Connect with us

ಕಲರ್ ಸ್ಟ್ರೀಟ್

ಮಗನಿಗೊಂದು ಕೆಲಸ ಕೊಡುವಂತೆ ಅಂಗಲಾಚಿದ್ದರು ಮೀನಮ್ಮ!

Published

on

-ವಿನಾಯಕರಾಮ್ ಕಲಗಾರು

ಒಂದರ ಹಿಂದೊಂದರಂತೆ ಕಷ್ಟ, ಆಘಾತಗಳು ಬಂದೆರಗಿದಾಗ ಎಷ್ಟೋ ದಿನ ಮೀನಾ ಮೂವರು ಮಕ್ಕಳನ್ನ ಗಟ್ಟಿಯಾಗಿ ಹಿಡಿದು ನಾಲ್ಕು ಗೋಡೆಗಳ ಮಧ್ಯೆ ಉಸಿರು ಬಿಗಿ ಹಿಡಿದು ಅತ್ತಿದ್ದಿದೆ. ನಂದಾದೀಪದಂತಿದ್ದ ಆ ಮನೆಯಲ್ಲಿ ತೂಗುದೀಪ ಶ್ರೀನಿವಾಸ ಅವರ ಆತ್ಮಬೆಳಕು ಆರಿಹೋದಾಗ ಆ ತಾಯಿ ಹೃದಯ ಒಮ್ಮೆ ಕಂಪಿಸಿತ್ತು. ತನಗೆ ಮೂರು ಮಕ್ಕಳಲ್ಲ, ನಾಲ್ಕು ಎಂದು ಆರೈಕೆ ಮಾಡಿದ್ದ ಅದೇ ಕೈಗಳಿಗೆ ನಾಳೆಯಿಂದ ನಾಲ್ಕನೇ ತುತ್ತು ತಿನ್ನುವ ಜೀವವೇ ಇಲ್ಲ ಎಂದಾಗ ಹೇಗಾಗಬೇಡ?
ಹೌದು, ತೂಗುದೀಪ ಅವರು ದುಡಿಯುತ್ತಿದ್ದ ಟೈಮಲ್ಲಿ ಪರಿಸ್ಥಿತಿ ಹಾಗಿತ್ತು. ಲಕ್ಷದ ಲೆಕ್ಕದಲ್ಲೇ ಸಿನೆಮಾ ತಯಾರಾಗೋದು. ಕಲಾವಿದನಿಗೆ ಸಂಭಾವನೆಯ ಮಟ್ಟ ಸಾವಿರ ದಾಟಿದರೆ ಅದನ್ನ ಪಾಲಿಗೆ ಬಂದ ಪ್ರಸಾದ ಎಂದು ಕಣ್ಣಿಗೊತ್ತಿಕೊಳ್ಳಬೇಕಿತ್ತು. ಅಂಥದ್ದರಲ್ಲಿ ತೂಗುದೀಪ ಶ್ರೀನಿವಾಸ್ ಮನೆಗೆ ಎಂದೇ ಒಂದು ಭಾಗ ತೆಗೆದಿಡುತ್ತಿದ್ದರು. ತಿಂಗಳುಪೂರ್ತಿ ದುಡಿದು ತಂದು ಮೀನಾ ಮಡಿಲಿಗೆ ಹಾಕುತ್ತಿದ್ದರು. ಅದರಲ್ಲೇ ಪೈಸಾಪೈಸಾ ಜೋಡಿಸಿ ಎಂಟು ಸಾವಿರ ಮಾಡಿ ಮೈಸೂರಿನ ಸಿದ್ದಾರ್ಥ ಲೇ ಔಟ್‌ನಲ್ಲಿ ಒಂದು ಸೈಟ್ ತೆಗೆದುಕೊಂಡರು.
ಸೈಟ್ ಇದ್ದರೆ ಅಲ್ಲೇನು ಗುಡಿಸಲು ಕಟ್ಟಿಕೊಂಡು ಇರಲು ಸಾಧ್ಯವಾ? ಅದೂ ತೂಗುದೀಪ ಶ್ರೀನಿವಾಸ್ ಅವರ ಕುಟುಂಬ ಎಂಬ ಸೀಲ್ ಬೇರೆ ಬಿದ್ದು ವರ್ಷಗಳೇ ಕಳೆದುಹೋಗಿತ್ತು. ಆ ಕೊಂಡ ಜಾಗದಲ್ಲಿ ಮನೆ ಕಟ್ಟಿ ನಿಲ್ಲಿಸಿಯೇ ನಿಲ್ಲಿಸುತ್ತೇನೆ ಎಂದು ಹಠ ಕಟ್ಟಿದ ಮೀನಮ್ಮ ಎಂಡ್ ತೂಗುದೀಪ ಶ್ರೀನಿವಾಸ್, ನಿರಂತರ ಬಾಗಲಕೋಟೆ ಸುತ್ತಮುತ್ತ ನಾಟಕ ಆಡಿ ಅದರಲ್ಲಿ ಬಂದ ಮೂರೂವರೆ ಲಕ್ಷದಲ್ಲಿ ಮನೆ ಕಟ್ಟಿ ನಿಲ್ಲಿಸಿದರು. ಪತಿಯನ್ನು ರಂಗವೇರಲು ಸಜ್ಜುಗೊಳಿಸಿ ಉಪವಾಸ ಕುಂತ ದಿನಗಳೆಷ್ಟೋ. ಆ ದುಡ್ಡಿನಲ್ಲಿ ಒಂದೇ ಒಂದು ರುಪಾಯಿ ಕೂಡ ಆಚೀಚೆ ಆಗದಂತೇ ಜತನ ಮಾಡಿದ್ದು, ಜೋಪಾನ ಮಾಡಿದ್ದು ಇದೇ ಮೀನಾ ತೂಗುದೀಪ ಶ್ರೀನಿವಾಸ!

