Connect with us

ಸಿನಿಮಾ ವಿಮರ್ಶೆ

ಕನ್ನಡಕ್ಕಾಗಿ ಒಂದನ್ನೊತ್ತಿದರೆ ಒತ್ತರಿಸಿಕೊಳ್ಳುತ್ತೆ ಪ್ರೇಮಬಾಧೆ!

Published

on

ಕನ್ನಡದಲ್ಲಿ ಎಂ.ಎ. ಮಾಡಿಕೊಂಡಿದ್ದ ಹುಡುಗ ಊರುಬಿಟ್ಟು ಬೆಂಗಳೂರಿಗೆ ಬಂದು ಸೇರೋದು ಹೋಟೇಲ್ ಸಪ್ಲಯರ್ ಕೆಲಸಕ್ಕೆ. ಅಲ್ಲಿ ಆತನ ಕನ್ನಡಜ್ಞಾನ, ಪ್ರತಿಭೆಯನ್ನು ಕಂಡ ಪುರಾತನ ಪತ್ರಿಕೆಯ ಸಂಪಾದಕರೊಬ್ಬರು ಕರೆಸಿಕೊಂಡು ಲೇಖನ ಬರೆಯೋ ಕೆಲಸ ಕೊಡುತ್ತಾರೆ. ಪ್ರೀತಿ ಬೆಸೆದುಕೊಳ್ಳಲು ಬರವಣಿಗೆಯೇ ಕಾರಣವಾಗುತ್ತದೆ. ಹುಡುಗಾಟಿಕೆಯಲ್ಲಿ ಆರಂಭವಾದ ಲವ್ವು ಗಾಢವಾಗುತ್ತಾ ಸಾಗುತ್ತದೆ. ಎಲ್ಲವೂ ದಕ್ಕಿತಲ್ಲಾ ಅಂದುಕೊಳ್ಳೋಹೊತ್ತಿಗೆ ಎದುರಾಗೋ ಭಯಂಕರ ಟ್ವಿಸ್ಟೆಂದರೆ ಮೊಬೈಲು ಆಫಾಗಿ ಬಿಡೋದು!

ನಿರೀಕ್ಷೆಯೇ ಇಲ್ಲದೆ ಸಿಕ್ಕವಳು ಕಾರಣವೇ ಇಲ್ಲದೆ, ಸುಳಿವೂ ನೀಡದೇ ಕಳೆದುಹೋದಾಗ ಬದುಕೇ ಕುಸಿದುಹೋದಂತೆ ವಿಲವಿಲ ಒದ್ದಾಡಿಬಿಡುತ್ತಾನೆ ಕವಿಹೃದಯಿ ಹುಡುಗ. ಬಾಲ್ಯದ ಗೆಳೆಯರಿಬ್ಬರು ಅಚಾನಕ್ಕಾಗಿ ಸಿಕ್ಕು ಕಾರಿನಲ್ಲಿ ಪಯಣಿಸುತ್ತಾ, ತಮ್ಮ ಫ್ಲಾಶ್ ಬ್ಯಾಕುಗಳನ್ನು ಹೇಳಿಕೊಳ್ಳುತ್ತಾ ಕಥೆಯನ್ನೂ ಮುಂದುಮುಂದಕ್ಕೆ ಸಾಗಿಸುತ್ತಾರೆ. ಶಠಮರ್ಷಣ ಅವಿನಾಶ್ ಮತ್ತು ಚಿಕ್ಕಣ್ಣ ಈ ಸ್ನೇಹಿತರು. ಒಬ್ಬನದ್ದು ಪ್ರೌಢತೆಯ ಪ್ರೀತಿಯಾದರೆ, ಮತ್ತೊಬ್ಬನದ್ದು ಹದಿಹರೆಯದ ಲವ್ವು. ಇಬ್ಬರ ಹೃದಯವನ್ನೂ ಒತ್ತೊತ್ತಿ ಸೊರಗಿಸಿದ ಪ್ರೀತಿಯ ಮೂಲ ಯಾವುದು ಅನ್ನೋದು ಕೊನೆಗೆ ಅವರವರಿಗೇ ಗೊತ್ತಾಗುತ್ತದೆ!

