ಇಂದು ಕನ್ನಡ ಚಿತ್ರರಂದ ಪಾಲಿಗೆ ಸರಣಿ ದುಃಖದ ದಿನ. ಗಂಟಲು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಛಾಯಾಗ್ರಾಹಕ ವಿಷ್ಣುವರ್ಧನ್ ಸಾವಿನ ಸುದ್ದಿ ಹೊರ ಬಿದ್ದ ಬೆನ್ನಿಗೇ, ಕನ್ನಡ ಚಿತ್ರರಂಗದ ಅಮೂಲ್ಯ ಕೊಂಡಿಯಂತಿದ್ದ ಪ್ರೊಡಕ್ಷನ್ ಮ್ಯಾನೇಜರ್‌ಮೀಸೆ ಪಾಪಣ್ಣ ನಿಧನರಾದ ಸುದ್ದಿ ಬಂದಿದೆ.
ಮೀಸೆ ಪಾಪಣ್ಣ ನಾಗೇಶ್ ಕೋಗಿಲು ನಿರ್ಮಾಣದ ಟಕ್ಕರ್ ಚಿತ್ರಕ್ಕೂ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದವರು. ವಯಸ್ಸು ಎಪ್ಪತೈದರ ಗಡಿ ದಾಟಿದರೂ ಉತ್ಸಾಹದಿಂದಲೇ ಕಾರ್ಯ ನಿರ್ವಹಿಸುತ್ತಿದ್ದ ಮೀಸೆ ಪಾಪಣ್ಣ ಇಡೀ ಚಿತ್ರರಂಗದ ಪ್ರೀತಿ ಪಾತ್ರರಾಗಿದ್ದವರು. ಪಾಪಣ್ಣರ ಅನಿರೀಕ್ಷಿತ ನಿರ್ಗಮನ ಹಲವಾರು ಚಿತ್ರತಂಡಕ್ಕೆ ಆಘಾತವನ್ನುಂಟು ಮಾಡಿದೆ.
ಕನ್ನಡ ಚಿತ್ರರಂಗದಲ್ಲಿ ನೂರಾರು ಚಿತ್ರಗಳಿಗೆ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಪಾಪಣ್ಣ ಮೀಸೆ ಪಾಪಣ್ಣ ಎಂದೇ ಖ್ಯಾತರಾಗಿದ್ದವರು. ಡಾ. ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್, ಅಂಬರೀಶ್ ಅವರಂಥಾ ನಟರ ಚಿತ್ರಗಳಿಗೂ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದವರು ಪಾಪಣ್ಣ. ಅಂಥಾ ಮಹಾ ನಟರ ಚಿತ್ರಗಳ ಜೊತೆಗೆ ಈ ತಲೆಮಾರಿನ ನಟರ ಚಿತ್ರಗಳಿಗೂ ಪ್ರಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಸ್ನೇಹಶೀಲತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ ಪಾಪಣ್ಣ ವಯಸ್ಸಿನಾಚೆಗೆ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದ್ದದ್ದು ಆ ವ್ಯಕ್ತಿತ್ವದಿಂದಲೇ. ನಾಗೇಶ್ ಕೋಗಿಲು ನಿರ್ಮಾಣದಲ್ಲಿ ರಘು ಶಾಸ್ತ್ರಿ ನಿರ್ದೇಶಿಸುತ್ತಿರುವ ಮನೋಜ್ ಅಭಿನಯದ ‘ಟಕ್ಕರ್’ ಪಾಪಣ್ಣ ಕೆಲಸ ಮಾಡಿದ ಕೊನೆಯ ಚಿತ್ರ.