ಭಾಗ-2

ಆ ದಿನಗಳನ್ನ ನೆನೆಸಿಕೊಂಡರೆ ಮೀನಮ್ಮ ಕೂತಲ್ಲೇ ಕೂತುಬಿಡುತ್ತಾರೆ. ಮನೆತುಂಬಾ ಚೆಲ್ಲಿರುವ ನೆನಪುಗಳ ಅಕ್ಕಿಯನ್ನ ಹೆಕ್ಕಿ ಹೆಕ್ಕಿ ತೆಗೆಯುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಇವತ್ತಿಗೂ ಮೈಸೂರು ಮನೆಯಲ್ಲೇ ಇದ್ದಾರೆ. ತೂಗುದೀಪ ಶ್ರೀನಿವಾಸ ಎಂಬ ಎಂಟಕ್ಷರದ ಜೊತೆಗಿನ ನಂಟು ಇನ್ನೂ ಮುಂದುವರೆದಿದೆ. ಅದೇ ಸೋಫಾ, ಅದೇ ಡೈನಿಂಗ್ ಟೇಬಲ್, ಅದೇ ವಾಟರ್ ಹೀಟರ್, ಅದೇ ಅಡುಗೆಮನೆ, ಅದೇ ಮಂಚ, ಅದೇ ಮಫ್ಲರ್, ಅದೇ ವಸ್ತುಗಳು ಪದೇ ಪದೇ ಕಾಣುತ್ತವೆ, ಕಾಡುತ್ತವೆ. ಅದೇ ಜಾಗದಲ್ಲಿ ತೂಗುದೀಪ ಶ್ರೀನಿವಾಸ್ ಎಂಬ ಜೀವ ಓಡಾಡುತ್ತಿದೆಯೇನೋ ಎಂಬ ಕಲ್ಪನೆಗೂ ಮೀರಿದ ಭಾವನಾಲೋಕದಲ್ಲಿ ಮೀನಾ ತೂಗುದೀಪ ಎಂಬ ಹೆಣ್ಣಿನ ರೂಪದ ಗಂಡುಗಲಿ ಇವತ್ತಿಗೂ ಬದುಕಿದೆ. ಬದುಕಿ ತೋರಿಸಿದೆ.


