One N Only Exclusive Cine Portal

ನಮ್ಮಂತೆಯೇ ಇದ್ದ ಕಾಶೀನಾಥ್

ಕಾಶೀನಾಥ್ ಎಂದಾಕ್ಷಣ ನೆನಪಿಗೆ ಬರುವುದು ‘ಅಪರಿಚಿತ’ ಚಿತ್ರ. ಹೊಸ ಅಲೆಯ ಪ್ರಯೋಗಾತ್ಮಕ ಚಿತ್ರವನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕಾಶೀನಾಥ್, ಅಲ್ಲಿಂದ ಇಲ್ಲಿಯವರೆಗೆ ಹಲವಾರು ಚಿತ್ರಗಳಲ್ಲಿ ನಟಿಸಿ, ನಿರ್ದೇಶಿಸಿ, ನಿರ್ಮಿಸಿದ್ದಾರೆ. ಆದರೆ ಈಗಲೂ ಅವರು ಕನ್ನಡ ಚಿತ್ರರಂಗಕ್ಕೆ ಅಪರಿಚಿತರಾಗಿಯೇ ಉಳಿದುಹೋಗಿದ್ದಾರೆ.

ಇಂತಹ ಕಾಶೀನಾಥ್(67) ಇತ್ತೀಚಿನ ದಿನಗಳಲ್ಲಿ ಚಿತ್ರರಂಗದ ಚಟುವಟಿಕೆಗಳಿಂದ ದೂರವಾಗಿದ್ದರು. ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಆ ಬಗ್ಗೆ ಯಾರಿಗೂ ಹೇಳಿಕೊಂಡಿರಲಿಲ್ಲ. ಚಿತ್ರರಂಗದವರೂ ಕಾಶೀನಾಥ್ ರನ್ನು ವಿಚಾರಿಸಲಿಕ್ಕೆ ಹೋಗಿರಲಿಲ್ಲ. ಹಾಗಾಗಿ ಕಾಶೀನಾಥ್ ‘ಇದ್ದಾರೆ’ ಎನ್ನುವುದಷ್ಟೇ ಗೊತ್ತಿತ್ತು. ಕಳೆದ ಎರಡು ದಿನಗಳ ಹಿಂದಷ್ಟೇ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕಾಶೀನಾಥ್, ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ.

ಕುಂದಾಪುರ ಮೂಲದ, ಬಡ ಕುಟುಂಬದಲ್ಲಿ ಹುಟ್ಟಿ, ವಿಜ್ಞಾನ ಓದಿ, ಸಿನೆಮಾ ಗೀಳು ಹತ್ತಿಸಿಕೊಂಡು ಕಷ್ಟಪಟ್ಟು ಮೇಲೆ ಬಂದವರು ಕಾಶೀನಾಥ್, ಮೊದಲಿಗೆ ಸಣ್ಣಪುಟ್ಟ ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದರು. ಅವು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ನಂತರ, ಕಡಿಮೆ ಬಜೆಟ್ ನಲ್ಲಿ ಚಿತ್ರಗಳನ್ನು ನಿರ್ಮಿಸಿದರು. ಈ ಸಿನೆಮಾಗಳ ಯಶಸ್ಸು ಅವರನ್ನು ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರುವಂತೆ ಮಾಡಿತು. ನಾಯಕನಟನಾಗಿ, ಪೋಷಕ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ತಂತ್ರಜ್ಞನಾಗಿ ಇತಿಹಾಸದ ಪುಟಗಳಲ್ಲಿ ದಾಖಲಾದರು.

