One N Only Exclusive Cine Portal

ಕನ್ನಡಿಗರಿಗೆ ಕನ್ನಡ ಚಿತ್ರಗಳನ್ನು ಗೆಲ್ಲಿಸೋ ತಾಕತ್ತಿಲ್ಲವೇ?

ಬೇರೆ ಭಾಷೆಗಳ ಚಿತ್ರಗಳ ಕಥೆ, ಶ್ರೀಮಂತಿಕೆಗಳನ್ನು ಕನ್ನಡ ಚಿತ್ರಗಳ ಜೊತೆ ಹೋಲಿಸಿ ಕಿಂಡಲ್ ಮಾಡುವವರು ಒಂದೆಡೆಯಾದರೆ, ಕನ್ನಡ ಚಿತ್ರಗಳನ್ನು ಉದ್ಧಾರ ಮಾಡಲೆಂದೇ ಹುಟ್ಟಿಕೊಂಡವರಂತೆ ಪೋಸು ಕೊಡುವ ಆನ್‌ಲೈನ್ ವೀರರು ಮತ್ತೊಂದು ಕಡೆ. ಮಾತೆತ್ತಿದರೆ ಕನ್ನಡ ಅನ್ನುವವರ ಸಂಖ್ಯೆ ಅತಿಯಾಗಿದ್ದರೂ ಒಂದು ಚೆಂದದ ಚಿತ್ರವನ್ನು ಒಗ್ಗಟ್ಟಾಗಿ ಗೆಲ್ಲಿಸಿಕೊಳ್ಳಲು ಯಾಕೆ ಸಾಧ್ಯವಾಗೋದಿಲ್ಲ? ಕನ್ನಡಿಗರಿಗೆ ಒಳ್ಳೆ ಚಿತ್ರವನ್ನು ಗೆಲ್ಲಿಸೋ ತಾಕತ್ತಿಲ್ಲವಾ? ಕನ್ನಡಿಗರ ಕನ್ನಡ ಪ್ರೇಮ ಏನಿದ್ದರೂ ಲೈಕು, ಕಮೆಂಟುಗಳಿಗಷ್ಟೇ ಸೀಮಿತವಾ? ಇಂಥಾ ಪ್ರಶ್ನೆಗಳನ್ನು ಹುಟ್ಟು ಹಾಕಿರುವುದು ರಾಘು ಶಿವಮೊಗ್ಗ ನಿರ್ದೇಶನದ ಚೂರಿಕಟ್ಟೆ ಮತ್ತು ರಾಜು ಕನ್ನಡ ಮೀಡಿಯಂ ನಂಥ ಚಿತ್ರಗಳು!

ರಾಘು ನಿರ್ದೇಶನದ ಈ ಚಿತ್ರ ಆರಂಭದಲ್ಲೇ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಬಿಡುಗಡೆಯಾದ ನಂತರವೂ ಈ ಚಿತ್ರದ ಬಗ್ಗೆ ಕೇಳಿ ಬರುತ್ತಿರೋದು ಬರೀ ಮೆಚ್ಚುಗೆಯ ಮಾತುಗಳೇ. ಒಂದು ಅಪ್ಪಟ ನೆಲದ ಸೊಗಡಿನ ಕಥೆಯನ್ನು ಸೊಗಸಾಗಿ ಕಟ್ಟಿಕೊಟ್ಟಿರೋ ಚೂರಿಕಟ್ಟೆ ಚಿತ್ರ ಎಲ್ಲಾ ವರ್ಗಗಳ ಪ್ರೇಕ್ಷಕರನ್ನೂ ಮೆಚ್ಚಿಸಿದೆ. ಮಾಧ್ಯಮಗಳೂ ಕೂಡಾ ಈ ಚಿತ್ರವನ್ನು ಕೊಂಡಾಡಿವೆ. ಮಾಮೂಲಿ ಫಾರ್ಮುಲಾದ ಪ್ರಕಾರ ನೋಡ ಹೋದರೆ ಈ ಚಿತ್ರವೀಗ ಪ್ರತೀ ಚಿತ್ರಮಂದಿರಗಳಲ್ಲಿಯೂ ಹೌಸ್‌ಫುಲ್ ಪ್ರದರ್ಶನ ಕಾಣ ಬೇಕಿತ್ತು. ದುರಂತವೆಂದರೆ, ಇಷ್ಟೊಳ್ಳೆ ಚಿತ್ರ ನಿರೀಕ್ಷಿತ ಪ್ರಮಾಣದಲ್ಲಿ ಪ್ರೇಕ್ಷಕರಿಲ್ಲದೆ ಬಸವಳಿಯುತ್ತಿದೆ!


