One N Only Exclusive Cine Portal

ಅವರು ಪೋಲಿಯಲ್ಲ, ನಮ್ಮ ಕನ್ನಡಿ!

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಅನೇಕ ಪ್ರತಿಭೆಗಳನ್ನು ಬೆಳಕಿಗೆ ತಂದ ಕಾಶೀನಾಥ್ ಇನ್ನಿಲ್ಲ. ಇಡೀ ಸಮಾಜ ಮಡಿವಂತಿಕೆಯ ಮಡುವಲ್ಲಿ ಗುಮ್ಮಗೆ ಕೂತಿರುವಾಗ ಸಿನಿಮಾದಂಥಾ ಪರಿಣಾಮಕಾರಿ ಮಾಧ್ಯಮಗಳ ಮೂಲಕ ಅದನ್ನು ಕೆದಕೋದು ಸವಾಲಿನ ಕೆಲಸ. ಆದರೆ ಸಿನಿಮಾ ಜಗತ್ತು ಕೂಡಾ ಸಾಮಾಜಿಕ ಚೌಕಟ್ಟಿನಲ್ಲಿಯೇ ಗಿರಕಿ ಹೊಡೆಯುತ್ತಿದ್ದ ಘಳಿಗೆಯಲ್ಲಿಯೇ ಅನುಭವದಂಥಾ ಚಿತ್ರ ಮಾಡಿದ್ದು ಕಾಶೀನಾಥ್ ಅವರ ಭಿನ್ನ ಹಾದಿಗೆ ಸ್ಪಷ್ಟ ಉದಾಹರಣೆ. ಕಾಶೀನಾಥ್ ಎಂಬ ಪ್ರತಿಭೆ ಕನ್ನಡ ಚಿತ್ರರಂಗದಲ್ಲಿ ಭಿನ್ನವಾಗಿ ನಿಲ್ಲೋದೂ ಕೂಡಾ ಅದೇ ಕಾರಣದಿಂದ!


ಕುಂದಾಪುರ ಕೋಟೇಶ್ವರದ ಬಡ ಬ್ರಾಹ್ಮಣ ಕುಟುಂಬದಿಂದ ಬಂದ ಕಾಶೀನಾಥ್ ಅನುಭವದಂಥಾ ಚಿತ್ರ ಮಾಡಿದ್ದಾಗ ಕೆಲ ಮಡಿವಂತಿಕೆಯ ಸೋಗು ಹಾಕಿದ ಮಂದಿ ಪೋಲಿ ಅಂತೆಲ್ಲ ಜರಿದಿದ್ದರು. ಆದರೆ ತಮ್ಮ ಆಲೋಚನೆಯ ಬಗ್ಗೆ ಗಟ್ಟಿ ನಿಲುವು ತಾಳಿದ್ದ ಕಾಶೀನಾಥ್ ಅದ್ಯಾವುದರಿಂದಲೂ ವಿಚಲಿತರಾಗಲಿಲ್ಲ. ಹಾಗೆ ಮುದುಡಿ ಕೂತಿದ್ದರೆ ಆ ನಂತರದಲ್ಲಿ ಮತ್ತಷ್ಟು ಚಿತ್ರಗಳು ಅವರ ಕಡೆಯಿಂದ ಬರೋದು ಸಾಧ್ಯವಾಗುತ್ತಲೂ ಇರಲಿಲ್ಲ.