ಕಾಶೀನಾಥ್ ರಿಗೆ ಸಿನೆಮಾ ಪ್ಯಾಷನ್ ಆಗಿತ್ತು. ದಿನದ ಇಪ್ಪತ್ನಾಲ್ಕು ಗಂಟೆಯೂ ಯೋಚಿಸುವ ಗೀಳಾಗಿತ್ತು. ಹೊಸಹೊಸ ಪ್ರಯೋಗ, ಪ್ರಯತ್ನ, ಮಾನವ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆ ತಮ್ಮದೇ ಆದ ಮಾರ್ಗವನ್ನು ಕಂಡುಕೊಂಡ ಬಗೆ ವಿಶಿಷ್ಟವಾಗಿತ್ತು.  ತನ್ನ ಸುತ್ತಲಿನ ಜನರನ್ನು, ಅವರ ವರ್ತನೆಯನ್ನು, ಸಮಾಜದ ಅಂಕು-ಡೊಂಕುಗಳನ್ನು ತಮ್ಮದೇ ಆದ ಭಿನ್ನ ದೃಷ್ಟಿಕೋನದಲ್ಲಿ ನೋಡಿ, ಅಳೆದು, ಸಿನೆಮಾ ಎಂಬ ಪ್ರಭಾವಿ ಮಾಧ್ಯಮದ ಮೂಲಕ ಪ್ರೇಕ್ಷಕರ ಮುಂದಿಡುತ್ತಿದ್ದರು. ಕಾಶೀನಾಥರದ್ದು ಒಂದು ರೀತಿಯ ಹುಡುಕಾಟದ ಮನೋಭಾವ. ವಿಭಿನ್ನ ಕಥಾ ವಸ್ತುಗಳಿಂದ ಕನ್ನಡ ಚಿತ್ರರಸಿಕರಿಗೆ ಮೋಡಿ ಮಾಡಿದ್ದರು. ಕನ್ನಡ ಚಿತ್ರರಂಗದ ಒಬ್ಬ ಅತ್ಯುತ್ತಮ ಸಿನೆಮಾ ತಂತ್ರಜ್ಞ ಎನಿಸಿಕೊಂಡಿದ್ದರು. ಆದರೆ ಅವರ ಸೃಜನಶೀಲ ಪ್ರತಿಭೆಗೆ ದಕ್ಕಬೇಕಾದ ಪ್ರಶಸ್ತಿ, ಪುರಸ್ಕಾರಗಳು ಮತ್ತು ಗೌರವ ಚಿತ್ರೋದ್ಯಮದಿಂದ ದಕ್ಕಲಿಲ್ಲ.

ಕಾಶೀನಾಥ್ ರ ಚಿತ್ರಗಳು ಪೋಲಿ ಎಂದು ಬ್ರ್ಯಾಂಡ್ ಮಾಡುವವರಿರಬಹುದು. ಹಾಸ್ಯ ಪಾತ್ರ ಮಾಡಿ ಹಾಸ್ಯಾಸ್ಪದರಾಗಿರಬಹುದು. ಚಿತ್ರರಂಗದಿಂದ, ಮಾಧ್ಯಮಗಳಿಂದ, ಪ್ರೇಕ್ಷಕರಿಂದ ಗೇಲಿಗೊಳಗಾಗಿರಬಹುದು. ಆದರೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದ ಕಾಶೀನಾಥ್, ‘ನನ್ನ ಸಿನಿಮಾ ನೋಡಿದವರು ಅದರಲ್ಲಿನ ಕಥೆಯನ್ನು ಕಂಡು ಪೋಲಿ ಅಂತೆಲ್ಲ ಹೇಳುತ್ತಾರೆ. ಆದರೆ ನಾನು ಪೋಲಿಯಲ್ಲ, ನಾನು ಈ ಸಮಾಜದ ಜನರ ಮನಸ್ಥಿತಿಯ ಕನ್ನಡಿಯಷ್ಟೆ’ ಎಂದು ನೇರವಾಗಿ ಹೇಳಿದ್ದು ಇನ್ನೂ ನೆನಪಿದೆ.

ಹತ್ತು ವರ್ಷಗಳ ಹಿಂದೆ, ಅವಕಾಶಗಳಿಲ್ಲದೆ ಆರಾಮಾಗಿ ಮನೆಯಲ್ಲಿ ಕೂತಿದ್ದಾಗ, ಅವರನ್ನು ಕಂಡು, ಅವರ ಸಿನೆಮಾಯಾನದ ಬಗ್ಗೆ ಮಾತನಾಡಿದ್ದು ಇಲ್ಲಿದೆ.