ಹೊಸ ನಿರೂಪಣೆಯ ಈ ಸಿನಿಮಾವನ್ನು ನಿರ್ದೇಶಕ ಕುಶಾಲ್ ಒಂಚೂರು ಗಂಭೀರವಾಗಿ ತೆಗೆದುಕೊಂಡಿದ್ದರೆ ಬೇರೆ ರೇಂಜಿನಲ್ಲಿ ಕಟ್ಟಿಕೊಡಬಹುದಿತ್ತು. ಬಹುಶಃ ಚಿತ್ರೀಕರಣದ ಹಂತದಲ್ಲಿ ಒತ್ತರಿಸಿಕೊಂಡಿದ್ದ ಆರ್ಥಿಕ ಸಂಕಷ್ಟಗಳು ಸಿನಿಮಾವನ್ನು ಅಲ್ಲಲ್ಲಿ ಬಾಧಿಸಿಂತೆ ಕಾಣುತ್ತದೆ. ಒಂದಷ್ಟು ಮಿಸ್ಟೇಕುಗಳು ಸಿನಿಮಾದ ಒಟ್ಟಂದಕ್ಕೆ ಅಡ್ಡಿಯಾಗಿವೆ. ಪತ್ರಿಕಾ ಕಛೇರಿಯಲ್ಲಿ ಕೆಲಸಕ್ಕೆ ಸೇರಿದ ದಿನದಿಂದ ಸಂಬಳವೇ ಕಾಣದ ಹುಡುಗ ಪ್ರೀತಿ ಕೈಬಿಟ್ಟುಹೋದಾಗ ದಿನಗಟ್ಟಲೆ ಕುಡಿದು ತೂರಾಡಲು, ಸಂಬಳಕ್ಕೆ ಪ್ರತಿಯಾಗಿ ಸಿಕ್ಕ ಹಳೇ ಕಾರಿಗೆ ಪೆಟ್ರೋಲು ಹಾಕಿಸಲಾದರೂ ಕಾಸು ಎಲ್ಲಿಂದ ಬರಬೇಕು? ಚಿಕ್ಕಣ್ಣನ ಮೀಸೆ ಮೊಳೆಯದ ಕಾಲದ ಶಾಲಾದಿನಗಳನ್ನು ನೆನಪಿಸುವ ಫ್ಲಾಶ್‌ಬ್ಯಾಕ್ ಕಥೆಯಲ್ಲಿ ಆತನ ತಂದೆ ರಂಗಾಯಣ ರಘು ೨೦೧೭ರ ಫೆಬ್ರವರಿ ತಿಂಗಳ ‘ಕರ್ನಾಟಕ ವಿಕಾಸ ಪತ್ರಿಕೆಯನ್ನು ಯಾಕೆ ಹಿಡಿದು ನಿಲ್ಲುತ್ತಾರೆ? ಇಂಥ ತಪ್ಪುಗಳನ್ನು ಕಡೇಪಕ್ಷ ಎಡಿಟಿಂಗಿನಲ್ಲಾದರೂ ತಪ್ಪಿಸಬಹುದಿತ್ತು ಅನ್ನೋದನ್ನು ಬಿಟ್ಟೆರೆ, ‘ಕನ್ನಡಕ್ಕಾಗಿ ಒಂದನ್ನು ಒತ್ತಿ ಮಲೆನಾಡು ಮತ್ತು ಬೆಂಗಳೂರನ್ನು ಬೇರೆಯದ್ದೇ ರೀತಿಯಲ್ಲಿ ತೋರಿಸಿರುವ ಛಾಯಾಗ್ರಣದ ಕೌಶಲ್ಯ, ಸಹಜತೆಯೊಂದಿಗೆ ಸಣ್ಣದಾಗಿ ಬೆರೆತಿರುವ ನಾಟಕೀಯತೆ ಎಲ್ಲವೂ ನೋಡುಗರಿಗೆ ಹೊಸದೆನಿಸುತ್ತದೆ.

