Connect with us

ಕಲರ್ ಸ್ಟ್ರೀಟ್

ಪಯಣ ಕಿರಣ್ ಗೋವಿ ಲೈಫ್ ಸ್ಟೋರಿ!

Published

on

ಇವರು ಈ ವರೆಗೆ ನಿರ್ದೇಶನ ಮಾಡಿರುವ ಮೂರೂ ಚಿತ್ರಗಳೂ ಮ್ಯೂಸಿಕಲ್ ಹಿಟ್ ಲಿಸ್ಟಿಗೆ ಸೇರಿಕೊಂಡಿವೆ. ಒಂದು ಚಿತ್ರದಿಂದ ಮತ್ತೊಂದಕ್ಕೆ ಭಿನ್ನವಾದ ಆಲೋಚನಾ ಕ್ರಮ, ನವಿರಾದ ಕಥಾ ಹಂದರದ ಮೂಲಕವೇ ನಿರ್ದೇಶಕರಾಗಿ ನೆಲೆ ಕಂಡುಕೊಂಕೊಂಡಿದ್ದ ಅವರೀಗ ಅಖಂಡ ಮೂರು ವರ್ಷಗಳ ನಂತರ ಮತ್ತೆ ಬಂದಿದ್ದಾರೆ. ಹೀಗೊಂದು ತಣ್ಣಗಿನ ಅಬ್ಬರದ ಮೂಲಕ, ಚೆಂದದ ಹಾಡುಗಳ ಹಿಮ್ಮೇಳದೊಂದಿಗೆ ಯಾರಿಗೆ ಯಾರುಂಟು ಚಿತ್ರದ ಮೂಲಕ ಮರಳಿರುವವರು ನಿರ್ದೇಶಕ ಕಿರಣ್ ಗೋವಿ!

ಪಯಣ ಕಿರಣ್ ಗೋವಿ ನಿರ್ದೇಶನದ ಮೊದಲ ಚಿತ್ರ. ಗೆಲುವು ಕಂಡಿದ್ದ ಈ ಚಿತ್ರದ ನವಿರಾದ ಹಾಡುಗಳು ಈವತ್ತಿಗೂ ಕನ್ನಡಿಗರ ಮನದಲ್ಲಿದೆ. ಆ ನಂತರ ಸಂಚಾರಿ, ಪಾರು ವೈಫ್ ಆಫ್ ದೇವದಾಸ್ ಚಿತ್ರಗಳ ಮೂಲಕ ಗೆಲುವಿನ ಪರ್ವವನ್ನು ಹಾಗೆಯೇ ಕಾಪಾಡಿಕೊಂಡಿದ್ದ ಗೋವಿ ಅದೇಕೋ ಮೂರು ವರ್ಷಗಳ ಕಾಲ ಸುದೀರ್ಘ ವಿರಾಮ ತೆಗೆದುಕೊಂಡಿದ್ದರು. ಆದರದು ಅವರ ಪಾಲಿಗೆ ವಿರಾಮವಲ್ಲ. ಬದಲಾಗಿ ಕಥೆಯೊಂದು ಊಟೆಯೊಡೆದು ಅದು ಚಿತ್ರ ರೂಪ ಧರಿಸಿದ ಪರ್ವ ಕಾಲ. ಅದರ ಫಲವಾಗಿಯೇ ಯಾರಿಗೆ ಯಾರುಂಟು ಚಿತ್ರ ಸಿದ್ಧಗೊಂಡಿದೆ.