ನನ್ನ ಹುಟ್ಟೂರು ಕುಂದಾಪುರ. ತಂದೆ ವಾಸುದೇವರಾವ್. ವ್ಯಾಪಾರಸ್ಥರು. ತಾಯಿ ಸರಸ್ವತಮ್ಮ. ನಾವು ಆರು ಮಂದಿ ಮಕ್ಕಳು. ಮೇ 8ರಂದು ನಾನು ಹುಟ್ಟಿದೆ ಅಂತ ಹೇಳ್ತರೆ, ಆದರೆ ನಾನು ಬರ್ತ್‌ಡೇ ಆಚರಿಸಿಕೊಳ್ಳಲ್ಲ. ಜನ ಯಾಕೆ ಬರ್ತ್‌ಡೇನಾ ಆಚರಿಸಿಕೊಳ್ಳುತ್ತಾರೋ ನನಗಂತೂ ಗೊತ್ತಾಗುತ್ತಿಲ್ಲ. ನಮಗೆ ಒಂದೊಂದು ವರ್ಷ ಕಳೆಯುತ್ತಿದ್ದಂತೆ ಸಾವಿಗೆ ಹತ್ತಿರವಾಗುತ್ತಿರುತ್ತೇವೆ. ಇದನ್ನು ನಾವು ಸಂತೋಷದಿಂದ ಆಚರಿಸಿಕೊಳ್ಳಬೇಕಾ? ನಾವೇನಾದರೂ ಸಾಧನೆ ಮಾಡಿದ್ರೆ ಆಚರಿಸಿಕೊಳ್ಳೋದರಲ್ಲಿ ಅರ್ಥವಿದೆ. ನಮ್ಮಷ್ಟಕ್ಕೆ ನಾವು ಕೆಲಸ ಮಾಡ್ತಾ ಇರಬೇಕು ಅಷ್ಟೇ….

ನನಗೆ ವಿಜ್ಞಾನಿಯಾಗಬೇಕೆಂಬ ಆಸೆ ಇತ್ತು. ನಮ್ಮ ಚಿಕ್ಕಪ್ಪ ಜಿ.ಎಸ್.ಹತ್ವಾರ್ ವಿಜ್ಞಾನಿಯಾಗಿ ಅಮೆರಿಕದಲ್ಲಿದ್ದರು. ನಾನು ಅವರಂತೆ ವಿಜ್ಞಾನಿಯಾಗಿ ಅಮೆರಿಕಕ್ಕೆ ಹೋಗಬೇಕೆಂದಿದ್ದೆ. ಆದರೆ, ನನ್ನ ಆಸಕ್ತಿ ಡ್ರಾಮಾ ಕಡೆ ಹರಿಯಿತು. ಮೊದಲಿಗೆ ಸುರೇಶ್ ಹೆಬ್ಳೀಕರ್, ನಾವೆಲ್ಲ ಸೇರಿ ಯೂಥ್ ಫಿಲ್ಮ್ ಸೊಸೈಟಿ ಪ್ರಾರಂಭಿಸಿದೆವು. ನಮ್ಮದೇ ಪಾಕೆಟ್ ಮನಿಯಲ್ಲಿ 5 ನಿಮಿಷದ ಸೈಲೆಂಟ್ ಶಾರ್ಟ್ ಮೂವಿಗಳನ್ನು ಚಿತ್ರೀಕರಿಸಿದೆವು. ಅದು ನಮ್ಮ ಸಾಮರ್ಥ್ಯ, ಸವಾಲಾಗಿತ್ತು. ಐದು ನಿಮಿಷದ ದೃಶ್ಯಾವಳಿಗಳನ್ನು ಜನರಿಗೆ ತೋರಿಸಿದಾಗ ಅದರಲ್ಲಿ ನನ್ನನ್ನು ಗುರುತಿಸಿದರು. ನಾನು ಏನು ಹೇಳಬೇಕು ಎಂದಿದ್ದೆನೋ ಅದು ಜನರಿಗೆ ಅರ್ಥವಾಗಿತ್ತು, ಗೆದ್ದಿದ್ದೆ.

