ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿರೋ ವಿಚಾರ ಒಂದಷ್ಟು ದಿನಗಳಿಂದ ಸುದ್ದಿಯಲ್ಲಿದೆ. ಸುದೀಪ್ ಸೇರಿದಂತೆ ಒಂದಷ್ಟು ಮಂದಿ ಕೈಲಾದ ಸಹಾಯ ಮಾಡಿದ್ದೂ ಆಗಿದೆ. ಹೀಗೆಯೇ ಕೈಯೆಲ್ಲ ಬರಿದಾಗಿಸಿಕೊಂಡು ಹಾಸಿಗೆ ಹಿಡಿದ ವಿಜಯಲಕ್ಷ್ಮಿಯ ಸ್ಥಿತಿ ಕಂಡು ಮರುಗಿ ಸಹಾಯ ಮಾಡಿದ್ದವರು ರಮ್ಯ ಚೈತ್ರಕಾಲ ಚಿತ್ರದ ನಾಯಕನಾಗಿದ್ದ ರವಿಪ್ರಕಾಶ್ (ರಾಮ್). ಇದೀಗ ಹಾಗೆ ಸಹಾಯ ಮಾಡಿಕೊಂಡಿದ್ದ ವಿಜಯಲಕ್ಷ್ಮಿ ಮತ್ತಾಕೆಯ ಅಕ್ಕ ಉಷಾ ದೇವಿ ಉಲ್ಟಾ ಹೊಡೆದ ಪರಿ ಕಂಡು ರವಿಪ್ರಕಾಶ್ ಧ್ವನಿಯೆಲ್ಲ ಉಡುಗಿಹೋಗುವಷ್ಟರ ಮಟ್ಟಿಗೆ ಕಂಗಾಲಾಗಿ ಹೋಗಿದ್ದಾರೆ!

ಈವತ್ತು ಕೆಲ ವಾಹಿನಿಗಳಲ್ಲಿ ರಮ್ಯಚೈತ್ರ ಕಾಲ ಹೀರೋ ರವಿಪ್ರಕಾಶ್ ವಿರುದ್ಧ ಲೈಂಗಿಕ ಕಿರುಕುಳದಂಥಾ ಗುರುತರ ಆರೋಪದ ವರದಿಗಳು ಪ್ರಸಾರವಾಗುತ್ತಿವೆ. ವ್ಯಕ್ತಿಗತವಾಗಿ ಶುದ್ಧವಾದ ನಡವಳಿಕೆ ಹೊಂದಿರೋ ರವಿಪ್ರಕಾಶ್ ವಿರುದ್ಧ ಇಂಥಾದ್ದೊಂದು ಆರೋಪ ಕೇಳಿ ಬಂದಿರೋದರಿಂದ ಆಪ್ತ ವಲಯವೂ ಶಾಕ್ ನಲ್ಲಿದೆ. ಹಾಗಾದರೆ, ನಿಜಕ್ಕೂ ನಡೆದದ್ದೇನೆಂಬ ಬಗ್ಗೆ ತಲಾಶಿಗಿಳಿದರೆ, ವಿಜಯ ಲಕ್ಷ್ಮಿಯ ಒಂದಿಡೀ ಫ್ಯಾಮಿಲಿಗೇ ಮಳ್ಳು ಹಿಡಿದಂಥಾ, ಅವರೆಲ್ಲರೂ ಸೈಕೋಗಳಾಗಿಬಿಟ್ಟಿದ್ದಾರಾ ಎಂಬ ಅನುಮಾನ ಮೂಡುವಂಥಾ, ಒಟ್ಟಾರೆ ಈ ಆಸ್ಪತ್ರೆ ಎಪಿಸೋಡುಗಳೇ ಡ್ರಾಮಾ ಇದ್ದಿರಬಹುದಾ ಎಂಬ ಅನುಮಾನ ಮೂಡುವಂಥಾ ಸರಣಿ ಸನ್ನಿವೇಶಗಳೇ ಬಿಚ್ಚಿಕೊಳ್ಳಲಾರಂಭಿಸುತ್ತವೆ!

