One N Only Exclusive Cine Portal

ಕೆ.ಮಂಜು ಪುತ್ರ ಶ್ರೇಯಸ್ ಎಂಟ್ರಿಗೆ ಭರ್ಜರಿ ಪ್ಲಾನ್

ನಿರ್ಮಾಪಕ ಕೆ. ಮಂಜು ಮಗ ಶ್ರೇಯಸ್ ಸಿನಿಮಾ ರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ಈಗ ಹೊಸ ವಿಷಯ ಏನಪ್ಪಾ ಎಂದರೆ, ಈ ಚಿತ್ರ ‘ಪಡ್ಡೆ ಹುಲಿ’ಗೆ ಇದೇ ಫೆ. ೯ರ ಸಂಜೆ ಚಿಕ್ಕದಾಗಿ ದೇವಸ್ಥಾನದಲ್ಲಿ ಮುಹೂರ್ತ ನಡೆಯಲಿದೆ. ಚಿಕ್ಕದಾಗಿ ಮುಹೂರ್ತ ನಡೆದರೂ ಬಳಿಕ ಪ್ರಮೋಷನ್ ಸಾಂಗ್‌ಗೆ ಸುಮಾರು 25 ಲಕ್ಷ ಖರ್ಚು ಮಾಡುತ್ತಿದ್ದಾರೆ ನಿರ್ಮಾಪಕ ಕೆ. ಮಂಜು. ೧೫, ೧೬ ಹಾಗೂ ೧೭ರಂದು ಶ್ರೇಯಸ್ ಅವರ ಪ್ರಮೋಷನ್ ಸಾಂಗ್ ಶೂಟಿಂಗ್ ನಡೆಯಲಿದ್ದು, ಅದಕ್ಕಾಗಿ ಮಿನರ್ವ ಮಿಲ್‌ನಲ್ಲಿ ನಾಲ್ಕು ವಿಭಿನ್ನವಾದ ಸೆಟ್‌ಗಳನ್ನು ಹಾಕಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಈ ಹಾಡಿನ ಮೂಲಕ ಶ್ರೇಯಸ್‌ರ ನಟನೆ, ನೃತ್ಯ, ಫೈಟಿಂಗ್‌ಗಳೆಲ್ಲವನ್ನೂ ಸಿನಿಮಾ ಮಂದಿಗೆ ತೋರಿಸುವ ಉದ್ದೇಶವೂ ಇದೆ. ಅದಾದ ಬಳಿಕ ಮಾರ್ಚ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತದೆ.

‘ನಲವತ್ತು ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕರ ಮಗ ಸಿನಿಮಾ ಜಗತ್ತಿಗೆ ಕಾಲಿಡುತ್ತಿದ್ದಾನೆ ಎಂದರೆ ಎಲ್ಲರಿಗೂ ಒಂದು ಕುತೂಹಲ ಇದ್ದೇ ಇರುತ್ತದೆ. ಹಾಗಾಗಿ ಮೊದಲು ಪ್ರೊಮೋ ಸಾಂಗ್ ಶೂಟ್ ಮಾಡಿ ತೋರಿಸುವ ಉದ್ದೇಶ ಹೊಂದಿದ್ದೇವೆ. ಈ ಕಾರ್ಯಕ್ರಮದಲ್ಲಿ ಇಡೀ ಇಂಡಸ್ಟ್ರಿಯವರೆಲ್ಲ ಭಾಗವಹಿಸುವ ನಿರೀಕ್ಷೆ ಇದೆ. ಮುಹೂರ್ತ ಚಿಕ್ಕದಾಗಿದ್ದರೂ ಬಳಿಕ ಲಾಂಚಿಂಗ್ ಪ್ರೋಗ್ರಾಮ್ ತುಂಬಾ ದೊಡ್ಡದಾಗಿರುತ್ತದೆ. ಇದಕ್ಕೆ ದಿನಾಂಕ ನಿಗದಿಯಾಗಿಲ್ಲ. ಕೆಲವೇ ದಿನಗಳಲ್ಲಿ ಅದನ್ನು ಅಂತಿಮಗೊಳಿಸುತ್ತೇವೆ’ ಎಂದಿದ್ದಾರೆ ನಿರ್ದೇಶಕ ಗುರು ದೇಶಪಾಂಡೆ.

ನಾಯಕಿಯ ಪಾತ್ರದ ಹುಡುಕಾಟ ಭರ್ಜರಿಯಾಗಿ ನಡೆಯುತ್ತಿದ್ದು, ಕನ್ನಡದವರೇ ಆದರೆ ಒಳ್ಳೆಯದು ಎಂಬ ಅಭಿಪ್ರಾಯ ನಿರ್ಮಾಪಕರು ಹಾಗೂ ನಿರ್ದೇಶಕರ ಮನದಲ್ಲಿದೆ.

Leave a Reply

Your email address will not be published. Required fields are marked *


CAPTCHA Image
Reload Image