ಹೌದು, ಯಾವಾಗ ಮನೆಯಲ್ಲಿ ಹೊತ್ತಿನ ಊಟಕ್ಕೆ ಕಷ್ಟವಾಗುತ್ತಿದೆ. ಮಕ್ಕಳಿಬ್ಬರ ಭವಿಷ್ಯ ಬಿಗುವಾಗುತ್ತಿದೆ ಎಂದು ಗೊತ್ತಾಯಿತೋ ಅವತ್ತೇ ಮೀನಾ ತೂಗುದೀಪ ಎದ್ದುನಿಲ್ಲುತ್ತಾರೆ. ಅದರಲ್ಲೂ ದರ್ಶನ್‌ಗಿರುವ ಹೈಟು, ಪರ್ಸನಾಲಿಟಿಗೆ ಅವನಿಗೆ ಅವಕಾಶ ಸಿಗದೇ ಇದ್ದಾಗ ಒಂದು ಡಿಸೈಡ್ ಮಾಡುತ್ತಾರೆ, ನನ್ನ ಮಗನನ್ನ ನಾನು ನಿಲ್ಲಿಸ್ತೀನಿ. ದೊಡ್ಡ ಕಟೌಟ್ ಥರ ನಿಲ್ಲಿಸ್ತೀನಿ. ಅವನ ಹಿಂದೆ ನಾನು ನಿಲ್ತೀನಿ ಎಂದು ಎದೆ ತಟ್ಟಿ ಎದ್ದೇಳುತ್ತಾರೆ!


-ಇದೇ ಮೀನಮ್ಮ ತನ್ನ ಎರಡನೇ ಮಗ ದಿನಕರ್‌ಗೆ ಒಂದೇ ಒಂದು ಸಣ್ಣ ಕೆಲಸ ಇದ್ದರೆ ಕೊಡಿ ಎಂದು ಒಬ್ಬ ದೊಡ್ಡ ವ್ಯಕ್ತಿಯ ಮನೆ ಬಾಗಿಲಲ್ಲಿ ಗಂಟೆಗಟ್ಟಲೇ ಕಾದು ವಾಪಸ್ ಆಗಿದ್ದಿದೆ. ಚಾನೆಲ್ ಒಂದರ ಮುಖ್ಯಸ್ಥರಾಗಿದ್ದ ಆ ವ್ಯಕ್ತಿ, ಕನಿಷ್ಟ ಪಕ್ಷ ತೂಗುದೀಪ ಶ್ರೀನಿವಾಸರ ಜೊತೆಗಿನ ಬೆಸುಗೆ-ಬಾಂಧವ್ಯ ನೆನೆದು ಮನೆಯೊಳಗೆ ಕರೆಯಬಹುದಿತ್ತು. ಆದರೆ ಆಗ ಅವರಿಗೆ ಭಗವಂತ ಹಾಗೆ ಮಾಡಲು ಮನಸ್ಸು ಕೊಡಲಿಲ್ಲ.


ಬಹುಶಃ ಅವತ್ತು ದಿನಕರ್‌ಗೆ ಆ ಚಾನೆಲ್‌ನಲ್ಲಿ ಕೆಲಸ ಆಗಿಬಿಟ್ಟಿದ್ದರೆ ಇವತ್ತು ಅಣ್ಣ ತಮ್ಮ ಇಬ್ಬರೂ ಈ ಹಂತಕ್ಕೆ ಬೆಳೆಯುತ್ತಿರಲಿಲ್ಲವೋ ಏನೋ?
-ಆದರೆ ಈಗ ಕಾಲ ಬದಲಾಗಿದೆ. ಅದೇ ಮೀನಮ್ಮನ ಮಕ್ಕಳಿಬ್ಬರೂ ಸೆಟಲ್ ಆಗಿದ್ದಾರೆ. ತೂಗುದೀಪ ಪ್ರೊಡಕ್ಷನ್ಸ್ ಹೆಸರಲ್ಲಿ ನೂರಾರು ವ್ಯಕ್ತಿಗಳ ಬೆವರ ಹನಿ ಮುತ್ತಾಗುತ್ತಿದೆ. ಯಾವ ಮೈಸೂರು ಮನೆಯ ಅಕ್ಕಪಕ್ಕದ ಮನೆಯ ಕಾರುಗಳನ್ನ ಆಸೆಗಣ್ಣಿನಿಂದ ನೋಡಿ ಖುಷಿ ಪಡಬೇಕಿತ್ತೋ ಅದೇ ಮನೆಗಳವರೆಗೂ ಸಾಲು ಸಾಲಾಗಿ ನಿಲ್ಲಿಸುವಷ್ಟು ಕಾರುಗಳನ್ನ ಕೊಂಡುಕೊಳ್ಳುವ ತಾಕತ್ತು ಬಂದಿದೆ. ಯಾವ ಎಂಬತ್ತು ರುಪಾಯಿ ಸಂಭಾವನೆಗೋಸ್ಕರ ದರ್ಶನ್ ಕೈ ಚಾಚಿ ನಿಲ್ಲಬೇಕಿತ್ತೋ ಅದೇ ವ್ಯಕ್ತಿಗೆ ಎಂಟು ಕೋಟಿ ಸಂಭಾವನೆ ಕೊಡುವ ಮಟ್ಟಕ್ಕೆ ಭಗವಂತ ಭಾಗ್ಯ ಬರೆದಿದ್ದಾನೆ!