ವಿಜಯಲಕ್ಷ್ಮಿ ಅನಾರೋಗ್ಯದಿಂದ ಹಾಸಿಗೆ ಹಿಡಿದು ಸಹಾಯಕ್ಕಾಗಿ ಅಂಗಲಾಚೋ ಸ್ಥಿತಿ ತಲುಪಿರೋದನ್ನು ಕಂಡು ಎಲ್ಲರೂ ಮಮ್ಮಲ ಮರುಗಿದ್ದರು. ಒಂದು ಕಾಲಕ್ಕೆ ನಟಿಯಾಗಿ ಮೆರೆದಿದ್ದ ವಿಜಯಲಕ್ಷ್ಮಿ ಇಂಥಾ ಸ್ಥಿತಿ ತಲುಪಿದ್ದಾರೆಂದರೆ ಯಾರಿಗೆ ತಾನೇ ಬೇಸರವಾಗದಿರಲು ಸಾಧ್ಯ? ಇದನ್ನು ಕಂಡು ಬೇಸರಗೊಂಡ ಕಿಚ್ಚಾ ಸುದೀಪ್ ಕೂಡಾ ಒಂದು ಲಕ್ಷ ರೂಪಾಯಿಯಷ್ಟು ಸಹಾಯ ಮಾಡಿದ್ದರು. ಇದನ್ನು ಕಂಡು ತಮ್ಮ ಸಮಕಾಲೀನ ನಟಿಗೆ ತಾವೂ ಒಂದು ಲಕ್ಷ ಸಹಾಯ ಮಾಡಿದವರು ರವಿಪ್ರಕಾಶ್.ಹಾಗೆ ವಿಜಯಲಕ್ಷ್ಮಿಯ ಕಣ್ಣೀರಿಗೆ ಮಿಡಿದು ಒಂದು ಲಕ್ಷ ಕೊಟ್ಟ ಘಳಿಗೆಯಲ್ಲಿಯೇ ತಮ್ಮ ನಸೀಬೂ ಖರಾಬಾಗಿ ಬಿಡುತ್ತದೆ ಎಂಬ ಸಣ್ಣ ಕಲ್ಪನೆಯೂ ರವಿಪ್ರಕಾಶ್‌ಗಿರಲಿಲ್ಲ. ಅಷ್ಟಕ್ಕೂ ಸಹಾಯ ಮಾಡಿಸಿಕೊಂಡು ಉಲ್ಟಾ ಹೊಡೆಯೋ ಈ ಥರದ ದುಷ್ಟತನವನ್ನು ಯಾರಾದರೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸಹಾಯ ಮಾಡಿದ್ದಕ್ಕಾಗಿ ವಿಜಯಲಕ್ಷ್ಮಿಯ ಅಕ್ಕ ಉಷಾದೇವಿಯೇ ರವಿಪ್ರಕಾಶ್‌ಗೆ ಧನ್ಯವಾದ ಹೇಳಿದ್ದಳು. ನೀವೇ ದೇವರು ಎಂಬರ್ಥದಲ್ಲಿ ಮೆಸೇಜು ಬಿಟ್ಟು ಕೃತಜ್ಞತೆ ಪ್ರದರ್ಶಿಸಿದ್ದಳು. ಅದಾಗಿ ಒಂದೆರಡು ದಿನಗಳಲ್ಲಿಯೇ ವಿಜಯಲಕ್ಷ್ಮಿಗೆ ಹಾರ್ಟ್ ಪ್ರಾಬ್ಲಂ ಶುರುವಾಗಿತ್ತಲ್ಲಾ? ಅದಕ್ಕಾಗಿ ಜಯದೇವ ಆಸ್ಪತ್ರೆಗೂ ರವಿಪ್ರಕಾಶ್ ಅವರನ್ನು ಉಷಾ ದೇವಿ ಕರೆದಿದ್ದಳಂತೆ.