ಹೀಗೆ ಅನುಭವ ಎಂಬ ಚಿತ್ರ ಮಾಡಿದ ಕಾಲದಲ್ಲಿ ಮಡಿವಂತಿಕೆಯ ಜನರಿಂದ ಭಾರೀ ವಿರೋಧಾಭಾಸಗಳನ್ನು ಎದುರಿಸಿದ್ದರಲ್ಲಾ ಕಾಶೀನಾಥ್? ಅದೆಲ್ಲದಕ್ಕೂ ಅವರೇ ಸ್ಪಷ್ಟವಾದ ಉತ್ತರ ಕೊಟ್ಟಿದ್ದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ. `ನನ್ನ ಸಿನಿಮಾ ನೋಡಿದವರು ಅದರಲ್ಲಿನ ಕಥೆಯನ್ನು ಕಂಡು ಪೋಲಿ ಅಂತೆಲ್ಲ ಹೇಳ್ತಾರೆ. ಆದ್ರೆ ನಾನು ಪೋಲಿಯಲ್ಲ, ನಾನು ಈ ಸಮಾಜದ ಜನರ ಮನಸ್ಥಿಯ ಕನ್ನಡಿಯಷ್ಟೆ’ ಅನ್ನುವ ಮೂಲಕ ತಮ್ಮ ಚಿತ್ರಗಳ ಬಗ್ಗೆ ತಾವೇ ಒಂದು ದೃಷ್ಟಿಕೋನವನ್ನು ಕಟ್ಟಿಕೊಟ್ಟು ದೇಹ ಸೋತ ಕಾಲದಲ್ಲಿಯೂ ನವೋಲ್ಲಾಸದಿಂದಲೇ ಮಾತಾಡಿದ್ದವರು ಕಾಶೀನಾಥ್.
ತಾವು ಬೆಳೆಯೋ ಜೊತೆಗೆ ಇತರ ಪ್ರತಿಭಾವಂತರನ್ನೂ ಬೆಳೆಸಬೇಕೆಂಬ ಪ್ರಾಮಾಣಿಕ ಕಾಳಜಿ ಇದ್ದ ಕಾಶೀನಾಥ್ ಅವರಿಂದಲೇ ಬೆಳಕು ಕಂಡವರನೇಕರು ಕನ್ನಡ ಚಿತ್ರ ರಂಗದಲ್ಲಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ಸಂಗೀತ ನಿರ್ದೇಶಕ ವಿ. ಮನೋಹರ್ ಮುಂತಾದವರೆಲ್ಲ ಕಾಶೀನಾಥ್ ಗರಡಿಯಲ್ಲಿಯೇ ಪಳಗಿಕೊಂಡಿದ್ದವರು. ಇಂಥಾ ಕಾಶೀನಾಥ್ ಈಗೊಂದಷ್ಟು ವರ್ಷಗಳಿಂದ ನಾನಾ ದೈಹಿಕ ಸಂಕಟಗಳಿಂದ ನರಳಿದ್ದರು. ಅವರು ಮತ್ತೊಮ್ಮೆ ತಮ್ಮ ನಟನೆಯ ತಾಕತ್ತು ಅನಾವರಣಗೊಳಿಸಿದ್ದು ಚೌಕ ಮತ್ತು ಜ಼ೂಮ್ ಚಿತಗಳ ಮೂಲಕ. ಚೌಕ ಚಿತ್ರದಲ್ಲಿ ಮಗಳನ್ನು ದುಷ್ಟರ ದೆಸೆಯಿಂದ ಕಳೆದುಕೊಂಡು ವಿನಾಕಾರಣ ಆರೋಪ ಹೊತ್ತು ಜೈಲು ಸೇರಿದ ಬಡ ತಂದೆಯಾಗಿ ನಟಿಸಿದ ಕಾಶೀನಾಥ್ ಅವರು ಈ ತಲೆಮಾರನ್ನೂ ಕೂಡಾ ಆವರಿಸಿಕೊಂಡಿದ್ದಾರೆ.


