Connect with us

ಪ್ರೆಸ್ ಮೀಟ್

ಇದು ಹಾರರ್ ಚಿತ್ರವಲ್ಲ ಆದರೆ ಬೆಚ್ಚಿ ಬೀಳಿಸುತ್ತೆ!

Published

on

ದುನಿಯಾ ರಶ್ಮಿ ಹೊಸಾ ಸ್ವರೂಪದಲ್ಲಿ ಮತ್ತೆ ವಾಪಾಸಾಗಿರುವ ಚಿತ್ರ ಕಾರ್ನಿ. ಈಗಾಗಲೇ ಬಿಡುಗಡೆಯಾಗಿ ಟ್ರೈಲರ್ ಮೂಲಕವೇ ನಿಗೂಢವಾದುದೇನನ್ನೋ ಪ್ರೇಕ್ಷಕರತ್ತ ದಾಟಿಸಿರೋ ಈ ಚಿತ್ರ ಈ ವಾರವೇ ತೆರೆ ಕಾಣುತ್ತಿದೆ. ಬೇರೇನನ್ನೂ ಯೋಚಿಸಲೇ ಸಾಧ್ಯವಾಗದಂತೆ ಪ್ರೇಕ್ಷಕರನ್ನು ಆರಂಭದಿಂದ ಮುಕ್ತಾಯದವರೆಗೂ ಹಿಡಿದಿಡುವಂಥಾ ಚಿತ್ರ ರೂಪಿಸಬೇಕೆಂಬ ಹಂಬಲದೊಂದಿಗೇ ಈ ಚಿತ್ರ ತಯಾರಾಗಿದೆ. ಕಾಡು, ಕತ್ತಲು ಮತ್ತು ಅದರ ಗರ್ಭದಲ್ಲಿ ತೆರೆದುಕೊಳ್ಳೋ ಸೈಕಾಲಾಜಿಕಲ್ ಥ್ರಿಲ್ಲರ್ ಕಥಾನಕ… ಇದನ್ನೆಲ್ಲ ಅಂತರಾಳವಾಗಿಸಿಕೊಂಡಿರೋ ಈ ಚಿತ್ರ ತೆರೆ ಕಾಣಲು ದಿನವಷ್ಟೇ ಬಾಕಿ ಉಳಿದಿದೆ.

ಐವರು ಹುಡಿಗಿಯರು ಮಲೆನಾಡ ಸೀಮೆಯ ಕಾಡಿನಲ್ಲಿ ನಾಪತ್ತೆಯಾಗುತ್ತಾರೆ. ಅವರೆಲ್ಲರ ಹಿಂದೆಯೂ ಒಂದೊಂದು ಕಥೆ. ಅವರೆಲ್ಲ ಯಾಕೆ ಹಾಗೆ ಏಕಾಏಕಿ ನಾಪತ್ತೆಯಾಗುತ್ತಾರೆ? ಅದರಿಂದ ಹೇಗೆ ಪಾರಾಗುತ್ತಾರೆಂಬುದರ ಸುತ್ತ ಕಥೆ ಸಾಗುತ್ತೆ. ಈ ಐವರು ಹುಡುಗೀರಲ್ಲಿ ಒಬ್ಬರಾಗಿ ಮುಖ್ಯವಾದ ಪಾತ್ರದಲ್ಲಿ ರಶ್ಮಿ ನಡಿಸಿದ್ದಾರೆ.

ಈ ಚಿತ್ರವನ್ನು ಗೋವಿಂದರಾಜ್ ನಿರ್ಮಾಣ ಮಾಡಿದ್ದಾರೆ. ನಿರ್ದೇಶನ ಮಾಡಿರುವವರು ವಿನೋದ್ ಕುಮಾರ್. ನಿರ್ದೇಶನದ ಕನಸು ಹೊತ್ತು ಚಿತ್ರರಂಗಕ್ಕೆ ಬಂದಿದ್ದ ವಿನೋದ್ ಒಂದಷ್ಟು ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಆ ಬಳಿಕ ಸಂಕಲನಕಾರರಾಗಿಯೂ ಕೆಲಸ ಮಾಡಿದ್ದಾರೆ. ವಿಷ್ಣುವರ್ಧನ್ ಅಭಿನಯದ ಆಪ್ತರಕ್ಷಕ ಚಿತ್ರದ ಟ್ರೈಲರ್ ಎಡಿಟಿಂಗ್ ಮಾಡಿದ್ದವರೂ ಇದೇ ವಿನೋದ್.