ಈ ಚಿತ್ರದ ಮೂಲಕ ಇದುವರೆಗೂ ಮಾಸ್ ಪಾತ್ರಗಳಲ್ಲಿ ಮಿಂಚಿದ್ದ ಒರಟ ಪ್ರಶಾಂತ್ ಅವರನ್ನು ಭಿನ್ನವಾದ ಪಾತ್ರವಾಗಿಸಿರೋದು ಕಿರಣ್ ಗೋವಿ ಕನಸುಗಾರಿಕೆ. ಇದೊಂದು ಪಕ್ಕಾ ಫ್ಯಾಮಿಲಿ ಬೇಸಿನ ಕಥನ. ಓರ್ವ ಇನೋಸೆಂಟ್ ಹುಡುಗನ ಸುತ್ತ ಮೂವರು ಹುಡುಗೀರು, ಆತನ ಸುತ್ತಲೇ ಕದಲುತ್ತಾ ಬೇರೇನೋ ಹೇಳ ಬಯಸೋ ರೋಚಕ ಕಥಾ ಹಂದರ ಹೊಂದಿರೋ ಈ ಚಿತ್ರಕ್ಕೆ ಬಿಗ್‌ಬಾಸ್ ಖ್ಯಾತಿಯ ಕೃತಿಕಾ ರವೀಂದ್ರ, ರೇಖಾ ಚಂದ್ರ ಮತ್ತು ಅದಿತಿ ರಾವ್ ನಾಯಕಿಯರಾಗಿದ್ದಾರೆ. ಈ ಹಿಂದಿನ ಚಿತ್ರಗಳಲ್ಲಿಯೂ ಹಾಡುಗಳಿಗೆ ಹೆಚ್ಚು ಒತ್ತು ನೀಡಿದ್ದ ಕಿರಣ್ ಗೋವಿ ಈ ಚಿತ್ರದಲ್ಲಿಯೂ ಹಾಡುಗಳಿಗೆ ಪ್ರಾಧಾನ್ಯತೆ ನೀಡಿದ್ದಾರೆ. ಭರತ್ ಬಿ ಜೆ ಸಂಗೀತ ನೀಡಿರೋ ಎರಡು ಲಿರಿಕಲ್ ವೀಡಿಯೋಗಳು ಈಗಾಗಲೇ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿವೆ.

ಹೆಸರಲ್ಲಿಯೇ ಅನೂಹ್ಯವಾದುದೇನನ್ನೋ ಧ್ವನಿಸುವಂತಿರುವ ಈ ಚಿತ್ರದ ನಿರ್ದೇಶಕ ಕಿರಣ್ ಗೋವಿ ಬಹುಮುಖ ಪ್ರತಿಭೆ. ತುಮಕೂರಿನವರಾದ ಕಿರಣ್ ಬೆಳೆದದ್ದೆಲ್ಲವೂ ಬೆಂಗಳೂರಿನಲ್ಲಿರೇ. ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಬಿಎಸ್‌ಸಿ ಎಲೆಕ್ಟ್ರಾನಿಕ್ಸ್ ಪದವಿ ಪಡೆದಿದ್ದ ಕಿರಣ್ ಅವರಿಗೆ ಕಾಲೇಜು ದಿನಗಳಲ್ಲಿಯೇ ಓದಿಕೊಂಡಿದ್ದಕ್ಕೆ ತಧ್ವಿರುದ್ಧವಾದ ಕಲೆಗಳು ಕೈ ಹಿಡಿದಿದ್ದವು. ಹಾಡುಗಳೆಂದರೆ ವಿಪರೀತ ಹುಚ್ಚಿದ್ದ ಅವರಿಗೆ ಮಿಮಿಕ್ರಿ ಮಾಡೋ ಹವ್ಯಾಸವಿತ್ತು. ನೃತ್ಯಕ್ಕೂ ಸೈ, ನಟನೆಗೂ ಸೈ ಎಂಬಂಥಾ ವ್ಯಕ್ತಿತ್ವದ ಕಿರಣ್ ಅವರಿಗೆ ಕಾಲೇಜು ವಾತಾವರಣದಲ್ಲಿ ಪೂರಕ ಉತ್ತೇಜನವೇ ಸಿಕ್ಕಿತ್ತು. ಅದುವೇ ಕಾಲೇಜಿನ ರಂಗತಂಡದೊಂದಿಗೂ ಗುರುತಿಸಿಕೊಳ್ಳುವಂತೆ ಮಾಡಿತ್ತು. ಕಾಲೇಜು ಮಟ್ಟದ ನಾಟಕಗಳಲ್ಲಿ ಕಿರಣ್ ನಟನಾಗಿ ಮಿಂಚಿದ್ದರು.