ಯಾಕೆ ಹೀಗಾಗುತ್ತಿದೆ ಅಂತೊಂದು ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ಬಹುಶಃ ಫೇಸ್‌ಬುಕ್ಕಲ್ಲಿ ಈ ಚಿತ್ರದ ವಿಚಾರವಾಗಿ ಮಾತಾಡಿದವರು ಲೈಕು ಒತ್ತಿದವರೆಲ್ಲ ಒಂದೊಂದು ಸಲ ಥೇಟರುಗಳತ್ತ ಹೋಗಿದ್ದರೂ ಇಂಥಾ ಸ್ಥಿತಿ ಬರುತ್ತಿರಲಿಲ್ಲವೇನೋ. ಈ ಆನ್‌ಲೈನ್‌ನಲ್ಲಿ ಕೆಲವರು ಪುಣ್ಯಾತ್ಮರಿದ್ದಾರೆ. ಸಣ್ಣ ಪುಟ್ಟ ವಿಚಾರಗಳಿಗೂ ಕನ್ನಡೋದ್ಧಾರಕ್ಕೆಂದೇ ಹುಟ್ಟಿದವರಂತೆ ಎಗರಾಡುತ್ತಾ, ಭೀಕರ ಕನ್ನಡದಲ್ಲಿ ಅದೇನೇನೋ ಒದರಾಡುತ್ತಾ ಯುದ್ಧಕ್ಕೆ ನಿಂತು ಬಿಡುತ್ತಾರೆ. ಅಂಥವರ ಕನ್ನಡ ಬಳಕೆ ನೋಡಿದರೇನೇ ಅಂಥವರ ವ್ಯಕ್ತಿತ್ವವೂ ಗೊತ್ತಾಗಿ ಹೋಗುತ್ತದೆ. ವಿಷಯ ಅದಲ್ಲ. ಇಂಥಾ ಆನ್‌ಲೈನ್ ಕನ್ನಡ ವೀರರು ಚೂರಿಕಟ್ಟೆಯಂಥಾ ಚೆಂದದ ಚಿತ್ರ ಬಸವಳಿದಿದ್ದರೂ ಯಾಕೆ ಸುಮ್ಮನಿದ್ದಾರೆ. ಕನ್ನಡದ ಪ್ರೇಕ್ಷಕರು ಅಪ್ಪಟ ಸ್ವಮೇಕ್ ಚಿತ್ರಗಳನ್ನೇ ಯಾಕೆ ಈ ಪರಿಯಾಗಿ ಬಸವಳಿಯುವಂತೆ ಮಾಡುತ್ತಿದ್ದಾರೆಂಬ ಪ್ರಶ್ನೆ ಸಹಜವಾಗಿಯೇ ಎಲ್ಲರನ್ನೂ ಕಾಡುತ್ತದೆ.


ಖಂಡಿತಾ ಚೂರಿಕಟ್ಟೆಯಂಥಾ ಸಿನಿಮಾಗಳು ಸೋಲಬಾರದು. ಕನ್ನಡಿಗರು ಇಂಥಾ ಚಿತ್ರಗಳನ್ನು ಯಾವ ಕಾರಣಕ್ಕೂ ಸೋಲಲು ಬಿಡಬಾರದು. ಈವತ್ತು ಪರಭಾಷಾ ಚಿತ್ರಗಳ ಹಾವಳಿ ಮುಂತಾದ ಬಗ್ಗೆ ಕೆಲಸಕ್ಕೆ ಬಾರದ ಚರ್ಚೆ ನಡೆಸುತ್ತಾ ಸಮಯ ಹಾಳು ಮಾಡಿಕೊಳ್ಳುತ್ತಿದ್ದಾರಲ್ಲಾ ಕೆಲ ಮಂದಿ? ಅದರ ಬದಲಾಗಿ ಒಂದು ನಮ್ಮತನದ ಚಿತ್ರ ಬಿಡುಗಡೆಯಾದಾಗ ಅದನ್ನು ನೋಡುವಂತೆ ಪ್ರೇರೇಪಿಸುವಂಥಾ ಪ್ರಾಮಾಣಿಕ ಪ್ರಯತ್ನಗಳ ಅವಶ್ಯಕತೆ ಈಗ ಹೆಚ್ಚಿದೆ. ಚೂರು ಮನಸು ಮಾಡಿದರೂ ಆನ್‌ಲೈನ್ ಎಂಬುದು ಇಂಥಾದ್ದೊಂದು ಮನ್ವಂತರದ ಮಾಧ್ಯಮವಾಗಿ ಹೊರ ಹೊಮ್ಮೋದರಲ್ಲಿ ಎರಡು ಮಾತಿಲ್ಲ.


