Connect with us

ಸಿನಿಮಾ ವಿಮರ್ಶೆ

ಕರ್ಷಣಂ: ಕೊಲೆಗಳ ಸುತ್ತಾ ಕೌತುಕದ ಕಂದೀಲು!

Published

on

ನಾಲಕ್ಕು ಚಿತ್ರ ವಿಚಿತ್ರ ಕೊಲೆ ಮತ್ತು ಅದರ ಸುತ್ತಾ ಸುತ್ತುವ ಮೈ ನವಿರೇಳಿಸೋ ಕಥೆ… ಯಾವ ಗೊಂದಲಗಳಿಗೂ ಅವಕಾಶವಿಲ್ಲದ, ಯಾವ ಗೋಜಲುಗಳೂ ಕಾಡದಂತೆ ಸರಾಗವಾಗಿ ನೋಡಿಸಿಕೊಂಡು, ಕ್ಷಣ ಕ್ಷಣವೂ ನೋಡುಗರನ್ನು ಕುತೂಹಲದ ಮಡುವಿಗೆ ತಳ್ಳೋ ಚಿತ್ರ ಕರ್ಷಣಂ!

ಧನಂಜಯ ಅತ್ರೆ ನಿರ್ಮಾಪಕರಾಗಿ, ನಾಯಕನಾಗಿಯೂ ಅಭಿನಯಿಸಿರೋ ಕರ್ಷಣಂ ಹೆಸರಿನಂಥಾದ್ದೇ ಖದರ್ ಹೊಂದಿರೋ ಕಥೆ, ನಿರೂಪಣೆಯಿಂದಲೇ ನೋಡುಗರಿಗೆ ಹೊಸಾ ಅನುಭವ ನೀಡುವಲ್ಲಿ ಗೆದ್ದಿದೆ. ತಾವು ನಾಯಕನಾಗಿ ನಟಿಸಬೇಕು, ಚಿತ್ರವೊಂದನ್ನು ನಿರ್ಮಾಣ ಮಾಡಬೇಕೆಂದು ಧನಂಜಯ್ ಅತ್ರೆ ಶ್ರಮ ಪಟ್ಟಿದ್ದರಲ್ಲಾ? ಅಂಥಾದ್ದೇ ಶ್ರದ್ಧೆ ಇಡೀ ಚಿತ್ರದಲ್ಲಿಯೂ ಕಾಣ ಸಿಗುತ್ತದೆ. ಅವರ ನಟನೆಯಲ್ಲಿಯೂ ಅದರ ಛಾಯೆ ದಟ್ಟವಾಗಿದೆ.

ಧನಂಜಯ್ ಅತ್ರೆ ಶಂಕರ್ ನಾಗ್ ಅಭಿಮಾನಿ ಶಂಕರನಾಗಿ ನಟಿಸಿದ್ದಾರೆ. ಸ್ಲಂ ನಿವಾಸಿಯೂ ಆಗಿರೋ ಶಂಕರನ ಪರೋಪಕಾರದ ಬುದ್ಧಿಗೆ ನಾಯಕಿ ಮನಸೋತು ಲವ್ವಲ್ಲಿ ಬೀಳುತ್ತಾಳೆ. ಆಕೆ ವೃತ್ತಿಯಲ್ಲಿ ಪತ್ರಕರ್ತೆ. ಒಟ್ಟಾರೆ ಕಥೆ ಮಾಫಿಯಾ, ಭೂಗತ ಜಗತ್ತಿನೊಂದಿಗೆ ತೆರೆದುಕೊಳ್ಳುತ್ತಲೇ ಮೂರು ಹತ್ಯೆಗಳು ನಡೆಯುತ್ತವೆ. ಕಡೆಗೆ ಪ್ರೀತಿಸಿದ ಹುಡುಗಿಯೇ ಶಂಕರನತ್ತ ಬಂದೂಕಿನ ಗುರಿಯಿಡೋ ಮೂಲಕ ಇಡೀ ಚಿತ್ರ ಕುತೂಹಲದ ಉಚ್ಛ್ರಾಯ ಸ್ಥಿತಿ ತಲುಪಿಕೊಳ್ಳುತ್ತೆ. ಅದಾಗಲೇ ಆಗಿದ್ದ ಮೂರೂ ಕೊಲೆಗಳೂ ಕೂಡಾ ಆತ್ಮೀಯರ ಕಡೆಯಿಂದಲೇ ನಡೆದಿರುತ್ತೆ. ಅದಕ್ಕೆ ಕಾರಣವೇನು? ನಾಯಕಿಯೇ ಯಾಕೆ ನಾಯಕನನ್ನು ಕೊಲ್ಲಲು ಮುಂದಾಗ್ತಾಳೆ ಎಂಬೆಲ್ಲ ಪ್ರಶ್ನೆಗಳಿಗೂ ಕರ್ಷಣಂ ಸಾವಕಾಶದಿಂದಲೇ ರೋಚಕ ಉತ್ತರ ನೀಡುತ್ತೆ.