ಕುಣಿಗಲ್ ಮೂಲದ ಪಾಪಣ್ಣನವರಿಗೆ ಕಳೆದ ವರ್ಷವೇ ಹೃದಯಾಘಾತವಾಗಿತ್ತು. ಆದರೂ ಶ್ರಮ ಜೀವಿಯಾದ ಅವರು ಚೇತರಿಸಿಕೊಂಡು ಮತ್ತೆ ತಮ್ಮ ವೃತ್ತಿಗೆ ಮರಳಿದ್ದರು. ಎಪ್ಪತೈದು ವರ್ಷವಾಗಿದ್ದರೂ, ಆರೋಗ್ಯ ಕೈ ಕೊಟ್ಟಿದ್ದರೂ ಅವರೊಳಗಿನ ಕೆಲಸಗಾರ ದಣಿದಿರಲಿಲ್ಲ. ಅವರ ಉತ್ಸಾಹ ಖಾಯಿಲೆಗಳ ಮುಂದೆ ಮಣಿದಿರಲಿಲ್ಲ. ಇಳಿ ವಯಸಿನಲ್ಲಿಯೂ ಹೀಗೆ ಸ್ವಾಭಿಮಾನದಿಂದ ಬದುಕಿದ್ದ ಅವರಿಗೆ ಕಾಯಿಲೆಯೂ ಸೇರಿದಂತೆ ಕಷ್ಟಗಳಿದ್ದವು. ಆದರೆ ರಾಜ್ ಕಾಲದಿಂದಲೂ ಸಿನಿಮಾ ರಂಗದ ಭಾಗವಾಗಿದ್ದ ಅವರಿಗೆ ಮಿಡಿದವರು ಕಡಿಮೆ. ತೆರೆಯ ಹಿಂದೆ ದುಡಿಯುವ ಇಂಥವರನ್ನು ಬದುಕಿರುವಾಗವಾಗಲಿ, ಮರಣದ ಸಂದರ್ಭದಾಗಲಿ ಯಾರೂ ಕಣ್ಣೆತ್ತಿ ನೋಡೋದಿಲ್ಲ. ಇಂಥವರು ಸಂಧ್ಯಾ ಕಾಲದಲ್ಲಿ ಒಂದಷ್ಟು ನೆಮ್ಮದಿಯಾಗಿರುವಂಥಾ ಅವಕಾಶ ಕಲ್ಪಿಸೋ ಬಗ್ಗೆ ಇನ್ನಾದರೂ ಫಿಲಂ ಚೇಂಬರ್ ಆಲೋಚಿಸಬೇಕಿದೆ.
ಒಟ್ಟಾರೆಯಾಗಿ, ನೂರಾರು ಚಿತ್ರಗಳಿಗೆ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಪ್ರತೀ ಹಂತದಲ್ಲಿಯೂ ಜೊತೆಯಾಗಿದ್ದವರು ಮೀಸೆ ಪಾಪಣ್ಣ. ಅವರು ಚಿತ್ರರಂಗದ ಅನುಭವಗಳ ಗಣಿ. ಅವರಿಗೆ ಅದೆಷ್ಟೋ ವಿಚಾರಗಳು ಗೊತ್ತಿದ್ದವು. ಮುಖವಾಡಗಳ ಪರಿಚಯವಿದ್ದವು. ಮೂರ್ನಾಲಕ್ಕು ದಶಕಗಳ ಕಾಲ ಕನ್ನಡ ಚಿತ್ರರಂಗದ ಪ್ರತೀ ಹೆಜ್ಜೆಗೂ ಅವರು ಜೊತೆಯಾಗಿದ್ದರು. ಅವರೀಗ ನಿಧನರಾಗಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಿಂದ ಹಿರಿತನದ ಕೊಂಡಿಯೊಂದು ಕಳಚಿಕೊಂಡಂತಾಗಿದೆ. ಇವರ ಸಾವಿನ ಸುದ್ದಿಯ ಹಿಂದೆಯೇ ಛಾಯಾಗ್ರಾಹಕ ಕುಮಾರ್ ಚಕ್ರವರ್ತಿಯವರೂ ನಿಧನರಾದ ಸುದ್ದಿ ಬಂದಿದೆ. ಪಿಕೆಎಚ್ ದಾಸ್‌ರ ಗರಡಿಯಲ್ಲಿ ಪಳಗಿ ಖ್ಯಾತ ಛಾಯಾಗ್ರಾಹಕರಾಗಿದ್ದವರು ಕುಮಾರ ಚಕ್ರವರ್ತಿ. ಅವರಿಗೂ ಕೂಡಾ ವಿಷ್ಣು ಅವರಂತೆಯೇ ಯುವ ವಯಸ್ಸು. ಆದರೂ ಅವರು ಅನಾರೋಗ್ಯದಿಂದ ಮರಣ ಹೊಂದಿದ್ದಾರೆ.
ಹೀಗೆ ಬೆಳಗ್ಗಿನಿಂದಲೇ ಸಾವಿನ ಸುದ್ದಿಯ ಆಘಾತ ಬಂದೆರಗುತ್ತಿದೆ. ಕನ್ನಡ ಚಿತ್ರರಂಗಕ್ಕಿದು ನಿಜಕ್ಕೂ ಕರಾಳ ಭಾನುವಾರ.

#

LEAVE A REPLY

Please enter your comment!
Please enter your name here

five × four =