One N Only Exclusive Cine Portal

ಅಗಲಿದ ಸಾಧಕರ ನೆನಪು ವಾಸ್ತವವನ್ನು ಬಿಟ್ಟುಕೊಡದಿರಲಿ…

ಕನ್ನಡದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ನಿಧನರಾಗಿದ್ದಾರೆ. ಅದಕ್ಕಾಗಿ ಎಲ್ಲರಲ್ಲೂ ವಿಷಾದವಿದೆ; ಅವರಿಗೊಂದು ನುಡಿನಮನ ಸಲ್ಲಿಸುತ್ತಲೇ ಅಂತಹ ಕಲಾವಿದ,ನಟ, ನಿರ್ದೇಶಕನೊಬ್ಬನನ್ನು ಆತನ ಸಾಧನೆ, ಮಿತಿಗಳ ನಡುವಿನಲ್ಲಿಯೇ ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ.

ಕಾಶಿನಾಥ್ ಕನ್ನಡ ಚಿತ್ರರಂಗದಲ್ಲಿ ಬೆಳೆದು ಬಂದ ಹಾದಿಯ ಹಿನ್ನೆಲೆ ಏನೇ ಇರಲಿ, ಅವರು ಸಾಂಸ್ಕೃತಿಕ ಮಾಧ್ಯಮಗಳಲ್ಲೊಂದಾದ ಚಿತ್ರಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ ಬಗೆಯನ್ನು ಇದೀಗ ನಾವು ಹಿಂದಿರುಗಿ ವಸ್ತುನಿಷ್ಠವಾಗಿ ನೋಡಬೇಕಿದೆ.

70ರ ದಶಕದಲ್ಲಿ ಹೊಸ ಅಲೆಯ ಚಿತ್ರಗಳ ನಡುವೆ ಕಾಶಿನಾಥ್ ಯುವ ಕಥೆಗಾರರಾಗಿ ಚಿತ್ರರಂಗಕ್ಕೆ ಕಾಲಿಟ್ಟ ದಿನಗಳಲ್ಲಿ ‘ಸಸ್ಪೆನ್ಸ್’ ಚಿತ್ರಗಳಲ್ಲಿ ಪಳಗಿದ್ದವರು ಸುರೇಶ್ ಹೆಬ್ಳೀಕರ್ ರಂತಹ ಭಿನ್ನ ಶೈಲಿಯ ನಿರ್ದೇಶಕರು( ಅವರ ಗರಡಿಯಲ್ಲೇ ಪಳಗಿದ ಕಾಶೀನಾಥ್ ‘ಕಾಮ ಪ್ರಧಾನ’ ನೆಲೆಯ ಕಥೆಗಳನ್ನು ಬೆಳ್ಳಿತೆರೆಗೆ ಒಗ್ಗಿಸುವುದನ್ನು ಅವರಿಂದಲೇ ಕಲಿತರು). ಅಂದಿನ ‘ಕಾಡಿನ ಬೆಂಕಿ’, ‘ಆಲೆಮನೆ’, ‘ಪ್ರಥಮ ಉಷಾ ಕಿರಣ’ ಮತ್ತಿತರೆ ಸಿನಿಮಾಗಳನ್ನು ಗಮನಿಸಿದರೆ ಹೆಬ್ಳೀಕರ್ ಅವರ ಕುತೂಹಲಕಾರಿ ಕಥೆಗಳ ಜೊತೆಯಲ್ಲಿಯೇ ಅವರ ನೀರಸ ಅಭಿನಯ ಮುಂದೆ ಕಾಶಿನಾಥ್ ಅವರ ಭಾವಾಭಿವ್ಯಕ್ತಿಗಳಲ್ಲೂ ಮುಂದುವರಿದುದನ್ನು ಗಮನಿಸಬಹುದು.
‘ಅಪರಿಚಿತ’ ಸಿನಿಮಾಕ್ಕೆ ಕಾಶೀನಾಥ್ ಕಥೆ ಬರೆದಾಗ ಅವರಾಗ 18ರ ಪ್ರಾಯದ ಹುಡುಗ ಎಂಬುದು ಅಂದಿನ ದಿನಗಳಲ್ಲಿ ಸ್ವಾರಸ್ಯ ಹುಟ್ಟಿಸಿದ್ದ ಸಂಗತಿ.