ಇಷ್ಟಿದ್ದೂ ಆ ತಾಯಿಗರ್ಭ ಮೈಸೂರು ಮನೆ ಬಿಟ್ಟು ಆಚೀಚೆ ಕದಲುವುದಿಲ್ಲ. ಹೆಚ್ಚೆಂದರೆ ಒಂದು, ಎರಡು ದಿನದ ಮಟ್ಟಿಗೆ ಬೆಂಗಳೂರಿಗೆ ಬರುತ್ತಾರೆ. ಬಂದು ಮಕ್ಕಳ ಮನೆಯಲ್ಲಿ ಇದ್ದು ಹೋಗುತ್ತಾರೆಯೇ ಹೊರತು, ಮುತ್ತುರಾಜ-ಪಾರ್ವತಮ್ಮ ಕೃಪ ಹೆಸರಿನ ಮೈಸೂರ ಮನೆಯೇ ಅವರಿಗೆ ನಂದನವನ. ಅದೇ ಅವರ ಪಾಲಿನ ಬೃಂದಾವನ!

ಕಲರ್ ಸ್ಟ್ರೀಟ್

ರಾಹುಲ್ ಐನಾಪುರ ಈಗ ತ್ರಾಟಕ!

Published

on

ರಾಜಕಾರಣಿಗಳ ಮಕ್ಕಳೂ ರಾಜಕಾರಣಿಗಳೇ ಆಗುತ್ತಾರೆಂಬ ನಂಬಿಕೆ ಆಗಾಗ ಸುಳ್ಳಾದದ್ದಿದೆ. ಮನೆಯ ತುಂಬಾ ರಾಜಕೀಯ ವಾತಾವರಣವಿದ್ದರೂ ಮನಸನ್ನು ಕಲೆಯ ವಶಕ್ಕೊಪ್ಪಿಸಿದ ವಿರಳ ಉದಾಹರಣೆಗಳೊಂದಷ್ಟಿವೆ. ಅದರಲ್ಲಿ ತ್ರಾಟಕ ಚಿತ್ರದ ಮೂಲಕ ನಾಯಕ ನಟನಾಗಿ, ನಿರ್ಮಾಪಕನಾಗಿಯೂ ಪಾದಾರ್ಪಣೆ ಮಾಡಿರೋ ರಾಹುಲ್ ಐನಾಪುರ ಕೂಡಾ ನಿಸ್ಸಂದೇಹವಾಗಿಯೇ ಸೇರಿಕೊಳ್ಳುತ್ತಾರೆ!

ಹೆಸರಲ್ಲಿಯೇ ನಿಗೂಢವನ್ನು ಬಚ್ಚಿಟ್ಟುಕೊಂಡಿರುವ ತ್ರಾಟಕ ಚಿತ್ರವನ್ನು ಶಿವಗಣೇಶ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅಖಾಡ, ಹೃದಯದಲಿ ಇದೇನಿದು ಮತ್ತು ಜಿಗರ್‌ಥಂಡಾ ಚಿತ್ರ್ರಗಳನ್ನು ನಿರ್ದೇಶನ ಮಾಡಿದ್ದ ಶಿವಗಣೇಶ್ ಅವರ ಹೊಸಾ ಕನಸು ತ್ರಾಟಕ. ಈ ಚಿತ್ರವನ್ನು ನಿರ್ಮಾಣ ಮಾಡುತ್ತಲೇ ನಾಯಕನಾಗಿಯೂ ಅಭಿನಯಿಸಿರೋ ರಾಹುಲ್ ಐನಾಪುರ ಅವರ ಖದರ್ ಲುಕ್ಕಿನ ಪೋಸ್ಟರುಗಳು ಎಲ್ಲೆಡೆ ರಾರಾಜಿಸುತ್ತಿವೆ. ಈ ಮೂಲಕ ಕನ್ನಡಕ್ಕೊಬ್ಬ ರಗಡ್ ಲುಕ್ಕಿನ ಹೀರೋ ಎಂಟ್ರಿ ಕೊಟ್ಟಂತಾಗಿದೆ!