ವಿನೋದ್ ಅವರಿಗೆ ಹಾಲಿವುಡ್ ಶೈಲಿಯದ್ದೊಂದು ಚಿತ್ರ ಮಾಡಬೇಕೆಂಬುದು ಬಹು ದಿನದ ಕನಸಾಗಿತ್ತು. ಹಾಡು ಮುಂತಾದ ಸಿದ್ಧಸೂತ್ರಗಳ ಗೊಡವೆಯಿಲ್ಲದೆ ಕಥೆಯೇ ಮುಖ್ಯವಾಗಿರೋ ಕಾರ್ನಿ ಚಿತ್ರವನ್ನು ಅವರು ಕಡೆಗೂ ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ಹಾಡುಗಳಿಲ್ಲ. ಬಿಲ್ಡಪ್ಪುಗಳೂ ಇಲ್ಲ. ಆದರೆ ಅದ್ಯಾವುದೂ ನೆನಪೇ ಆಗದ ಹಾಗೆ ಕಥೆಯನ್ನು ರೂಪಿಸಲಾಗಿದೆ ಎಂಬುದು ನಿರ್ದೇಶಕರ ಭರವಸೆ.

ಈ ಚಿತ್ರದ ಕಥೆ ರೆಡಿ ಮಾಡಿಕೊಂಡ ಘಳಿಗೆಯಲ್ಲಿ ವಿನೋದ್ ಕುಮಾರ್ ಅವರನ್ನು ನಾಯಕಿ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳೋದೆಂಬ ಪ್ರಶ್ನೆ ಕಾಡಿತ್ತು. ಇದಕ್ಕೆ ನಟನೆಯ ಕಸುವು ಹೊಂದಿರೋ ನಟಿಯೇ ಬೇಕಾಗಿತ್ತು. ಆಗ ವಿನೋದ್ ಕುಮಾರ್ ಅವರಿಗೆ ನೆನಪಾದದ್ದು ರಶ್ಮಿ. ಇದುವರೆಗೂ ಪಕ್ಕದ ಮನೆ ಹುಡುಗಿಯಂಥಾ ಕ್ಯಾರೆಕ್ಟರುಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ರಶ್ಮಿ ಈ ಚಿತ್ರದಲ್ಲಿ ಬದಲಾದ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ, ಇಲ್ಲಿನ ಪಾತ್ರವೂ ಅಷ್ಟೇ ಭಿನ್ನವಾಗಿದೆಯಂತೆ.

ಇದೊಂದು ಮಹಿಳಾ ಪ್ರಧಾನ ಚಿತ್ರ ಎಂಬಂಥಾ ಮಾತೂ ಕೇಳಿ ಬರುತ್ತಿದೆ. ಆದರೆ ಇದು ಪಕ್ಕಾ ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಕಾರ್ನಿ ಅಂದರೆ ದುರ್ಗಾ ಮಾತೆಯ ಕೈಲಿರೋ ದುಷ್ಟ ಸಂಹಾರದ ಅಸ್ತ್ರ. ಈ ಕಥನವೂ ಅಂಥಾದ್ದೇ ಹೂರಣ ಹೊಂದಿರೋದರಿಂದ ಆ ಟೈಟಲ್ ಅನ್ನೇ ಇಡಲಾಗಿದೆಯಂತೆ. ಇನ್ನು ಕಾರ್ನಿ ಹಾರರ್ ಚಿತ್ರ ಎಂಬಂತೆಯೂ ಸುದ್ದಿ ಹರಿದಾಡುತ್ತಿದೆ. ಆದರಿದು ಹಾರರ್ ಚಿತ್ರವಲ್ಲ. ಆದರೆ ಇಲ್ಲಿ ಅದನ್ನೇ ಮೀರಿಸುವಂಥಾ ಬೆಚ್ಚಿ ಬೀಳಿಸುವಂಥಾ ವಿಚಾರಗಳಿವೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಪ್ರೆಸ್ ಮೀಟ್

ಇವನು ಪಾರ್ವತಮ್ಮನ ಮಗ!

