಾಗಿ ಆಯ್ಕೆ ಮಾಡಿದ್ದು ತಿಂಗಳ ಹಿಂದೆ. ಅಲ್ಲಿಯೇ ಜಯಶ್ರೀಗೆ ಅಡ್ವಾನ್ಸ್ ಹಣವೂ ಸಂದಾಯವಾಗಿತ್ತು. ಆದರೆ ಅದಾದ ಮಾರನೇ ದಿನದಿಂದಲೇ ಮ್ಯಾನೇಜರ್ ಮಣಿ ಜಯಶ್ರೀಗೆ ಕಾಳು ಹಾಕಲು ಶುರುವಿಟ್ಟುಕೊಂಡಿದ್ದ. ಸುಖಾ ಸುಮ್ಮನೆ ಫೋನು ಮಾಡುತ್ತಿದ್ದವನು ಒಟ್ಟಿಗೆ ಟಿಫನ್ ಮಾಡೋಣ, ಔಟಿಂಗ್ ಹೋಗೋಣ ಅಂತೆಲ್ಲ ಕೆರೆಯಲಾರಂಭಿಸಿದ್ದ. ತಿಂಗಳ ಕಾಲ ಹೀಗೆ ಪಳಗಿಸಿಕೊಳ್ಳಲು ಪ್ರಯತ್ನಿಸಿದ ಮಣಿ ಅದೊಂದು ದಿನ ಹತಾಶೆಯಿಂದ ಜಯಶ್ರೀಗೆ ಫೋನು ಮಾಡಿದವನೇ ನೀವು ಸ್ವಲ್ಪನಾದ್ರೂ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳದಿದ್ರೆ ಕಷ್ಟ ಅಂತ ನೇರವಾಗಿಯೇ ಹೇಳಿದ್ದನಂತೆ. ಅದನ್ನು ಕೇಳಿ ಜಯಶ್ರೀ ತರಾಟೆಗೆ ತೆಗೆದುಕೊಂಡಿದ್ದೇ ಮಣಿ ಕೊಂಚ ಸುಮ್ಮನಾಗಿದ್ದ.

ಇದೆಲ್ಲ ಆಗುವವರೆಗೆ ತಾವಾಯಿತು ತಮ್ಮ ಎಣ್ಣೆ ಸಮಾರಾಧನೆಯಾಯಿತು ಎಂಬಂತಿದ್ದ ನಿರ್ದೇಶಕ ಮಂಜು ಸಾಹೇಬರೂ ಅಖಾಡಕ್ಕಿಳಿದಿದ್ದಾರೆ. ಜಯಶೀಗೆ ಫೋನು ಮಾಡಿ ಸಿನಿಮಾ ಬಿಟ್ಟು ರೊಮ್ಯಾಂಟಿಕ್ ಮೂಡಲ್ಲಿ ಕುಯ್ಯಲು ಶುರುವಿಟ್ಟಿದ್ದಾರೆ. ಹಾಯಾಗಿ ಜಯಶ್ರೀಯ ಜೊತೆ ಲಾಂಗ್ ಡ್ರೈವ್ ಹೋಗೋ ಮಹದಾಸೆಯನ್ನೂ ತೋಡಿಕೊಂಡಿದ್ದಾರೆ. ಆದರೆ ಇದೆಲ್ಲವನ್ನೂ ಜಯಶ್ರೀ ಅವಾಯ್ಡು ಮಾಡಿದಾಗ ಕಾಸ್ಟ್ಯೂಮ್ ಸೆಲೆಕ್ಷನ್ ನೆಪದಲ್ಲಿ ಮಣಿ ಹಾಗು ಮಂಜು ಸೇರಿಕೊಂಡು ಮತ್ತೊಂದು ಪ್ರಯತ್ನಕ್ಕೆ ಚಾಲನೆ ನೀಡಿದ್ದಾರೆ. ಕಾಸ್ಟ್ಯೂಮ್ ಸೆಲೆಕ್ಷನ್ ಎಲ್ಲ ಆದರೂ ಕೂಡಾ ಜಯಶ್ರೀಯನ್ನು ತಮ್ಮೊಂದಿಗೇ ಇರಿಸಿಕೊಂಡಿದ್ದ ಇವರಿಬ್ಬರೂ ಡಿನ್ನರ್ ನೆಪದಲ್ಲಿ ಚಂದ್ರಾ ಲೇಔಟಿನ ಪಬ್ ಒಂದಕ್ಕೆ ಕರೆದುಕೊಂಡು ಹೋಗಿದ್ದರಂತೆ!

ಹೀಗೆ ಏನೇನು ಮಾಡಿದರೂ ಜಯಶ್ರೀ ಹೇಗಾದರೂ ಮಾಡಿ ಈ ಚಿತ್ರದಲ್ಲಿ ನಟಿಸಿದರೆ ಸಾಕೆಂಬುದರ ಬಗೆಗಷ್ಟೇ ಗಮನ ನೆಟ್ಟು ಕೂತಿದ್ದರೆ ಅದೊಂದು ರಾತ್ರಿ ಹೊತ್ತಿನಲ್ಲಿ ಮತ್ತೆ ಮಣಿಯ ಕರೆ ಬಂದಿದೆ. ಹತ್ತೂವರೆಯ ನಂತರ ಫೋನು ಮಾಡಿದ್ದ ಮಣಿ ತಕ್ಷಣವೇ ಪರ್ಫಾರ್ಮೆನ್ಸ್ ವೀಡಿಯೋ ಕಳಿಸುವಂತೆ ದುಂಬಾಲು ಬಿದ್ದಿದ್ದಾನೆ. ಜಯಶ್ರೀ ಸಾಧ್ಯವಿಲ್ಲ ಅಂತ ಮನವರಿಕೆ ಮಾಡಿಕೊಟ್ಟಿದ್ದಾಳೆ. ಇದಾದ ನಂತರ ಮಣಿಗೆ ಹೇಳಿಯೇ ಜಯಶ್ರೀ ಚೆನೈಗೆ ಹೋಗಿ ಬರೋ ಹೊತ್ತಿಗೆಲ್ಲ ಎಲ್ಲವೂ ಉಲ್ಟಾ ಹೊಡೆದಿದೆ. ಈ ಚಿತ್ರದ ವಾಟ್ಸಾಪ್ ಗ್ರೂಪಿನಲ್ಲಿಯೂ ಈಕೆಯ ನಂಬರನ್ನು ಬ್ಲಾಕ್ ಮಾಡಲಾಗಿದೆ. ಮಣಿ ಮತ್ತು ಮಂಜು ಇಬ್ಬರೂ ಈಕೆಯ ಕರೆ ಸ್ವೀಕರಿಸಲೇ ಇಲ್ಲವಂತೆ.

