One N Only Exclusive Cine Portal

ಮಂಗಳೂರಿನಲ್ಲಿ ಸಿನಿಮಾ ಸಡಗರ!

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಮುಕ್ತಾಯಗೊಂಡ‌ ಬೆನ್ನಲ್ಲೇ ಮಂಗಳೂರಿನಲ್ಲಿ ಸಹ ಒಂದು ಸಿನಿಮಾ ಸಡಗರ ಕಾರ್ಯಕ್ರಮ ನಡೆಯಿತು. ಬೆಂಗಳೂರಿನಂತೆ ಇಲ್ಲೇನೂ ಸಾವಿರಾರು ಜನರಿರಲಿಲ್ಲ, ನೂರಾರು ಸಿನಿಮಾಗಳಿರಲಿಲ್ಲ. ಕೆಲವೇ ಮಂದಿ ಆಸಕ್ತರು ಕೆಲವೇ ಸಿನಿಮಾಗಳು. ಆದರೆ ಇಲ್ಲಿ ಭಾಗವಹಿಸಿದ ಆಸಕ್ತಿಗೆ, ವಿದ್ಯಾರ್ಥಿಗಳಿಗೆ ಇದು ಅತ್ಯಂತ ಉತ್ಸಾಹ ಮೂಡಿಸಿದ ಕಾರ್ಯಕ್ರಮವಾಗಿತ್ತು.

ಇಂತಹ ಒಂದು ಸಿನಿಮಾ ಸಡಗರ ಕಾರ್ಯಕ್ರಮ ಆಯೋಜಿಸಿದ್ದು ಸಹಮತ ಫಿಲಂ ಸೊಸೈಟಿ, ಮನುಜಮತ ಸಿನಿಯಾನ ವಾಟ್ಸಾಪ್ ಗ್ರೂಪ್ ಹಾಗೂ ರಂಗಸಾಗರ – ರೋಶನಿ ನಿಲಯ ಸಂಸ್ಥೆಗಳು.

ಸಹಮತ ಹಾಗೂ ಮನುಜಮತಗಳು ಕಳೆದ ಮೂರು ವರ್ಷಗಳಿಂದ ವರ್ಷಕ್ಕೆ ಎರಡು- ಮೂರು ಸಿನಿಮಾ ಹಬ್ಬಗಳನ್ನು ಆಯೋಜಿಸಿಕೊಂಡು ಬರುತ್ತಿವೆ.

ಮಂಗಳೂರಿನಲ್ಲಿ ನಡೆದ ಸಿನಿಮಾ ಸಡಗರದಲ್ಲಿ ಸಿನಿಮಾ ಚರಿತ್ರೆ, ಸಿನಿಮಾ ನಿರ್ಮಾಣ, ಸಾಕ್ಷ್ಯಚಿತ್ರಗಳ ಇತಿಹಾಸ ಮತ್ತು ನಿರ್ಮಾಣಗಳ ಬಗ್ಗೆ ಆಯಾ ಕ್ಷೇತ್ರದ ಅನುಭವಿಗಳು ಪ್ರಾತ್ಯಕ್ಷಿಕೆಯೊಂದಿಗೆ ಉಪನ್ಯಾಸ, ಸಂವಾದ ನಡೆಸಿದರು.