ಮುಖ್ಯವಾಗಿ ಕಮರ್ಷಿಯಲ್ ಫಾರ್ಮುಲಾಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ನಾಯಕನನ್ನು ಪುಸ್ತಕ ಪ್ರೇಮಿಯನ್ನಾಗಿ, ಅಕ್ಷರ ವ್ಯಾಮೋಹಿಯನ್ನಾಗಿ ಚಿತ್ರಿಸಿರುವುದು ನಿಜಕ್ಕೂ ಅಭಿನಂದನೀಯ. ಜೊತೆಗೆ ಇವತ್ತಿನ ಕಾಲದಲ್ಲಿ ಸಣ್ಣ ಮಟ್ಟದ ಪತ್ರಿಕೆಯೊಂದನ್ನು ಹೊರತರಬೇಕಾದರೆ ಏನೆಲ್ಲಾ ಸಮಸ್ಯೆ ಸವಾಲುಗಳನ್ನು ಎದುರಿಸಬೇಕು ಅನ್ನೋದನ್ನು ಸೂಚ್ಯವಾಗಿ ಹೇಳಲಾಗಿದೆ. ಮಾತಿನಲ್ಲೇ ಬೆಸೆದುಕೊಂಡಿರುವ ಹಾಸ್ಯ ಖುಷಿಕೊಡುತ್ತದೆ. ಜೀವದಂತಾ ಪ್ರೀತಿ ಕೈಬಿಟ್ಟುಹೋಗಿ, ನಿರ್ಜೀವ ಬದುಕು ಎದುರಾದಾಗ ಪ್ರೇಮಿಗಳು ಎದುರಿಸುವ ನೋವು ನಿಜಕ್ಕೂ ಗಾಢವಾಗಿ ಚಿತ್ರಿತಗೊಂಡಿದೆ.

‘ದಯವಿಟ್ಟು ಗಮನಿಸಿಯಲ್ಲಿ ನಾಲ್ಕು ಕತೆಯ ಒಂದು ಭಾಗದ ಕಥಾನಾಯಕನಾಗಿ ಕಾಣಿಸಿಕೊಂಡಿದ್ದ ಅವಿನಾಶ್‌ಗೆ ಇಲ್ಲಿ ಕೂಡಾ ಗಡ್ಡ ಅಡ್ಡವಿದ್ದರೂ ಚೆಂದಗೆ ನಟಿಸಿದ್ದಾರೆ. ಗಡ್ಡವಿಲ್ಲದ ದೃಶ್ಯಗಳಲ್ಲೂ ಚೆಂದಗೆ ಕಾಣುತ್ತಾರೆ. ಇಡೀ ಸಿನಿಮಾದಲ್ಲಿ ಅತಿ ಹೆಚ್ಚು ಮಜಾ ಕೊಡೋದು ಚಿಕ್ಕಣ್ಣನ ನಟನೆ ಮತ್ತು ನಾಯಕಿ ಕೃಷಿ ತಾಪಂಡಳ ಮಾದಕತೆ. ಚೆಡ್ಡಿ ತೊಟ್ಟರೂ, ಸೀರೆಯುಟ್ಟರೂ ತೆರೆಯಲ್ಲಿ ಇವಳದ್ದೇ ಸೆಳೆತ!
ಒಟ್ಟಾರೆ, ಒಮ್ಮೆಯಾದರೂ ಕನ್ನಡಕ್ಕಾಗಿ ಒಂದನ್ನು ಒತ್ತಬಹುದು!

Continue Reading
Advertisement
Click to comment

Leave a Reply

Your email address will not be published. Required fields are marked *

ಸಿನಿಮಾ ವಿಮರ್ಶೆ

ಆರೆಂಜ್: ಭರಪೂರ ಮನರಂಜನೆಯ ಫ್ಯಾಮಿಲಿ ಪ್ಯಾಕೇಜ್!