ಇವರಿಬ್ಬರೂ ತನ್ನನ್ನು ಬಳಸಿಕೊಳ್ಳಲು ಹವಣಿಸಿ ಅದು ಸಾಧ್ಯವಿಲ್ಲ ಅಂತ ಗೊತ್ತಾಗಿಯೇ ಬೇರೆ ನಟಿಯನ್ನು ಹಾಕಿಕೊಂಡು ಚಿತ್ರೀಕರಣ ಶುರು ಮಾಡಿದ್ದಾರೆಂಬುದು ಜಯಶ್ರೀಯ ಆರೋಪ. ಅದಕ್ಕೆ ಸರಿಯಾಗಿ ಮಾಧ್ಯಮಗಳ ಮುಂದೆ ಮಂಜು ಹೆದ್ದೂರ ಹೇಳುತ್ತಿರುವ ಸಬೂಬುಗಳೂ ಸಮಂಜಸವಾಗಿದ್ದಂತೆ ಕಾಣುತ್ತಿಲ್ಲ. ಈ ಹುಡುಗಿ ಈ ಪ್ರಕರಣವನ್ನು ಇಲ್ಲಿಗೇ ಬಿಡುವ ಲಕ್ಷಣಗಳೂ ಇಲ್ಲ. ಒಟ್ಟಾರೆಯಾಗಿ ಈ ಮೂಲಕ ಅವಕಾಶ ಕೇಳಿ ಬಂದ ಹುಡುಗೀರ ಜೊತೆ ಕಣ್ಣಾ ಮುಚ್ಚಾಲೆಯಾಡೋ ಕಾಸ್ಟ್ ಕೌಚಿಂಗ್ ಅಸಹ್ಯ ಮತ್ತೆ ಸದ್ದು ಮಾಡಿದೆ!

Continue Reading
Click to comment

Leave a Reply

Your email address will not be published. Required fields are marked *

ಬ್ರೇಕಿಂಗ್ ನ್ಯೂಸ್

ಅನಿತಾ ರಾಣಿ ಅವರ ಪರ್ಸು ಎಗರಿಸಿದ ಚೋರರು

Published

on

ಸರಿಸುಮಾರು 95 ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ಕಲಾವಿದೆ, ನಿರ್ಮಾಪಕಿ, ಸದ್ಯ ನಿರ್ಮಾಪಕರ ಸಂಘದ ಆಡಳಿತಮಂಡಳಿ ಸದಸ್ಯೆಯೂ ಆಗಿರುವ ಅನಿತಾ ರಾಣಿ ಅವರ ಪರ್ಸನ್ನು ಕಿಡಿಗೇಡಿ ಕಳ್ಳನೊಬ್ಬ ಎಗರಿಸಿದ್ದಾನೆ.

ಬೆಂಗಳೂರಿನ ಸುಲ್ತಾನ್ ಪಾಳ್ಯದಲ್ಲಿ ವಾಸವಿರುವ ಅನಿತಾ ರಾಣಿ ಅವರು ಆರ್.ಟಿ.ನಗರದ ಬ್ಯಾಂಕ್ ಆಫ್ ಇಂಡಿಯಾದಿಂದ ಹೊರಬಂದು ಕಾರು ತೆರೆಯೋ ಹೊತ್ತಿಗೆ ಆ ಕಡೆಯಿಂದ ಬಂದ ಪಲ್ಸರ್ ಬೈಕ್ ಸವಾರನೊಬ್ಬ ವಿಸಿಟಿಂಗ್ ಕಾರ್ಡ್ ತೋರಿ ಅಡ್ರೆಸ್ ಕೇಳಿದ್ದಾನೆ. `ಇದೇನಪ್ಪಾ ಪೀಣ್ಯದಲ್ಲಿರುವ ವಿಳಾಸವನ್ನ ಇಲ್ಲಿ ಕೇಳುತ್ತಿದ್ದೀಯ?’ ಎಂದು ಪ್ರಶ್ನಿಸೋ ಹೊತ್ತಿಗೆ ಕಾರಿನ ಇನ್ನೊಂದು ಬಾಗಿಲು ತೆಗೆದ ಖದೀಮ ಮೇಡಮ್ ಅವರ ಪರ್ಸು ತೆಗೆದುಕೊಂಡು ಪರಾರಿಯಾಗಿದ್ದಾನೆ.