ಈ ದೆಸೆಯಿಂದ ಸಿಕ್ಕ ಸಂಪರ್ಕಗಳೇ ಅವರನ್ನು ಕಾಲೇಜು ಮುಗಿಯುತ್ತಲೇ ಕಮರ್ಷಿಯಲ್ ಜಾಹೀರಾತಿನ ಮಾಯಾಲೋಕ ಸೆಳೆದುಕೊಂಡಿತ್ತು. ಇದುವರೆಗೂ ಕಿರಣ್ ಅವರು ನೂರಕ್ಕೂ ಹೆಚ್ಚು ಕಮರ್ಷಿಯಲ್ ಜಾಹೀರಾತುಗಳಿಗೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆ ನಂತರ ಎ.ಆರ್. ಬಾಬು ಅವರ ಸಾಹಚರ್ಯ ಪಡೆದುಕೊಂಡ ಕಿರಣ್ ಅವರ ಕಾರಣದಿಂದಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅವರ ಜೊತೆ ಸಹ ನಿರ್ದೇಶಕನಾಗಿ ಒಂದಷ್ಟು ಚಿತ್ರಗಳಲ್ಲಿ ಕಾರ್ಯ ನಿರ್ವಹಿಸಿ ನಂತರ ಉಮಾಕಾಂತ್ ಅವರ ಜೊತೆಗೂ ಕೆಲಸ ಮಾಡೋ ಮೂಲಕ ನಿರ್ದೇಶನದ ಪಾಠಗಳನ್ನು ಕಲಿತುಕೊಂಡಿದ್ದರು. ಇವರಿಬ್ಬರನ್ನು ಕಿರಣ್ ಗೀವಿ ತಮ್ಮ ಸಿನಿಮಾ ಗುರುಗಳೆಂದೇ ಪರಿಗಣಿಸಿದ್ದಾರೆ.

ಅಸೋಸಿಯೇಟ್ ಆಗಿ ಮೂವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿರುವ ಕಿರಣ್ ಗೋವಿ ಅನೇಕ ಕಿರುಚಿತ್ರ, ಡಾಕ್ಯುಮೆಂಟರಿ, ಕಾರ್ಪೋರೇಟ್ ಆಡ್ ಮುಂತಾದವುಗಳನ್ನು ಮಾಡಿದ್ದಾರೆ. ಧಾರಾವಾಹಿಗಳ ನಿರ್ದೇಶನ ವಿಭಾಗದಲ್ಲಿಯೂ ದುಡಿದಿದ್ದಾರೆ. ಆದರೆ ರಂಗಭೂಮಿಯಲ್ಲಿ ನಟನಾಗಿದ್ದ ಕಿರಣ್ ಚಿತ್ರರಂಗಕ್ಕೆ ಬರುವಾಗಲೂ ನಟನಾಗಬೇಕೆಂಬ ಕನಸು ಹೊತ್ತಿದ್ದರು. ಆದರೆ ಆ ಬಳಿಕ ಅವರ ಆಸಕ್ತಿ ಕೇಂದ್ರೀಕರಿಸಿದ್ದು ನಿರ್ದೇಶನದತ್ತ. ಎಲ್ಲ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿ ಅನುಭವ ಹೊಂದಿದ್ದ ಕಿರಣ್ ಪಯಣ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು. ಮೊದಲ ಚಿತ್ರದಲ್ಲಿಯೇ ಗೆದ್ದ ಅವರ ಪಾಲಿಗೆ ಯಾರಿಗೆ ಯಾರುಂಟು ನಾಲಕ್ಕನೇ ಚಿತ್ರ.

ಈಗ ನಿರ್ದೇಶಕರಾಗಿ ಕಿರಣ್ ಗೋವಿ ಯಶಸ್ವಿಯಾಗಿದ್ದಾರೆ. ಯಾರಿಗೆ ಯಾರುಂಟು ಚಿತ್ರವೂ ಗೆಲುವು ಕಾಣುತ್ತದೆ ಎಂಬ ತುಂಬು ಭರವಸೆಯೂ ಅವರಲ್ಲಿದೆ. ಆದರೆ ಚಿತ್ರರಂಗಕ್ಕೆ ಅಡಿಯಿರಿಸುವಾಗ ಎದೆಯಲ್ಲಿದ್ದ ನಟನಾಗೋ ಹಂಬಲ ಈಗಲೂ ಹಾಗೆಯೇ ಉಳಿದುಕೊಡಿದೆ. ಈ ಹಿಂದೆ ಆಸುಪಾಸಿನವರು ಚೆಂದಗೆ ಕಥೆ ಹೇಳುತ್ತಾರೆಂಬ ಮೆಚ್ಚುಗೆ ಸೂಚಿಸಿದಾಗ ಉತ್ತೇಜನಗೊಂಡು ಕಥೆ ಬರೆದು ನಿರ್ದೇಶಕರಾದವರು ಕಿರಣ್. ಈಗ ನಿರ್ದೇಶನ ಮಾಡುವಾಗ ನಟಿಸಿ ತೋರಿಸೋ ಅವರ ಕಲೆಯ ಬಗ್ಗೆ ಮೆಚ್ಚುಗೆ ಬಂದಾಗ ಅವರೊಳಗಿನ ನಟ ಮಿಸುಕಾಡುತ್ತಾನೆ. ಮುಂದಿನ ದಿನಗಳಲ್ಲಿ ನಟನಾಗಿಯೂ ಅವತರಿಸಬೇಕೆಂಬ ಇರಾದೆ ಹೊಂದಿರೋ ಕಿರಣ್ ಗೋವಿ ಪಾಲಿಗೆ ಯಾರಿಗೆ ಯಾರುಂಟು ಚಿತ್ರ ನಿರ್ದೇಶನದಲ್ಲಿ ಮೈಲಿಗಲ್ಲಾಗುತ್ತದೆ ಎಂಬ ನಿರೀಕ್ಷೆ ಇದೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಕಲರ್ ಸ್ಟ್ರೀಟ್