ಸಿನಿಮಾ ಚರಿತ್ರೆ ಮತ್ತು ಜಾಗತಿಕ ಮಟ್ಟದಲ್ಲಿ ಸಿನಿಮಾ ರಂಗದಲ್ಲಿ ಸಂಭವಿಸಿದ ಪಲ್ಲಟಗಳ ಬಗ್ಗೆ ಚಿಂತಕರಾದ ಕೆ.ಫಣಿರಾಜ್ ತಿಳಿಸಿದರೆ ಸಾಕ್ಷ್ಯಚಿತ್ರ ಗಳ ಕುರಿತು ಪೆಡೆಸ್ಟ್ರಿಯನ್ ಪಿಕ್ಚರ್ಸ್ ನ ದೀಪು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಅವರು ಹೇಳಿ ಒಂದು ಮಾತು ಸ್ವಾರಸ್ಯಕರವಾಗಿತ್ತು. “ನಾನು ಮೂಲತಃ ಕೇರಳದವನು. ಮಲಯಾಳ ನನ್ನ ತಾಯ್ನುಡಿ. ನಮ್ಮ ಭಾಷೆಯಲ್ಲಿ ಸಂಬೋಧಿಸುವಾಗ ನಾಯಿಗೂ ಮನುಷ್ಯನಿಗೂ ವ್ಯತ್ಯಾಸ ಇರುವುದಿಲ್ಲ. ಆದರೆ ಕನ್ನಡದಲ್ಲಿ ನಾಯಿ ಬಂತು ಎಂದರೆ ಮನುಷ್ಯ ಬಂದ, ಮನುಷ್ಯರು ಬಂದರು ಎನ್ನುತ್ತೇವೆ. ಆರಂಭದಲ್ಲಿ ನನಗೆ ಈ ವ್ಯತ್ಯಾಸವೇ ತಿಳಿಯದೇ ಕನ್ನಡ ಮಾತಾಡಲು ಪ್ರಯತ್ನಿಸುತ್ತಿದ್ದಾಗ ಬಹಳ ಸಲ ನನ್ನ ಮಾತು ಕೇಳಿ ಬೇರೆಯವರಿಗೆ ನಗು ಬರುತ್ತಿತ್ತು.

ಅಂದರೆ ಮತ್ತೊಂದು ಭಾಷೆ ಮಾತಾಡುವಾಗ ನಮಗೆ ಅದರ ಗ್ರಾಮರ್ ಏನೆಂದು ತಿಳಿದಿರಬೇಕಾಗುತ್ತದೆ. ಆಗ ಮಾತ್ರ ಆ ಭಾಷೆ ನಮಗೆ ಅರ್ಥವಾಗುತ್ತದೆ, ‌ನಾವೂ ಮಾತಾಡಬಹುದಾಗಿರುತ್ತದೆ. ಇದೇ ರೀತಿ ಸಿನಿಮಾ ಕೂಡಾ ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಸಿನಿಮಾಕ್ಕೆ ತನ್ನದೇ ಒಂದು ಭಾಷೆ ಇದೆ, ಅದಕ್ಕೆ ಅದರದೇ‌ ಗ್ರಾಮರ್ ಇದೆ. ಅದನ್ನು ಎಲ್ಲರೂ ಅದರಲ್ಲೂ ಮುಖ್ಯವಾಗಿ ಸಿನಿಮಾ ಮಾಡಬಯಸುವವರು ತಿಳಿದಿರಬೇಕು. ಫೇಸ್ಬುಕ್ ಲೈಕುಗಳ ಮೇಲೆ ನಿಮ್ಮ ಸಿನಿಮಾದ ಗುಣಮಟ್ಟ ತೀರ್ಮಾನವಾಗುವುದಿಲ್ಲ” ಎಂದು ದೀಪು ಹೇಳಿದರು.

ಸಿನಿಮಾಗಳಲ್ಲಿ ಚಿತ್ರಕತೆಯ ಮಹತ್ವ, ಅದು ವಹಿಸುವ ಪಾತ್ರ ಹಾಗೂ ಚಿತ್ರಕತೆ ಯಾವ ಬಗೆಗಳಲ್ಲಿ ಇರುತ್ತದೆ ಎಂಬ ವಿಷಯಗಳ ಬಗ್ಗೆ ವಿಷದವಾಗಿ ತಿಳಿಸಿಕೊಟ್ಟದ್ದು ಪುಣೆಯ FTII ಪದವೀಧರ, ಲೇಖಕ ಸಂವರ್ಥ ಸಾಹಿಲ್.‌ ಅನೇಕ ದೃಶ್ಯಾವಳಿಗಳ ಸಹಾಯದಿಂದ ಈ ಎಲ್ಲಾ ಅಂಶಗಳನ್ನು ಅವರು ತಿಳಿಸಿದರು.

ಎರಡನೆಯ ದಿನ ಕನ್ನಡದ ಉದಯೋನ್ಮುಖ ನಿರ್ದೇಶಕರಾದ ಗಿರಿರಾಜ್ ಬಿ.ಎಂ ತಮ್ಮ ನಿರ್ದೇಶನದ ಅನುಭವ ಹಾಗೂ ತಿಳುವಳಿಕೆಗಳ ಮೂಲಕ ಹಲವಾರು ವಿಷಯಗಳನ್ನು ಹಂಚಿಕೊಂಡರು. ಗಿರಿರಾಜ್ ಅವರೊಂದಿಗೆ ಸುಮಾರು ಎರಡು ತಾಸು ಸಂವಾದ ನಡೆಯಿತು.

