One N Only Exclusive Cine Portal

ಮೇಘನಾ ಜೊತೆ ಮಾತಾಡಿದ್ದು ಯಾರು ಗೊತ್ತಾ?

ಒಂದಷ್ಟು ಚಿತ್ರಗಳು ಯಾಕೆ ಕೆಟ್ಟಾಕೊಳಕಾಗಿ ತೆರೆ ಕಂಡು ಒಂದೇ ಶೋಗೆ ಬೋರಲು ಬೀಳುತ್ತವೆ? ಇನ್ನೊಂದಷ್ಟು ಮಂದಿ ತಲೆಯಲ್ಲಿ ಸೆಗಣಿ ತುಂಬಿದ್ದರೂ ಯಾಕೆ ಸಿನಿಮಾ ಮಾಡಲೇ ಬೇಕೆಂಬ ಹುಚ್ಚಿಗೆ ಬೀಳುತ್ತಾರೆ? ಇಂಥಾ ಪ್ರಶ್ನೆಗಳು ಕನ್ನಡದ ಸಾಮಾನ್ಯ ಪ್ರೇಕ್ಷಕರನ್ನೂ ಕೂಡಾ ಯಾವುದಾದರೂ ಒಂದು ಹಂತದಲ್ಲಿ ಕಾಡಿರುತ್ತದೆ. ಈಗ ಹರಿದಾಡುತ್ತಿರುವ ಆಡಿಯೋ ಕ್ಲಿಪಿಂಗ್ ಮತ್ತು ಅದರ ಹಿಂದಿರೋ ವಾಸ್ತವಗಳು ಸದರಿ ಪ್ರಶ್ನೆಗೆ ಸೂಕ್ತ ಉತ್ತರದಂತಿವೆ!

ಮೊದಲನೆಯ ಆಡಿಯೋ ಕ್ಲಿಪಿಂಗಿನಲ್ಲಿ ಹೀರೋಯಿನ್ ಒಬ್ಬಳು ತನ್ನ ಆಪ್ತರೊಬ್ಬರಿಗೆ ಕರೆ ಮಾಡಿ ತನಗೆ ಹೀನಾಮಾನ ಬೈದ ನಿರ್ಮಾಪಕನ ಮೇಲೆ ಕಂಪ್ಲೇಟು ಹೇಳೋ ಧ್ವನಿ ಇದೆ. ಅದರಲ್ಲಿ ಹುಡುಗಿ ಬಿಕ್ಕಳಿಸಿ ಅಳುತ್ತಾಳೆ. ತನ್ನಮ್ಮನೆದುರೇ ನಿರ್ಮಾಪಕ `ಎಷ್ಟು ಜನರ ಜೊತೆ ಮಲಗ್ತೀಯ’ ಅಂತೆಲ್ಲ ತುಚ್ಚವಾಗಿ ಮಾತಾಡಿದ್ದರ ಬಗ್ಗೆ ಸಾಮಾನ್ಯ ಹುಡುಗಿಯಂತೆ ಗೋಳಾಡುತ್ತಾಳೆ. ಬಹುಶಃ ಎಂಥವರ ಕಣ್ಣಾಲಿಗಳೂ ತುಂಬಿ ಬರುವಂತೆ ರೋದಿಸುತ್ತಾಳೆ. ಚಿತ್ರೀಕರಣ ನಡೆಯೋ ಪ್ರದೇಶದಲ್ಲಿ ಅಮ್ಮನೆದುರೇ ನಿರ್ಮಾಪಕ ಹಾಗೆ ಕೆಟ್ಟಾ ಕೊಳಕಾಗಿ ನಿಂದಿಸಿದರೆ ಯಾವ ಹೆಣ್ಣುಮಗಳಿಗೇ ಆದರೂ ನೋವಾಗುತ್ತದೆ. ಇದರ ಹಿಂದೆ ಅದೇನೇ ಇದ್ದರೂ ಇಂಥಾ ದುಷ್ಟತನ ಪ್ರದರ್ಶಿಸಿದ ನಿರ್ಮಾಪಕ ಕ್ಷಮೆಗೆ ಅರ್ಹನಲ್ಲ ಅಂತಲೂ ಅನ್ನಿಸುತ್ತೆ.