ಹೀಗೆ ಸಹಾಯ ಮಾಡಿ ಆಸ್ಪತ್ರೆಗೇ ತಮ್ಮ ತಂಗಿಯೊಂದಿಗೆ ಹೋಗಿ ಬೆನ್ನೆಲುಬಾಗಿ ನಿಂತಿದ್ದವರು ರವಿಪ್ರಕಾಶ್. ವಿಜಯಲಕ್ಷ್ಮಿ ಫ್ಯಾಮಿಲಿ ಯಾವ ಸ್ಥಿತಿಯಲ್ಲಿತ್ತೆಂದರೆ, ಹಾಕಿಕೊಳ್ಳಲು ಸರಿಯಾದ ಬಟ್ಟೆಯಿರಲಿಲ್ಲ. ಏನಾದರೂ ಬೇಯಿಸಿಕೊಳ್ಳಲು ಪಾತ್ರೆಗಳೂ ಇರಲಿಲ್ಲ. ಅದೆಲ್ಲವನ್ನೂ ಪೂರೈಸಿದ ರವಿಪ್ರಕಾಶ್ ಅವರನ್ನೇ ಜಯದೇವ ಆಸ್ಪತ್ರೆಯ ಡಾಕ್ಟರಿಗೆ ಫ್ಯಾಮಿಲಿ ಮೆಂಬರ್ ಎಂದೇ ಉಷಾದೇವಿ ಪರಿಚಯ ಮಾಡಿಸಿದ್ದಳಂತೆ.ಇಂಥಾ ಉಷಾದೇವಿ ಏಕಾಏಕಿ ಫೋನು ಮಾಡಿದವಳೇ ನಿಮ್ಮ ಕಡೆಯಿಂದ ಸುಖಾ ಸುಮ್ಮನೆ ಒತ್ತಡ ಉಂಟಾಗ್ತಿದೆ ಅಂತೆಲ್ಲ ಡ್ರಾಮಾ ಶುರುಮಾಡಿದಾಗ ರವಿಪ್ರಕಾಶ್ ನಿಜಕ್ಕೂ ಕಂಗಾಲಾಗಿದ್ದಾರೆ. ಈ ವಿಜಯಲಕ್ಷ್ಮಿಯ ಇಡೀ ಕುಟುಂಬಕ್ಕೇ ಹುಚ್ಚು ಹಿಡಿದಿದೆಯೋ ಆ ಭಗವಂತನೇ ಬಲ್ಲ. ಉಷಾ ದೇವಿ ಮತ್ತು ವಿಜಯಲಕ್ಷ್ಮಿ ಕೂಡಾ ರವಿಪ್ರಕಾಶ್ ತಮಗೆ ವಿನಾಕಾರಣ ಒತ್ತಡ ಕೊಡುತ್ತಿದ್ದಾರೆ ಅಂತೆಲ್ಲ ಒದರಿಕೊಂಡಿದ್ದಾರೆ. ಅದಾದ ಕೆಲವೇ ಘಂಟೆಗಳಲ್ಲಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಿಂದಲೂ ಕರೆ ಬಂದಿದೆ. ತಕ್ಷಣವೇ ಠಾಣೆಗೆ ಹೋದ ರವಿಪ್ರಕಾಶ್ ಎಲ್ಲ ದಾಖಲೆಗಳನ್ನೂ ಅಧಿಕಾರಿಗಳ ಮುಂದಿಟ್ಟು ಇರೋ ವಿಚಾರ ತಿಳಿಸಿ ಬಂದಿದ್ದಾರೆ. ಆದರೆ ಇದೇ ಫ್ಯಾಮಿಲಿ ಆಸ್ಪತ್ರೆಯಲ್ಲಿ ತಮಗೊಂದು ಮನೆ ಮಾಡಿ ಕೊಡಿ ಅಂತ ಬೇಲಾಡಿತ್ತು. ಅವರಿಗೆ ರವಿಪ್ರಕಾಶ್ ಸ್ವತಃ ಬಟ್ಟೆಬರೆಗಳನ್ನು, ಪಾತ್ರೆ ಪಗಡೆಗಳನ್ನು ಖರೀದಿಸಿ ಕೊಟ್ಟಿದ್ದರು. ಅಷ್ಟಾಗಿಯೂ ರವಿಪ್ರಕಾಶ್ ವಿರುದ್ಧ ಆರೋಪ ಮಾಡುತ್ತಾರೆಂದರೆ ಈ ಫ್ಯಾಮಿಲಿಯ ತಲೆ ನೆಟ್ಟಗಿದೆ ಅನ್ನೋದಕ್ಕೆ ಯಾವ ಪುರಾವೆಯೂ ಸಿಗುವಂತಿಲ್ಲ.