ಯುಗಾದಿ, ಮಹಾರಾಜ, ತವರಿಗೆ ಬಾ ತಂಗಿಯಿಂದ ಹಿಡಿದು ಬಾಮಾ ಹರೀಶ್ ಅವರ ಮೆಜೆಸ್ಟಿಕ್ ಎಕ್ಸ್‌ಪ್ರೆಸ್, ಸಾಯಿ ಪ್ರಕಾಶ್ ಅವರ ಗರ್ಭದ ಗುಡಿ ತನಕ ಹತ್ತಿರತ್ತಿರ ತೊಂಭತ್ತೈದು ಸಿನಿಮಾಗಳು, ಧಾರಾವಾಹಿಗಳಲ್ಲಿ ನಟಿಸಿರುವ ಅನಿತಾ ರಾಣಿ ಈ ಹಿಂದೆ ಮಾನಸಾ ಎಂಬ ಕಲಾತ್ಮಕ ಸಿನಿಮಾವನ್ನು ನಿರ್ಮಿಸಿ ನಟಿಸಿದ್ದರು.

ಕಳ್ಳತನವಾಗಿರುವ ಪರ್ಸಿನಲ್ಲಿ ಹೆಚ್ಚು ಹಣವಿರಲಿಲ್ಲವಾದರೂ ಅನಿತಾ ರಾಣಿಯವರ ಎ.ಟಿ.ಎಂ ಕಾರ್ಡುಗಳು, ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಮೆಂಬರ್‌ಶಿಪ್ ಕಾರ್ಡುಗಳೆಲ್ಲಾ ಮಿಸ್ ಆಗಿವೆಯಂತೆ. ಇನ್ನು ಪರ್ಸ್ ಕದ್ದ ಕಳ್ಳರು ಹೇಗಿದ್ದರು, ಅವರ ಚಹರೆ, ಅವರ ಬೈಕಿನ ಬಣ್ಣ ಕುರಿತಂತೆ ಇನ್ನಿತರೆ ಸವಿವರ ವಿಚಾರಗಳು ಕನ್ನಡದ ನ್ಯೂಸ್ ಚಾನೆಲ್ ಗಳಲ್ಲಿ ಪ್ರಸಾರವಾಗಹುದು. ನಿರೀಕ್ಷಿಸಿ!

Continue Reading

ಬ್ರೇಕಿಂಗ್ ನ್ಯೂಸ್

ಕುಮಾರಿ21 ಎಫ್ ಪ್ರೀಮಿಯರ್ ಶೋನಲ್ಲಿ ಗಲಾಟೆ!

Published

on

ತಮ್ಮ ಎರಡನೇ ಮಗ ಪ್ರಣಾಮ್ ಹೀರೋ ಆಗಿರೋ ಕುಮಾರಿ೨೧ ಎಫ್ ಚಿತ್ರದ ಪ್ರೀಮಿಯರ್ ಶೋ ನಡೆದ ಕ್ಷಣವೇ ಡೈನಾಮಿಕ್ ಸ್ಟಾರ್ ದೇವರಾಜ್ ಬೇಸರಗೊಂಡಿದ್ದಾರೆ. ಅದಕ್ಕೆ ಕಾರಣವಾಗಿರೋದು ನಟ ಚಿರಂಜೀವಿ ಸರ್ಜಾ ಪಟಾಲಮ್ಮಿನ ದಾಂಧಲೆ!

ನೆನ್ನೆ ರಾತ್ರಿ ನಗರದ ಓರಾಯನ್ ಮಾಲ್‌ನ ಪಿವಿಆರ್‌ನಲ್ಲಿ ಕುಮಾರಿ ಚಿತ್ರದ ಪ್ರೀಮಿಯರ್ ಶೋ ನಡೆದಿತ್ತು. ಇದಕ್ಕೆ ಸೆಲೆಬ್ರಿಟಿಗಳು, ಮಾಧ್ಯಮ ಮಂದಿಯೆಲ್ಲ ಕಿಕ್ಕಿರಿದು ಸೇರಿದ್ದರು. ಆದರೆ ಓರಾಯನ್ ಮಾಲಿನ ಪಿವಿಆರ್‌ನಲ್ಲಿ ಒಂದು ಶೋಗೆ ನಿಗಧಿಯಾಗಿರೋ ಸೀಟಿಗಿಂತ ಒಬ್ಬರೇ ಹೆಚ್ಚಾದರೂ ಹೊರ ಕಳಿಸಲಾಗುತ್ತದೆ. ಆದರೆ ಸರ್ಜಾ ಡ್ರೈವರನ ಪಟಾಲಮ್ಮು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಶೋಗೆ ಜನ ಸೇರಿಕೊಂಡಿದ್ದರು.

ಇದನ್ನು ಗಮನಿಸಿದ ಪಿವಿಆರ್ ವ್ಯವಸ್ಥಾಪಕರು ಇಂಟರ್‌ವಲ್ ನಂತರ ಹೆಚ್ಚಿದ್ದ ಮಂದಿಯನ್ನು ಏಕಾಏಕಿ ಹೊರ ದಬ್ಬಿದ್ದರು. ಇದರ ವಿರುದ್ಧ ಚಿರಂಜೀವಿ ಸರ್ಜಾ ಡ್ರೈವರ್ ತನ್ನ ಹಿಂಬಾಲಕರೊಂದಿಗೆ ಸಿಡಿದೆದ್ದಿದ್ದಾನೆ. ಪಿವಿಆರ್ ಸ್ಕ್ರೀನು ಹರಿದು ಹಾಕೋದಾಗಿ ಅರಚಿಕೊಂಡಿದ್ದಾನೆ. ದೇವರಾಜ್ ತಮಗೆಲ್ಲ ಅವಮಾನ ಮಾಡಿದ್ದಾರೆ ಅಂತೆಲ್ಲ ಕೂಗಾಡಿ ರಂಪ ಎಬ್ಬಿಸಿದ್ದಾನೆ. ಇದರಿಂದ ಸ್ವಲ್ಪ ಕಾಲ ಶೋ ಕೂಡಾ ಸ್ಥಗಿತಗೊಂಡಿತ್ತು.