Published

on

ಲವ್ ಗುರು ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿರುವ ಆರೆಂಜ್ ಸಿನಿಮಾ ಇಂದು ತೆರೆಗೆ ಬಂದಿದೆ. ಪ್ರಶಾಂತ್ ರಾಜ್ ಈ ವರೆಗೆ ನಿರ್ದೇಶಿಸಿರುವ ಒಂದೊಂದು ಸಿನಿಮಾ ಕೂಡಾ ಭಿನ್ನ ಕಥಾವಸ್ತುಗಳನ್ನು ಒಳಗೊಂಡಿದೆ. ಒಂದೇ ಬಗೆಯ ಸಿನಿಮಾಗಳಿಗೆ ಪ್ರಶಾಂತ್ ರಾಜ್ ಯಾವತ್ತೂ ಜೋತುಬಿದ್ದವರಲ್ಲ. ಆರೆಂಜ್ ಕೂಡಾ ಅವರ ಈ ಹಿಂದಿನ ಎಲ್ಲ ಸಿನಿಮಾಗಳಿಗಿಂತಾ ಬೇರೆಯದ್ದೇ ರೀತಿಯಲ್ಲಿ ಮೂಡಿಬಂದಿದೆ.

ಗಣೇಶ್ ಈ ಚಿತ್ರದಲ್ಲಿ ಕಳ್ಳ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ ತನ್ನ ಸ್ಥಳಕ್ಕೆ ಹೋಗುತ್ತಿರೋ ಸಂದರ್ಭದಲ್ಲಿ ಟ್ರೈನಿನಲ್ಲಿ ಜೊತೆಯಾಗುವವಳು ನಾಯಕಿ. ಆರೆಂಜು ಬಣ್ಣದ ಸೀರೆ ತೊಟ್ಟು, ಕೈಗೆ ಆರೆಂಜು ಕೊಡೋ ಮೂಲಕ ಹೀರೋ ಜೊತೆಗೆ ಈಕೆಯ ನಂಟು ಆರಂಭವಾಗುವ ಹಂತದಲ್ಲಿರುತ್ತದೆ. ಅಷ್ಟರಲ್ಲಿ ಟ್ರೈನು ಮಿಸ್ ಆಗಿ, ಮಿಸ್ ಆಗಿದ್ದ ಆಕೆಯ ವಸ್ತುವೊಂದು ಹೀರೋ ಬಳಿ ಉಳಿಯುತ್ತದೆ. ಅದನ್ನು ತಲುಪಿಸಲು ಗಣೇಶ್ ನಾಯಕಿಯ ಮನೆ ಸೇರುತ್ತಾರೆ. ಆಕೆಯ ಮನೆಯವರೊಟ್ಟಿಗೆ ಈತನ ಬಾಂಧವ್ಯ ಬೆಸೆದುಕೊಳ್ಳುತ್ತದೆ. ವಿಚಿತ್ರವೆಂದರೆ ನಾಯಕಿಗೆ ಅದಾಗಲೇ ಬೇರೊಬ್ಬ ಪ್ರಿಯಕರನಿರುತ್ತಾನೆ. ಹೇಳಿ ಕೇಳಿ ಸಂತೋಷ್ (ಗಣೇಶ್) ಜೈಲಿಂದ ರಿಲೀಸಾದ ಕಳ್ಳ. ಹುಡುಗಿಯದ್ದು ತುಂಬು ಸಂಸಾರ. ಮನೆಯ ಸದಸ್ಯರಲ್ಲೊಬ್ಬನಾಗಿ ಬೆರೆತುಹೋಗುವ ಈತನ ಅಸಲೀ ಹಿನ್ನೆಲೆ ಆಕೆಯ ಮನೆವರಿಗೆ ಗೊತ್ತಾಗಿಬಿಟ್ಟರೆ? ಯಾರೋ ಮದುವೆಯಾಗಬೇಕಿರುವ ಹುಡುಗಿಗೂ ಹೀರೋ ಸಂತೋಷ್‌ಗೂ ಕೂಡಿಕೆಯಾಗೋದಾದರೂ ಹೇಗೆ?… ಇವೆಲ್ಲಾ ಚಿತ್ರದಲ್ಲಿ ಪ್ರತೀ ಕ್ಷಣ ಕಾಡುವ ಕುತೂಹಲ.