ಮುಂದೆ ಕಾಶೀನಾಥ್ ಅವರು ‘ಅಪರಿಚಿತ’, ‘ಅನಾಮಿಕ’ದಂತಹ ಸಸ್ಪೆನ್ಸ್ ಚಿತ್ರಗಳನ್ನು ನಿರ್ದೇಶಿಸಿ ಹೊಸ ತಲೆಮಾರಿನ ಕುತೂಹಲಕಾರಿ ಪ್ರೇಕ್ಷಕರು ಗಮನಿಸುವಂತೆ ಗುರುತಿಸಿಕೊಂಡರು. ‘ಅನಾಮಿಕ’ ಚಿತ್ರವನ್ನು ನೋಡಿದವರು ಆ ಸಿನಿಮಾ ಮುಂದೆ ಕಾಶಿನಾಥ್ ಅವರ ಶಿಷ್ಯರಲ್ಲೊಬ್ಬರಾದ ಸುನಿಲ್ ಕುಮಾರ್ ಅವರ ‘ ಬೆಳದಿಂಗಳ ಬಾಲೆ’ ಚಿತ್ರಕ್ಕೆ ಪ್ರೇರಣೆ ಒದಗಿಸಿದ್ದನ್ನು ಗಮನಿಸಿದರೆ ಕಾಶಿನಾಥ್ ಅವರಲ್ಲಿ ಅಂದಿನ ದಿನಗಳಲಿದ್ದ ಉತ್ಸಾಹ ಮನದಟ್ಟಾಗುತ್ತದೆ.
‘ಅನುಭವ’ ಚಿತ್ರದ ಮೂಲಕ ಕನ್ನಡ ಚಿತ್ರ ಪರಂಪರೆಗೆ ‘ಕಾಮ ಪ್ರಧಾನ’ ನೆಲೆಗಳನ್ನು ಅದರ ವಾಸ್ತವವಾದಿ ದೃಷ್ಟಿಕೋನದಲ್ಲಿ, ಸ್ವಲ್ಪ ಪ್ರಚೋದನಕಾರಿ ಶೈಲಿಯಲ್ಲಿ ಕಟ್ಟಿಕೊಟ್ಟ ಕಾಶೀನಾಥ್ ಮುಂದೆ ಅದೇ ಮಾದರಿಯ ಸಿನಿಮಾಗಳಿಗೆ ಬ್ರ್ಯಾಂಡ್ ಆಗುತ್ತಾರೆಂದು ಯಾರೂ ಊಹಿಸಿರಲಿಲ್ಲವೇನೊ?
ಸುಮ್ಮನೆ ಗಮನಿಸಿ, ‘ಅನುಭವ’ದ ನಂತರ ಕಾಶೀನಾಥ್ ಸೀರಿಯಸ್ ಆಗಿ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದು ‘ಅನಂತನ ಅವಾಂತರ’, ‘ಅಜಗಜಾಂತರ’ ಸಿನಿಮಾಗಳಲ್ಲಿ ಮಾತ್ರ. ಈ ಸಿನಿಮಾಗಳು ಕೂಡ ‘ಎ’ ಸರ್ಟಿಫಿಕೇಟ್ ಸಿನಿಮಾಗಳಿಂದಾಚೆ ಇನ್ನೇನನ್ನೂ ಹೊಸದಾಗಿ ಕನ್ನಡ ಪ್ರೇಕ್ಷಕನಿಗೆ ಹೇಳಲಿಲ್ಲ.  ಈ ನಡುವೆ ಅವರಿಗೆ ಹೆಸರು ತಂದುಕೊಟ್ಟಿದ್ದು ‘ಅವಳೇ ನನ್ನ ಹೆಂಡ್ತಿ’ ಚಿತ್ರ. ಇದು ಒಂದು ವರ್ಷದವರೆಗೂ ಥಿಯೇಟರ್ ಗಳಲ್ಲಿ ನಿಂತಿದ್ದು ಅಂದಿನ ದಾಖಲೆಗಳಲ್ಲೊಂದು(ನಿರ್ದೇಶಕರು: ಎಸ್. ಉಮೇಶ್).