ಹೀಗೆ ತ್ರಾಟಕ ಚಿತ್ರದ ಮೂಲಕ ಸದ್ದು ಮಾಡುತ್ತಿರುವ ರಾಹುಲ್ ಬಿಜಾಪುರದವರು. ಅವರದ್ದು ಪಕ್ಕಾ ರಾಜಕೀಯದ ಹಿನ್ನೆಲೆ ಇರುವ ಕುಟುಂಬ. ರಾಹುಲ್ ತಂದೆ ಮನೋಹರ ಐನಾಪುರ ಕಾಂಗ್ರೆಸ್ ನಾಯಕ, ಮಾಜೀ ಶಾಸಕ. ತಾಯಿ ವಸುಂಧರಾ ಐನಾಪುರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಾ ಇದೀಗ ನಿವೃತ್ತರಾಗಿದ್ದಾರೆ.

ಇಂಥಾ ಹಿನ್ನೆಲೆಯಿಂದ ಬಂದಿರುವ ರಾಹುಲ್ ಹೈಸ್ಕೂಲು ಶಿಕ್ಷಣ ಮುಗಿಸಿಕೊಂಡಿದ್ದು ಬಿಜಾಪುರದ ಮಿಲಿಟರಿ ಸ್ಕೂಲಿನಲ್ಲಿ. ಆ ನಂತರ ಬಿಜಾಪುರದಲ್ಲಿಯೇ ಇಂಜಿನಿಯರಿಂಗ್‌ಗೆ ಸೇರಿಕೊಂಡರಾದರೂ ಆ ಹೊತ್ತಿಗಾಗಲೇ ತನ್ನ ಬದುಕಿನ ದಿಕ್ಕು ಸಿನಿಮಾ ಎಂಬುದವರಿಗೆ ಪಕ್ಕಾ ಆಗಿ ಹೋಗಿತ್ತು. ಮೂಲತಃ ಸಿನಿಮಾ ಮತ್ತು ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದ ರಾಹುಲ್ ಇಂಜಿನಿಯರಿಂಗನ್ನು ಕಂಪ್ಲೀಟು ಮಾಡಿಕೊಂಡರಾದರೂ ಆ ವಲಯದಲ್ಲಿ ಕೆಲಸಕ್ಕೆ ಹೋಗುವ ಮನಸು ಮಾಡದೆ ಸೀದಾ ಚಿತ್ರರಂಗದ ಸಂಪರ್ಕಕ್ಕೆ ಬಂದಿದ್ದರು.

ಆ ನಂತರದಲ್ಲಿ ಕೊಂಚಾವರಂ ಎಂಬ ಲಂಬಾಣಿ ಸಮುದಾಯದ ಕಥೆ ಹೊಂದಿರುವ ಚಿತ್ರದಲ್ಲಿಯೂ ರಾಹುಲ್ ನಟಿಸಿದ್ದರು. ಆ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯೂ ಸಿಕ್ಕಿತ್ತು. ಅದಾದ ಬಳಿಕ ಶಿವಗಣೇಶ್ ನಿರ್ದೇಶನ ಮಾಡಿದ್ದ ಅಖಾಡ ಚಿತ್ರದಲ್ಲಿಯೂ ಒಂದು ಪಾತ್ರ ಮಾಡಿದ್ದರು. ಅದರಲ್ಲಿ ರಾಹುಲ್ ಪರ್ಫಾರ್ಮೆನ್ಸ್ ನೋಡಿದ ಶಿವಗಣೇಶ್ ಅವರಿಗೆಂದೇ ಹೊಸೆದದ್ದು ತ್ರಾಟಕ ಚಿತ್ರದ ಕಥೆ. ಹಾಗೆ ಶುರುವಾದ ಈ ಚಿತ್ರ ಇದೇ ಮೂವತ್ತೊಂದರಂದು ತೆರೆ ಕಾಣಲು ಸಜ್ಜಾಗಿದೆ.