ಒಂದು ಮಜಬೂತಾದ ಫ್ಯಾಮಿಲಿ ಸಬ್ಜೆಕ್ಟನ್ನು ನಿರ್ದೇಶಕ ಪ್ರಶಾಂತ್ ರಾಜ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಇಡೀ ಸಿನಿಮಾದ ಪೂರ್ತಿ ಕಚಗುಳಿಯಿಡೋದು ಸಾಧು ಕೋಕಿಲಾ ಕಾಮಿಡಿ. ಅರ್ಧ ಸಿನಿಮಾ ಮುಗಿಯೋ ಹೊತ್ತಿಗೆ ಎಂಟ್ರಿ ಕೊಡುವ ರವಿಶಂಕರ್ ಗೌಡರ ಕಾಮಿಡಿ ನಗುವನ್ನು ಎಂಜಾಯ್ ಮಾಡೋರ ಪಾಲಿಗೆ ಬೋನಸ್.

ಅವಿನಾಶ್, ಪದ್ಮಜಾರಾವ್, ಸಾಧು, ರವಿಶಂಕರ್, ರಂಗಾಯಣ ರಘು, ಪ್ರಿಯಾ ಆನಂದ್… ಮಾತ್ರವಲ್ಲದೆ ಇಡೀ ಸಿನಿಮಾದಲ್ಲಿ ಸಾಕಷ್ಟು ಜನ ನಟ-ನಟಿಯರ ದಂಡೇ ಇದೆ. ಇಷ್ಟೊಂದು ಪಾತ್ರಗಳನ್ನಿಟ್ಟುಕೊಂಡು ಸಿನಿಮಾ ಕಟ್ಟೋದು ಸಲೀಸಾದ ಮಾತಲ್ಲ. ಆದರೆ ಆರೆಂಜ್ ಸಿನಿಮಾ ನೋಡುಗರಿಗೆ ಯಾವ ತ್ರಾಸವನ್ನೂ ನೀಡದೇ ಸಲೀಸಾಗಿ ಸಾಗುತ್ತದೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಕಣ್ಣಿಗೆ ಸಂತೋಷ ನೀಡುತ್ತದೆ. ಗೋಲ್ಡನ್ ಸ್ಟಾರ್ ಗಣೇಶ್ ಮುದ್ದು ಮುದ್ದಾಗಿ ಕಾಣಿಸಿದ್ದಾರೆ. ನಟರಾಜ್ ಸಂಭಾಷಣೆ ಚಿತ್ರಕ್ಕೆ ಪೂರಕವಾಗಿ ನೋಡುಗರಿಗೆ ಮಜಾ ಕೊಡುತ್ತದೆ.
ಒಟ್ಟಾರೆ ಸಿನಿಮಾ ಯಾವುದೇ ಪೂರ್ವಾಗ್ರಹವಿಲ್ಲದೆ ನೋಡೋರಿಗೆ ಪರಿಪೂರ್ಣ ಮನರಂಜನೆ ನೀಡುವಲ್ಲಿ ಗೆದ್ದಿದೆ.

Continue Reading

ಸಿನಿಮಾ ವಿಮರ್ಶೆ

ಕರ್ಷಣಂ: ಕೊಲೆಗಳ ಸುತ್ತಾ ಕೌತುಕದ ಕಂದೀಲು!

Published

on

ನಾಲಕ್ಕು ಚಿತ್ರ ವಿಚಿತ್ರ ಕೊಲೆ ಮತ್ತು ಅದರ ಸುತ್ತಾ ಸುತ್ತುವ ಮೈ ನವಿರೇಳಿಸೋ ಕಥೆ… ಯಾವ ಗೊಂದಲಗಳಿಗೂ ಅವಕಾಶವಿಲ್ಲದ, ಯಾವ ಗೋಜಲುಗಳೂ ಕಾಡದಂತೆ ಸರಾಗವಾಗಿ ನೋಡಿಸಿಕೊಂಡು, ಕ್ಷಣ ಕ್ಷಣವೂ ನೋಡುಗರನ್ನು ಕುತೂಹಲದ ಮಡುವಿಗೆ ತಳ್ಳೋ ಚಿತ್ರ ಕರ್ಷಣಂ!