ಅಪ್ಪ ಚಿತ್ರಗಿತ್ರ ಅಂತ ಅಲೆಯುತ್ತೀಯ ಎಂದು ಬಯ್ತಿದ್ರು. ನನ್ನದು ಹಟದ ಸ್ವಭಾವ. ಈ ಬ್ಯುಸಿನೆಸ್ ಮಾಡಲು ಒಂದಷ್ಟು ಹಣ ಕೊಡುತ್ತೀರಲ್ಲ, ಅಷ್ಟು ಹಣ ಕೊಡಿ ಸಾಕು. ನಾನು ಈ ಸಿನೆಮಾದಲ್ಲೇ ಸಾಧಿಸಿ ತೋರಿಸುತ್ತೇನೆಂದೆ. ಹಾಗೆಯೇ ‘ಅಪರೂಪದ ಅತಿಥಿಗಳು’ ಚಿತ್ರ ಮಾಡಿದ್ದು. ಚಿತ್ರ ಓಡಿತು. ಹಾಕಿದ ಹಣ ಬಂತು. ಅಪ್ಪನಿಗೆ ಸಮಾಧಾನವಾಯ್ತು. ಹೀಗೆ ನಾನು ಮೊದಲು ನಿರ್ಮಾಪಕ, ನಿರ್ದೇಶಕ, ಆಮೇಲೆ ನಟ ಆದದ್ದು. ಇದರಲ್ಲೇ ಸಾಧನೆ ಮಾಡುತ್ತೇನೆಂಬ ನಿರ್ಧಾರ ಮಾಡಿದೆ. ವಿಭಿನ್ನ ಕಥೆ ಎತ್ತಿಕೊಂಡು ಚಿತ್ರಗಳನ್ನು ಮಾಡಲು ಶುರುಮಾಡಿದೆ.

ನನ್ನ ವೃತ್ತಿ ಜೀವನ ಶುರುವಾಗಿದ್ದೇ ಜಯನಗರದ ಮನೆಯಲ್ಲಿ. ನಮ್ಮದು ಅವಿಭಕ್ತ ಕುಟುಂಬ. ನಾನೆಲ್ಲೂ ಹೊರಗೆ ಹೋಗಿ  ಇಂಡಸ್ಟ್ರಿಯಲ್ಲಿ ಕಲಿತವನಲ್ಲ. ಸಿನಿಮಾ ಕುರಿತಂತೆ ಪುಸ್ತಕಗಳನ್ನು ಓದೋದು, ಸಿನಿಮಾ ನೋಡೋದು, ನುರಿತ ವ್ಯಕ್ತಿಗಳನ್ನು ಮನೆಗೇ ಕರೆಸಿಕೊಳ್ಳೋದು, ಸುತ್ತಮುತ್ತಲಿನ ಪರಿಸರ ನೋಡಿ ಕಲಿಯೋದು- ಒಂದು ರೀತಿ ಸುತ್ತಮುತ್ತಲಿನ ಪರಿಸರವೇ ನನ್ನ ಗುರು. ಒಂದು ಸಿನಿಮಾ ನನಗೆ ಇಷ್ಟವಾಯ್ತು ಅಂದ್ರೆ ಮತ್ತೆ ಮತ್ತೆ ನೋಡೋದು, ಹೇಗೆ ಆತ ಭಾವನೆಗಳು ಹೊರಹೊಮ್ಮುವಂತೆ ಅಭಿನುಸುತ್ತಾನೆ ಎಂಬುದನ್ನು ವಿಮರ್ಶಿಸೋದು- ಹೀಗೆ ನಾನು ಸ್ವಯಃ ಪರಿಶ್ರಮದಿಂದಲೇ ಏಕಲವ್ಯನಂತೆ ಬಣ್ಣದ ಜಗತ್ತಿನ ಬಗ್ಗೆ ತಿಳಿದುಕೊಂಡೆ. ಇದಕ್ಕೆ ಅರಿವನ್ನೇ ಗುರುವಾಗಿಸಿಕೊಂಡೆ. ತಿಳಿಯುವ, ಕಲಿಯುವ ಕುತೂಹಲಕ್ಕಾಗಿ ಬೇಕಾಗುವ ಪರಿಕರಗಳನ್ನು ಕಷ್ಟವೇ ಆದರೂ ಒದಗಿಸಿಕೊಳ್ಳುತ್ತಾ ಹೋದೆ. ಹೀಗಾಗಿ ನಮ್ಮ ಮನೇನೆ ಒಂದು ಇಂಡಸ್ಟ್ರಿಯಾಗಿ ಮಾರ್ಪಟ್ಟಿತು. ನಮ್ಮ ಮನೆಯೊಂದು  ಗುರುಕುಲವಾಯ್ತು. ನಮ್ಮ ಬಳಿ ಕಲಿಯಲು ಬರುತ್ತಿದ್ದವರೆಲ್ಲ ದುಡ್ಡಿಗಾಗಿ ಬರುತ್ತಿರಲಿಲ್ಲ. ನಾನು ಎಷ್ಟೊಂದು ಕೆಲಸ ಮಾಡಿಬಿಟ್ಟೆ ಅಂದುಕೊಂಡು ಬಿಟ್ಟರೆ ಆತ ಕಲಿಯಲೂ ಆಗುವುದಿಲ್ಲ.