‘ಅನಂತನ ಅವಾಂತರ’ದ ಸಣ್ಣ ಸಕ್ಸೆಸ್ ನಂತರ ಅದೇ ಕಾಮ ಪ್ರಚೋದಕತೆ, ಅಶ್ಲೀಲ ಸಂಭಾಷಣೆಯ ಜಾಡು ಹಿಡಿದ ಕಾಶೀನಾಥ್ ಕೊನೆಯವರೆಗೂ ಒಳ್ಳೆಯ ಚಿತ್ರ ನಿರ್ದೇಶಿಸಲು ಆಗಲೇ ಇಲ್ಲ. ‘ಕಾಮ’, ‘ಲವ್’ ಎನ್ನುವುದನ್ನು ತೆಳು ನಿರೂಪಣೆಗಳ ಮೂಲಕ ಕಾಣಲು ಯತ್ನಿಸಿದ ಕನ್ನಡದ ಮೂರನೇ ದರ್ಜೆಯ ನಿರ್ದೇಶಕರು ಅವರನ್ನು ಅದೇ ಮಾದರಿಯ ಸಿನಿಮಾಗಳಿಗೆ ಬ್ರ್ಯಾಂಡ್ ಮಾಡಿಬಿಟ್ಟರು. ಅಂತಹ ಸರಣಿ ಸಿನಿಮಾಗಳ ಸಾಲಿನಲ್ಲಿ ‘ಚಪಲ ಚನ್ನಿಗರಾಯ, ‘ತಾಯಿಗೊಬ್ಬ ತರ್ಲೆ ಮಗ’, ‘ಪ್ರೇಯಸಿ ಪ್ರೀತಿಸು’, ‘ಮನ್ಮಥ ರಾಜ’, ಸುರ ಸುಂದರಾಂಗ’, ‘ಪೋಲಿ ಕಿಟ್ಟಿ’, ‘ಕಲಿಯುಗ ಕೃಷ್ಣ’, ‘ಲವ್ ಟ್ರೇನಿಂಗ್’, ‘ರಂಭೆ ಊರ್ವಶಿ ಮೇನಕೆ’, ‘ಹಲೋ ಯಮ’ ಮುಂತಾದ ಕೆಟ್ಟ ಸಿನಿಮಾಗಳೆಲ್ಲವೂ ಸೇರಿಕೊಂಡವು.
ಅಂದಿನ ದಿನಗಳಲ್ಲಿ ಕಾಶಿನಾಥ್ ಅವರಿಗಿದ್ದ ಇದೇ ‘ಪೋಲಿತನ’ದ ಡಿಮ್ಯಾಂಡ್ ಅನ್ನು ಬಳಸಿಕೊಳ್ಳಲು ಕನ್ನಡದ ಪ್ರಬುದ್ಧ ನಿರ್ದೇಶಕರಾದ ಭಾರ್ಗವ, ಕೆ.ವಿ. ಜಯರಾಮ್, ಟಿ.ಎಸ್. ನಾಗಾಭರಣ, ರಾಮದಾಸನಾಯ್ಡು, ಪಿ.ಎಚ್. ವಿಶ್ವನಾಥ್ ಮತ್ತಿತರರು ಹಿಂದೆ ಬೀಳಲಿಲ್ಲ ಎನ್ನುವುದು ಬೇಸರದ ಸಂಗತಿ. ಇವೆಲ್ಲವೂ ಕಾಶಿನಾಥ್ ಅವರೊಳಗಿದ್ದ ಭಿನ್ನ ಆಲೋಚನೆಯ ನಿರ್ದೇಶಕನನ್ನು ಕೊಂದು ಹಾಕಿದವು.