ನಿಜ, ಇಂಥಾದ್ದಾದಾಗ ಕಸಿವಿಸಿಯಾಗುತ್ತದೆ. ಆದರೆ ದೇವರಾಜ್ ಅವರು ಹೇಳಿ ಕೇಳಿ ಹಿರಿಯ ನಟ. ಅಂಥವರ ಮಗನ ಚಿತ್ರ ಪ್ರೀಮಿಯರ್ ಶೋ ಅಂದ ಮೇಲೆ ಅವರ ಅಂದಾಜು ಮೀರಿ ಜನ ಸೇರಿದ್ದಾರೆ. ಆದರೆ ಪಿವಿಆರ್ ಮಂದಿ ನಿಯಮಾನುಸಾರ ಹೆಚ್ಚಿನವರನ್ನು ಹೊರ ಹಾಕಿದ್ದಾರೆ. ಇದು ಕೈ ಮೀರಿ ಆದ ಅವಘಡ. ಇದು ಖಂಡಿತಾ ಉದ್ದೇಶಪೂರ್ವಪಕವಾಗಿ ಆದದ್ದಲ್ಲ. ಆದರೆ ಚಿರಂಜೀವಿ ಸರ್ಜಾ ಡ್ರೈವರ್ ಮಾತ್ರ ಪಕ್ಕಾ ಬೀದಿ ಗೂಂಡಾನಂತೆ ಬಡಕೊಂಡು ರಾಡಿಯೆಬ್ಬಿಸಿದ್ದಾನೆ.

ತಮ್ಮ ಮಗನ ಚಿತ್ರದ ಮೊದ ಶೋಗೆ ಖುಷಿಯಿಂದಲೇ ಬಂದು ಲವ ಲವಿಕೆಯಿಂದ ಓಡಾಡಿಕೊಂಡಿದ್ದ ದೇವರಾಜ್ ಚಿರು ಡ್ರೈವರ್‌ನ ದಾಂಧಲೆಯಿಂದ ಬೇಸರಗೊಂಡಿದ್ದಾರೆ. ಹೆಚ್ಚಿನ ನಟರು ಸಮಯಕ್ಕೆ ಬೇಕಾಗುತ್ತದೆ ಅಂತ ಗೂಂಡಾಗಳನ್ನೇ ಡ್ರೈವರ್ ರೂಪದಲ್ಲಿ ಇಟ್ಟುಕೊಳ್ಳೋದೂ ಇದೆ. ಆದರೆ ಸಭ್ಯ ನಟ ಅಂತಲೇ ಗುರುತಿಸಿಕೊಂಡಿರೋ ಚಿರಂಜೀವಿ ಸರ್ಜಾ ಯಾಕೆ ಇಂಥಾ ಅಡ್ನಾಡಿಯನ್ನು ಚಾಲಕನನ್ನಾಗಿ ಇಟ್ಟುಕೊಂಡಿದ್ದಾರೋ ಅಂತ ಪಿವಿಆರ್‌ನಲ್ಲಿದ್ದವರು ಮಾತಾಡಿಕೊಂಡಿದ್ದಾರೆ. ಅದೇ ಪ್ರಶ್ನೆ ಚಿತ್ರರಂಗದವರಲ್ಲೂ ಇದೆ!

Continue Reading

ಬ್ರೇಕಿಂಗ್ ನ್ಯೂಸ್

ದಗಲ್ಬಾಜಿ ಧರ್ಮನ ನಿಗೂಢ ಮರ್ಮ!

Published

on

ಒಂದಷ್ಟು ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿ ಗುರುತಿಸಿಕೊಂಡಿದ್ದ ಧರ್ಮ ಎಂಬಾತನನ್ನು ಪ್ರೇಕ್ಷಕರು ನೆನಪಿಟ್ಟುಕೊಂಡಿರ ಬಹುದು. ನಟನೆಯ ಕಾರಣಕ್ಕಲ್ಲದಿದ್ದರೂ ವಿವಾದಗಳು, ಅಫೇರುಗಳ ಮೂಲಕವಾದರೂ ಈತ ಆಗಾಗ ಸುದ್ದಿಯಲ್ಲಿರುತ್ತಾ ಬಂದಿದ್ದ. ನಟನಾಗಲು ಬೇಕಾದ ಎಲ್ಲ ಲಕ್ಷಣಗಳಿದ್ದರೂ ತನ್ನ ತೆವಲುಗಳ ಕಾರಣದಿಂದಲೇ ಜೀವನವನ್ನು ಎಕ್ಕಾ ಎಬ್ಬಿಸಿಕೊಂಡಿರೋ ಧರ್ಮ ಈಗ ಮತ್ತೆ ಚಾಲ್ತಿಗೆ ಬಂದಿದ್ದಾನೆ. ಆತನ ಮೇಲೆ ಮಹಿಳೆಯೊಬ್ಬಳ ಮೇಲೇ ಲೈಂಗಿಕ ದೌರ್ಜನ್ಯ ನಡೆಸಿ ಬ್ಲ್ಯಾಕ್‌ಮೇಲ್ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ.