ಒಬ್ಬ ಒಳ್ಳೆಯ ಕಥೆಗಾರ ನಿರ್ದೇಶಕ ಆಗಬೇಕಿಲ್ಲ, ನಿರ್ದೇಶಕ ಕಥೆಗಾರನೂ ಆಗಬೇಕಿಲ್ಲ. ಇವೆರೆಡೂ ಒಬ್ಬನೇ ಆಗಿರಲೂಬಹುದು. ಪದಗಳ ಮೂಲಕ ಕಥೆ ಹೆಣೆಯುವವನು ಒಬ್ಬ ರೈಟರ್. ಅದನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುವವನೇ ಡೈರೆಕ್ಟರ್. ಒಂದು ಸಿನಿಮಾಕ್ಕೆ ನಿರ್ದೇಶಕನೇ ಜೀವಾಳ. ಚಿತ್ರ ಚೆನ್ನಾಗಿದ್ರೆ ಆತ ಉತ್ತಮ ಡೈರೆಕ್ಟರ್, ಪಾತ್ರ ನೋಡಿ ಹೀರೋ ಮೆಚ್ಚಬೇಕೆ ಹೊರತು ಹೀರೋ ನೋಡಿ ಪಾತ್ರ ಮೆಚ್ಚೋದಲ್ಲ. ಎಷ್ಟೋ ಸಲ ನಮಗೆ ಇಷ್ಟ ಆಗಿದ್ದು, ಪಬ್ಲಿಕ್‌ಗೆ ಇಷ್ಟ ಆಗದೇ ಇರಬಹುದು. ಹಾಗೆ ನೋಡಿದರೆ ಬೆಸ್ಟ್ ಆಕ್ಟರ್ ಅವಾರ್ಡ್ ಕೊಡಲೇಬಾರದು. ಏಕೆಂದರೆ ಆ ಸಿನಿಮಾದಲ್ಲಿ ಒಬ್ಬ ಪೋಷಕ ನಟ ಕೂಡ ಉತ್ತಮವಾಗಿ ಅಭಿನಯಿಸಿರುತ್ತಾರೆ. ಕೇವಲ ಒಂದು ಸಿನಿಮಾಕ್ಕೆ ಒಬ್ಬ ನಟನಿಗೆ ಬೆಸ್ಟ್ ಆಕ್ಟರ್ ಅವಾರ್ಡ್ ಕೊಟ್ಟರೆ ಉಳಿದವರು ಪಾತ್ರ ಚೆನ್ನಾಗಿ ಮಾಡಿಲ್ಲ ಅಂಥ ಅರ್ಥವೆ?