Published

on

ಎರಡು ವರ್ಷಗಳ ಹಿಂದೆ ನಾಗರಹಾವು ಚಿತ್ರ ಭಾರೀ ಅಬ್ಬರದೊಂದಿಗೆ ತೆರೆ ಕಂಡಿತ್ತಲ್ಲಾ? ಆ ಚಿತ್ರದ ನಿರ್ಮಾಣ ವಿಭಾಗದಲ್ಲಿ ನಿರ್ಣಾಯಕವಾಗಿ ಕಾರ್ಯ ನಿರ್ವಹಿಸಿದ್ದ ಎಂ ಯೋಗೇಶ್ ಪೂರ್ಣಪ್ರಮಾಣದ ನಿರ್ಮಾಪಕರಾಗಿದ್ದಾರೆ. ಇವರು ನಿರ್ಮಾಪಕರಾಗಿರೋ ಭರಣಿ ಚಿತ್ರದ ಮುಹೂರ್ತ ಇಂದು ನೆರವೇರಿದೆ.

ಇದರ ಮೋಷನ್ ಪೋಸ್ಟರ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ದಿನ ಕಳೆಯುವಷ್ಟರಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಭರಣಿ ಚಿತ್ರಕ್ಕೆ ಪಾರ್ವತಮ್ಮನ ಮಗ ಎಂಬ ಟ್ಯಾಗ್ ಲೈನ್ ಕೂಡಾ ಇದೆ. ರಾಜ್ ಕುಮಾರ್ ಅವರ ಸಿನಿಮಾಗಳನ್ನೇ ನೆನಪಿಸುವಂಥಾ ಹಳ್ಳಿ ಘಮ ಬೀರುವಂತಿರೋ ಈ ಮೋಷನ್ ಪೋಸ್ಟರ್ ನಿಜಕ್ಕೂ ಅದ್ಭುತವಾಗಿಯೇ ಮೂಡಿ ಬಂದಿದೆ.

ಅಂದಹಾಗೆ ಈ ಚಿತ್ರದ ಮೂಲಕ ಮಾಧವ ಎಂಬ ಹೊಸಾ ಹುಡುಗ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾನೆ. ಸ್ವಾತಿ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಈ ಹಿಂದೆ ರಮ್ಯಾ ನಾಯಕಿಯಾಗಿ ನಟಿಸಿದ್ದ ನಾಗರಹಾವು ಚಿತ್ರದ ನಿರ್ಮಾಪಕ ಸಾಜಿದ್ ಖುರೇಷಿಯವರ ಆಪ್ತ ವಲಯದಲ್ಲಿದ್ದವರು ಯೋಗೇಶ್. ಕನ್ನಡ ಚಿತ್ರರಂಗಕ್ಕೆ ಅದ್ದೂರಿಯಾದ, ಒಳ್ಳೆ ಹೂರಣ ಹೊಂದಿರೋ ಚಿತ್ರ ಕೊಡಬೇಕೆಂಬ ಆಸೆ ಹೊಂದಿರುವವರು ಸಾಜಿದ್ ಖುರೇಶಿ. ಅವರ ಗರಡಿಯಲ್ಲಿ ಪಳಗಿಕೊಂಡಿದ್ದ ಯೋಗೇಶ್ ಇದೀಗ ಭರಣಿ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಗ್ರಾಫಿಕ್ಸ್‌ನಲ್ಲಿಯೇ ವಿಷ್ಣುವರ್ಧನ್ ಅವರನ್ನು ಮರು ಸೃಷ್ಟಿ ಮಾಡೋ ಮೂಲಕ ಗಮನ ಸೆಳೆದಿದ್ದ ನಾಗರಹಾವು ಚಿತ್ರವನ್ನು ಸಾಜಿದ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದರು. ಇದೀಗ ಯೋಗೇಶ್ ನಿರ್ಮಾಣ ಮಾಡುತ್ತಿರೋ ಈ ಚಿತ್ರದ ಮೋಷನ್ ಪೋಸ್ಟರ್ ಕೂಡಾ ಅಂತಾದ್ದೇ ಅದ್ದೂರತಿತನದ ಸೂಚನೆ ನೀಡುವಂತಿದೆ. ದೊಡ್ಡ ಗಣೇಶ ದೇವಸ್ಥಾನದಲ್ಲಿಂದು ಪೂಜೆ ನಡೆಸುವ ಮೂಲಕ ಚನಾನಿರಾಜ ನಿರ್ದೇಶನದ ‘ಭರಣಿಯ’ ಚಿತ್ರೀಕರಣ ಆರಂಭವಾಗಿದೆ.

Continue Reading

ಅಪ್‌ಡೇಟ್ಸ್

ರಚಿತಾ ಈಗ ಏಪ್ರಿಲ್ ಡಿಸೋಜಾ!