ಇಂಥಾದ್ದೊಂದು ಅಸಹ್ಯ ಹೊರ ಬಿದ್ದಿರೋದು ಅದ್ಯಾವುದೋ `ಫನ್’ ಎಂಬ ಚಿತ್ರದ ಸೆಟ್ಟಿನಿಂದ. ಈ ಚಿತ್ರಕ್ಕೆ ಜಗದೀಶ್ ಎಂಬಾತ ನಿರ್ಮಾಪಕ. ಈತ ತನ್ನ ಫನ್ ಎಂಬ ಚಿತ್ರಕ್ಕೆ ಚಿಕ್ಕಮಗಳೂರಿನ ದೇವರಗುಡ್ಡದಲ್ಲಿ ಚಿತ್ರೀಕರಣಕ್ಕೆ ಚಿತ್ರತಂಡವನ್ನ ಜಮೆ ಮಾಡಿದ್ದ. ಅಂದಹಾಗೆ ಈ ಚಿತ್ರಕ್ಕೆ ಐವರು ನಾಯಕಿಯರಂತೆ. ಅದರಲ್ಲಿ ಚಿಕ್ಕಮಗಳೂರಿನ ಮೇಘನಾ ಲಕ್ಷ್ಮಣ್ ಎಂಬಾಕೆಯೂ ಒಬ್ಬಳು. ಮಾಡೆಲ್ ಅದೂ ಇದೂ ಎಂದು ಹೇಳಿಕೊಳ್ಳುವ ಮೇಘನಾ ಈ ಹಿಂದೆ ಐರಾ ಎನ್ನುವ ಸಿನಿಮಾದಲ್ಲಿ ಪಾರ್ಟು ಮಾಡಿದ್ದಳು. ಅದಿನ್ನೂ ಬಿಡುಗಡೆಯಾಗಿಲ್ಲ.

ಆವತ್ತು ಚಿತ್ರೀಕರಣಕ್ಕೆ ರೆಡಿ ಮಾಡಿಕೊಂಡು ಕಾಯುತ್ತಿದ್ದರೂ ಐವರಲ್ಲಿ ಒಬ್ಬಾಕೆಯೂ ಅಲ್ಲಿಗೆ ಬಂದಿರಲಿಲ್ಲ. ಇದರಿಂದ ಬೀಪಿ ರೈಸು ಮಾಡಿಕೊಂಡು ಜಗದೀಶ `ಕೋಟಿ ಕೋಟಿ ಸುರಿದು ಸಿನಿಮಾ ಮಾಡ್ತಿದೀನಿ. ಸಮಯಕ್ಕೆ ಸರಿಯಾಗಿ ಬರೋಕಾಗಲ್ವಾ. ಚಪ್ಲೀಲಿ ಹೊಡೀತೀನಿ ಬೇಗ ಬನ್ರೇ’ ಅಂತ ನಾಯಕಿಯರಿಗೆ ಉಗಿದಿದ್ದನಂತೆ. ನಂತರ ಈ ಮೇಘನಾ ಲಕ್ಷ್ಮಣ್‌ಳನ್ನು ಆಕೆಯ ಅಮ್ಮನ ಸಮೇತ ಕರೆಸಿಕೊಂಡ ಜಗದೀಶ ಕೆಟ್ಟಾ ಕೊಳಕಾಗಿ ಮಾತಾಡುತ್ತಾ ನೀನು ಎಷ್ಟು ಜನರ ಜೊತೆ ಮಲಗ್ತೀಯ ಅಂತೆಲ್ಲ ಮಾತಾಡಿ ಆಕೆಯ ಮೇಲೆ ಕೈ ಮಾಡಲು ಹೋಗಿದ್ದನಂತೆ. ನಟಿ ಮೇಘನಾ ಅದ್ಯಾರಿಗೋ ಫೋನು ಮಾಡಿ ಅತ್ತೂಕರೆದದ್ದು ಈ ವಿಚಾರವಾಗಿಯೇ.