ಒಬ್ಬ ನಿರ್ದೇಶಕನಿಗೆ ಟೆಕ್ನಿಕಲಿ ಗೊತ್ತಿರಲೇಬೇಕು. ಟೆಕ್ನಿಕಲ್ ಅಂದ್ರೆ ಕ್ಯಾಮರಾ ಒಳಗಿನ ಅಂಶವಲ್ಲ. ಸೀನ್‌ಗೂ ಸಾಂಗ್‌ಗೂ ವ್ಯತ್ಯಾಸವಿರುತ್ತದೆ. ಸಾಂಗಲ್ಲಿ ಹೇಗೋ ಕುಣಿಸಿಬಿಡಬಹುದು. ಆದರೆ ಸೀನ್‌ನಲ್ಲಿ ಆಗಲ್ಲ. ಮೌನ ಹಾಗೂ ಗಂಭೀರತೆಯನ್ನು ತರಬೇಕಾಗುತ್ತದೆ. ಕಥಾವಸ್ತುವಿನ ಆಯ್ಕೆ, ಅದರ ಪ್ರಸ್ತುತತೆ, ಅದರ ನಾಯಕ, ಅವನಿಗೆ ತಕ್ಕಂತಹ ಡೈಲಾಗ್, ಮ್ಯೂಸಿಕ್, ಅದರಿಂದ ಮೂಡ್ ಕ್ರಿಯೇಟ್ ಮಾಡೋದು- ಹೀಗೆ ಎಲ್ಲ ಹಂತದಲ್ಲಿ ಕಲಾವಿದರನ್ನು, ತಂತ್ರಜ್ಞರನ್ನು ಆತ ಸಮರ್ಪಕವಾಗಿ ದುಡಿಸಿಕೊಳ್ಳುವಂತಹ ಚಾಕಚಕ್ಯತೆ ನಿರ್ದೇಶಕನಿಗೆ ಇರಲೇಬೇಕು. ಆಗ ಮಾತ್ರ ಒಂದು ಚಿತ್ರ ಉತ್ತಮವಾಗಿ ಮೂಡಿಬರಲು ಸಾಧ್ಯ. ಲೈಟಿಂಗ್ ಹೇಗಿರಬೇಕು, ಲೆನ್ಸ್ ಯಾವುದು ಉಪಯೋಗಿಸಬೇಕು ಎಂಬುದರ ಜೊತೆಗೆ ಆತನಿಗೆ ಛಾಯಾಗ್ರಹಣದ ಬಗ್ಗೆ ಅರಿವೂ ಮುಖ್ಯ. ಪಾತ್ರಗಳಿಗೆ ಮೂಡ್ ಕ್ರಿಯೇಟ್ ಆಗಲು ಏನು ಮಾಡಬೇಕು, ಡ್ರೆಸ್ ಯಾವ ತರಹದ್ದು ಹಾಕಬೇಕು, ಕ್ಯಾರೆಕ್ಟರ್ ಹೇಗಿರಬೇಕು, ಯಾವ ಲೆನ್ಸ್ ಗೆ ಎಷ್ಟರಮಟ್ಟಿಗೆ ಜೂಂ ಹಾಕಿದರೆ ಚೆನ್ನಾಗಿರುತ್ತದೆ ಎಂಬಿತ್ಯಾದಿ ಫೈನಲ್ ತೀರ್ಮಾನ ನಿರ್ದೇಶಕನದೇ ಆಗಿರುತ್ತದೆ.

