One N Only Exclusive Cine Portal

ಕಾಡುವ ಮಂಜರಿ ಮೋಸ ಮಾಡೋದಿಲ್ಲ!

ಸಿದ್ಧಸೂತ್ರಗಳಾಚೆಗೆ ಹಾರರ್ ಕಥೆಯೊಂದನ್ನು ತೆರೆದಿಡುವ ನಿರೀಕ್ಷೆ ಹುಟ್ಟಿಸಿದ್ದ ಮಂಜರಿ ಚಿತ್ರ ಬಿಡುಗಡೆಯಾಗಿದೆ. ವಿಶೃತ್ ನಾಯಕ್ ನಿರ್ದೇಶನದ, ಶಂಕರ್ ಹಾಗೂ ಕಿರಣ್ ಗೌಡ ನಿರ್ಮಾಣದ ಈ ಚಿತ್ರ ಬಿಡುಗಡೆಪೂರ್ವದಲ್ಲಿ ಹುಟ್ಟಿಸಿದ್ದ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಒಂದುಮಟ್ಟಿಗೆ ಗೆಲುವು ಕಂಡಿದೆ.

ಕನ್ನಡ ಚಿತ್ರರಂಗದಲ್ಲಿ ಸದ್ಯ ಹಾರರ್ ಸಿನಿಮಾಗಳ ಅಬ್ಬರ ಜೋರಾಗಿದೆ. ವಿಶೃತ್ ನಾಯಕ್ ನಿರ್ದೇಶನದ ಮಂಜರಿ ಚಿತ್ರವೂ ಆ ಸಾಲಿನಲ್ಲಿ ಸೇರುತ್ತದೆಯಾದರೂ ಅದು ಮಾಮೂಲು ವರಸೆಯ ದೆವ್ವದ ಕಥೆ ಅಲ್ಲ ಅಂತ ಚಿತ್ರತಂಡವೇ ಆಗಾಗ ಹೇಳಿಕೊಂಡಿತ್ತು. ದೆವ್ವಗಳ ಕಥೆ ಎಂದ ಮೇಲೆ ಅಲ್ಲಿ ಅತಿಶಯ ಎಂಬಂಥಾ ದೃಶ್ಯಗಳು ಧಾರಾಳವಾಗಿರುತ್ತವೆ. ಆದರೆ ಮಂಜರಿ ಚಿತ್ರ ಇಂಥಾ ಅತಿಶಯದ ಅಂಶಗಳಾಚೆಗೆ ಕೊಂಚ ಹೊಸತನದ ನಿರೂಪಣೆ, ಪ್ರೇಕ್ಷಕರನ್ನು ಕ್ಷಣಕ್ಷಣವೂ ಕುತೂಹಲಕ್ಕೀಡು ಮಾಡುತ್ತಾ, ಬೆಚ್ಚಿ ಬೀಳಿಸೋ ಜಾಣ್ಮೆ ಮತ್ತು ಪಾತ್ರಗಳೆಲ್ಲದರ ಹದವಾದ ಏರಿಳಿತಗಳ ಮೂಲಕ ಗಮನ ಸೆಳೆಯುವಂತಿದೆ.