ಕಾಳಿದಾಸನ ಜೋಡಿಯಾಗಿ ಬರ‍್ತಾಳೆ ಮೇಘನಾ!

Published

on


ಮೇಘನಾ ಗಾಂವ್‌ಕರ್ ಎಂಬ ನಟಿ ಎತ್ತ ಹೋದಳು ಅಂತ ಒಂದಷ್ಟು ಜನರಾದರೂ ಹುಡುಕಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದಷ್ಟು ವರ್ಷಗಳ ಅಜ್ಞಾತವಾಸದ ನಂತರ ಈಕೆ ಮತ್ತೆ ಮರಳಿದ್ದಾಳೆ. ಕಾಳಿದಾಸ ಕನ್ನಡ ಮೇಸ್ಟ್ರು ಎಂಬ ಚಿತ್ರಕ್ಕೆ ಮೇಘನಾ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ!

ಎರಡು ವರ್ಷಗಳ ಹಿಂದೆ ತೆರೆ ಕಂಡಿದ್ದ ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಚಿತ್ರದಲ್ಲಿ ಮೇಘನಾ ನಾಯಕಿಯಾಗಿ ನಟಿಸಿದ್ದೇ ಕೊನೆ. ಆ ನಂತರ ಈಕೆಯ ಪತ್ತೆ ಇರಲಿಲ್ಲ. ರಶ್ಮಿಕಾ ಮಂದಣ್ಣ ಜೊತೆ ಬ್ರೇಕಪ್ ಮಾಡಿಕೊಂಡ ರಕ್ಷಿತ್ ಶೆಟ್ಟಿ ಮೇಘನಾ ಜೊತೆ ಲವ್ವಲ್ಲಿ ಬಿದ್ದಿದ್ದಾರೆ ಅಂತೊಂದು ರೂಮರ್ ಹರಡಿತ್ತಲ್ಲಾ? ಆ ಮೂಲಕವೇ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದ ಈಕೆ ಮತ್ತೆ ನಟಿಯಾಗಿ ಮರಳಿದ್ದಾಳೆ.

ಗೀತಸಾಹಿತಿ ಕವಿರಾಜ್ ಕಾಳಿದಾಸ ಕನ್ನಸ ಮೇಶ್ಟ್ರು ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಕವಿರಾಜ್ ಕೂಡಾ ಮದುವೆಯ ಮಮತೆಯ ಕರೆಯೋಲೆ ಚಿತ್ರದ ನಂತರ ಇದೇ ಮೊದಲ ಬಾರಿ ನಿರ್ದೇಶನ ಮಾಡುತ್ತಿದ್ದಾರೆ. ಬದುಕಿಗೆ ಹತ್ತಿರವಾದ ಕಥೆ ಹೊಂದಿರೋ ಪಕ್ಕಾ ಕಮರ್ಶಿಯಲ್ ಮೆಥೆಡ್ಡಿನ ಈ ಚಿತ್ರದಲ್ಲಿ ಜಗ್ಗೇಶ್ ನಾಯಕನಾಗಿ ನಟಿಸಲಿದ್ದಾರೆ. ಇದೇ ಮೊದಲ ಬಾರಿ ಜಗ್ಗಣ್ಣನಿಗೆ ಮೇಘನಾ ನಾಯಕಿಯಾಗಿ ನಟಿಸುತ್ತಿದ್ದಾಳೆ.

Continue Reading

ಕಲರ್ ಸ್ಟ್ರೀಟ್

ಬಿಚ್ಚುಗತ್ತಿ ಬರಮಣ್ಣ ಮತ್ತು ನೀರ್ದೋಸೆ ಹರಿಪ್ರಿಯಾ!