ಹಿರಿಯ ನಟ ಶ್ರೀನಿವಾಸ ಮೂರ್ತಿ ಕೂಡಾ ಎಂದಿನಂತೆಯೇ ಚೆಂದಗೆ ನಟಿಸಿದ್ದಾರೆ. ನಾಯಕಿ ಅನುಷಾ ಕೂಡಾ ಗಮನ ಸೆಳೆಯುತ್ತಾರೆ. ಧನಂಜಯ್ ಅತ್ರೆ ಅವರಂತೂ ಈ ಪಾತ್ರವನ್ನು ನುಂಗಿಕೊಂಡಂತೆ ನಟಿಸಿದ್ದಾರೆ. ಫೈಟು, ಡಾನ್ಸುಗಳಲ್ಲಿ ಹೊಸಾ ಪ್ರಾಕಾರವೊಂದನ್ನು ಪರಿಚಯಿಸಿದ್ದಾರೆ. ವಿಸ್ತಾರವಾದ ಮುಖದ ತುಂಬಾ ಭಾವ ತುಂಬಿಕೊಂಡು ನಟಿಸೋ ಅವರು ಪವರ್‌ಫುಲ್ ಪಾತ್ರಗಳಿಗೂ ಜೀವ ತುಂಬಬಲ್ಲ ನಾಯಕ ನಟನಾಗಿ ನೆಲೆ ನಿಲ್ಲುವ ಸೂಚನೆಯನ್ನೂ ನೀಡಿದ್ದಾರೆ. ಅಚ್ಚುಕಟ್ಟಾದ ಕಥೆಯನ್ನು ನಿರ್ದೇಶಕ ಶರವಣ ಅಷ್ಟೇ ಚೆಂದಗೆ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ. ಹಾಸ್ಯ ನಟ ವಿಜಯ್ ಚೆಂಡೂರ್ ನಗಿಸುವುದು ಮಾತ್ರವಲ್ಲದೆ ಕಾಡುವಂತಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಸಿನಿಮಾ ವಿಮರ್ಶೆ

ಆರೆಂಜ್: ಭರಪೂರ ಮನರಂಜನೆಯ ಫ್ಯಾಮಿಲಿ ಪ್ಯಾಕೇಜ್!

Published

on

ಲವ್ ಗುರು ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿರುವ ಆರೆಂಜ್ ಸಿನಿಮಾ ಇಂದು ತೆರೆಗೆ ಬಂದಿದೆ. ಪ್ರಶಾಂತ್ ರಾಜ್ ಈ ವರೆಗೆ ನಿರ್ದೇಶಿಸಿರುವ ಒಂದೊಂದು ಸಿನಿಮಾ ಕೂಡಾ ಭಿನ್ನ ಕಥಾವಸ್ತುಗಳನ್ನು ಒಳಗೊಂಡಿದೆ. ಒಂದೇ ಬಗೆಯ ಸಿನಿಮಾಗಳಿಗೆ ಪ್ರಶಾಂತ್ ರಾಜ್ ಯಾವತ್ತೂ ಜೋತುಬಿದ್ದವರಲ್ಲ. ಆರೆಂಜ್ ಕೂಡಾ ಅವರ ಈ ಹಿಂದಿನ ಎಲ್ಲ ಸಿನಿಮಾಗಳಿಗಿಂತಾ ಬೇರೆಯದ್ದೇ ರೀತಿಯಲ್ಲಿ ಮೂಡಿಬಂದಿದೆ.