ಈ ಚಿತ್ರದ ಪ್ರಧಾನ ಪಾತ್ರ ಕುಡಿತದ ಚಟವನ್ನೇ ಅಪಾದಮಸ್ತಕ ತುಂಬಿಕೊಂಡ ಪರಮ ಅರಾಜಕ ಸ್ವಭಾವದ ಭೈರ. ಈ ಪಾತ್ರವನ್ನು ನಿದೇಶಕರೇ ನಿರ್ವಹಿಸಿದ್ದಾರೆ. ಈ ಭೈರ ತನ್ನ ಸ್ನೇಹಿತನ ಜೊತೆ ಸೇರಿಕೊಂಡು ಕುಡಿದು ತೂರಾಡುತ್ತಾ ಒಂದಿಲ್ಲೊಂದು ಯಡವಟ್ಟು ಮಾಡಿಕೊಳ್ಳೋ ಮೂಲಕ ಊರಿಗೇ ಭಾರವಾಗಿದ್ದವನು. ಇಂಥಾ ಊರಿನವನೇ ಒಬ್ಬ ಬೇರೊಂದು ಊರಿನಲ್ಲಿ ಫಾರ್ಮ್ ಹೌಸೊಂದರ ದೇಖಾರೇಖಿ ನೋಡಿಕೊಳ್ಳೋ ಕೆಲಸ ಮಾಡಿಕೊಂಡಿರುತ್ತಾನೆ. ಅವನನ್ನು ಕ್ಯಾಚ್ ಹಾಕಿಕೊಂಡು ಆ ಫಾರ್ಮ್‌ಹೌಸಿನಲ್ಲಿ ಹೊಟ್ಟೆತುಂಬ ಎಣ್ಣೆ ಹೊಡೆದು ಮಜಾ ಉಡಾಯಿಸೋ ಐಡಿಯಾ ಮಾಡೋ ಭೈರ ಅದರಲ್ಲಿ ಯಶ ಕಾಣುತ್ತಾನೆ!

ಹಾಗೆ ಫಾರ್ಮ್ ನೋಡಿಕೊಳ್ಳುತ್ತಿದ್ದವನನ್ನು ಪಳಗಿಸಿಕೊಂಡ ಭೈರ ತನ್ನ ಸ್ನೇಹಿತನ ಜೊತೆ ಸೇರಿಕೊಂಡು ಅಲ್ಲಿಗೆ ತೆರಳುತ್ತಾನೆ. ರಾತ್ರಿಯ ನೀರವ ವಾತಾವರಣದಲ್ಲಿ ಹೊಟ್ಟೆ ತುಂಬಾ ಎಣ್ಣೆ ಹೊಡೆದು ಟೈಟಾದ ಭೈರ ಊರಿಂದ ಹೊರಡೋ ಮುನ್ನ ಆತನ ತಂದೆಯ ಬ್ಯಾಗ್ ಎತ್ತಿಕೊಂಡು ಹೋಗಿರುತ್ತಾನೆ. ಅಂದಹಾಗೆ ಇವನ ತಂದೆ ಒಂದು ಕಾಲದಲ್ಲಿ ಮಾಟಮಂತ್ರ ಅಂತ ಮಾಡಿಕೊಂಡು ಇತ್ತೀಚೆಗಷ್ಟೇ ಅದರಿಂದ ನಿವೃತ್ತಿ ಹೊಂದಿದ್ದವನು. ಅಂಥಾ ತಂದೆಯ ಬ್ಯಾಗಿನ ಮೂಲೆಯಲ್ಲೆಲ್ಲೋ ಎಣ್ಣೆ ಏಟಲ್ಲಿದ್ದ ಭೈರನಿಗೊಂದು ಪುಸ್ತಕ ಸಿಗುತ್ತದೆ. ಅದು ಬ್ಲಾಕ್ ಮ್ಯಾಜಿಕ್ಕಿನ ಮಂತ್ರಗಳ ಪುಸ್ತಕ. ಕುಡಿತವನ್ನೇ ಕಸುಬಾಗಿಸಿಕೊಂಡ ಬೈರ ಕುಡಿತದಾಸೆಗೆ ಸ್ನೇಹಿತನ ಸವಾಲು ಸ್ವೀಕರಿಸಿ ಆ ಪುಸ್ತಕದ ಮಂತ್ರೋಚ್ಚಾರ ಮಾಡುತ್ತಾನೆ.