ಧನಂಜಯ ಅತ್ರೆ ನಿರ್ಮಾಪಕರಾಗಿ, ನಾಯಕನಾಗಿಯೂ ಅಭಿನಯಿಸಿರೋ ಕರ್ಷಣಂ ಹೆಸರಿನಂಥಾದ್ದೇ ಖದರ್ ಹೊಂದಿರೋ ಕಥೆ, ನಿರೂಪಣೆಯಿಂದಲೇ ನೋಡುಗರಿಗೆ ಹೊಸಾ ಅನುಭವ ನೀಡುವಲ್ಲಿ ಗೆದ್ದಿದೆ. ತಾವು ನಾಯಕನಾಗಿ ನಟಿಸಬೇಕು, ಚಿತ್ರವೊಂದನ್ನು ನಿರ್ಮಾಣ ಮಾಡಬೇಕೆಂದು ಧನಂಜಯ್ ಅತ್ರೆ ಶ್ರಮ ಪಟ್ಟಿದ್ದರಲ್ಲಾ? ಅಂಥಾದ್ದೇ ಶ್ರದ್ಧೆ ಇಡೀ ಚಿತ್ರದಲ್ಲಿಯೂ ಕಾಣ ಸಿಗುತ್ತದೆ. ಅವರ ನಟನೆಯಲ್ಲಿಯೂ ಅದರ ಛಾಯೆ ದಟ್ಟವಾಗಿದೆ.

ಧನಂಜಯ್ ಅತ್ರೆ ಶಂಕರ್ ನಾಗ್ ಅಭಿಮಾನಿ ಶಂಕರನಾಗಿ ನಟಿಸಿದ್ದಾರೆ. ಸ್ಲಂ ನಿವಾಸಿಯೂ ಆಗಿರೋ ಶಂಕರನ ಪರೋಪಕಾರದ ಬುದ್ಧಿಗೆ ನಾಯಕಿ ಮನಸೋತು ಲವ್ವಲ್ಲಿ ಬೀಳುತ್ತಾಳೆ. ಆಕೆ ವೃತ್ತಿಯಲ್ಲಿ ಪತ್ರಕರ್ತೆ. ಒಟ್ಟಾರೆ ಕಥೆ ಮಾಫಿಯಾ, ಭೂಗತ ಜಗತ್ತಿನೊಂದಿಗೆ ತೆರೆದುಕೊಳ್ಳುತ್ತಲೇ ಮೂರು ಹತ್ಯೆಗಳು ನಡೆಯುತ್ತವೆ. ಕಡೆಗೆ ಪ್ರೀತಿಸಿದ ಹುಡುಗಿಯೇ ಶಂಕರನತ್ತ ಬಂದೂಕಿನ ಗುರಿಯಿಡೋ ಮೂಲಕ ಇಡೀ ಚಿತ್ರ ಕುತೂಹಲದ ಉಚ್ಛ್ರಾಯ ಸ್ಥಿತಿ ತಲುಪಿಕೊಳ್ಳುತ್ತೆ. ಅದಾಗಲೇ ಆಗಿದ್ದ ಮೂರೂ ಕೊಲೆಗಳೂ ಕೂಡಾ ಆತ್ಮೀಯರ ಕಡೆಯಿಂದಲೇ ನಡೆದಿರುತ್ತೆ. ಅದಕ್ಕೆ ಕಾರಣವೇನು? ನಾಯಕಿಯೇ ಯಾಕೆ ನಾಯಕನನ್ನು ಕೊಲ್ಲಲು ಮುಂದಾಗ್ತಾಳೆ ಎಂಬೆಲ್ಲ ಪ್ರಶ್ನೆಗಳಿಗೂ ಕರ್ಷಣಂ ಸಾವಕಾಶದಿಂದಲೇ ರೋಚಕ ಉತ್ತರ ನೀಡುತ್ತೆ.