ಧರ್ಮ ಇತ್ತೀಚೆಗೆ ಯಾವ ಚಿತ್ರಗಳಲ್ಲಿಯೂ ನಟಿಸಿದಂತಿಲ್ಲ. ಸೆಟ್ಟಿಗೆ ಬಂದರೆ ಅದೆಲ್ಲಿ ಸಹ ನಟಿಯರನ್ನು ಬಿಡದೆ ತಡವಿಕೊಂಡು ತಂದಿಡುತ್ತಾನೋ ಎಂಬ ಭಯದಿಂದ ಈತನನ್ನು ಎಲ್ಲರೂ ದೂರವಿಟ್ಟಿರೋದರಿಂದ ಧರ್ಮ ಚಿತ್ರರಂಗದಿಂದಲೇ ದೂರವಿರುವಂಥಾ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಇಂಥವನು ಮಹಿಳೆಯೊಬ್ಬಳಿಗೆ ನಟಿಸೋ ಅವಕಾಶ ನೀಡೋದಾಗಿ ಕರೆಸಿಕೊಂಡು ಮತ್ತು ಬರೋ ಔಷಧಿ ಕೊಟ್ಟು ದೌರ್ಜನ್ಯ ನಡೆಸಿರೋ ಬಗ್ಗೆ ತಿಂಗಳ ಹಿಂದೆಯೇ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿತ್ತು. ಆದರೆ ಇದುವರೆಗೂ ಧರ್ಮನನ್ನು ಬಂಧಿಸಿಲ್ಲ. ಈ ಬಗ್ಗೆ ಸಂತ್ರಸ್ತ ಮಹಿಳೆಯ ಕಡೆಯಿಂದಲೂ ಸಂಶಯಾಸ್ಪದ ಮಾಹಿತಿಗಳೇ ಸಿಕ್ಕುತ್ತಿರೋದರಿಂದ ಇಡೀ ಪ್ರಕರಣ ಗೋಜಲಾಗಿ ಬಿಟ್ಟಿದೆ.

ಗೀತಾ (ಹೆಸರು ಬದಲಿಸಿದೆ) ಎಂಬ ಮಹಿಳೆಯೊಬ್ಬಾಕೆ ಧರ್ಮನ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಇದೇ ಜೂನ್ ಆರನೇ ತಾರೀಕಿನಂದು. ಈಕೆ ಧರ್ಮನ ಮೇಲೆ ಮಾಡಿದ್ದ ಆರೋಪವೇನೂ ಸಣ್ಣ ಮಟ್ಟದ್ದಲ್ಲ. ಈ ಘಟನೆ ನಡೆದೇ ಒಂದಷ್ಟು ತಿಂಗಳು ಕಳೆದಿವೆ. ಈ ಮಹಿಳೆ ಧರ್ಮನಿಗೆ ಪರಿಚಿತಳಂತೆ. ಅದೊಂದು ದಿನ ಧರ್ಮ ಒಂದು ಚಿತ್ರದ ಶೂಟಿಂಗ್ ಇದೆ ಅಂತ ಮಹಿಳೆಗೆ ಫೋನಾಯಿಸಿ ಹೇಳಿದವನೇ ಡ್ರೈವರ್ ನವೀನನ ಮೂಲಕ ಮಹಿಳೆಯನ್ನು ರಾಜರಾಜೇಶ್ವರಿ ನಗರಕ್ಕೆ ಕರೆಸಿಕೊಂಡಿದ್ದ. ಆದರೆ ಈ ಮಹಿಳೆ ಬಂದಿಳಿಯುತ್ತಲೇ ಶೂಟಿಂಗ್ ಕ್ಯಾನ್ಸಲ್ ಆಗಿದೆ ಅಂತ ಕಥೆ ಕಟ್ಟಿದ ಧರ್ಮ ಆಕೆಯನ್ನು ಮನೆಗೆ ಕರೆದೊಯ್ದು ಕೂಲ್ ಡ್ರಿಂಕ್ಸಿಗೆ ಮತ್ತು ಬರಿಸೋ ಔಷಧಿ ಬೆರೆಸಿ ಕೊಟ್ಟಿದ್ದ. ನಂತರ ಪಜ್ಞಾಹೀನ ಮಹಿಳೆಯ ಜೊತೆ ಅಶ್ಲೀಲ ವೀಡಿಯೋ ಮಾಡಿಕೊಂಡು ಅದನ್ನು ತೋರಿಸಿ ಬೆದರಿಸಿದ್ದ. ಮನೆ ಮರ್ಯಾದೆ ಹೋಗುತ್ತದೆಂದು ಹೇಗೋ ಹೊಂದಿಸಿ ಹದಿನಾರು ಲಕ್ಷ ಧರ್ಮನಿಗೆ ಕೊಟ್ಟರೂ ಆತ ಮತ್ತೆ ಮತ್ತೆ ಕಾಟ ಕೊಟ್ಟಿದ್ದರಿಂದ ಕಂಗಾಲಾಗ ಆಕೆ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆಂಬುದು ಈಗಿರೋ ಮಾಹಿತಿ.

ಆದರೆ, ಇದರ ಹಿಂದೆ ಅದೇನೇ ಕಿಸುರಿದ್ದರೂ ಕೇಸು ದಾಖಲಾಗಿ ತಿಂಗಳಾದರೂ ಯಾಕೆ ಪೊಲೀಸರು ಧರ್ಮನನ್ನು ಬಂಧಿಸಿಲ್ಲ ಎಂಬ ಪ್ರಶ್ನೆ ಯಾರನ್ನಾದರೂ ಕಾಡುತ್ತದೆ. ಒಂದು ಮೂಲದ ಪ್ರಕಾರ ಈ ವಿಚಾರವಾಗಿ ಸಂತ್ರಸ್ತ ಮಹಿಳೆಯ ಸಾಂಸಾರಿಕ ಜೀವನವೇ ಹಡಾಲೇಳುವ ಹಂತ ತಲುಪಿದೆ. ಈ ಮಹಿಳೆಗೆ ನಿಜವಾಗಿಯೂ ಅನ್ಯಾಯವಾಗಿದೆಯಾ? ತನ್ನ ಚಪಲದಿಂದ ಧರ್ಮನೇ ಖೆಡ್ಡಾಕ್ಕೆ ಬಿದ್ದಿದ್ದಾನಾ ಎಂಬೆಲ್ಲ ಪ್ರಶ್ನೆಗಳಿಗೆ ನಿಸ್ಪಕ್ಷಪಾತ ತನಿಖೆಯಿಂದಷ್ಟೇ ಉತ್ತರ ಸಿಗಬೇಕಿದೆ. ಆದರೆ ಈ ಧರ್ಮ ಇಷ್ಟು ವರ್ಷಗಳಲ್ಲಿ ಮಾಡಿಕೊಂಡಿರುವ ರಂಕಲುಗಳು, ಆತನ ಸೈಕೋ ಸ್ಥಿತಿಯ ವ್ಯಕ್ತಿತ್ವಗಳೆಲ್ಲವೂ ಈ ಪ್ರಕರಣದಲ್ಲೂ ಕೂಡಾ ಆತನದ್ದೇ ತಪ್ಪಿರುತ್ತದೆ ಎಂಬ ನಂಬಿಕೆ ಹುಟ್ಟಿಸುವಂತಿವೆ!