ಗಣೇಶ್ ಈ ಚಿತ್ರದಲ್ಲಿ ಕಳ್ಳ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ ತನ್ನ ಸ್ಥಳಕ್ಕೆ ಹೋಗುತ್ತಿರೋ ಸಂದರ್ಭದಲ್ಲಿ ಟ್ರೈನಿನಲ್ಲಿ ಜೊತೆಯಾಗುವವಳು ನಾಯಕಿ. ಆರೆಂಜು ಬಣ್ಣದ ಸೀರೆ ತೊಟ್ಟು, ಕೈಗೆ ಆರೆಂಜು ಕೊಡೋ ಮೂಲಕ ಹೀರೋ ಜೊತೆಗೆ ಈಕೆಯ ನಂಟು ಆರಂಭವಾಗುವ ಹಂತದಲ್ಲಿರುತ್ತದೆ. ಅಷ್ಟರಲ್ಲಿ ಟ್ರೈನು ಮಿಸ್ ಆಗಿ, ಮಿಸ್ ಆಗಿದ್ದ ಆಕೆಯ ವಸ್ತುವೊಂದು ಹೀರೋ ಬಳಿ ಉಳಿಯುತ್ತದೆ. ಅದನ್ನು ತಲುಪಿಸಲು ಗಣೇಶ್ ನಾಯಕಿಯ ಮನೆ ಸೇರುತ್ತಾರೆ. ಆಕೆಯ ಮನೆಯವರೊಟ್ಟಿಗೆ ಈತನ ಬಾಂಧವ್ಯ ಬೆಸೆದುಕೊಳ್ಳುತ್ತದೆ. ವಿಚಿತ್ರವೆಂದರೆ ನಾಯಕಿಗೆ ಅದಾಗಲೇ ಬೇರೊಬ್ಬ ಪ್ರಿಯಕರನಿರುತ್ತಾನೆ. ಹೇಳಿ ಕೇಳಿ ಸಂತೋಷ್ (ಗಣೇಶ್) ಜೈಲಿಂದ ರಿಲೀಸಾದ ಕಳ್ಳ. ಹುಡುಗಿಯದ್ದು ತುಂಬು ಸಂಸಾರ. ಮನೆಯ ಸದಸ್ಯರಲ್ಲೊಬ್ಬನಾಗಿ ಬೆರೆತುಹೋಗುವ ಈತನ ಅಸಲೀ ಹಿನ್ನೆಲೆ ಆಕೆಯ ಮನೆವರಿಗೆ ಗೊತ್ತಾಗಿಬಿಟ್ಟರೆ? ಯಾರೋ ಮದುವೆಯಾಗಬೇಕಿರುವ ಹುಡುಗಿಗೂ ಹೀರೋ ಸಂತೋಷ್‌ಗೂ ಕೂಡಿಕೆಯಾಗೋದಾದರೂ ಹೇಗೆ?… ಇವೆಲ್ಲಾ ಚಿತ್ರದಲ್ಲಿ ಪ್ರತೀ ಕ್ಷಣ ಕಾಡುವ ಕುತೂಹಲ.

ಒಂದು ಮಜಬೂತಾದ ಫ್ಯಾಮಿಲಿ ಸಬ್ಜೆಕ್ಟನ್ನು ನಿರ್ದೇಶಕ ಪ್ರಶಾಂತ್ ರಾಜ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಇಡೀ ಸಿನಿಮಾದ ಪೂರ್ತಿ ಕಚಗುಳಿಯಿಡೋದು ಸಾಧು ಕೋಕಿಲಾ ಕಾಮಿಡಿ. ಅರ್ಧ ಸಿನಿಮಾ ಮುಗಿಯೋ ಹೊತ್ತಿಗೆ ಎಂಟ್ರಿ ಕೊಡುವ ರವಿಶಂಕರ್ ಗೌಡರ ಕಾಮಿಡಿ ನಗುವನ್ನು ಎಂಜಾಯ್ ಮಾಡೋರ ಪಾಲಿಗೆ ಬೋನಸ್.