ಕೊನೆಯ ದಿನಗಳಲ್ಲಿ ತಮ್ಮ ಮಗನಿಗಾಗಿ ಮಾಡಿದ ’12pm’  ಎಂಬ ಹಾರರ್ ಸಿನಿಮಾದಲ್ಲೂ ಕೂಡ ಕಾಶಿನಾಥ್ ತಮ್ಮ ಪ್ರತಿಭೆಗೆ ಸಾಣೆ ಹಿಡಿಯಲಾಗಲಿಲ್ಲ.

ತಮಿಳಿನ ಮಧ್ಯಮವರ್ಗದ ಡಾರ್ಲಿಂಗ್ ಡೈರೆಕ್ಟರ್ ಎನ್ನಿಸಿಕೊಂಡಿದ್ದ ಭಾಗ್ಯರಾಜ್ ಅವರ ಕೆಲವು ರಿಮೇಕ್ ಸಿನಿಮಾಗಳಲ್ಲಿ ಕಾಶಿ ಕಾಣಿಸಿಕೊಂಡರೂ ಸಕ್ಸಸ್ ನಿಂದ ದೂರವೇ ಉಳಿದರು(‘ಲವ್ ಮಾಡಿ ನೋಡು’ ಮತ್ತಿತರೆ ಸಿನಿಮಾಗಳು).

ಅಭಿನಯದ ವಿಷಯದಲ್ಲೂ ಪೇಲವತೆಯನ್ನೇ ಪ್ಲಸ್ ಪಾಯಿಂಟ್ ಆಗಿಸಿಕೊಂಡರೂ ಕಾಶಿನಾಥ್ ಕೊನೆಯವರೆಗೂ ಅದೇ ‘ಪ್ಯಾದೆತನ’ವನ್ನೇ ತಮ್ಮ ultimate ಅಭಿನಯ ಎಂದುಕೊಳ್ಳುತ್ತಲೇ ಸೋತು ಹೋದರು….

ಇಂತಹ ನಿರ್ದೇಶಕ ಕಳೆದುಹೋಗಿರುವ ಈ ಸಂದರ್ಭದಲ್ಲಿ ಕನ್ನಡದ ಮೀಡಿಯಾಗಳು ಯಾವ ಸಮಗ್ರ ದೃಷ್ಟಿಕೋನವೂ ಇಲ್ಲದೆ ಕನ್ನಡದ ಪ್ರತಿಭಾವಂತ ನಿರ್ದೇಶಕ,  ನಟನೊಬ್ಬನನ್ನು  ಓತಪ್ರೋತವಾಗಿ ಹೊಗಳುತ್ತಾ, ಅವನ ಕುರಿತು ವಿಮರ್ಶೆಯೇ ಇಲ್ಲದೆ ಮಾತನಾಡುತ್ತಾ ಆತನ ನಿಜವಾದ ಸಾಧನೆಗಳನ್ನು ಕಡೆಗಣಿಸುತ್ತಿರುವುದನ್ನು ನೋಡಿ ಬೇಸರವಾಗುತ್ತದೆ.

ಕೊನೆಯದಾಗಿ;
ಕಾಶಿನಾಥ್ ಅಂದಿನ ದಿನಗಳಲ್ಲಿ ಪ್ರತಿಭಾವಂತ ಕಥೆಗಾರ, ನಿರ್ದೇಶಕ. ಆದರೆ ‘ಬ್ರ್ಯಾಂಡ್’ನ ಅತಿರೇಕಗಳಿಗೆ ಸಿಲುಕಿ ಕೊನೆಯವರೆಗೂ ತನ್ನ ಪ್ರತಿಭೆಯನ್ನು ಕಾಪಾಡಿಕೊಳ್ಳಲಾಗದ ನಿರ್ದೇಶಕ ಎಂದಷ್ಟೇ ಹೇಳಬಹುದು. ಅವರನ್ನು ಕೆಟ್ಟದಾಗಿ ದುಡಿಸಿಕೊಂಡ ಕನ್ನಡ ಚಿತ್ರರಂಗದ ಬಗ್ಗೆಯೂ ಇದೇ ವಿಷಾದ ನನ್ನಲ್ಲಿ ಉಳಿದಿದೆ.
– ಮಂಜುನಾಥ್ ಲತಾ

Leave a Reply

Your email address will not be published. Required fields are marked *


CAPTCHA Image
Reload Image