ಈ ಚಿತ್ರದಲ್ಲಿ ರಾಹುಲ್ ಐನಾಪುರ ಅವರಿಗೆ ಈ ಹಿಂದೆ ಒರಟ ಐ ಲವ್ ಯೂ ಚಿತ್ರದಲ್ಲಿ ನಟಿಸಿದ್ದ ಹೃದಯಾ ನಾಯಕಿಯಾಗಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ಅರುಣ್ ಸುರಗ ಸಂಗೀತ ಈ ಚಿತ್ರಕ್ಕಿದೆ. ಭವಾನಿ ಪ್ರಕಾಶ್, ಯಶ್ವಂತ್ ಶೆಟ್ಟಿ, ನಂದಗೋಪಾಲ್, ಅಕ್ಷರಾ, ಅಜಿತ್ ಜಯರಾಜ್, ಶ್ರೀಧರ್ ಶಾಸ್ತ್ರಿ, ಅಜಯ್ ಶಿವರಾಜ್, ದೀಶಾ ಪೂವಯ್ಯ ಮುಂತಾದವರು ನಟಿಸಿದ್ದಾರೆ. ಒಂದು ಮರ್ಡರ್ ಮಿಸ್ಟರಿಯ ಸುತ್ತಾ ನಡೆಯೋ ಮೈ ನವಿರೇಳಿಸೋ ಕಥಾ ಹಂದರ ಹೊಂದಿರುವ ತ್ರಾಟಕದಲ್ಲಿ ರಾಹುಲ್ ಖಡಕ್ಕು ಎಸಿಪಿಯಾಗಿ ನಟಿಸಿದ್ದಾರೆ.

Continue Reading

ಕಲರ್ ಸ್ಟ್ರೀಟ್

Published

on

ಅದೇನೇ ಖ್ಯಾತಿ, ಪ್ರಸಿದ್ಧಿ ಬಂದರೂ ಈ ನೆಲದ ಗುಣವೊಂದನ್ನು ಸದಾ ಜಾಗೃತವಾಗಿಟ್ಟುಕೊಂಡು ಸಹಜವಾಗಿ ಬದುಕುವವರು ನವರಸ ನಾಯಕ ಜಗ್ಗೇಶ್. ಓರ್ವ ರಾಜಕಾರಣಿಯಾಗಿ ಅವರ ಬಗ್ಗೆ ತಕರಾರುಗಳನ್ನು ಇಟ್ಟುಕೊಂಡವರಿರಬಹುದು. ಆದರೆ ಒಂದು ವ್ಯಕ್ತಿತ್ವವಾಗಿ ಅವರನ್ನು ಮೆಚ್ಚಿಕೊಳ್ಳದಿರುವವರು ವಿರಳ. ಅದೇನೇ ಸಾಧಿಸಿದರೂ, ಯಾವ ಎತ್ತರ ತಲುಪಿದರೂ ತಮಗಾಗಿ ಕಾತರಿಸೋ ಜೀವಗಳನ್ನು ಖುಷಿಯಾಗಿಡುವುದೇ ಜೀವನದ ನಿಜವಾದ ಸೌಂದರ್ಯ. ಈ ಮಾತಿಗೆ ಸೂಕ್ತ ಉದಾಹರಣೆ ಜಗ್ಗೇಶ್.


ಸಾಮಾಜಿಕ ಜಾಲತಾಣಗಳಲ್ಲಿ ಅವರು ಅಪ್‌ಲೋಡ್ ಮಾಡಿರುವ ಒಂದು ಫೋಟೋ ಈ ಮಾತಿಗೆ ಸೂಕ್ತ ಸಮಜಾಯಿಶಿಯಂತಿದೆ. ಭಾನುವಾರದಂದು ತಮ್ಮ ಮೊಮ್ಮಗ ಅರ್ಜುನನಿಗೋಸ್ಕರ ಬಿಡುವು ಮನಾಡಿಕೊಂಡು, ಪೌರಾಣಿಕ ವೇಷ ಧರಿಸಿ ಆತನನ್ನು ಅಚ್ಚರಿಗೀಡುಮಾಡಿದ್ದಾರೆ!
ಈ ಪೌರಾಣಿಕ ವೇಷದ ಫೋಟೋವೊಂದನ್ನು ಹಾಕಿಕೊಂಡಿರುವ ಜಗ್ಗೇಶ್ `ಇದು ಮೊಮ್ಮಗನ ಸಂತೋಷಕ್ಕೋಸ್ಕರ ನನ್ನ ಸಣ್ಣ ಪ್ರಯತ್ನ. ಮಕ್ಕಳು ಅಸಲು, ಮೊಮ್ಮಕ್ಕಳು ಬಡ್ಡಿ. ಮನುಷ್ಯನಿಗೆ ಅಸಲಿಗಿಂತಲೂ ಬಡ್ಡಿಯ ಮೇಲೇ ಆಸೆ ಹೆಚ್ಚು ಎಂಬರ್ಥದಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ.