Published

on

ರಚಿತಾ ರಾಮ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಮುಖ್ಯ ನಾಯಕಿಯಾಗಿ ಚಾಲ್ತಿಯಲ್ಲಿದ್ದಾರೆ. ಸುದೀಪ್, ದರ್ಶನ್, ಪುನೀತ್, ದುನಿಯಾ ವಿಜಯ್, ನೀನಾಸಂ ಸತೀಶ್, ಧೃವ ಸರ್ಜಾ ಅವರಂಥಾ ಸ್ಟಾರ್ ನಟರ ಜೊತೆಗೂ ನಟಿಸಿರುವ ರಚಿತಾ ಗೆಲುವಿನ ಶಕೆ ಅಯೋಗ್ಯ ಚಿತ್ರದ ಮೂಲಕ ಯಥಾ ಪ್ರಕಾರ ಮುಂದುವರೆದಿದೆ. ಈ ಹಂತದಲ್ಲಿಯೇ ರಚಿತಾ ಸಕಾರಾತ್ಮಕ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ!

ಕಮರ್ಷಿಯಲ್ ಚಿತ್ರಗಳಲ್ಲೇ ಮಿಂಚುತ್ತಾ ಅದರಲ್ಲಿಯೇ ಬೇಡಿಕೆ ಹೊಂದಿರುವ ನಟಿಯರು ಆಚೀಚೆಗೆ ಹೊರಳಿಕೊಳ್ಳೋದು ವಿರಳ. ಆದರೆ ರಚಿತಾ ಕಮರ್ಷಿಯಲ್ ಹಂಗಾಮಾ ಚಾಲ್ತಿಯಲ್ಲಿರುವಾಗಲೇ ಕಲಾತ್ಮಕ ಚಿತ್ರವೊಂದರಲ್ಲಿಯೂ ನಟಿಸುತ್ತಿದ್ದಾರೆ. ಆ ಚಿತ್ರದ ಶೀರ್ಷಿಕೆಯೇ ‘ಏಪ್ರಿಲ್’!

ಇದು ಪಕ್ಕಾ ಮಹಿಳಾ ಪ್ರಧಾನ ಚಿತ್ರ. ಈ ಚಿತ್ರದ ಪೋಸ್ಟರ್ ಕೂಡಾ ಈಗ ಬಿಡುಗಡೆಯಾಗಿದೆ. ಅದರಲ್ಲಿ ರಚಿತಾ ಕೈಲಿ ಬೊಂಬೆ ಹಿಡಿದು ನಿಂತ ಪೋಸಿನಲ್ಲಿ ಕಂಗೊಳಿಸಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ರಚಿತಾ ಏಪ್ರಿಲ್ ಡಿಸೋಜಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕಿಯ ಹೆಸರೇ ಏಪ್ರಿಲ್ ಡಿಸೋಜಾ ಎಂದಿರೋದರಿಂದ ಈ ಚಿತ್ರಕ್ಕೂ ಏಪ್ರಿಲ್ ಎಂದೇ ಹೆಸರಿಡಲಾಗಿದೆಯಂತೆ.

ಈ ಚಿತ್ರದ ಒಟ್ಟಾರೆ ಕಥೆ ಏಪ್ರಿಲ್ ಎಂಬ ಹೆಣ್ಣು ಮಗಳೊಬ್ಬಳ ಸುತ್ತಾ ನಡೆಯುತ್ತದೆ. ಮೊದಲ ಸಲ ರಚಿತಾ ರಾಮ್ ಇಂಥಾ ಮಹಿಳಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಕಮರ್ಷಿಯಲ್ ಚಿತ್ರಗಳ ಏಕತಾನತೆಯಿಂದ ರಚಿತಾ ಹೊರ ಬಂದು ಫ್ರೆಶ್ ಆಗೋ ನಿರ್ಧಾರ ಮಾಡಿದ್ದಾರೆ. ಇದೀಗ ಬಿಡುಗಡೆಯಾಗಿರೋ ಈ ಚಿತ್ರದ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರೀ ಮೆಚ್ಚುಗೆ ಗಳಿಸಿಕೊಂಡಿದೆ. ಇದುವರೆಗೂ ಗ್ಲಾಮರ್ ಪಾತ್ರಗಳಲ್ಲಿಯೇ ಅವರನ್ನು ನೋಡಿದ್ದ ಅಭಿಮಾನಿಗಳೆಲ್ಲ ರಚಿತಾರನ್ನು ಮೊದಲ ಸಲ ಮಹಿಳಾ ಪ್ರಧಾನವಾದ, ಭಿನ್ನವಾದ ಪಾತ್ರವೊಂದರಲ್ಲಿ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

Continue Reading

ಟೀಸರ್ / ಟ್ರೇಲರ್

ಹೊಸಬರ ತಂಡದ ಮುಂದಿನ ಬದಲಾವಣೆ!