ಈಗ ಮಾದ್ಯಮಗಳು ಹೇಳುತ್ತಿರುವಂತೆ ಯಾವ ಲೈಂಗಿಕ ಕಿರುಕುಳವೂ ನಡೆದಿಲ್ಲ. ಆಸ್ಪತ್ರೆಯಲ್ಲಿ ಅಂಥಾ ಸ್ಥಿತಿಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡವರ ಮೇಲೆ ಅದೆಂಥಾ ಲೈಂಗಿಕ ಕಿರುಕುಳ ನಡೆಯಲು ಸಾಧ್ಯ? ಅಷ್ಟಕ್ಕೂ ಈಗ ವಿಜಯಲಕ್ಷ್ಮಿ ನಡೆದುಕೊಳ್ಳುತ್ತಿರೋ ರೀತಿಯೇ ಎಲ್ಲರಿಗೂ ಗುಮಾನಿ ಹುಟ್ಟಿಸಿರೋದಂತೂ ಸತ್ಯ. ಈಕೆಗೆ ಯಾವ ಕಾಯಿಲೆ ಇದೆ ಅಂತಲೂ ಸ್ಪಷ್ಟವಿಲ್ಲ. ಒಂದು ಮೂಲದ ಪ್ರಕಾರ ಈಕೆಗೆ ಸರ್ವೈಕಲ್ ಸ್ಯಾಂಡಿಲೈಸಿಸ್ ಅನ್ನೋ ಸಮಸ್ಯೆ ಇದೆ. ಅದೇನೂ ತೀರಾ ಗಂಭೀರವಾದುದಲ್ಲ. ಆದರೂ ಈ ಪಾಟಿ ಡ್ರಾಮಾ ಮಾಡುತ್ತಿರೋದೇಕೆ? ಅಂಗಡಿ ಖಾಲಿ ಮಾಡಿ ತೆರೆಯೋ ಧಾಟಿಯಲ್ಲಿಯೇ ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಅಲೆಯುತ್ತಿರೋದಕ್ಕೆ ಏನು ಕಾರಣ?

ಸದ್ಯಕ್ಕೆ ವಿಜಯಲಕ್ಷ್ಮಿಯ ಪಟಾಲಮ್ಮು ಅಪೋಲೋ ಆಸ್ಪತ್ರೆಯಲ್ಲಿ ಠಿಕಾಣಿ ಹೂಡಿರೋ ಸುದ್ದಿ ಇದೆ. ವಿಜಯಲಕ್ಷ್ಮಿಯ ಸ್ಥಿತಿ ಕಂಡು ಆ ಬಗ್ಗೆ ವರದಿ ಮಾಡಿ ಸಹಾಯ ಮಾಡಿದ್ದ ಮಾಧ್ಯಮಗಳನ್ನೇ ಅಕ್ಕ ಉಷಾದೇವಿ ಬಾಯಿಗೆ ಬಂದಂತೆ ಬೈಯುತ್ತಿದ್ದಾಳೆ. ತಾವು ಮಲ್ಯ ಆಸ್ಪತ್ರೆಯಿಂದ ಟೆಂಟೆತ್ತಿದ್ದಕ್ಕೆ ಮಾಧ್ಯಮ ಮಂದಿ ಕೊಟ್ಟ ಟಾರ್ಚರ್ರೇ ಕಾರಣ ಎಂಬರ್ಥದಲ್ಲಿಯೂ ಈಕೆ ಮಾತಾಡಿದ್ದಾಳೆ. ಫಿಲಂ ಚೇಂಬರ್ ಮಂದಿಯ ವಿರುದ್ಧವೂ ನಾಲಗೆ ಹರಿಯಬಿಟ್ಟಿದ್ದಾಳೆ. ಇಂಥಾ ಮಾನಸಿಕ ಸ್ಥಿಮಿತ ಕಳೆದುಕೊಂಡವರು ಸಹಾಯ ಮಾಡಿದ ರವಿಪ್ರಕಾಶ್ ಮೇಲೆ ಮಾಡುತ್ತಿರೋ ಆರೋಪದಲ್ಲಿ ಯಾವ ಹುರುಳಿರಲು ಸಾಧ್ಯ?

Arun Kumar

ಯಜಮಾನಿಯ ಜಮಾನಾ-ಸುರೇಶಣ್ಣಾ ಇದು ಸರೀನಾ?

Previous article

ಗಿರ್ ಗಿಟ್ಲೆಗಾಗಿ ನಿರ್ದೇಶಕರು ಮಾಡಿದ್ದು ಆರು ವರ್ಷದ ವ್ರತ!

Next article

You may also like

Comments

Leave a reply

Your email address will not be published. Required fields are marked *