ಈ ಎರಡು ದಿನಗಳಲ್ಲಿ ಪ್ರದರ್ಶಿಸಲಾದ ಸಿನಿಮಾಗಳೆಂದರೆ ಇರಾನಿ ನಿರ್ದೇಶಕ ಜಾಫರ್ ಪನಾಹಿಯ ಟ್ಯಾಕ್ಸಿ ತೆಹ್ರಾನ್, ಇಂಡೋನೇಶಿಯಾದ ಪ್ಯಾಟ್ರಿಕ್ ರೋಸೆಲ್ ನಿರ್ದೇಶನದ ಸಾಕ್ಷ್ಯಚಿತ್ರ ‘ಗ್ರೀನ್’ , ಗಿರಿರಾಜ್ ಅವರ ಮೊದಲ ಸಿನಿಮಾ ‘ನವಿಲಾದವರು, ಇಟಲಿಯ ಪ್ರಸಿದ್ಧ ನಿರ್ದೇಶಕ ಗಿಸೆಪ್ಪೆ ತೋರ್ನಾತೋರ್ ಅವರ ಸಿನೆಮಾ ಪ್ಯಾರಡಿಸೋ. ಹಾಗೂ ಮರಾಠಿ ನಿರ್ದೇಶಕ, ಸೈರಾಟ್ ಖ್ಯಾತಿಯ ನಾಗರಾಜ್ ಮಂಜುಳೆಯವರ ಕಿರುಚಿತ್ರ ಪಿಸ್ತೂಲ್ಯ‌. ಇವಲ್ಲದೇ ವಿವಿಧ ಉಪನ್ಯಾಸಗಳ ನಡುವೆ ತೋರಿಸಿದ ಹಲವಾರು ದೃಶ್ಯಾವಳಿಗಳು, ಅನಮೇಶನ್ ಕಿರುಚಿತ್ರಗಳು ಈ ಸಿನಿಮಾ ಸಡಗರದಲ್ಲಿ ಭಾಗವಹಿಸಿದ್ದವರನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ದಿದ್ದವು.

ಪ್ರತಿ ಸಿನಿಮಾ ನೋಡಿದ ನಂತರ ಅದರ ಬಗ್ಗೆ, ಆ ಸಿನಿಮಾ ನಿರ್ದೇಶಕರ ಬಗ್ಗೆ ನಡೆದ ಚರ್ಚೆಗಳು ಸಿನಿಮಾಗಳನ್ನು ಅರ್ಥ ಮಾಡಿಕೊಳ್ಳುವ ಹಲವಾರು ಕಣ್ಣೋಟಗಳನ್ನು ಎಲ್ಲರಿಗೂ ನೀಡಿದವು. ‘ನಾವು ಒಂದು ಸಿನಿಮಾ ನೋಡಿದಾಗ ಆ ಕೂಡಲೇ ಅದು ಅರ್ಥವಾಗಿಬಿಡಬೇಕೆಂದು ಬಯಸಬೇಕಿಲ್ಲ. ಕೆಲ ದಿನಗಳ ಅವಧಿಯಲ್ಲಿ ಅದರ ಬಗ್ಗೆ ಯೋಚಿಸಿದಾಗ ಅದು ಹೆಚ್ಚು ಹೆಚ್ಚು ನಮಗೆ ಅರ್ಥವಾಗಬಹುದು. ಕೆಲವೊಮ್ಮೆ ಸಿನಿಮಾಗಳನ್ನು ಅರ್ಥ ಮಾಡಿಕೊಳ್ಳಲು ನಮಗೆ ಪೂರ್ವ ತಯಾರಿಯೂ ಬೇಕಾಗುತ್ತದೆ’ ಎಂದು ಫಣಿರಾಜ್ ಚರ್ಚೆಯ ಸಂದರ್ಭದಲ್ಲಿ ಹೇಳಿದ್ದು ಬಹಳ ಪ್ರಸ್ತುತ ಎನಿಸುತ್ತದೆ‌.

Leave a Reply

Your email address will not be published. Required fields are marked *


CAPTCHA Image
Reload Image