ಎಪಿಸೂಡ್ – 2
ಇದು ಆಡಿಯೋ ಕ್ಲಿಪಿಂಗಿನ ಒಂದನೇ ಎಪಿಸೋಡಿನ ಸಾರಾಂಶ. ಇನ್ನು ಲೀಕಾಗಿರುವ ಎರಡನೇ ಎಪಿಸೋಡು ಮೊದಲ ಎಪಿಸೋಡಿನ ಪ್ಯಾಥೋ ಹೀರೋಯಿನ್ ಮೇಘನಾಳ ಬಗ್ಗೆಯೇ ಅನುಮಾನ ಮೂಡಿಸುವಂತಿದೆ. ಈ ಚಿತ್ರದ ಮತ್ತೊಬ್ಬ ಪಾತ್ರಧಾರಿ ಅರ್ಜುನ್ ಎಂಬಾತನ ಮೇಲೆಯೂ ಅಸಹ್ಯ ಮೂಡುವಂತಾಗುತ್ತದೆ. ಈ ಆಡಿಯೋದಲ್ಲಿ ಪ್ರಿಯಾ ಎಂಬಾಕೆಯೊಬ್ಬಳು ಅತಿಥಿ ಪಾತ್ರವನ್ನೂ ನಿರ್ವಹಿಸುತ್ತಾಳೆ. ಇದರ ತುಂಬಾ ಕೆಟ್ಟಾ ಕೊಳಕು ಮಾತುಗಳೇ ಇದ್ದಾವೆ. ಅಲ್ಲಿ ಎರಡು ಜುಟ್ಟುಗಳ ನಡುವೆ ಅರ್ಜುನನೆಂಬ ಅಬ್ಬೇಪಾರಿ ವಿದೂಷಕನಂತೆ ಪಾತ್ರ ವಹಿಸಿದ್ದಾನೆ. ಪ್ರಿಯಾಳನ್ನು ಪಿಂಪ್ ಅಂತೆಲ್ಲ ಹೇಳಿದ್ದಳೆನ್ನಲಾದ ನಟಿ ಮೇಘನಾ ವಿರುದ್ಧ ಅರ್ಜುನ್ ಕೆಂಡ ಕಾರುತ್ತಾನೆ. ಪ್ರಿಯಾ ಎಂಬಾಕೆಯ ಪರವಾಗಿ ವಕಾಲತ್ತು ವಹಿಸೋ ಅರ್ಜುನ್ ಅಮ್ಮ ಅಕ್ಕ ಬೈಗುಳಗಳ ಜೊತೆಗೇ ಮೇಘನಾ ಜೊತೆ ಸಂಭಾಷಣೆ ನಡೆಸುತ್ತಾನೆ. ಮುಂದುವರೆದು ನೀನೇನು ಸಾಚಾನಾ ನನ್ನ ಜೊತೆ ಮಲಗಿಲ್ಲವಾ ಎಂಬಂಥಾ ಕೊಳಕು ಮಾತನ್ನೂ ಆಡುತ್ತಾನೆ. ಅಂಥಾದ್ದೊಂದು ಮಾತಾಡಿದಾಗಲೂ ಮೇಘನಾ ಪ್ರೆಂಡ್ಷಿಪ್ಪು ಅಂತೆಲ್ಲ ಮಾತಾಡುತ್ತಾಳೆ. ಇನ್ನು ಹಲವಾರು ಜನರ ಹೆಸರುಗಳೆಲ್ಲಾ ಈ ಸಂಭಾಷಣೆಯಲ್ಲಿ ಬಂದು ಹೋಗುತ್ತವೆ.