ಸಿನೆಮಾದಲ್ಲಿ ಮುಖ್ಯವಾಗಿ ಕಥೆಯನ್ನು ದೃಶ್ಯಮಾಧ್ಯಮಕ್ಕೆ ಅಳವಡಿಸುವುದೇ ನಿರ್ದೇಶಕನ ಕೆಲಸ. ಸಿನಿಮಾಕ್ಕೂ ಮುಂಚಿನ ಪೇಪರ್ ಕೆಲಸವೇ ಚಿತ್ರಕಥೆ. ಈ ಚಿತ್ರಕಥೆಗೆ ತಕ್ಕಂತೆ ಸಂಭಾಷಣೆ ಹೇಗಿರಬೇಕೆಂಬುದು ಮುಖ್ಯ. ಅದು ಮನರಂಜನಾತ್ಮಕವಾಗಿರಬೇಕೆ? ಕಲರ್‌ಫುಲ್ ಆಗಿರಬೇಕೆ? ಇದು ಪ್ರೇಕ್ಷಕರಲ್ಲಿ ಹೇಗೆನಿಸುತ್ತದೆ ಎಂಬ ಮುಂದಾಲೋಚನೆಗಳೂ ಮುಖ್ಯ. ಈ ಕಲಾತ್ಮಕ-ಕಮರ್ಷಿಯಲ್ ಚಿತ್ರಗಳು ಅನ್ನೋದರಲ್ಲಿ ಅರ್ಥವೇ ಇಲ್ಲ. ಎಲ್ಲ ಚಿತ್ರಗಳಿಗೂ ದುಡ್ಡು ಹಾಕಲೇಬೇಕು. ಎಲ್ಲರಿಗೂ ತಾವು ಹಾಕುವ ಹಣ ವಾಪಸ್ಸು ಬರಲೇಬೇಕೆಂಬ ಲೆಕ್ಕಾಚಾರವಿದ್ದೇ ಇರುತ್ತದೆ. ಗ್ಲಾಮರ್ ಅಥವಾ ಸೀರಿಯಸ್- ಎಲ್ಲವೂ ಲೆಕ್ಕಾಚಾರವೆ. ಥೇಟರ್‌ನಲ್ಲಿ ಸಿನಿಮಾ ಓಡದೇ ಇದ್ದರೂ ಪರವಾಗಿಲ್ಲ. ಟಿವಿಯಿಂದ, ಸಬ್ಸಿಡಿಯಿಂದ, ಅವಾರ್ಡ್‌ಗಳಿಂದ ಹರಿದು ಬರುವ ಹಣದ ಮೇಲೆ ಕಣ್ಣು ಇದ್ದೇ ಇರುತ್ತದೆ. ಆದ್ದರಿಂದ ಇವೆಲ್ಲ ಕಾಮರ್ಸ್ ಬೇಸ್ಡ್ ಆರ್ಟ್ ಮ್ಯೂವಿಗಳೆ. ಎಲ್ಲ ಸಿನಿಮಾಗಳು ಓಡಲೇಬೇಕು ಅಂತಿಲ್ಲ. ಹತ್ತರಲ್ಲಿ ಆರು ಚಿತ್ರ ಓಡಿದರೂ ಸಾಕು. ಒಬ್ಬ ನಿರ್ಮಾಪಕ ತಡೆದುಕೊಳ್ಳಬಹುದು.

ನನ್ನ ಚಿತ್ರಗಳಲ್ಲಿ ಡಬ್ಬಲ್ ಮೀನಿಂಗ್ ಇದೆ, ಅಶ್ಲೀಲತೆ ಇದೆ ಎಂಬುವವರೆಲ್ಲ ಕೊಳಕು ಮನಸ್ಸಿನ ಮಡಿವಂತರು ಅಷ್ಟೇ. ಈ ಚಿತ್ರಗಳಲ್ಲಿ ಡಂಬಾಚಾರದ ವ್ಯಕ್ತಿಗಳ ಮುಖಕ್ಕೆ ಕನ್ನಡಿ ಹಿಡಿದಿದ್ದೇನೆ. ಇದರಲ್ಲಿ ನಿಮ್ಮ ಮುಖ ಹೇಗೆ ಕಾಣುತ್ತದೆ ನೋಡಿಕೊಳ್ಳಿ ಎಂದು. ನಾನು ಚಿತ್ರದಲ್ಲಿ ಅಳವಡಿಸಿರುವ ಎಲ್ಲ ಅಂಶಗಳೂ ನಡೆದ ಸತ್ಯ ಘಟನೆಗಳೇ. ಇಷ್ಟಕ್ಕೂ ನಾನು ಸೆಕ್ಸ್ ಸಂಬಂಧಿಯ ಎಷ್ಟು ಚಿತ್ರಗಳನ್ನು ಮಾಡಿದ್ದೇನೆ? ಅನುಭವ, ಅನಂತನ ಅವಾಂತರ, ಅಪ್ಪಚ್ಚಿ- ಈ ಮೂರು ಚಿತ್ರಗಳನ್ನೇ ಲೆಕ್ಕಕ್ಕೆ ತೆಗೆದುಕೊಂಡು ನನ್ನ ಬ್ಲೇಮ್ ಮಾಡೋದು ಸರಿಯೇ?