ವಾರವಿಡೀಯ ಯಾಂತ್ರಿಕ ಬದುಕನ್ನು ಬದಲಾಯಿಸಿಕೊಳ್ಳಲು ಜಗ್ಗೇಶ್ ಮೊಮ್ಮಗ ಅರ್ಜುನನೊಂದಿಗೆ ಮಗುವಾಗಿ ಬೆರೆಯುತ್ತಾರಂತೆ. ಅದು ಅವರ ಇಷ್ಟದ ಕ್ಷಣ. ಪ್ರತೀ ವಾರವೂ ಮೊಮ್ಮಗನನ್ನು ಖುಷಿಗೊಳಿಸಲು ನಾನಾ ಸರ್ಕಸ್ಸು ನಡೆಸುವ ಜಗ್ಗೇಶ್ ಈ ಬಾರಿ ಒಂದಷ್ಟು ಸಮಯ ಹೊಂದಿಸಿಕೊಂಡು ನೀಟಾಗಿ ಪೌರಾಣಿಕ ವೇಷ ಧರಿಸಿ ಏಕಾಏಕಿ ಮೊಮ್ಮಗನ ಮುಂದೆ ಕಾಣಿಸಿಕೊಂಡಿದ್ದಾರೆ. ಅದನ್ನು ಕಂಡ ಅರ್ಜುನ್ ತಾತನ ಹೊಸಾ ಅವತಾರ ಕಂಡು ಖುಷಿಗೊಂಡಿದ್ದಾನಂತೆ!

Continue Reading

ಕಲರ್ ಸ್ಟ್ರೀಟ್

ಝಾನ್ಸಿಯಾಗಿ ಮರಳಿ ಬಂದಳು ಲಕ್ಷ್ಮಿ ರೈ!

Published

on

ಕನ್ನಡದಲ್ಲಿ ಒಂದಷ್ಟು ಚಿತ್ರಗಳಲ್ಲಿ ನಟಿಸಿ ಈ ಮೂಲಕವೇ ಒಂದಷ್ಟು ಅಭಿಮಾನಿಗಳನ್ನೂ ಹೊಂದಿದ್ದಾಕೆ ಲಕ್ಷ್ಮಿ ರೈ. ಅಪ್ಪಟ ಕನ್ನಡತಿಯಾದ ಈ ಕರಾವಳಿ ಹುಡುಗಿ ಕನ್ನಡದಲ್ಲಿಯೇ ನೆಲೆಗೊಳ್ಳುವ ಎಲ್ಲ ಅವಕಾಶಗಳೂ ಇದ್ದವು. ಆದರೆ ಆ ಹೊತ್ತಿಗಾಗಲೇ ತೆಲುಗು ತಮಿಳು ಸೇರಿದಂತೆ ನಾನಾ ಭಾಷೆಗಳಲ್ಲಿ ನಟಿಸಲಾರಂಭಿಸಿದ್ದ ಲಕ್ಷ್ಮಿ ಹೆಚ್ಚೂ ಕಮ್ಮಿ ಅಲ್ಲೇ ಕಳೆದು ಹೋಗಿದ್ದಳು. ಬಾಲಿವುಡ್‌ನಲ್ಲಿಯೂ ಬೇಡಿಕೆ ಹೊಂದಿರೋ ಈಕೆಯೀಗ ಮತ್ತೆ ಕನ್ನಡಕ್ಕೆ ಮರಳಿದ್ದಾಳೆ!


ಬಾಲಿವುಡ್‌ನಲ್ಲಿ ತೆರೆ ಕಂಡಿದ್ದ ಜ್ಯೂಲಿ ೨ ಚಿತ್ರದ ಮೂಲಕ ಖ್ಯಾತಳಾಗಿದ್ದ ಲಕ್ಷ್ಮಿ ರೈ ಇದೀಗ ಝಾನ್ಸಿ ಎಂಬ ಕನ್ನಡ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲು ತಯಾರಾಗಿದ್ದಾಳೆ. ಮರ್ಯಾದಾ ರಾಮಣ್ಣ ಚಿತ್ರವನ್ನು ನಿರ್ದೇಶನ ಮಾಡಿದ್ದ ಗುರುಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಈ ಚಿತ್ರದಲ್ಲಿ ಲಕ್ಷ್ಮಿ ನಟಿಸಲು ಒಪ್ಪಿಕೊಂಡಿದ್ದಾಳೆ.