ಆಗ ತಕ್ಷಣವೇ ಆ ಫಾರ್ಮಿನಲ್ಲೆಲ್ಲೋ ಬಿದ್ದಿದ್ದ ಮಡಕೆಯೊಂದು ಹಾರಿ ಬಂದು ಇವರೆದುರು ಪ್ರತ್ಯಕ್ಷವಾಗುತ್ತದೆ. ಆ ಫಾರ್ಮಿನಲ್ಲಿ ಯಾವಾಗಲೇ ಆತ್ಮವೊಂದನ್ನು ಆ ಮಡಕೆಯಲ್ಲಿ ಬಂಧಿಸಿಡಲಾಗಿರುತ್ತೆ. ಆದರೆ ಅದಿನ್ನೂ ಮಡಿಕೆಯೊಳಗೇ ಇರುತ್ತದೆ. ಆದರೆ ಫಾರ್ಮ್ ಮಾಲೀಕ ಮಾರನೇ ದಿನವೇ ಬರುವುದಾಗಿ ಸಂದೇಶ ರವಾನಿಸಿದಾಗ ಅದರ ದೇಖಾರೇಖಿ ನೋಡಿಕೊಳ್ಳುವಾತ ಈ ಕುಡುಕರನ್ನೆಬ್ಬಿಸಿ ಹೊರಡಲು ಹೇಳುತ್ತಾನೆ. ಆಗ ಮತ್ತಿನಲ್ಲಿದ್ದ ಇವರು ಆ ಮಡಕೆಯನ್ನೆತ್ತಿ ಎಸೆದಾಗ ಅದರೊಳಗಿನ ಆತ್ಮ ಬಿಡುಗಡೆ ಹೊಂದುತ್ತದೆ. ಇದು ಜಸ್ಟ್ ಆರಂಭವಷ್ಟೇ. ಆಮೇಲೇನಾಗುತ್ತೆ ಎಂಬುದನ್ನು ನೀವೇ ನೋಡಿದರೆ ಚೆನ್ನ.

ವಿಶೇಷವೆಂದರೆ ಇದೊಂದು ದೆವ್ವದ ಕಥೆಯಂತೆ ಭಾಸವಾದರೂ ಅಸಲೀ ಕಥೆಯೇ ಬೇರೆಯದ್ದಿದೆ. ಭೈರ ಎಂಬ ಪಾತ್ರದಲ್ಲಿ ಮೊದಲ ಸಲ ನಟಿಸಿದ್ದರೂ ಪಳಗಿದ ನಟನಂತೆ ಕಾಣಿಸೋ ನಿರ್ದೇಶಕ ವಿಶೃತ್ ಇಡೀ ಚಿತ್ರವನ್ನೂ ಕೂಡಾ ಭಿನ್ನವಾಗಿಯೇ ಕಟ್ಟಿಕೊಟ್ಟಿದ್ದಾರೆ. ರೂಪಿಕಾ ಸೇರಿದಂತೆ ಎಲ್ಲರಿಂದಲೂ ಆಯಾ ಪಾತ್ರಕ್ಕೆ ಬೇಕಾದ ನಟನೆ ತೆಗೆಸುವಲ್ಲಿಯೂ ನಿರ್ದೇಶಕರು ಗೆದ್ದಿದ್ದಾರೆ. ಅದರಲ್ಲೂ ವಿಜಯ್ ಚೆಂಡೂರ್ ಮತ್ತು ಉಗ್ರಂ ಮಂಜು ಅಭಿನಯ ಅದ್ಭುತವಾಗಿದೆ. ಚಿತ್ರದ ಮೊದಲ ಭಾಗ ಒಂದಿಷ್ಟು ಎಳೆದಂತೆ ಕಾಣುತ್ತದೆ. ಇನ್ನು ದ್ವಿತೀಯ ಭಾಗದ ಕಥೆ ಸಾಗೋದೇ ಗೊತ್ತಾಗುವುದಿಲ್ಲ. ದೆವ್ವದ ಕಥೆಯೊಳಗೂ ಬೇರೆಯದ್ದೇ ಛಾಯೆ ಹೊಂದಿರೋ ಮಂಜರಿ ನಂಬಿ ಬಂದವರಿಗೇನೂ ಕಾಟ ಕೊಡೋದಿಲ್ಲ!

Leave a Reply

Your email address will not be published. Required fields are marked *


CAPTCHA Image
Reload Image