ಪ್ರತಿಭೆಯನ್ನು ಹೊರಗಿನಿಂದ ತುಂಬಲು ಬರಲ್ಲ. ಮಡಿಕೆಯನ್ನು ಜೇಡಿಮಣ್ಣಲ್ಲಿ ಮಾಡಬೇಕೆ ಹೊರತು ಬೇರೆ ಮಣ್ಣಿನಿಂದ ಸಾಧ್ಯವಿಲ್ಲ. ಒಂದು ಶಿಲ್ಪ ಕೆತ್ತಬೇಕಾದರೂ ಅಷ್ಟೇ. ಸಿಕ್ಕಸಿಕ್ಕ ಎಲ್ಲ ಕಲ್ಲುಗಳಿಂದಲೂ ಕೆತ್ತಿ ಶಿಲ್ಪ ಮಾಡಲು ಆಗುವುದಿಲ್ಲ. ಆಭರಣವನ್ನು ಚಿನ್ನದಿಂದ ಮಾಡಬೇಕು, ಕಬ್ಬಿಣದಿಂದಲ್ಲ. ಹಾಗೆಯೇ ಕೆಲ ಪ್ರತಿಭಾವಂತರು ನನಗೆ ದೊರೆತರು, ಅವರನ್ನು ಪಳಗಿಸಿದೆ. ಅವರೂ ಅಷ್ಟೇ ಚೆನ್ನಾಗಿ ಬೆಳೆದರು. ಬೆಳೆಯಲು ಮಾರ್ಗಸೂಚಿಯಂತೆ ಕೆಲಸ ಮಾಡಿದೆ ಅಷ್ಟೆ.

ನನ್ನದು ಹುಡುಕಾಟದ ಸ್ವಭಾವ. ಹೊಸ ಪ್ರಯೋಗಕ್ಕೆ ಒಡ್ಡಿಕೊಳ್ಳುವ ಗುಣ. ಸಮಸ್ಯೆಗಳನ್ನು ಬಗೆಹರಿಸುವ ಕುರಿತು ನನ್ನ ಮನಸ್ಸು ಸದಾ ಯೋಚಿಸುತ್ತಿರುತ್ತದೆ. ನಾನು ಯಾವತ್ತೂ ವಾಸ್ತವಕ್ಕೆ ಬೆಲೆ ಕೊಡೋನು. ಭ್ರಮೆಯ ಬದುಕು ನನಗೆ ಬೇಕಿಲ್ಲ. ಕೃತಕತೆ, ನಾಟಕೀಯತೆ ನನಗೆ ಇಷ್ಟ ಆಗಲ್ಲ. ನನ್ನದು ಗಾಂಧೀ ಮಾರ್ಗ.. ಸಿಂಪಲ್ ಈಸ್ ಬ್ಯೂಟಿಫುಲ್.. ಆ ಜೀವನವೇ ನನಗಿಷ್ಟ.’’

ಇಂತಹ ಕಾಶೀನಾಥ್ ಕನ್ನಡ ನಾಡಿಗೆ ಅಪರಿಚಿತರಲ್ಲ, ಅಪರೂಪದವರು. ಸದಾ ಕಾಲ ನೆನಪಿಲ್ಲಿರುವವರು.

-ಬಸು ಮೇಗಲಕೇರಿ

Leave a Reply

Your email address will not be published. Required fields are marked *


CAPTCHA Image
Reload Image