ಝಾನ್ಸಿ ಅಂದಾಕ್ಷಣ ಇದು ಐಹಿಹಾಸಿಕ ಸಿನಿಮಾ ಇರಬಹುದಾ ಅನ್ನಿಸೋದು ಸಹಜವೇ. ಆದರೆ ಖಂಡಿಯಾ ಇವು ಆ ವೆರೈಟಿಯ ಚಿತ್ರವಲ್ಲ. ಪಕ್ಕಾ ಆಕ್ಷನ್ ಕಂಟೆಂಟಿನ ಈ ಚಿತ್ರದ ಮೂಲಕ ಮಾಲಾಶ್ರೀ, ರಾಗಿಣಿ ಮುಂತಾದ ನಟಿಯರ ಸಾಲಿನಲ್ಲಿ ಲಕ್ಷ್ಮಿಯೂ ಸೇರ್ಪಡೆಯಾಗಲಿದ್ದಾಳೆ. ಯಾಕೆಂದರೆ ಲಕ್ಷ್ಮಿ ಈ ಚಿತ್ರದ ಮೂಲಕ ಆಕ್ಷನ್ ಪಾತ್ರದಲ್ಲಿ ಮಿಂಚಲಿದ್ದಾಳೆ.

ಲಕ್ಷ್ಮಿ ರೈ ಬಾಲಿವುಡ್ ಚಿತ್ರ ಜ್ಯೂಲಿ ೨ನಲ್ಲಿ ಮೈ ಚಳಿ ಬಿಟ್ಟು ಅಭಿನಯಿಸಿದ್ದಳು. ಆದರೆ ಅದೇಕೋ ಈ ಚಿತ್ರವನ್ನು ಪ್ರೇಕ್ಷಕರು ಅಷ್ಟಾಗಿ ಇಷ್ಟಪಟ್ಟಿರಲಿಲ್ಲ. ಅದು ಬಾಕ್ಸಾಫೀಸಿನಲ್ಲಿಯೂ ನಿರೀಕ್ಷಿತವಾದ ಗಳಿಕೆ ಮಾಡಿರಲಿಲ್ಲ. ಈ ಮೂಲಕ ಬಾಲಿವುಡ್ಡಿನಲ್ಲಿ ಲಕ್ಷ್ಮಿ ರೈಗೆ ಲತ್ತೆ ಪರ್ವವೊಂದು ಆರಂಭವಾಗಿತ್ತು. ಆ ನಂತರವೂ ಒಂದಷ್ಟು ಅವಕಾಶಗಳು ಬಂದವಾದರೂ ಯಾವ ಚಿತ್ರಗಳೂ ಬಿಡುಗಡೆಯಾಗಿಲ್ಲ.

ಇತ್ತ ತೆಲುಗು ಮತ್ತು ತಮಿಳಿನಲ್ಲಿಯೂ ಬೇಡಿಕೆ ಅಷ್ಟಕ್ಕಷ್ಟೇ ಎಂಬಂತಿದೆ. ರಾಘವ ಲಾರೆನ್ಸ್‌ನ ಒಂದಷ್ಟು ಸಿನಿಮಾಗಳಿಗೆ ಈಕೆ ಪರ್ಮನೆಂಟು ನಾಯಕಿಯಾಗಿ `ಫಿಕ್ಸ್’ ಆಗಿಬಿಟ್ಟಿದ್ದಳು. ಜನ ಎಷ್ಟೂಂತ ಇವರಿಬ್ಬರ ಕಾಂಬಿನೇಷನ್ನು ನೋಡಲು ಸಾಧ್ಯ? ಇಂಥಾ ಸ್ಥಿತಿಯಲ್ಲಿ ಲಕ್ಷ್ಮಿ ಕನ್ನಡ ಚಿತ್ರದ ಆಫರ್ ಅನ್ನು ಒಪ್ಪಿಕೊಂಡಿದ್ದಾಳೆ. ಚಿತ್ರವೇನಾದರೂ ಚೆನ್ನಾಗಿದ್ದರೆ ಕನ್ನಡತಿ ಲಕ್ಷ್ಮಿ ರೈ ಕನ್ನಡದಲ್ಲಿಯೇ ನೆಲೆ ನಿಲ್ಲುವಂತಾಗಬಹುದೇನೋ…

Continue Reading

Trending

Copyright © 2018 Cinibuzz