One N Only Exclusive Cine Portal

ಬಾಲಿವುಡ್ ಮಂದಿಗೆ ವಿವಾದವೆಬ್ಬಿಸೋ ರೋಗಾನಾ?

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರ ಬಹುಶಃ ಭಾರತೀಯ ಚಿತ್ರರಂಗದಲ್ಲಿಯೇ ಭಾರೀ ವಿವಾದ ಎಬ್ಬಿಸಿದ ಚಿತ್ರವಾಗಿ ದಾಖಲಾಗಿದೆ. ಆದರೆ ಆ ಚಿತ್ರ ಸೃಷ್ಟಿಸಿದ್ದ ವಿವಾದಕ್ಕೂ, ಪಡೆದುಕೊಂಡಿರೋ ಗೆಲುವಿಗೂ ಸೂತ್ರ ಸಂಬಂಧವಿಲ್ಲ. ಆ ಪಾಟಿ ಸದ್ದು ಮಾಡಿದ್ದ ಈ ಚಿತ್ರ ಹೇಳಿಕೊಳ್ಳುವಂಥಾ ಗೆಲುವನ್ನೇನೂ ದಾಖಲಿಸಿಲ್ಲ. ಆದರೆ ಈ ಚಿತ್ರದ ಮೂಲಕ ಬಾಲಿವುಡ್ ಮಂದಿ ಖರ್ಚಿಲ್ಲದೆ ಪ್ರಚಾರ ನಡಸುವುದಕ್ಕೆ ಹೊಸಾ ರೂಟು ಕಂಡುಕೊಂಡಿರೋದಂತೂ ಸತ್ಯ!

ಮಾಮೂಲಾಗಿ ಒಂದು ಚಿತ್ರದ ಪ್ರಚಾರಕ್ಕೆ ಅದರ ಒಟ್ಟಾರೆ ಬಜೆಟ್ಟಿಗೆ ಸರಿಸಮನಾದ ಕಾಸು ಖರ್ಚು ಮಾಡಬೇಕಾಗುತ್ತೆ. ಆದರೆ ಪದ್ಮಾವತಿ ಮುಂತಾದ ರಿಯಲಿಸ್ಟಿಕ್ ಬೇಸಿನ ಚಿತರ್ರಗಳನ್ನು ಮಾಡಿ ಅದರ ಬಗ್ಗೆ ಒಂದು ಗುಂಪು ಕೆರಳುವಂಥಾ ಸನ್ನಿವೇಶಗಳನ್ನು ಸೃಷ್ಟಿಸಿ ಬಿಟ್ಟರೆ ಪ್ರಚಾರವೆಂಬುದು ಹೋದಲ್ಲಿ ಬಂದಲ್ಲಿ ಹಿಂಬಾಲಿಸಿಕೊಂಡು ಬರುತ್ತದೆ. ಇಂಥಾದ್ದೇ ಒಂದು ಫಾರ್ಮುಲಾವನ್ನು ಕಂಗನಾ ರನೌತ್ ಮುಖ್ಯ ಭೂಮಿಕೆಯಲ್ಲಿರೋ ಮಣಿಕರ್ಣಿಕ ಎಂಬ ಹೆಸರಿನ ಚಿತ್ರವೂ ಅನುಸರಿಸಲು ಮುಂದಾಗಿದೆಯಾ ಎಂಬ ಅನುಮಾನ ಪ್ರೇಕ್ಷಕರ ವಲಯದಲ್ಲಿ ದಟ್ಟವಾಗಿದೆ.

ಜೀ ಸ್ಟುಡಿಯೋಸ್ ನಿರ್ಮಾಣ ಮಾಡುತ್ತಿರುವ, ಕ್ರಿಶ್ ನಿರ್ದೇಶನದ ಮಣಿಕರ್ಣಿಕಾ ದಿ ಕ್ವೀನ್ ಆಫ್ ಝಾನ್ಸಿ ಎಂಬ ಸಬ್ ಟೈಟಲ್ ಹೊಂದಿದೆ. ಅಂದಹಾಗೆ ಇದು ವೀರ ವನಿತೆ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಜೀವನಾಧಾರಿತವಾದ ಸಿನಿಮಾ. ಇದಕ್ಕೆ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಕಳೆದ ವರ್ಷವೇ ಆರಂಭವಾಗಿದ್ದ ಈ ಚಿತ್ರ ಈ ವರ್ಷ ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಇದೀಗ ಚಿತ್ರ ತಂಡ ಕಂಗನಾ ರನೌತ್ ಝಾನ್ಸಿ ರಾಣಿ ಪಾತ್ರದಲ್ಲಿರೋ ಸ್ಟಿಲ್ಲುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುತ್ತಾ, ಅದರ ಹಿಂದೆ ನಾನಾ ನೆಗೆಟಿವ್ ಸುದ್ದಿಗಳನ್ನು ಹಬ್ಬಿಸುತ್ತಾ ವಿವಾದ ಎಬ್ಬಿಸಲು ಹೊಂಚು ಹಾಕುತ್ತಿದೆ ಎಂಬ ಆರೋಪ ಬಾಲಿವುಡ್ ಕಡೆಯಿಂದಲೇ ಕೇಳಿ ಬರುತ್ತಿದೆ. ಸದ್ಯಕ್ಕೆ ಝಾನ್ಸಿ ರಾಣಿ ಲುಕ್ಕಿನಲ್ಲಿರೋ ಕಂಗನಾ ಫೋಟೋಗಳು ವೈರಲ್ ಆಗಿವೆಯೇ ವಿನಃ ವಿವಾದದ ವೈರಸ್ ಹುಟ್ಟಿಕೊಂಡಿಲ್ಲ. ಆದರೆ ವಿವಾದ ಹುಟ್ಟದೆ ಪ್ರಚಾರ ಗಿಟ್ಟುವುದಿಲ್ಲವಲ್ಲಾ? ಅದಕ್ಕೆಂದೇ ಚಿತ್ರ ತಂಡ ನಾನಾ ದಾರಿ ಹುಡುಕುತ್ತಿರುವಂತಿದೆ!

Leave a Reply

Your email address will not be published. Required fields are marked *


CAPTCHA Image
Reload Image