One N Only Exclusive Cine Portal

ದರ್ಶನ್ ಪಡೆದರು ಅದೇ ಮಾರುತಿ ಕಾರ್!

ಫೆಬ್ರವರಿ ಎಂಟನೇ ತಾರೀಕು! ಅದು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟನೋರ್ವ ಉದಯಿಸಿದ ದಿನ. ಮೆಜೆಸ್ಟಿಕ್ ಎಂಬ ಚಿತ್ರ ಬಿಡುಗಡೆಯಾದ ದಿನಾಂಕವಿದು. ಈ ವರ್ಷಕ್ಕೆ ಸರಿಯಾಗಿ ಆ ಚಿತ್ರ ಬಿಡುಗಡೆಯಾಗಿ ಹದಿನೈದು ಸಂವತ್ಸರಗಳಾಗಿವೆ. ದರ್ಶನ್ ಎಂಬ ಹುಡುಗ ಛಾಲೆಂಜಿಂಗ್ ಸ್ಟಾರ್ ಆಗಿ ಹೊರಹೊಮ್ಮಿದ ಘಳಿಗೆಗೂ ಈಗ ಭರ್ತಿ ಹದಿನಾರು ವರ್ಷಗಳಾಗಿವೆ!

2002ರ ಫೆಬ್ರವರಿ ೮ನೇ ತಾರೀಕಿನಂದು ಪಿ ಎನ್ ಸತ್ಯ ನಿರ್ದೇಶನದ ‘ಮೆಜೆಸ್ಟಿಕ್ ಚಿತ್ರ ತೆರೆ ಕಂಡಿತ್ತು. ಈ ಚಿತ್ರದಲ್ಲಿ ದರ್ಶನ್ ಅವರ ರಗಡ್ ಲುಕ್, ರೇಖಾ ನಟನೆಯ ಕಾಂಬಿನೇಷನ್ ಸೇರಿದಂತೆ ಎಲ್ಲವೂ ಹೊಸಾ ಬಗೆಯಲ್ಲಿ ಪ್ರೇಕ್ಷಕರನ್ನು ತಲುಪಿಕೊಂಡಿತ್ತು. ಈ ಚಿತ್ರದ ಮೂಲಕವೇ ದರ್ಶನ್ ಕೂಡಾ ಬೇಡಿಕೆಯ ನಾಯಕ ನಟನಾಗಿ ಹೊರ ಹೊಮ್ಮಿದ್ದರು.

ಹೀಗೆ ಒಂದು ‘ಮೆಜೆಸ್ಟಿಕ್ ಚಿತ್ರ ಸೂಪರ್ ಹಿಟ್ಟಾಗುವ ಮುನ್ನ ದರ್ಶನ್ ಅವರು ಪಟ್ಟ ಪಡಿಪಾಟಲುಗಳು ಒಂದೆರಡಲ್ಲ. ತಂದೆ ತೂಗುದೀಪ ಶ್ರೀನಿವಾಸ್ ಎಂಬ ಮಹಾ ಪರ್ವತದ ಹೆಸರಿನ ಬಲವಿದ್ದರೂ ಕೂಡಾ ಚಿತ್ರರಂಗಕ್ಕೆ ಸಾಮಾನ್ಯ ಹುಡುಗನಾಗಿಯೇ ಕಾಲಿಟ್ಟ ದರ್ಶನ್, ಇಲ್ಲಿ ಎಲ್ಲ ನೋವು, ನಿರಾಸೆ, ಅವಮಾನಗಳನ್ನೂ ಯಥೇಚ್ಚವಾಗಿಯೇ ಅನುಭವಿಸಿದ್ದಾರೆ. ಅದರಾಚೆಗೂ ಏನಾದರೊಂದನ್ನು ಸಾಧಿಸುವ ಛಲದೊಂದಿಗೇ ಮುನ್ನುಗ್ಗಿ ಚಾಲೆಂಜಿಂಗ್ ಸ್ಟಾರ್ ಆಗಿ ನೆಲೆ ನಿಂತ ಕಥೆ ಸಾರ್ವಕಾಲಿಕ ಸ್ಫೂರ್ತಿ.