ಈ ಚಿತ್ರದಲ್ಲಿ ಕಾಶೀನಾಥ್ ಅಷ್ಟೊಂದು ಭಾವಪೂರ್ಣವಾಗಿ, ಎನರ್ಜೆಟಿಕ್ ಆಗಿ ನಟಿಸಿದ್ದರಲ್ಲಾ? ಆ ಘಳಿಗೆಯಲ್ಲಿಯೇ ಕ್ಯಾನ್ಸರ್ ಎಂಬ ಮಹಾಮಾರಿ ಅವರ ದೇಹ ಹಿಂಡುತ್ತಿತ್ತು. ಆ ನೋವಿನ ನಡುವೆಯೂ ಚಿತ್ರವನ್ನು ಒಪ್ಪಿಕೊಂಡು ಒಂದು ದಿನವೂ ತಪ್ಪಿಸದೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ಕಾಶೀನಾಥ್ ಅವರ ಸಿನಿಮಾ ಪ್ರೀತಿಗೊಂದು ಉದಾಹರಣೆ. ಅಂಥಾ ಪ್ರೀತಿ ಇಲ್ಲದೇ ಹೋಗಿದ್ದರೆ ಬಹು ಕಡಿಮೆ ಬಜೆಟ್ಟಿನಲ್ಲಿ ಚಿತ್ರ ಮಾಡಿದರೂ ಬಾಲಿವುಡ್ ಮಂದಿಯೇ ಕಣ್ಣರಳಿಸುವಂಥಾ ಚಿತ್ರ ನಿರ್ದೇಶನ ಮಾಡೋದು ಸಾಧ್ಯವಾಗುತ್ತಿರಲಿಲ್ಲವೇನೋ. ಕಾಶೀನಾಥ್ ನಿರ್ದೇಶನದ ಅಜಗಜಾಂತರ ಚಿತ್ರ ಜುದಾಯಿ ಎಂಬ ಹೆಸರಲ್ಲಿ ಹಿಂದಿಗೆ ರೀಮೇಕ್ ಮಾಡಿದ್ದು ನಿಜಕ್ಕೂ ಕನ್ನಡದ ಹೆಮ್ಮೆ. ಅನಿಲ್ ಕಪೂರ್, ಶ್ರೀದೇವಿ, ಊರ್ಮಿಳಾ ಮಾತೊಂಡ್ಕರ್ ನಟಿಸಿದ್ದ ಜುದಾಯಿ ಅಲ್ಲಿಯೂ ಯಶ ಕಂಡಿತ್ತು. ಕಾಶೀನಾಥ್ ಎಂಬ ಕುಬ್ಜ ದೇಹದ ದೈತ್ಯ ಪ್ರತಿಭೆಗೆ ಇದಕ್ಕಿಂಥಾ ಬೇರೆ ಸಾಕ್ಷಿ ಬೇಕಾ?


ಅಷ್ಟಕ್ಕೂ ಕಾಶೀನಾಥ್ ನೆನಪಿನ ಶಕ್ತಿಯನ್ನೇ ಕಳೆದುಕೊಂಡಂಥಾ ಸ್ಥಿತಿ ತಲುಪಿ ಬಹಳಷ್ಟು ವರ್ಷಗಳಾಗಿದ್ದವು. ಆದರೆ, ಮತ್ತೊಮ್ಮೆ ಸಿನಿಮಾ ಒಂದನ್ನು ನಿರ್ದೇಶನ ಮಾಡಿ ಮತ್ತೆ ಒಂದು ಮನ್ವಂತರಕ್ಕೆ ನಾಂದಿ ಹಾಡಬೇಕೆಂಬ ತುಡಿತ ಮಾತ್ರ ಅವರೊಳಗೆ ಸದಾ ಜೀವಂತವಾಗಿತ್ತು. ಆದರೆ ಅನಾರೋಗ್ಯವೆಂಬುದು ಅದಕ್ಕೆ ಆಸ್ಪದ ಕೊಡದೆ ಅವರನ್ನು ಕರೆದೊಯ್ದಿದೆ. ಆದರೆ ಅವರ ಭಿನ್ನ ಆಲೋಚನೆ, ಕ್ರಿಯೇಟಿವ್ ಮನಸ್ಥಿತಿಗಳೆಲ್ಲವೂ ಕನ್ನಡ ಚಿತ್ರರಂಗದ ಮೈಲಿಗಲ್ಲಾಗಿ ಸದಾ ಕಣ್ಣೆದುರಿರುತ್ತದೆ.

Leave a Reply

Your email address will not be published. Required fields are marked *


CAPTCHA Image
Reload Image