Published

on

ಹರಿಪ್ರಿಯಾ ಐತಿಹಾಸಿಕ ಚಿತ್ರವೊಂದರ ಮೂಲಕ ಬೇರೆಯದ್ದೇ ಥರದ ಪಾತ್ರದಲ್ಲಿ ಮಿಂಚಲು ಉತಯಾರಾಗಿದ್ದಾರೆ. ಈ ವರೆಗೂ ಇಮೇಜಿನ ಹಂಗಿಗೆ ಬೀಳದೆ ಭಿನ್ನ ಪಾತ್ರಗಳನ್ನೇ ಧ್ಯಾನಿಸುತ್ತಾ ಬಂದಿರುವ ಹರಿಪ್ರಿಯಾ ಪಾಲಿಗೆ ಈಗ ಸಿಕ್ಕಿರೋದು ನಿಜಕ್ಕೂ ಬಂಪರ್ ಅವಕಾಶ!

ನಾದಬ್ರಹ್ಮ ಹಂಸಲೇಖ ಬಿಚ್ಚುಗತ್ತಿ ಭರಮಣ್ಣ ನಾಯಕ ಚಿತ್ರವನ್ನು ನಿರ್ದೇಶಲನ ಮಾಡಲಿಯದ್ದಾರೆಂಬ ಸುದ್ದಿಯಾಗಿತ್ತಲ್ಲಾ? ಈ ಚಿತ್ರಕ್ಕೆ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಾಯಕನಾಗಿಯೂ ನಿಕ್ಕಿಯಾಗಿದ್ದರು. ಬರಮಣ್ಣ ನಾಯಕನ ಪಾತ್ರದಲ್ಲಿ ನಟಿಸುತ್ತಿರುವ ರಾಜ್‌ವರ್ಧನ್‌ಗೆ ನಾಯಕಿಯಾಗಿ ಹರಿಪ್ರಿಯಾ ಆಯ್ಕೆಯಾಗಿದ್ದಾರೆ.

ಬಿಚ್ಚುಗತ್ತಿ ಎಂಬ ಶೀರ್ಷಿಕೆ ಹೊಂದಿರುವ ಈ ಚಿತ್ರ ಬಿ ಎಲ್ ವೇಣು ಅವರ ರಾಜಾ ಭರಮಣ್ಣ ನಾಯಕ ಎಂಬ ಕಾದಂಬರಿ ಆಧಾರಿತ ಚಿತ್ರ. ಇದನ್ನು ಚಿತ್ರವಾಗಿಸಬೇಕೆಂದು ಹಲವಾರು ವರ್ಷಘಗಳಿಂದ ಅಂದುಕೊಂಡಿದ್ದ ಹಂಸಲೇಖಾ ಅದಕ್ಕೆ ಸಂಪೂರ್ಣ ತಯಾರಾಗಿದ್ದಾರೆ. ಈ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕಪೂ ಹೆಚ್ಚಿನ ಮಹತ್ವ ಇರೋದರಿಂದ ಅದಕ್ಕೆ ತಕ್ಕುದಾದ ನಾಯಕಿಯ ಹುಡುಕಾಟ ಚಾಲ್ತಿಯಲ್ಲಿತ್ತು. ಹರಿಪ್ರಿಯಾ ಆಯ್ಕೆಯ ಮೂಲಕ ಅದು ಸಮಾಪ್ತಿಗೊಂಡಿದೆ. ರಾಜ್‌ವರ್ಧನ್ ಈ ಪಾತ್ರಕ್ಕಾಗಿ ತರಬೇತಿ ಪಡೆಯುತ್ತಿದ್ದಾರೆ. ಹರಿಪ್ರಿಯಾ ಅವರಿಗೂ ಅಗತ್ಯ ತರಬೇತಿ ಕೊಟ್ಟಾದ ನಂತರ ಚಿತ್ರೀಕರಣ ಶುರುವಾಗಲಿದೆ.

Continue Reading

ಕಲರ್ ಸ್ಟ್ರೀಟ್

ತಮಿಳು ಚಿತ್ರಕ್ಕೆ ಹೀರೋ ಆದ್ರು ನೀನಾಸಂ ಸತೀಶ್!