ಈ ನಿಟ್ಟಿನಲ್ಲಿ ಮೆಜೆಸ್ಟಿಕ್ ಚಿತ್ರ ದರ್ಶನ್ ಚಿತ್ರಜೀವನದಲ್ಲಿ ಮಹತ್ವದ ಮೈಲಿಗಲ್ಲು. ಅವರ ಸಾಧನೆ ಏನೇ ಇದ್ದರೂ ಅದು ಮೆಜೆಸ್ಟಿಕ್ ಎಂಬ ಕೇಂದ್ರದಿಂದಲೇ ಆರಂಭವಾಗುತ್ತದೆ. ದರ್ಶನ್ ಬದುಕಿನ ಈ ಅಮೋಘ ಇತಿಹಾಸಕ್ಕೀಗ ಹದಿನಾರು ವರ್ಷಗಳಾಗಿವೆ. ಇದು ಅವರ ಅಭಿಮಾನಿಗಳ ಪಾಲಿಗಂತೂ ಮಹಾ ಸಂಭ್ರಮದ ಸಂಗತಿ!

ನೆನ್ನೆ ನೆಲಮಂಗಲ ಬಳಿಯ ಒಂದು ಖಾಸಗಿ ರೆಸಾರ್ಟ್‌ನಲ್ಲಿ ‘ಮಜೆಸ್ಟಿಕ್’ ಸಿನಿಮಾದ ೧೬ನೇ ವರ್ಷದ ನೆನಪು ಹಾಗೂ ಅದಕ್ಕೆ ದುಡಿದ ವ್ಯಕ್ತಿಗಳನ್ನು ಗೌರವಿಸುವ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿತ್ತು. ಹಾರ, ಶಾಲು, ಮೈಸೂರು ಟೋಪಿ ಹಾಗೂ ಹಣ್ಣಿನ ಬುಟ್ಟಿ ಗೌರವರ್ಪಣೆಯ ಭಾಗವಾಗಿತ್ತು.

ನಾಯಕ ದರ್ಶನ್ ಅವರು ಅಂದು ನಿರ್ಮಾಪಕ ಎಂ ಜಿ ರಾಮಮೂರ್ತಿ ಅವರು ಬಳಸುತ್ತಾ ಇದ್ದ ಮಾರುತಿ ೮೦೦ ಕಾರನ್ನು ಅವರಿಂದ ಪಡೆದದ್ದು ವಿಶೇಷವಾಗಿತ್ತು. ಅಂದಿನ ದಿನಗಳನ್ನು ಮೆಲುಕು ಹಾಕುತ್ತಾ ಮಾರುತಿ ೮೦೦ ಕಾರಿನಲ್ಲಿ ದರ್ಶನ್ ಒಂದು ಸುತ್ತು ಹೋಗಿ ಬಂದರು. ಆ ಮಾರುತಿ ೮೦೦ ಕಾರಿನ ಸಂಖ್ಯೆ ೩೪೮೩ ಇನ್ನೂ ದರ್ಶನ್ ಅವರ ನೆನಪಿನಲ್ಲಿತ್ತು. ಅಂದು ಆಸೆ ಪಟ್ಟ ಕಾರು ಇಂದು ದರ್ಶನ್ ಅವರ ಮನೆಯಲ್ಲಿ ಒಂದು ಅಮೂಲ್ಯ ನೆನಪಾಗಿ ಉಳಿಯಲಿದೆ.

‘ಮೆಜೆಸ್ಟಿಕ್’, ‘ಧರ್ಮ’ ಸಿನಿಮಾಗಳನ್ನು ಎಂ ಜಿ ರಾಮಮೂರ್ತಿ ಅವರು ನಿರ್ಮಾಣ ಮಾಡಿರುವುದು ತಿಳಿದಿದೆ. ಈಗ ಅವರದು ದರ್ಶನ್ ಅವರ ಜೊತೆ ಮೂರನೇ ಚಿತ್ರ ಹಾಗೂ ಅದು ದರ್ಶನ್ ಅವರ ೫೩ ನೇ ಸಿನಿಮಾ ಎಂದು ಸಹ ಘೋಷಣೆ ಆಯಿತು.

Leave a Reply

Your email address will not be published. Required fields are marked *


CAPTCHA Image
Reload Image