ಇನ್ನುಳಿದಂತೆ ಈ ಮೇಘನಾ ಸರಣಿಯೋಪಾದಿಯಲ್ಲಿ ಸುಳ್ಳುಗಳ ಸರಮಾಲೆ ಹೊಸೆದ ವಿಚಾರವೂ ಬಯಲಾಗುತ್ತದೆ. ದೇವರಮನೆಯ ಚಿತ್ರೀಕರಣದಲ್ಲಿ ಕಿರಿಕ್ಕಾದಾಗ ನಾನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ತಂಗಿ ಅಂತೆಲ್ಲ ಹೇಳಿಕೊಂಡಿದ್ದಳು. ಕೆಲ ಮಂದಿಗೆ ಎಂಎಲ್ಸಿ ಒಬ್ಬರ ಮಗಳೆಂದೂ ಹೆದರಿಸಿದ್ದಳಂತೆ. ಆದರೆ ಜಿಪಂ ಅಧ್ಯಕ್ಷೆ ಚೈತ್ರ ತನಗೆ ಈ ಹುಡುಗಿ ಯಾರೆಂದೇ ಗೊತ್ತಿಲ್ಲ ಅಂದಿದ್ದಾರೆ. ಮೇಘನಾಳಂಥಾ ನಟಿಯರು ಸಿನಿಮಾ ನಾಯಕಿಯಾಗೋ ಹಂಬಲಕ್ಕೆ ಸಿಕ್ಕಿ ಅನ್ಯಾಯವಾಗಿ ಇಂಥಾ ವಿಷ ವ್ಯೂಹಕ್ಕೆ ಸಿಕ್ಕಿಕೊಳ್ಳುತ್ತಾರಾ? ಯಾವುದೋ ಹುಕಿಗೆ ಬಿದ್ದು ತಾವಾಗೇ ಇಂಥಾ ವ್ಯೂಹ ರಚಿಸಿಕೊಳ್ಳುತ್ತಾರಾ ಗೊತ್ತಿಲ್ಲ.

ಒಟ್ಟಾರೆಯಾಗಿ ಫನ್ ಎಂಬ ಚಿತ್ರವೊಂದರ ವಾತಾವರಣ ಇದೀಗ ಅಕ್ಷರಶಃ ಕೊಳೆತ ಕೊಂಪೆಯಂತಾಗಿದೆ. ಹುಡುಗೀರು ದಂಡಿ ದಂಡಿಯಾಗಿ ಅನಾಯಾಸವಾಗಿ ಸಿಗುತ್ತಾರೆಂಬ ಕಾರಣದಿಂದಲೇ ಸಿನಿಮಾ ಮಾಡುವ ಚಿತ್ರರಂಗದೊಳಗಿನ ಕೊಳಕು ಮೆಂಟಾಲಿಟಿಯೂ ಜಾಹೀರಾಗಿದೆ. ಮೇಘನಾ ಎಂಬ ನಟಿ ಕನ್ನಡ ಚಿತ್ರರಂಗದಲ್ಲಿ ಇನ್ನು ಎಂತೆಂಥಾ ಸುದ್ದಿಗೆ ಆಹಾರವಾಗುತ್ತಾಳೋ ಗೊತ್ತಿಲ್ಲ. ಒಟ್ಟಾರೆ ಇಂಥಾ ದಗಲ್ಬಾಜಿಗಳ ನಡುವೆ ಕೆಲ ಸಭ್ಯ ಹೆಣ್ಣುಮಕ್ಕಳೂ ನರಳುವಂತಾಗೋದು ಮಾತ್ರ ದುರಂತ!

Leave a Reply

Your email address will not be published. Required fields are marked *


CAPTCHA Image
Reload Image