Published

on


ಅಯೋಗ್ಯ ಚಿತ್ರದ ಯಶಸ್ಸಿನ ನಂತರ ನೀನಾಸಂ ಸತೀಶ್ ಬೇಡಿಕೆ ಹೆಚ್ಚಿಕೊಂಡಿದ್ದು, ಸಂಭಾವನೆ ಏರಿಕೊಂಡಿದ್ದೆಲ್ಲ ಗೊತ್ತೇ ಇದೆ. ಕನ್ನಡದಲ್ಲಿ ತುಂಬಾ ಅವಕಾಶಗಳು ಸರದಿಯಲ್ಲಿ ನಿಂತಿರುವಾಗಲೇ ಸತೀಶ್ ಏಕಾಏಕಿ ತಮಿಳಿಗೆ ಹಾರಿದ್ದಾರೆ. ಈ ಮೂಲಕ ಅವರು ದಕ್ಷಣ ಭಾರತೀಯ ಚಿತ್ರರಂಗದಲ್ಲಿ ಛಾಪು ಮೂಡಿಸಲು ಮುಂದಾಗಿದ್ದಾರೆ.

ನೀನಾಸಂ ಸತೀಶ ನಟಿಸಲಿರುವ ತಮಿಳು ಚಿತ್ರಕ್ಕೆ ಸಂಪೂರ್ಣ ತಯಾರಿ ಮುಗಿದಿದೆ. ತಮಿಳು ಚಿತ್ರರಂಗದಲ್ಲಿ ಕ್ರಿಯೇಟಿವ್ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅನೀಶ್ ನಿರ್ದೇಸನ ಮಾಡಲಿದ್ದಾರೆ. ಇದಕ್ಕೆ ಈಗಾಗಲೇ ಪಗೈನಾನುಕು ಅರುಲ್ವೈ ಎಂಬ ಶೀರ್ಷಿಕೆಯನ್ನೂ ನಿಗಧಿ ಮಾಡಲಾಗಿದೆ. ಇಷ್ಟರಲ್ಲಿಯೇ ಸ್ವಿಜರ್‌ಲೆಂಡಿನಲ್ಲಿ ಅದ್ದೂರಿಯಾಗಿಯೇ ಟೈಟಲ್ ಲಾಂಚ್ ಮಾಡಲೂ ನಿರ್ಧರಿಸಲಾಗಿದೆ.

ಹಾಗೆ ನೋಡಿದರೆ ಈಗೊಂದಷ್ಟು ವರ್ಷಘಗಳ ಹಿಂದೆಯೇ ನೀನಾಸಂ ಸತೀಶ್ ತಮಿಳು ಚಿತ್ರದಲ್ಲಿ ನಟಿಸ ಬೇಕಿತ್ತು. ಲೂಸಿಯಾ ಚಿತ್ರ ತೆರೆ ಕಂಡ ತಿಂಗಳೊಪ್ಪತ್ತಿನಲ್ಲಿಯೇ ಅಂಥಾದ್ದೊಂದು ಸೂಚನೆ ಸಿಕ್ಕಿತ್ತು. ಲೂಸಿಯಾ ಚಿತ್ರವನ್ನು ವೀಕ್ಷಿಸಿದ್ದ ಅನೀಶ್ ನೀನಾಸಂ ನಟನೆಯನ್ನು ಮೆಚ್ಚಿಕೊಂಡಿದ್ದರು. ಬಳಿಕ ಸತೀಶ್‌ರನ್ನು ಸಂಪರ್ಕಿಸಿ ಮೆಚ್ಚುಗೆ ಸೂಚಿಸಿದ್ದರು. ಆ ಬಳಿಕ ಇವರ ನಡುವಲ್ಲೊಂದು ಸ್ನೇಹ ಮೂಡಿಕೊಂಡಿತ್ತು.
ಹೀಗೆ ಸತೀಶ್‌ಗೆ ಗೆಳೆಯನಾಗಿದ್ದ ಅನೀಶ್ ಈಗ್ಗೆ ಮೂರು ವರ್ಷಗಳಿಂದಲೂ ಈ ಚಿತ್ರಕ್ಕಾಗಿ ಪ್ರಯತ್ನಿಸುತ್ತಲೇ ಇದ್ದರು. ಕಡೆಗೂ ಅದೀಗ ಸಾಕಾರಗೊಂಡಿದೆ. ಈ ಚಿತ್ರದ ಬಗ್ಗೆ ಅನೀಶ್ ಅವರೇ ಅಧಿಕೃತವಾಗಿ ಘೋಷಣೆಯನ್ನೂ ಮಾಡಿದ್ದಾರೆ. ಟೈಟಲ್ ಲಾಂಚ್ ಆದ ತಕ್ಷಣವೇ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ.

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz