One N Only Exclusive Cine Portal

ಪಕ್ಕಾ ಕಮರ್ಷಿಯಲ್ ಸಿನಿಮಾ!

ಅಮಾವಾಸ್ಯೆ ದಿನ ಮಗು ಹುಟ್ಟಿದರೆ ಮನೆ ನಿರ್ನಾಮವಾಗುತ್ತದೆ ಅನ್ನೋದು ಜ್ಯೋತಿಷಿಯ ನುಡಿ. ಇದನ್ನು ತಡೆಯಲು ಬಸುರಿ ಹೆಂಡತಿಯ ಕಾಲುಗಳನ್ನು ಮೇಲಕ್ಕೆತ್ತಿ ಕಟ್ಟುವ ಕಲ್ಲು ಮನಸ್ಸಿನ ತಂದೆ. ಇಷ್ಟಾದರೂ ಅಮಾವಾಸ್ಯೆ ದಿನವೇ ಗರ್ಭಸೀಳಿಬರುವ ಮಗು. ಆತ ಕನಕ!

ಅಪ್ಪನ ಕಣ್ಣಿಗೆ `ದರಿದ್ರ’ನಂತೆ ಕಾಣುವ ಕನಕ. ಅಡಿಗಡಿಗೂ ಮೂದಲಿಕೆಗೆ ಒಳಪಟ್ಟು ಕಡೆಗೊಂದು ದಿನ ಈತ ಊರುಬಿಟ್ಟು ಪೇಟೆ ಸೇರುತ್ತಾನೆ. ಇಲ್ಲಿ ಪೋಸ್ಟರು ಅಂಟಿಸೋ ಕಾಯಕ ಮಾಡುವ ರಂಗಾಯಣ ರಘು ಕೈಗೆ ಸಿಕ್ಕು ಆಶ್ರಯ ಪಡೆದು ದೊಡ್ಡವನಾಗುತ್ತಾನೆ. ಆಟೋ ಓಡಿಸೋದು ಕನಕನ ಉದ್ಯೋಗ. ಜೊತೆಗೆ ಸಂಕಷ್ಟದಲ್ಲಿರೋ ಜನತೆಗೆ ಕೈಹಿಡಿಯೋದು ಕರುಣಾಮಯಿ ಕನಕನ ಗುಣ. ಹಾಗೆ ಯಾರದ್ದೋ ಸಂಕಷ್ಟಕ್ಕೆ ಮಿಡಿಯುವಾಗ ಜೊತೆಯಾಗುವಾಕೆ ಮಾನ್ವಿತಾ. ಕೇಡುಗರ ಕಾಟದಿಂದ ಒದ್ದಾಡುತ್ತಿದ್ದ ನಾಯಕಿಗೂ ಕನಕನೇ ಬಾಡಿಗಾರ್ಡು! ಜತೆಗಿದ್ದು ಹಿತ ಕಾಯುವ ಕನಕನ ಮೇಲೆ ಆಕೆಗೆ ಲವ್ವು. ಇನ್ನೇನು ಇಬ್ಬರೂ ಪ್ರೇಮ ನಿವೇದಿಸಿಕೊಂಡು ಜೊತೆಯಾಗಬೇಕು ಅನ್ನುವಷ್ಟರಲ್ಲಿ ಮಹಾ ತಿರುವೊಂದು ಘಟಿಸಿ ಮಧ್ಯಂತರಕ್ಕೆ ಮುಟ್ಟುತ್ತದೆ.

ದ್ವಿತೀಯಾರ್ಧದಲ್ಲಿ ಶುರುವಾಗೋದು ಬೇರೆಯದ್ದೇ ಸಿನಿಮಾ. ತೀರಾ ಸಣ್ಣ ವಯಸ್ಸಿಗೇ ಊರು ಬಿಟ್ಟು ಬಂದಿದ್ದ ಹುಡುಗ ತನ್ನ ಮನೆಯವರನ್ನು ಅರಸಿ ಮತ್ತದೇ ಜಾಗಕ್ಕೆ ತೆರಳುತ್ತಾನೆ. ಅಲ್ಲಿ ಊರಿನ ರಾಜಕೀಯ, ಹಾಲು ಒಕ್ಕೂಟದ ಚುನಾವಣೆಗಾಗಿ ಮೇಲ್ಜಾತಿ ಶ್ರೀಮಂತನ ಜೊತೆಗಿನ ಮಾರಾಮಾರಿ ಆರಂಭವಾಗುತ್ತದೆ. ಮಗ ಮತ್ತೆ ಮನೆ ಸೇರಿದ ಅನ್ನೋ ಖುಷಿ ತಾಯಿಗಾದರೆ, ಮತ್ತದೇ `ದರಿದ್ರ’ ಕಾನ್ಸೆಪ್ಟು ತಂದೆಯ ತಲೆಯಲ್ಲಿ ಉಳಿದುಹೋಗಿರುತ್ತದೆ. ಅಣ್ಣ-ತಮ್ಮಂದಿರ ಸೆಂಟಿಮೆಂಟು, ಹಳೇ ಗೆಳತಿಯನ್ನು ವಿಧವೆಯಾಗಿ ನೋಡುವ ದೌರ್ಭಾಗ್ಯ, ತಮ್ಮನ ಹೆಂಡತಿಯ ಕಿತಾಪತಿ, ಆರೋಪ, ಅವಮಾನಗಳು ಕನಕನನ್ನು ಸುತ್ತುವರಿಯುತ್ತವೆ. ಇದನ್ನೆಲ್ಲಾ ಮೀರಿ ಕನಕ ಎದ್ದು ನಿಲ್ಲುತ್ತಾನಾ? ಅನ್ನೋ ಕುತೂಹಲ ತಿಳಿದುಕೊಳ್ಳಬೇಕಾದರೆ ಸಿನಿಮಾವನ್ನೊಮ್ಮೆ ನೋಡಲೇಬೇಕು.

ಮೊದಲ ಭಾಗದ ಸಿನಿಮಾದ ತುಂಬಾ ಕನಕನಿಗಿಂತ ಹೆಚ್ಚಾಗಿ ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಆವರಿಸಿಕೊಂಡಿದ್ದಾರೆ. ಪ್ರತೀ ಘಳಿಗೆಯೂ ಕನಕನ ಬಾಯಲ್ಲಿ ಅಣ್ಣಾವ್ರ ಕುರಿತ ಅಭಿಮಾನ ಮಾತುಗಳು, ಆಟೋ ಡ್ರೈವರ್ ಗಳ ಪರವಾದ ದನಿ ಮೊಳಗುತ್ತಲೇ ಇರುತ್ತದೆ. ಎರಡನೇ ಭಾಗದ ಪೂರ್ತಿ ಭರ್ತಿ ಸೆಂಟಿಮೆಂಟು ನಾಯಕ ದುನಿಯಾ ವಿಜಿಯವರ ಕಣ್ಣಲ್ಲಿ ನೀರಿನ ಕೋಡಿಯನ್ನೇ ಹರಿಸಿದೆ.

ಸತ್ಯ ಹೆಗಡೆ ತಮ್ಮ ರೆಗ್ಯುಲರ್ ಪ್ಯಾಟ್ರನನ್ನು ಬದಿಗಿಟ್ಟು ಚಿತ್ರದಲ್ಲಿ ಬರುವ ಎರಡು ಭಿನ್ನ ಶೇಡುಗಳಂತೆ ಛಾಯಾಗ್ರಹಣದಲ್ಲೂ ಬಣ್ಣ ಬದಲಿಸಿದ್ದಾರೆ. ಮೊದಲ ಬಾರಿಗೆ ಸಂಗೀತ ನೀಡಿದ್ದರೂ ನವೀನ್ ಸಜ್ಜು ಸದ್ದು ಮಾಡುವ ಸಂಗೀತ ನೀಡಿದ್ದಾರೆ. ಎಣ್ಣೆ ನಿಮ್ದು ಊಟ ನಮ್ದು ಹಾಡು ಕೇಳುವುದರೊಂದಿಗೆ ನೋಡಲೂ ಮಜವಾಗಿದೆ. ಗುರುಕಿರಣ್ ಅವರ ಹಿನ್ನೆಲೆ ಸಂಗೀತದಲ್ಲೀ ಭಾರೀ ಸೌಂಡಿದೆ.

ನಿರ್ದೇಶಕ ಆರ್ ಚಂದ್ರು ಪಕ್ಕಾ ಮಾಸ್ ಸಿನಿಮಾ ಕೊಡುವಲ್ಲಿ ಗೆದ್ದಿದ್ದಾರೆ. ಅವರೇ ನಿರ್ಮಾಪಕರಾಗಿದ್ದರೂ ತೆರೆ ಮೇಲೆ ಏನೇನೂ ಕೊರತೆ ಆಗದಂತೆ ಶ್ರೀಮಂತವಾಗಿಸಿರೋದು ಅವರ ಧಾರಾಳತನಕ್ಕೆ ಸಾಕ್ಷಿ. ಹೆಚ್ಚು ದೃಶ್ಯದಲ್ಲಿ ಕಾಣಿಸಿಕೊಂಡಿರೋ ಮಾನ್ವಿತಾ ಸ್ವತಃ ಅವರೇ ಡಬ್ಬಿಂಗ್ ಮಾಡಿದ್ದಿದ್ದರೆ ಚೆನ್ನಾಗಿರುತ್ತಿತ್ತು. ರೇಷ್ಮೆ ಸೀರೆಯಲ್ಲಿ ಮಾತ್ರವಲ್ಲ, ಬಿಳೀ ಸೀರೆಯಲ್ಲೂ ಮುದ್ದುಮುದ್ದಾಗಿ ಕಾಣೋದು ಹರಿಪ್ರಿಯಾ ಪ್ಲಸ್ ಪಾಯಿಂಟು.

ಒಟ್ಟಾರೆಯಾಗಿ ಹೇಳಬೇಕೆಂದರೆ, ಆಕ್ಷನ್ನು, ಸೆಂಟಿಮೆಂಟು, ಲವ್ವು ಎಲ್ಲವೂ ಬೆರೆತ ಪಕ್ಕಾ ಕಮರ್ಷಿಯಲ್ ಸಿನಿಮಾ ಕನಕ.

Leave a Reply

Your email address will not be published. Required fields are marked *


CAPTCHA Image
Reload Image