ಹಿರಿಯ ನಟ ಶ್ರೀನಿವಾಸ ಮೂರ್ತಿ ಕೂಡಾ ಎಂದಿನಂತೆಯೇ ಚೆಂದಗೆ ನಟಿಸಿದ್ದಾರೆ. ನಾಯಕಿ ಅನುಷಾ ಕೂಡಾ ಗಮನ ಸೆಳೆಯುತ್ತಾರೆ. ಧನಂಜಯ್ ಅತ್ರೆ ಅವರಂತೂ ಈ ಪಾತ್ರವನ್ನು ನುಂಗಿಕೊಂಡಂತೆ ನಟಿಸಿದ್ದಾರೆ. ಫೈಟು, ಡಾನ್ಸುಗಳಲ್ಲಿ ಹೊಸಾ ಪ್ರಾಕಾರವೊಂದನ್ನು ಪರಿಚಯಿಸಿದ್ದಾರೆ. ವಿಸ್ತಾರವಾದ ಮುಖದ ತುಂಬಾ ಭಾವ ತುಂಬಿಕೊಂಡು ನಟಿಸೋ ಅವರು ಪವರ್‌ಫುಲ್ ಪಾತ್ರಗಳಿಗೂ ಜೀವ ತುಂಬಬಲ್ಲ ನಾಯಕ ನಟನಾಗಿ ನೆಲೆ ನಿಲ್ಲುವ ಸೂಚನೆಯನ್ನೂ ನೀಡಿದ್ದಾರೆ. ಅಚ್ಚುಕಟ್ಟಾದ ಕಥೆಯನ್ನು ನಿರ್ದೇಶಕ ಶರವಣ ಅಷ್ಟೇ ಚೆಂದಗೆ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ. ಹಾಸ್ಯ ನಟ ವಿಜಯ್ ಚೆಂಡೂರ್ ನಗಿಸುವುದು ಮಾತ್ರವಲ್ಲದೆ ಕಾಡುವಂತಿದೆ.

Continue Reading

ಸಿನಿಮಾ ವಿಮರ್ಶೆ

ಆಪಲ್ ಕೇಕ್‌ನ ತುಂಬಾ ಗಾಂಧಿನಗರದ ಸಿಹಿ-ಕಹಿ ಸ್ವಾದ!

Published

on

ಚಿತ್ರರಂಗದ ಅಸಲೀಯತ್ತನ್ನು ಬಿಡಿಸಿಡುವ ಕಥಾ ಹಂದರ ಹೊತ್ತ ಚಿತ್ರಗಳು ಆಗಾಗ ತೆರೆ ಕಂಡಿವೆ. ಸಾಮಾನ್ಯ ಪ್ರೇಕ್ಷಕರಿಗೆ ಕಾಣಿಸದಂಥಾ ಕಹಿ ಸತ್ಯಗಳನ್ನೂ ಇಂಥಾ ಸಿನಿಮಾಗಳು ತೆರೆದಿಡೋ ಪ್ರಯತ್ನ ಮಾಡಿವೆ. ಅಂಥಾದ್ದೇ ಸಿಹಿಕಹಿಗಳನ್ನು ಬದುಕಿಗೆ ಹತ್ತಿರಾದ ರೀತಿಯಲ್ಲಿಯೇ ತೆರೆದಿಡೋ ಚಿತ್ರ ಆಪಲ್ ಕೇಕ್!

ಅರವಿಂದ್ ನಿಮಾಣ ಮಾಡಿರೋ ಈ ಆಪಲ್ ಕೇಕ್ ಸಿನಿಮಾ ನಿರ್ದೇಶನದ ಕನಸು ಹೊತ್ತು ಕರ್ನಾಟಕದ ನಾಲಕ್ಕು ದಿಕ್ಕುಗಳಿಂದ ಬಂದ, ನಾಲ್ವರು ಯವಕರ ಸುತ್ತ ತಿರುಗೋ ಕಥಾ ಹಂದರ ಹೊಂದಿದೆ. ಸೂತ್ರ ಸಂಬಂಧವೇ ಇಲ್ಲದ ಈ ನಾಲಕ್ಕೂ ಪಾತ್ರಗಳೂ ಒಂದೆಡೆ ಸಂಧೀಸುತ್ತವೆ. ಒಂದೇ ದಾರಿಯಲ್ಲಿ ಚಲಿಸುತ್ತವೆ. ಆ ಹಾದಿಯ ತುಂಬಾ ಎಲ್ಲರ ಜೀವನಕ್ಕೂ ಹತ್ತಿರದ ಅಂಶಗಳನ್ನು ಹೇಳುತ್ತಲೇ, ಚಿತ್ರರಂಗದ ಅಸಲೀ ಮುಖವನ್ನೂ ಬಿಚ್ಚಿಡುವ ಪ್ರಯತ್ನಕ್ಕೆ ನಿದೇಶಕ ರಂಜಿತ್ ಆಪಲ್ ಕೇಕ್ ಮೂಲಕ ಪ್ರಯತ್ನಿಸಿದ್ದಾರೆ.

ಬೇರೆ ಬೇರೆ ಊರುಗಳಿಂದ ಥರಥರದ ಜಂಜಾಟಗಳನ್ನು ಹೊತ್ತು ಬೆಂಗಳೂರಿಗೆ ಬಂದಿಳಿವ ಆ ನಾಲ್ವರು ಯುವಕರದ್ದೂ ನಿರ್ದೇಶಕರಾಗೋ ಕನಸು. ಹೇಗೋ ಪಡಿಪಾಟಲು ಪಟ್ಟು ಚಿತ್ರರಂಗಕ್ಕೆ ಪ್ರವೇಶ ಮಾಡಿದರೂ ಅವರೆಲ್ಲ ಸಹಾಯಕ ನಿರ್ದೇಶಕರಾಗಿಯೇ ಸಮಾಧಾನ ಕಂಡುಕೊಳ್ಳಬೇಕಾಗುತ್ತೆ. ಈ ಪಾತ್ರಗಳ ಮೂಲಕವೇ ಗಾಂಧಿನಗರದ ಚಮಕ್ಕು, ಚಮಚಾಗಿರಿಗಳನ್ನೆಲ್ಲ ನಿರ್ದೇಶಕರು ಅನಾವರಣಗೊಳಿಸಲು ಪ್ರಯತ್ನಿಸಿದ್ದಾರೆ. ಇದೆಲ್ಲದರ ನಡುವೆಯೂ ಆ ಯುವಕರು ನಿರ್ದೇಶಕರಾಗೋ ಗುರಿ ಮುಟ್ಟುತ್ತಾರಾ? ಅಲ್ಲಿ ಎಂತೆಂಥಾ ಟ್ವಿಸ್ಟುಗಳೆದುರಾದಾವೆಂಬುದೇ ನಿಜವಾದ ಕುತೂಹಲ.

ಆದರೆ, ಪ್ರಾಮಾಣಿಕವಾಗಿಯೂ ಗೆಲ್ಲ ಬಹುದು, ಎಲ್ಲ ಅವಮಾನಗಳನ್ನೂ ಮೆಟ್ಟಿ ನಿಂತು ಗುರಿ ತಲುಪ ಬಹುದೆಂಬ ಸ್ಫೂರ್ತಿದಾಯಕ ವಿಚಾರಗಳನ್ನೂ ಹೇಳಿರೋದು ಈ ಚಿತ್ರದ ಪ್ರಧಾನ ಅಂಶ. ಆದರೆ ಗಾಂಧಿನಗರದ ಅಸಲೀಯತ್ತನ್ನು ಅನಾವರಣಗೊಳಿಸೋದರತ್ತ ಮಾತ್ರವೇ ದೃಷ್ಟಿ ನೆಟ್ಟಿದ್ದರಿಂದ ಕೆಲ ಕೊರತೆಗಳೂ ಆಗಿವೆ. ಮನೋರಂಜನಾತ್ಮಕ ಅಂಶವೇ ಅಲ್ಲಲ್ಲಿ ಮರೆಯಾದಂತೆ ಭಾಸವಾದರೂ ನಾಲ್ವರು ಯುವಕರ ಬದುಕಿನ ಭಿನ್ನ ಬಣ್ಣಗಳು ತಕ್ಕ ಮಟ್ಟಿಗೆ ಮುದ ನೀಡುತ್ತವೆ. ನಿದೇಶಕ ರಂಜಿತ್, ನಿರ್ಮಾಪಕ ಅರವಿಂದ್ ಕೂಡಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರೂ ಸೇರಿದಂತೆ ಎಲ್ಲ ಪಾತ್ರಗಳಿಗೂ ನ್ಯಾಯ ಸಲ್ಲಿಸೋ ಪ್ರಯತ್ನವನ್ನು ಕಲಾವಿದರು ಮಾಡಿದ್ದಾರೆ.

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz