One N Only Exclusive Cine Portal

ಅಂಧರ ಜಗತ್ತಿನಲ್ಲಿ ಕೃಷ್ಣ ತುಳಸಿ ಪ್ರೇಮ ಸಂಚಾರ!

ಸಂಚಾರಿ ವಿಜಯ್ ಪ್ರವರ್ಧಮಾನಕ್ಕೆ ಬಂದಿದ್ದು, ರಾಷ್ಟ್ರಪ್ರಶಸ್ತಿಯ ಮೂಲಕ ಕನ್ನಡ ಚಿತ್ರರಂಗದ ಘನತೆಗೆ ಮತ್ತೊಂದು ಗರಿ ಮೂಡಿಸಿದ್ದೆಲ್ಲವೂ ನಟನಾ ಶಕ್ತಿಯ ಬಲದಿಂದಲೇ. ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಸವಾಲಿನ ಪಾತ್ರಗಳ ಮೂಲಕವೇ ದಾಟಿಕೊಳ್ಳುವ, ಆ ಮೂಲಕ ಪ್ರೇಕ್ಷಕರೆದೆಗೆ ನಾಟುವಂಥಾ ಅಭಿನಯ ನೀಡುವ ಸಂಚಾರಿ ವಿಜಯ್ ಅವರ ಹೊಸಾ ಚಿತ್ರ ಕೃಷ್ಣ ತುಳಸಿ ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿದೆ.
ಇದು ಕುರುಡರ ಜಗತ್ತಿನೊಳಗೆ ಒಳಗಣ್ಣಿನ ದೃಷ್ಟಿ ಹರಿಸುವಂಥಾ ಚಿತ್ರ. ನಮ್ಮ ನಡುವೇ ಇರುವ ಕುರುಡರ ಮನೋಲೋಕವೇ ಒಂದು ಅಚ್ಚರಿ. ಬೆಳಕೆಂಬುದು ಅವರ ಕಲ್ಪನೆಯಷ್ಟೇ. ಅಂಥಾ ಪಾತ್ರಗಳನ್ನು ಒಂದಿಡೀ ಚಿತ್ರ ಪೂರ್ತಿ ಅಭಿನಯಿಸೋದೆಂದರೆ ಸಲೀಸಿನ ಸಂಗತಿಯೇನಲ್ಲ. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಅಂಥಾದ್ದೊಂದು ಸವಾಲನ್ನು ಸಮರ್ಥವಾಗಿಯೇ ನಿಭಾಯಿಸಿದ ಖುಷಿಯಲ್ಲಿದ್ದಾರೆ.

ಅಂದಹಾಗೆ ಈ ಚಿತ್ರದಲ್ಲಿ ವಿಜಯ್ ಟೂರಿಸ್ಟ್ ಗೈಡ್ ಆಗಿ ಕಾಣಿಸಿಕೊಂಡಿದ್ದಾರಂತೆ. ತನ್ನಂಥಾದ್ದೇ ಅಂಧರ ಜೊತೆ ಹಾಸ್ಟೆಲೊಂದರಲ್ಲಿ ವಾಸವಿರೋ ನಾಯಕನಿಗೆ ಡಬ್ಬಿಂಗ್ ಆರ್ಟಿಸ್ಟ್ ಹುಡುಗಿಯೊಬ್ಬಳ ಪರಿಚಯವಾಗಿ ಲವ್ವಿಗೆ ತಿರುಗುತ್ತದೆ. ಈತನದ್ದು ಅವಳ ಕಣ್ಣುಗಳಲ್ಲೇ ಹೊಸಾ ಜಗತ್ತನ್ನು ದಿಟ್ಟಿಸುವ ರೋಮಾಂಚಕ ಬಯಕೆ. ಇಂಥಾ ನವಿರಾದೊಂದು ಪ್ರೇಮಕಥೆಯ ಮೂಲಕವೇ ವಿಭಿನ್ನವಾದೊಂದು ಕಥೆ ಹೇಳುವ ಪ್ರಯತ್ನವನ್ನು ನಿರ್ದೇಶಕ ಸುಖೇಶ್ ನಾಯಕ್ ಮಾಡಿದ್ದಾರಂತೆ. ಕಿರಣ್ ರವೀಂದ್ರನಾಥ್ ಸಂಗೀತ ಮತ್ತು ನವೀನ್ ಅಕ್ಷಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಈಗಾಗಲೇ ಟ್ರೈಲರ್ ಹಾಡು ಮುಂತಾದ ಕಾರಣದಿಂದ ಗಮನ ಸೆಳೆದಿರೋ ಈ ಚಿತ್ರದಲ್ಲಿ ಛಾಯಾಗ್ರಹಣ ಮತ್ತು ಸಂಗೀತ ವ್ಯಾಪಕ ಮೆಚ್ಚುಗೆ ಗಳಿಸಿಕೊಂಡಿದೆ. ಯೋಗರಾಜ ಭಟ್ ಅವರು ಬರೆದಿರುವ ಹಾಡೊಂದರಲ್ಲಿ ನಿಜವಾದ ಅಂಧರೇ ನಟಿಸಿದ್ದೂ ಸೇರಿದಂತೆ ಈ ಚಿತ್ರದಲ್ಲಿ ಸಾಲು ಸಾಲಾಗಿ ಅಚ್ಚರಿಗಳಿದ್ದಾವಂತೆ. ಒಟ್ಟಾರೆಯಾಗಿ ಈ ಚಿತ್ರದ ಮೂಲಕ ಸಂಚಾರಿ ವಿಜಯ್ ಅವರ ಭಿನ್ನ ಚಿತ್ರಗಳ ಪಯಣ ಮುಂದುವರೆದಿದೆ.

       

Leave a Reply

Your email address will not be published. Required fields are marked *


CAPTCHA Image
Reload Image