ಅವಿನಾಶ್, ಪದ್ಮಜಾರಾವ್, ಸಾಧು, ರವಿಶಂಕರ್, ರಂಗಾಯಣ ರಘು, ಪ್ರಿಯಾ ಆನಂದ್… ಮಾತ್ರವಲ್ಲದೆ ಇಡೀ ಸಿನಿಮಾದಲ್ಲಿ ಸಾಕಷ್ಟು ಜನ ನಟ-ನಟಿಯರ ದಂಡೇ ಇದೆ. ಇಷ್ಟೊಂದು ಪಾತ್ರಗಳನ್ನಿಟ್ಟುಕೊಂಡು ಸಿನಿಮಾ ಕಟ್ಟೋದು ಸಲೀಸಾದ ಮಾತಲ್ಲ. ಆದರೆ ಆರೆಂಜ್ ಸಿನಿಮಾ ನೋಡುಗರಿಗೆ ಯಾವ ತ್ರಾಸವನ್ನೂ ನೀಡದೇ ಸಲೀಸಾಗಿ ಸಾಗುತ್ತದೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಕಣ್ಣಿಗೆ ಸಂತೋಷ ನೀಡುತ್ತದೆ. ಗೋಲ್ಡನ್ ಸ್ಟಾರ್ ಗಣೇಶ್ ಮುದ್ದು ಮುದ್ದಾಗಿ ಕಾಣಿಸಿದ್ದಾರೆ. ನಟರಾಜ್ ಸಂಭಾಷಣೆ ಚಿತ್ರಕ್ಕೆ ಪೂರಕವಾಗಿ ನೋಡುಗರಿಗೆ ಮಜಾ ಕೊಡುತ್ತದೆ.
ಒಟ್ಟಾರೆ ಸಿನಿಮಾ ಯಾವುದೇ ಪೂರ್ವಾಗ್ರಹವಿಲ್ಲದೆ ನೋಡೋರಿಗೆ ಪರಿಪೂರ್ಣ ಮನರಂಜನೆ ನೀಡುವಲ್ಲಿ ಗೆದ್ದಿದೆ.

Continue Reading

ಸಿನಿಮಾ ವಿಮರ್ಶೆ

ಆಪಲ್ ಕೇಕ್‌ನ ತುಂಬಾ ಗಾಂಧಿನಗರದ ಸಿಹಿ-ಕಹಿ ಸ್ವಾದ!

Published

on

ಚಿತ್ರರಂಗದ ಅಸಲೀಯತ್ತನ್ನು ಬಿಡಿಸಿಡುವ ಕಥಾ ಹಂದರ ಹೊತ್ತ ಚಿತ್ರಗಳು ಆಗಾಗ ತೆರೆ ಕಂಡಿವೆ. ಸಾಮಾನ್ಯ ಪ್ರೇಕ್ಷಕರಿಗೆ ಕಾಣಿಸದಂಥಾ ಕಹಿ ಸತ್ಯಗಳನ್ನೂ ಇಂಥಾ ಸಿನಿಮಾಗಳು ತೆರೆದಿಡೋ ಪ್ರಯತ್ನ ಮಾಡಿವೆ. ಅಂಥಾದ್ದೇ ಸಿಹಿಕಹಿಗಳನ್ನು ಬದುಕಿಗೆ ಹತ್ತಿರಾದ ರೀತಿಯಲ್ಲಿಯೇ ತೆರೆದಿಡೋ ಚಿತ್ರ ಆಪಲ್ ಕೇಕ್!

ಅರವಿಂದ್ ನಿಮಾಣ ಮಾಡಿರೋ ಈ ಆಪಲ್ ಕೇಕ್ ಸಿನಿಮಾ ನಿರ್ದೇಶನದ ಕನಸು ಹೊತ್ತು ಕರ್ನಾಟಕದ ನಾಲಕ್ಕು ದಿಕ್ಕುಗಳಿಂದ ಬಂದ, ನಾಲ್ವರು ಯವಕರ ಸುತ್ತ ತಿರುಗೋ ಕಥಾ ಹಂದರ ಹೊಂದಿದೆ. ಸೂತ್ರ ಸಂಬಂಧವೇ ಇಲ್ಲದ ಈ ನಾಲಕ್ಕೂ ಪಾತ್ರಗಳೂ ಒಂದೆಡೆ ಸಂಧೀಸುತ್ತವೆ. ಒಂದೇ ದಾರಿಯಲ್ಲಿ ಚಲಿಸುತ್ತವೆ. ಆ ಹಾದಿಯ ತುಂಬಾ ಎಲ್ಲರ ಜೀವನಕ್ಕೂ ಹತ್ತಿರದ ಅಂಶಗಳನ್ನು ಹೇಳುತ್ತಲೇ, ಚಿತ್ರರಂಗದ ಅಸಲೀ ಮುಖವನ್ನೂ ಬಿಚ್ಚಿಡುವ ಪ್ರಯತ್ನಕ್ಕೆ ನಿದೇಶಕ ರಂಜಿತ್ ಆಪಲ್ ಕೇಕ್ ಮೂಲಕ ಪ್ರಯತ್ನಿಸಿದ್ದಾರೆ.