ಬೆಂಗಳೂರಿನ ಚಾಮರಾಜಪೇಟೆಯಲ್ಲೇ ಹುಟ್ಟಿ ಬೆಳೆದಿದ್ದ ಧರ್ಮ ಚಿತ್ರರಂಗದಲ್ಲಿ ಬೆಳೆಯುವ ಅಗಾಧ ಅವಕಾಶಗಳಿದ್ದವು. ಈತ ಮೊದಲ ಸಲ ನಟನಾಗಿ ಕಾಣಿಸಿಕೊಂಡಾಗಲೇ ಪ್ರೇಕ್ಷಕರು ಖುಷಿಗೊಂಡಿದ್ದದ್ದು ನಿಜ. ವ್ಯಕ್ತಿಗತವಾಗಿ ಎಲ್ಲರೊಂದಿಗೂ ಒಳ್ಳೆ ಬಾಂಧವ್ಯವನ್ನೇ ಹೊಂದಿದ್ದ ಧರ್ಮ ಒಳಗೊಳಗೇ ವಂಚಕನಾಗಿದ್ದ. ಸಿಕ್ಕ ಸಿಕ್ಕ ಹುಡುಗೀರನ್ನು ತಡವಿಕೊಳ್ಳುವುದು ಇವನ ಪ್ರಧಾನ ವೀಕ್‌ನೆಸ್ಸು. ಹೀಗಿದ್ದ ಧರ್ಮ ದುರ್ಗಾ ಶೆಟ್ಟಿ ಎಂಬ ನಟಿಯೊಂದಿಗಿನ ಅಫೇರಿನ ಮೂಲಕ ಭಾರೀ ಸದ್ದು ಮಾಡಿದ್ದ.

ರೆಬೆಲ್ ಸ್ಟಾರ್ ಅಂಬರೀಶ್ ದೂರದ ಸಂಬಂಧಿಯೂ ಆಗಿರುವ ಧರ್ಮ ದುರ್ಗಾ ಶೆಟ್ಟಿ ಎಂಬ ಐಟಂ ಸಾಂಗಿನ ಹುಡುಗಿಯನ್ನು ಕೊಂಚ ಸೀರಿಯಸ್ ಆಗಿಯೇ ಹಚ್ಚಿಕೊಂಡಿದ್ದ. ಸೆಕ್ಸ್ ಬಾಂಬ್ ಅಂತಲೇ ಕರೆಸಿಕೊಂಡಿದ್ದ ದುರ್ಗೆ ಧರ್ಮನ ಬುಡಕ್ಕೆ ಬಾಂಬಿಟ್ಟೇ ಎದ್ದು ಹೋಗಿದ್ದಳು. ಪ್ರವೀಣ್ ನಾಯಕ್ ನಿರ್ದೇಶನದ `ಮೀಸೆ ಚಿಗುರಿದಾಗ’ ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಈಕೆ ನಂತರ ಪೋಸ್ಟರ್ ಡಿಸೈನರ್ ಮಸ್ತಾನ್ ನಿರ್ದೇಶಿಸಿದ್ದ ನಟ ಮೋಹನ್ ಹೀರೋ ಆಗಿ ಕಾಣಿಸಿಕೊಂಡಿದ್ದ `ಶುಕ್ಲಾಂಬರದರಂ’ ಅನ್ನೋ ಚಿತ್ರದಲ್ಲಿ ನಟಿಸಿದ್ದಳು. ಸಾಯಿ ಕುಮಾರ್ ಜೊತೆಗೆ `ಶ್ರೀರಾಮ್‌ಪುರ ಪೊಲೀಸ್ ಸ್ಟೇಷನ್’ ಸೇರಿಂದತೆ ಒಂದಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಳು. `ಮೊನಾಲಿಸಾ’ ಚಿತ್ರದ ಹಾಡೊಂದರಲ್ಲಿ ಕೂಡಾ ಈಕೆ ದಿಗ್ದರ್ಶನವಿತ್ತು. ನಟನೆಯ ಗಂಧಗಾಳಿ ಗೊತ್ತಿಲ್ಲದ ಈಕೆ ಬರೀ ದೇಹಪ್ರದರ್ಶನಕ್ಕೆ ಮೀಸಲಾಗಿದ್ದವಳು. ಈ ಕಾರಣಕ್ಕೇ ದುರ್ಗಾಶೆಟ್ಟಿಗೆ ಬರೀ ಐಟಂ ಸಾಂಗುಗಳ ಅವಕಾಶ ಬಿಟ್ಟು ಬೇರೆ ಛಾನ್ಸು ಸಿಕ್ಕಿರಲಿಲ್ಲ.