ಬೇರೆ ಭಾಷೆಗಳ ಅದೆಷ್ಟೇ ದೊಡ್ಡ ಸಿನಿಮಾ ಬಿಡುಗಡೆಯಾದಾಗಲೂ ಅದಕ್ಕೆ ಎದುರಾಗಿ ಬಿಡುಗಡೆಯಾದ ಕನ್ನಡ ಚಿತ್ರಗಳನ್ನೇ ನೋಡುವಂತಾದರೆ ಪರಭಾಷಾ ಚಿತ್ರಗಳ ಹಾವಳಿ ದೊಡ್ಡ ವಿಚಾರ ಅನ್ನಿಸೋದೇ ಇಲ್ಲ. ಆದರೆ ಈವತ್ತಿಗೆ ಚೂರಿಕಟ್ಟೆಯಂಥಾ ಸದಭಿರುಚಿಯ ಚಿತ್ರವೊಂದು ಎದುರಿಸುತ್ತಿರೋ ಸಮಸ್ಯೆಗಳನ್ನು ನೋಡಿದರೆ ಕನ್ನಡಿಗರಲ್ಲಿ ಅಷ್ಟು ಬೇಗನೆ ಕನ್ನಡ ಚಿತ್ರಗಳ ಪರವಾದ ಮನಸ್ಥಿತಿ ರೂಪುಗೊಳ್ಳೋದು ಸಾಧ್ಯವಿಲ್ಲವೇನೋ ಎಂಬ ಸಂಕಟವೂ ಕಾಡುತ್ತದೆ. ಈ ಹಿಂದೆ ಹುಲಿರಾಯ, ಕಾಲೇಜ್ ಕುಮಾರ್, ಕೆಂಪಿರ್ವೆ ಸೇರಿದಂತೆ ಅನೇಕ ಚಿತ್ರಗಳು ಇಂಥಾದ್ದೇ ಅಭಿಮಾನ ಶೂನ್ಯತೆಗೆ ಬಲಿಯಾಗಿದ್ದವು.


ಆದರೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರೋ ಚೂರಿಕಟ್ಟೆಯನ್ನು ಅಂಥಾದ್ದೊಂದು ಕಂಟಕದಿಂದ ಪಾರು ಮಾಡೋ ಕೆಲಸ ಕನ್ನಡಿಗರ ಕಡೆಯಿಂದ ಆಗಬೇಕಿದೆ. ಇದಕ್ಕಾಗಿ ಬೀದಿಗಿಳಿಯಬೇಕಿಲ್ಲ, ಬಾಯಿ ಬಡಿದುಕೊಳ್ಳಬೇಕಿಲ್ಲ. ಥೇಟರಿಗೆ ಹೋಗಿ ಕಾಸು ಕೊಟ್ಟು ಚಿತ್ರ ನೋಡುವಂಥಾ ಮನಸ್ಥಿತಿ ರೂಢಿಸಿಕೊಂಡರೆ ಅಷ್ಟೇ ಸಾಕು!


ಇದರ ಜೊತೆಗೆ ಅತ್ಯುತ್ತಮ ಪ್ರದರ್ಶನ ಕಾಣುತ್ತಿರುವ ರಾಜು ಕನ್ನಡ ಮೀಡಿಯಂ ಚಿತ್ರವನ್ನು ಪದ್ಮಾವತ್, ಭಾಗಮತಿ ಸಿನಿಮಾಗಳ ಆಗಮನದಿಂದ ಮಲ್ಟಿಪ್ಲೆಕ್ಸ್ ಗಳು ಶೋ ಕಡಿಮೆ ಮಾಡಿ ಅನ್ಯಾನವೆಸಗಿವೆ. ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಸಿನಿಮಾಗೆ ಈ ರೀತಿಯ ವಂಚನೆ ನಡೆದರೂ ವಾಣಿಜ್ಯ ಮಂಡಳಿಯಾಗಲಿ, ಕನ್ನಡದ ಹೆಸರಲ್ಲಿ ಶೋ ಕೊಡೋ ಜನರಾಗಲಿ ಚಕಾರವೆತ್ತಿಲ್ಲ. ಸುದೀಪ್ ಅಭಿಮಾನಿಗಳು ಹೋಗಿ ಮಲ್ಟಿಪ್ಲೆಕ್ಸ್ ಗಳ ಬಾಗಿಲಲ್ಲಿ ಧರಣಿ ಕೂತಿದ್ದರೆ ಬಹುಶಃ ರಾಜುಗೆ ಮೋಸವಾಗುತ್ತಿರಲಿಲ್ಲವೇನೋ.

Leave a Reply

Your email address will not be published. Required fields are marked *


CAPTCHA Image
Reload Image