ಬೇರೆ ಬೇರೆ ಊರುಗಳಿಂದ ಥರಥರದ ಜಂಜಾಟಗಳನ್ನು ಹೊತ್ತು ಬೆಂಗಳೂರಿಗೆ ಬಂದಿಳಿವ ಆ ನಾಲ್ವರು ಯುವಕರದ್ದೂ ನಿರ್ದೇಶಕರಾಗೋ ಕನಸು. ಹೇಗೋ ಪಡಿಪಾಟಲು ಪಟ್ಟು ಚಿತ್ರರಂಗಕ್ಕೆ ಪ್ರವೇಶ ಮಾಡಿದರೂ ಅವರೆಲ್ಲ ಸಹಾಯಕ ನಿರ್ದೇಶಕರಾಗಿಯೇ ಸಮಾಧಾನ ಕಂಡುಕೊಳ್ಳಬೇಕಾಗುತ್ತೆ. ಈ ಪಾತ್ರಗಳ ಮೂಲಕವೇ ಗಾಂಧಿನಗರದ ಚಮಕ್ಕು, ಚಮಚಾಗಿರಿಗಳನ್ನೆಲ್ಲ ನಿರ್ದೇಶಕರು ಅನಾವರಣಗೊಳಿಸಲು ಪ್ರಯತ್ನಿಸಿದ್ದಾರೆ. ಇದೆಲ್ಲದರ ನಡುವೆಯೂ ಆ ಯುವಕರು ನಿರ್ದೇಶಕರಾಗೋ ಗುರಿ ಮುಟ್ಟುತ್ತಾರಾ? ಅಲ್ಲಿ ಎಂತೆಂಥಾ ಟ್ವಿಸ್ಟುಗಳೆದುರಾದಾವೆಂಬುದೇ ನಿಜವಾದ ಕುತೂಹಲ.

ಆದರೆ, ಪ್ರಾಮಾಣಿಕವಾಗಿಯೂ ಗೆಲ್ಲ ಬಹುದು, ಎಲ್ಲ ಅವಮಾನಗಳನ್ನೂ ಮೆಟ್ಟಿ ನಿಂತು ಗುರಿ ತಲುಪ ಬಹುದೆಂಬ ಸ್ಫೂರ್ತಿದಾಯಕ ವಿಚಾರಗಳನ್ನೂ ಹೇಳಿರೋದು ಈ ಚಿತ್ರದ ಪ್ರಧಾನ ಅಂಶ. ಆದರೆ ಗಾಂಧಿನಗರದ ಅಸಲೀಯತ್ತನ್ನು ಅನಾವರಣಗೊಳಿಸೋದರತ್ತ ಮಾತ್ರವೇ ದೃಷ್ಟಿ ನೆಟ್ಟಿದ್ದರಿಂದ ಕೆಲ ಕೊರತೆಗಳೂ ಆಗಿವೆ. ಮನೋರಂಜನಾತ್ಮಕ ಅಂಶವೇ ಅಲ್ಲಲ್ಲಿ ಮರೆಯಾದಂತೆ ಭಾಸವಾದರೂ ನಾಲ್ವರು ಯುವಕರ ಬದುಕಿನ ಭಿನ್ನ ಬಣ್ಣಗಳು ತಕ್ಕ ಮಟ್ಟಿಗೆ ಮುದ ನೀಡುತ್ತವೆ. ನಿದೇಶಕ ರಂಜಿತ್, ನಿರ್ಮಾಪಕ ಅರವಿಂದ್ ಕೂಡಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರೂ ಸೇರಿದಂತೆ ಎಲ್ಲ ಪಾತ್ರಗಳಿಗೂ ನ್ಯಾಯ ಸಲ್ಲಿಸೋ ಪ್ರಯತ್ನವನ್ನು ಕಲಾವಿದರು ಮಾಡಿದ್ದಾರೆ.

Continue Reading

ಸಿನಿಮಾ ವಿಮರ್ಶೆ

ತಾರಕಾಸುರ: ಬುಡುಬುಡಿಕೆ ಸದ್ದಲ್ಲಿ ಬೆಚ್ಚಿಬೀಳಿಸೋ ಕಥೆ!

Published

on

ಮಹಾವಿಷ್ಣು ಭೂಲೋಕಕ್ಕೆ ಬಂದು ತೆರಳೋ ಮುನ್ನ ಲೋಕಕಲ್ಯಾಣದ ಉದ್ದೇಶಕ್ಕಾಗಿ ಬುಡಬುಡಕೆ ಜನಾಂಗವನ್ನು ಬಿಟ್ಟುಹೋದನಂತೆ. ಈ ಬುಡಬುಡಕೆ ಜನಾಂಗದಲ್ಲಿ ಸಿದ್ಧಿ ಪಡೆದ ವ್ಯಕ್ತಿ ತನ್ನ ಅತೀಂದ್ರಿಯ ಶಕ್ತಿಯ ಮೂಲಕ ಹಾಲಕ್ಕಿಯ ನುಡಿಯನ್ನು ಆಲಿಸಿ ಭವಿಷ್ಯವನ್ನು ತಿಳಿದುಕೊಳ್ಳುತ್ತಾನಂತೆ. ಹಿಂದೆ ವಾಸ್ಕೋಡಿಗಾಮ ಕಂಡು ಹಿಡಿದ ದಾರಿ ಹಿಡಿದು ಬಂದ ಫ್ರೆಂಚರು ಡಚ್ಚರು ಮುಂತಾದವರು ಭಾರತದ ದೇವಾಲಯಗಳನ್ನು ಲೂಟಿ ಮಾಡಿದ್ದರಂತೆ. ಅದನ್ನು ಬ್ರಿಟಿಷರ ಕಾಲದಲ್ಲಿ ಇತಿಹಾಸಕಾರ ಮತ್ತು ಸ್ವತಃ ಆರ್ಕಿಯಾಲಜಿಸ್ಟ್ ಆಗಿದ್ದ ಎಡ್ವರ್‍ಡ್ ವಿಲಿಯಮ್ ಬುಲ್ ಎಂಬಾತ ಮೊಗಲರು ದೋಚಿದ್ದನ್ನು ತಿಳಿಯುವ ಕುತೂಹಲದಿಂದ ವಿಷ್ಣುವಿನ ದೇವಾಲಯವೊಂದನ್ನು ತಲಾಷು ಮಾಡುತ್ತಿದ್ದ ಸಂದರ್ಭದಲ್ಲಿ ಆತನ ಕಣ್ಣಿಗೆ ಸಿದ್ದಿ ಪಡೆದಿದ್ದ ಬುಡಬುಡಕೆ ವ್ಯಕ್ತಿಯೊಬ್ಬ ಗೋಚರಿಸಿದ್ದನಂತೆ.

ಆತನನ್ನು ಹಿಂಬಾಲಿಸಿದಾಗ ಈ ಅಧಿಕಾರಿಗೆ ರೈಸ್ ಪುಲ್ಲರ್ ವಸ್ತುವೊಂದು ದೊರಕಿತ್ತಂತೆ. ಇದನ್ನು ಬಳಸಿ ಜಗತ್ತಿನಾದ್ಯಂತ ಇಂಗ್ಲೆಂಡ್ ವಸಾಹತುಗಳನ್ನು ಸ್ತಾಪಿಸುತ್ತಾ ಬಂದರಂತೆ. ಅದನ್ನು ಎರಡನೇ ಮಹಾ ಯುದ್ಧದಲ್ಲಿ ಅಣುಬಾಂಬ್ ಆಗಿ ಬಳಸಿಕೊಂಡಿದ್ದರಿಂದ ಮತ್ತೆ ಇಂಗ್ಲೆಂಡ್ ವಸಾಹತುಗಳನ್ನು ಕಳೆದುಕೊಳ್ಳಬೇಕಾಯಿತಂತೆ. ಹೀಗೆ ತಲೆತಲಾಂತರದಿಂದ ಬುಡಬುಕೆ ಜನಾಂಗ, ಹಾಲಕ್ಕಿ ನುಡಿ, ರೈಸ್ ಪುಲ್ಲಿಂಗ್, ಅದನ್ನು ಪಡೆದು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಮುಗಿಬಿದ್ದವರ ಕತೆ ಮುಂದುವರೆಯುತ್ತಾ ಬಂದಿದೆ.