ಈ ಮಧ್ಯೆ ದುರ್ಗಿ ನಟ ಧರ್ಮನ ತೆಕ್ಕೆಗೆ ಬಿದ್ದಿದ್ದಳು. ಧರ್ಮ ಮತ್ತು ದುರ್ಗಾಳ ಪ್ರಣಯ ಪ್ರಸಂಗ ಗುಟ್ಟಾಗೇನೂ ಉಳಿದಿರಲಿಲ್ಲ. ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಕಾಣಿಸಿಕೊಳ್ಳುತ್ತಿದ್ದ ಇಬ್ಬರ ವಿಚಾರ ಪತ್ರಿಕೆಗಳಿಗೆ ಭರ್ಜರಿ ಆಹಾರವೂ ಆಗಿತ್ತು. ಈ ನಡುವೆ ಇಬ್ಬರೂ ಎಂಗೇಜ್ ಮೆಂಟು ಮಾಡಿಕೊಂಡು ಮದುವೆಯಾಗ್ತೀವಿ ಎಂದೂ ಘೋಷಿಸಿದ್ದರು. ಆದರೆ ದುರ್ಗಾಶೆಟ್ಟಿ ಮತ್ತು ಧರ್ಮನ ಮಧ್ಯೆ ಅದೇನು ಬಿರುಕಾಯಿತೋ ಗೊತ್ತಿಲ್ಲ ಆಕೆ ದಿಢೀರಂತಾ ಕಾಂಗ್ರೆಸ್‌ನ ಹಿರಿಯ ನಾಯಕಿ ಮನೋರಮಾ ಮಧ್ವರಾಜ್ ಪುತ್ರ ಪ್ರಸಾದ್‌ರಾಜ್‌ನನ್ನು ಮದುವೆಯಾಗಿಬಿಟ್ಟಳು. ಈ ಹಂತದಲ್ಲಿ ಧರ್ಮನಿಗೆ ಅನ್ಯಾಯವಾಗಿದೆ ಅಂತಲೂ ಒಂದಷ್ಟು ಜನ ಅಂದುಕೊಂಡಿದ್ದರು. ಆದರೆ ಪಕ್ಕಾ ಫ್ರಾಡ್ ಮನಸ್ಥಿತಿಯ ಧರ್ಮ ಯಾರಿಗೂ, ಯಾವುದಕ್ಕೂ ನಿಯತ್ತಾಗಿರುವ ಆಸಾಮಿ ಅಲ್ಲವೇ ಅಲ್ಲ.

ಈ ಧರ್ಮ ಕನ್ನಡದ ಸದ್ಯದ ಟಾಪ್ ಸ್ಟಾರ್ ತಂಗಿಯೊಂದಿಗೆ ಮದುವೆಯಾಗ್ತೀನಿ ಅಂತಾ ಹೇಳಿ ಕೈಯೆತ್ತಿದ್ದ ಕಿರಾತಕನೂ ಹೌದು. ತಂಗಿಯ ಮೇಲೆ ಅಗಾಧ ಪ್ರೀತಿ ಹೊಂದಿದ್ದ ಸ್ಟಾರ್ ಆಗಿನ್ನೂ ಅವಕಾಶಗಳಿಗಾಗಿ ಅಲೆದಾಡುತ್ತಿದ್ದರಲ್ಲಾ? ಆ ಘಳಿಗೆಯಲ್ಲಿಯೇ ಸ್ಟಾರ್ ಕುಟುಂಬಕ್ಕೆ ಅನ್ಯಾಯ ಮಾಡಿದ ಅನ್ನೋ ಮಾತಿದೆ. ಆ ನಂತರ ಈ ಧರ್ಮನ ಮೇಲಿನ ಛಾಲೆಂಜಿಗೇ ತನ್ನ ತಂಗಿಗೆ ಒಳ್ಳೇ ಗಂಡು ನೋಡಿ ಅದ್ಧೂರಿಯಾಗಿ ಮದುವೆ ಮಾಡಿದ್ದಂತೆ.

ಇದಾದ ನಂತರ ಮತ್ತೊಂದು ಮದುವೆಗೆ ಮುಂದಾದ ಧರ್ಮನ ಮದುವೆ ದಿನ ಭಯಾನಕ ಗಲಾಟೆ ನಡೆದು ಆ ಮದುವೆಯೂ ಮುರಿದುಬಿದ್ದಿತ್ತು.

ಹೀಗೆ ಯಾವುದಕ್ಕೂ ನಿಯತ್ತಾಗಿರದ ಧರ್ಮನ ಈ ಕೇಸು ಮಾತ್ರ ಕಗ್ಗಂಟಾಗಿದೆ. ಆತ ನಿಜಕ್ಕೂ ಹಣಕ್ಕಾಗಿಯೇ ಇಂಥಾ ದರಿದ್ರ ಕೆಲಸ ಮಾಡಿದನಾ ಅಥವಾ ಈ ಮಹಿಳೆಯ ಕಡೆಯಿಂದಲೂ ಏನಾದರೂ ತಪ್ಪುಗಳಿವೆಯಾ ಎಂಬುದರಿಂದ ಮೊದಲ್ಗೊಂಡು ಎಲ್ಲವೂ ಗೋಜಲಾಗಿದೆ. ಅನ್ಯಾಯವಾಗಿದೆ ಅಂತ ದೂರು ಕೊಟ್ಟ ಮಹಿಳೆ ಬನ್ನೇರುಘಟ್ಟದಲ್ಲಿ ಟ್ರಿಪ್ಪು ಮುಗಿಸಿ ಸುಸ್ತಾಗಿ ಮಲಗಿರೋ ಮಾಹಿತಿ ಇದೆ. ಮಾಧ್ಯಮದ ಮಂದಿ ಕಾಂಟ್ಯಾಕ್ಟು ಮಾಡಿದರೆ ಫೋನೆತ್ತಿಕೊಂಡು ಭದ್ರಕಾಳಿಯಂತೆ ಅಬ್ಬರಿಸುವವಳು ಸಂತ್ರಸ್ತೆಯ ತಂಗಿ. ಪೊಲೀಸರು ಹೇಳಿದ್ದಕ್ಕೆ ಮಾಧ್ಯಮದವರು ಮಸಾಲೆ ಬೆರೆಸಿ ಬರೆದಿದ್ದಾರೆ ಎಂಬರ್ಥದಲ್ಲಿ ಮಾತಾಡೋ ಈಕೆ ಮಾತೆತ್ತಿದರೆ `ಡೈರೆಕ್ಟಾಗಿ ಎಸಿಪಿನ ಕಾಂಟ್ಯಾಕ್ಟ್ ಮಾಡಿ ಅವ್ರೇನಂತಾರೋ ಅದುನ್ನೇ ಬರ್‍ಕಳಿ. ನಮ್ ತಲೆ ತಿನ್ಮಬೇಡಿ’ ಅನ್ನುತ್ತಾಳೆ.

ಈ ಬಗ್ಗೆ ಎಸಿಪಿ ರಮೇಶ್ ಅವರನ್ನು ಸಂಪರ್ಕಿಸಿದರೆ ಅವರದ್ದು ನೊಂದ ಮಹಿಳೆಯ ಪರವಾದ ನಿಲುವು. `ಪೊಲೀಸರೇನಾದರೂ ಮುಚ್ಚಿಡುತ್ತಾರೆಂದರೆ, ಅದನ್ನು ಬಗೆದು ಜನರಿಗೆ ತಲುಪಿಸೋದು ಪತ್ರಿಕಾ ಧರ್ಮ. ಆದರೆ ಇದು ಫ್ಯಾಮಿಲಿ ವಿಚಾರ. ಆಕೆಗೆ ಮದುವೆಯಾಗಿದೆ, ಮಕ್ಕಳಿವೆ. ಈ ವಿಚಾರವನ್ನ ಕೆದಕಿ ಹೆಸರಿನ ಸಮೇತ ವರದಿ ಮಾಡಿದ್ರೆ ಅವರ ಪಾಡೇನಾಗಬೇಕು? ನಾವು ತನಿಖೆ ನಡೆಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ’ ಅಂತ ಸಂತ್ರಸ್ಥೆಯ ಮೇಲೆ ಅನುಕಂಪದಿಂದಲೇ ಎಸಿಪಿ ಮಾತಾಡುತ್ತಾರೆ. ಆದರೆ ಸಂತ್ರಸ್ತೆಯ ತಂಗ್ಯವ್ವ ಭದ್ರಕಾಳಿಯ ವರ್ತನೆ ಗೊಂದಲ ಹುಟ್ಟಿಸುತ್ತಿದೆ.

ಭನ್ನೇರುಘಟ್ಟ ಟ್ರಿಪ್ಪು ಮುಗಿಸಿ ಸುಸ್ತಾಗಿ ಮಲಗಿರೋ ತನ್ನಕ್ಕನನ್ನು ಯಾರೂ ಡಿಸ್ಟರ್ಬ್ ಮಾಡಬಾರದೆಂಬ ನಿಲುವು ತಳೆದಿರೋ ಈಕೆ `ನಾವು ಯಾರ ಮೇಲೂ ಕಂಪ್ಲೇಂಟು ಕೊಟ್ಟಿಲ್ಲ. ಮಾಧ್ಯಮದವರು ತೋಚಿದ ರೀತಿಯಲ್ಲಿ ಸುದ್ದಿ ಮಾಡ್ತಿದ್ದಾರೆ. ಈ ಬಗ್ಗೆ ಕೇಳಿದರೆ ಪೊಲೀಸರು ಹೇಳಿದ್ದನ್ನೇ ಬರೆದಿದ್ದೀವೆ, ತೋರಿಸಿದ್ದೇವೆ ಅನ್ನುತ್ತಾರೆ. ನೀವೂ ಅವ್ರನ್ನೇ ಕಾಂಟ್ಯಾಕ್ಟ್ ಮಾಡಿ, ಅವರು ಹೇಳಿದ್ದನ್ನೇ ಬರೆಯಿರಿ’ ಎಂಬಂರ್ಥದಲ್ಲಿ ಪೆಡಸು ಮಾತಾಡುತ್ತಾಳೆ. ಅದೇನು ಸತ್ಯವಿದೆಯೋ ಒದರವ್ವಾ ಅಂದರೆ ಮಿಣ್ಣಗೆ ಕಳ್ಳ ಬೀಳುತ್ತಾಳೆ. ಈಕೆಗೆ ಅವನ್ಯಾರೋ ಹಲಾಲು ಟೋಪಿ ಧರ್ಮನಿಗೂ ಮಾಧ್ಯಮಗಳಿಗೂ ವ್ಯತ್ಯಾಸವೇ ಗೊತ್ತಿದ್ದಂತಿಲ್ಲ. ಸಂತ್ರಸ್ಥೆಯ ಕಡೆಯಿಂದ ನಡೆಯುತ್ತಿರೋ ಇಂಥಾ ಕೊಸರಾಟಗಳನ್ನು ಗಮನಿಸಿದರೆ ಇದರ ಹಿಂದೆ ಮತ್ತೇನೋ ಷಡ್ಯಂತ್ರವಿದೆ ಎಂಬ ಗುಮಾನಿ ಬಲವಾಗಿಯೇ ಕಾಡುತ್ತದೆ.

ಇನ್ನುಳಿದಂತೆ ಧರ್ಮ ಸ್ವಿಚಾಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದಾನೆ. ಅಸಲಿ ಸತ್ಯವನ್ನು ಕಾಲವೇ ಜಾಹೀರು ಮಾಡಬೇಕಿದೆ!

(ಈ ವರದಿ ಯಾವುದೇ ವ್ಯಕ್ತಿಯ ಮಾನಹಾನಿ ಮಾಡುವ ಉದ್ದೇಶ ಹೊಂದಿಲ್ಲ)

Continue Reading

Trending

Copyright © 2018 Cinibuzz