Published

on

ಚಿತ್ರರಂಗಕ್ಕೆ ಆಗಮಿಸುತ್ತಿರುವ ಹೊಸಬರಲ್ಲಿ ಬಹುತೇಕರು ಯಾವುದೋ ಬದಲಾವಣೆಯೊಂದರ ಸೂತ್ರ ಹಿಡಿದು ಬಂದವರಂತೆ ಕಾಣಿಸೋದರಲ್ಲಿ ವಿಶೇಷವೇನೂ ಇಲ್ಲ. ಯಾಕೆಂದರೆ ಹೀಗೆ ಬಂದ ಹೊಸಬರನೇಕರು ಗೆದ್ದಿದ್ದಾರೆ. ಸಂಚಲನವನ್ನೇ ಸೃಷ್ಟಿಸಿದ್ದಾರೆ. ಅದರಲ್ಲಿಯೂ ಕೆಲವರು ಟೈಟಲ್ ಮೂಲಕವೇ ಗಮನ ಸೆಳೆಯುತ್ತಾರೆ. ಆ ಸಾಲಿಗೆ ಸೇರುವ ಮತ್ತೊಂದು ಚಿತ್ರ `ಮುಂದಿನ ಬದಲಾವಣೆ’!

ಸಿರಪ್ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಫಣಿ ಭೂಷಣ್ ನಿರ್ಮಾಣ ಮಾಡಿರೋ ಈ ಚಿತ್ರವನ್ನು ಪ್ರವೀಣ್ ಭೂಷಣ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಚಾರವನ್ನು ಕೆಲಸ ಕಾರ್ಯಗಳ ಮೂಲಕವೇ ಪಡೆಯಬೇಕೆಂಬ ಸೂತ್ರವನ್ನು ನೆಚ್ಚಿಕೊಂಡಿರುವ ಚಿತ್ರ ತಂಡ ಸುಸೂತ್ರವಾಗಿ ಚಿತ್ರೀಕರಣ ಮುಗಿಸಿಕೊಂಡು, ಡಬ್ಬಿಂಗ್ ಅನ್ನೂ ಪೂರೈಸಿಕೊಂಡು ಬಿಡುಗಡೆಗಾಗಿ ಮುಹೂರ್ತ ಹುಡುಕಲಾರಂಭಿಸಿದೆ.

ಪ್ರವೀಣ್ ಭೂಷಣ್, ಸಂಗೀತಾ, ಸತೀಶ್, ಪಂಚಗೌರಿ, ಆರ್ಯನ್, ಚಕ್ರವರ್ತಿ, ಮಾಲಾಶ್ರೀ ಮುಂತಾದವರ ತಾರಾಗಣ ಹೊಂದಿರೋ ಈ ಚಿತ್ರ ಯಾವ ಥರದ್ದೆಂಬ ಬಗ್ಗೆ ಪ್ರೇಕ್ಷಕರೇ ಕುತೂಹಲಗೊಂಡಿದ್ದಾರೆ. ಆದರೆ ಚಿತ್ರತಂಡ ಕಥೆಯ ಬಗೆಗಿನ ಯಾವ ಅಂಶವನ್ನು ಬಿಟ್ಟು ಕೊಡದೇ ಗೌಪ್ಯತೆ ಕಾಪಾಡಿಕೊಂಡಿದೆ. ಮುಂದಿನ ಬದಲಾವಣೆ ಎಂಬುದು ಹಾಸ್ಯ ಪ್ರಧಾನವಾದ ಚಿತ್ರ ಎಂಬುದೊಂದೇ ಸುಳಿವು ಸದ್ಯಕ್ಕೆ ಹೊರ ಬಿದ್ದಿದೆ.

ಟೈಟಲ್ಲಿನಂತೆಯೇ ಭಿನ್ನವಾದ ಕಥೆಯೊಂದನ್ನು ಈ ಚಿತ್ರ ಹೊಂದಿದೆಯಂತೆ. ಈಗ ಟೈಟಲ್ ಕಾರಣದಿಂದಲೇ ಗಮನ ಸೆಳೆದಿರೋ ಈ ಚಿತ್ರ ಮುಂದೆ ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯೊಂದಕ್ಕೆ ನಾಂದಿ ಹಾಡಲಿದೆಯಾ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.

Continue Reading

Trending

Copyright © 2018 Cinibuzz