ಇಂಥದ್ದೇ ನಂಬಿಕೆ, ಆಚರಣೆ, ಲೋಕಕಲ್ಯಾಣಕ್ಕೆಂದು ಇರುವ ಶಕ್ತಿಯ ದುರುಪಯೋಗಕ್ಕೆ ಬಿದ್ದವರ ದುರಾಸೆ, ಹೀನಕೃತ್ಯಗಳು ಮತ್ತು ಅದಕ್ಕೆ ಬಲಿಪಶುಗಳಾಗುತ್ತಿರುವ ಬುಡಬುಡಕೆ ಜನಾಂಗದ ಒಳಬಾಧೆಗಳನ್ನು `ತಾರಕಾಸುರ’ ಎಂಬ ಕಮರ್ಷಿಯಲ್ ಸಿನಿಮಾದ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ. ಯಾಕೆಂದರೆ ಇತಿಹಾಸದಲ್ಲಿ ನಡೆದಂತಾ ಘಟನೆಗಳು ಇಲ್ಲೂ ಜರುಗುತ್ತವೆ. ತನ್ನ ಮಗಳ ಶವವನ್ನು ತನ್ನ ತಂತ್ರ ಸಾಧನೆಗಾಗಿ ಬಳಸಿಕೊಂಡರು ಎನ್ನುವ ಕಾರಣಕ್ಕಾಗಿ ಒಂದು ಊರಿನಲ್ಲಿ ನೆಲೆನಿಂತ ಬುಡಬುಡಕೆ ಜನಾಂಗದವರನ್ನು ಜೀವಂತ ಸುಟ್ಟು, ಮಿಕ್ಕವರನ್ನು ಊರು ಬಿಟ್ಟುಹೋಗಿ ದಿಕ್ಕಾಪಾಗುವಂತೆ ಮಾಡಿರುತ್ತಾನೆ. ಆವಾಗ ಅದೇ ಜನಾಂಗ ಮತ್ತವರ ತಂತ್ರ ವಿದ್ಯೆಯಿಂದ ತನಗೆ ಅಪಾರ ಸಂಪತ್ತು ಗಳಿಕೆಯಾಗುತ್ತದೆ ಅನ್ನೋದು ಗೊತ್ತಾಗುತ್ತದರೋ ಅದೇ ಜನರ ಬೆನ್ನುಬೀಳುತ್ತಾನೆ.

ಸಿನಿಮಾದ ಹೀರೋ ಕಾರ್ತಿಕೇಯ ಅಲಿಯಾಸ್ ಕಾರ್ಬನ್ ಕೂಡಾ ಸಿದ್ಧಿ ಪಡೆದ ಬುಡಬುಕೆ ಜನಾಂಗದವನು. ಊರ ಶ್ರೀಮಂತ ಕಾಳಿಂಗನ ಕಾಟದಿಂದ ತಪ್ಪಿಸಿಕೊಂಡು ಸಿಟಿ ಸೇರೋ ಈತ ಬೇರೊಂದು ಲೋಕಕ್ಕೆ ಒಗ್ಗಿಕೊಂಡು, ಕೆಲಸ, ಹುಡುಗಿ ಅಂತಾ ಬ್ಯುಸಿಯಾಗಿರುತ್ತಾನೆ. ಈ ಮಧ್ಯೆ ಪ್ರೀತಿಯ ವಿಚಾರದಲ್ಲಿ ಏನೇನೋ ಏರುಪೇರುಗಳಾಗುತ್ತವೆ. ಪರಿಸ್ಥಿತಿ ಮತ್ತವನ್ನು ಹಳೆಯ ತಂತ್ರವಿದ್ಯೆಯತ್ತ ಎಳೆದೊಯ್ಯುತ್ತದೆ. ಬೇಡವೆಂದು ಬಿಟ್ಟುಬಂದ ಹಾಲಕ್ಕಿ ನುಡಿ, ಜೋಡಿ ಜೀವದ ಹೆಣ, ಬೆತ್ತಲೆ ಪೂಜೆಗಳೆಲ್ಲಾ ಮರುಕಳಿಸುತ್ತವೆ. ತನ್ನವರನ್ನು ಕೊಂದವನಿಗಾಗಿ ತಯಾರಾದ ಆ ಪೂಜೆ ಫಲಪ್ರದವಾಗುತ್ತದಾ? ತಾನು ಪ್ರೀತಿಸಿದ ಹುಡುಗಿ ಮತ್ತೆ ಈತನಿಗೆ ಯಾವ ರೂಪದಲ್ಲಿ ಎದುರಾಗುತ್ತಾಳೆ? ಎಂಬೆಲ್ಲಾ ಕುತೂಲಹಗಳು ನೋಡುಗರಿಗೆ ಹೊಸಾ ಅನುಭವ ನೀಡುತ್ತವೆ.

ಬಹುಶಃ ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಯಾರು ಮುಟ್ಟದ ಕಥಾವಸ್ತು `ತಾರಕಾಸುರ’ ಚಿತ್ರದ್ದು. ಈ ಹಿಂದೆ ಇದೇ ನಿರ್ದೇಶಕ ಬಂಡಿಯಪ್ಪ `ರಥಾವರ’ದಲ್ಲಿ ಮಂಗಳಮುಖಿಯರ ವಿಚಿತ್ರ ಜಗತ್ತನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದರು. ಈ ಬಾರಿ ಬುಡಬುಡಕೆ ಜನಾಂಗದವರ ವಿಚಾರವನ್ನು ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ. ಇತಿಹಾಸವನ್ನು ಹೇಳುತ್ತಲೇ ವಾಸ್ತವದ ಜೊತೆಗೆ ಕಮರ್ಷಿಯಲ್ ಕತೆಯನ್ನು ಬೆರೆಸಿರುವುದು ಬಂಡಿಯಪ್ಪನವರ ಜಾಣ್ಮೆ. ಈ ಚಿತ್ರದ ಹೀರೋ ವೈಭವ್ ಹೊಸಬನಾದರೂ ಸಾಹಸ ದೃಷ್ಯಗಳಲ್ಲಿ ರೋಚಕವಾಗಿ ಅಭಿನಯಿಸಿದ್ದಾರೆ. ನಾಯಕಿ ಮಾನ್ವಿತಾ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ. ತೆರೆಮೇಲೆ ಈಕೆ ಇನ್ನೊಂಚೂರು ಕಾಣಿಸಿಕೊಳ್ಳಬೇಕಿತ್ತು ಅನ್ನೋದು ನೋಡುಗರ ಕೊರಗಾಗಿರಬಹುದು.

ಖಳನಾಯಕನಾಗಿ ನಟಿಸಿರುವ ಡ್ಯಾನಿ ಸಫಾನಿ ನಿಜಕ್ಕೂ ಭಯ ಹುಟ್ಟಿಸುತ್ತಾರೆ. ಆದರೆ ಅವರ ಪಾತ್ರಕ್ಕೆ ಇನ್ನೂ ಖಡಕ್ಕು ದನಿಯನ್ನು ಬಳಸಬೇಕಿತ್ತು. ಒಟ್ಟಾರೆ ಸಿನಿಮಾದಲ್ಲಿ ಸಾಹಸದೃಶ್ಯಗಳು ಹೆಚ್ಚು ಶಕ್ತಿಯುತವಾಗಿವೆ. ಸಾಧು ಕೋಕಿಲಾ ಹಾಸ್ಯ ಸನ್ನಿವೇಶಗಳೂ ಸಶಕ್ತವಾಗಿವೆ. ನಾಯಕ ನಟ ವೈಭವ್ ಹೊಡೆದಾಟಗಳಲ್ಲಿ ಮಾತ್ರವಲ್ಲದೆ ಡ್ಯಾನ್ಸ್ ಮಾಡಿಯೂ ಮೋಡಿ ಮಾಡುತ್ತಾರೆ.

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz