One N Only Exclusive Cine Portal

ಆಗದು ಎಂದು ಕೈಕಟ್ಟಿ ಕೂರದವರು….

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸಂಯುಕ್ತ-2 ಚಿತ್ರದ ನಿರ್ಮಾಣ ಮಾಡೋ ಮೂಲಕ ಕನ್ನಡ ಚಿತ್ರರಂಗದ ಗಮನ ಸೆಳೆದಿರುವವರು ಡಾ. ಮಂಜುನಾಥ ಡಿ.ಎಸ್.. ಸಾಮಾನ್ಯವಾಗಿ ಚಿತ್ರರಂಗದ ಮಂದಿ ತೋರಿಸೋ ಸಾಮಾಜಿಕ ಕಾಳಜಿಯೂ ಸಿನಿಮೀಯವಾಗಿರುತ್ತದೆ ಮತ್ತು ಅದೂ ಕೂಡಾ ಪ್ರಚಾರದ ಭಾಗವಾಗಿರುತ್ತದೆ ಎಂಬ ಭಾವನೆ ಸಾರ್ವತ್ರಿಕವಾಗಿದೆ. ಅದನ್ನು ಸುಳ್ಳು ಮಾಡಿದ ಕೆಲವೇ ಕೆಲ ಜನರ ಸಾಲಿನಲ್ಲಿ ಖಂಡಿತವಾಗಿಯೂ ಮಂಜುನಾಥ್ ಸೇರಿಕೊಳ್ಳುತ್ತಾರೆ.
ಈವತ್ತಿಗೆ ಡಾ. ಮಂಜುನಾಥ್ ಯಶಸ್ವೀ ಉದ್ಯಮಿ. ಚಿತ್ರರಂಗದ ಬಗ್ಗೆ ಥರ ಥರದ ಕನಸು ಹೊತ್ತಿರೋ ನಿರ್ಮಾಪಕ. ನಟನೆಯನ್ನು ಬಹುವಾಗಿ ಪ್ರೀತಿಸೋ ನಟ. ಆದರೆ ಈ ಯಶಸ್ಸಿನ ಹಿಂದಿರೋ ಅವಮಾನಗಳು, ಶ್ರೀಮಂತಿಕೆಯ ಹಿಂದಿರೋ ಕೆಟ್ಟ ಬಡತನ ಮತ್ತು ಆಸೆಪಟ್ಟಿದ್ಯಾವುದೂ ಕೈಗೂಡದ ಸಂಕಟಗಳ ದಂಡೇ ಇದೆ ಎಂಬುದು ಬಹುತೇಕರಿಗೆ ಹೊತ್ತಿರಲಿಕ್ಕಿಲ್ಲ.

ನೀವೇನಾದರೂ ಬಿಡದಿ ಬಳಿ ಬೆಂಗಳೂರು-ಮೈಸೂರು ರಸ್ತೆಯಲ್ಲಿರೋ ಮಂಜುನಾಥ್ ಅವರ ಎಂಸಿರಿ ಕನ್ವೆನ್ಷನ್ ಹಾಲ್ ನೋಡಿದರೆ ಇವರು ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡೇ ಹುಟ್ಟಿದವರು ಅಂದುಕೊಂಡರೆ ಅಚ್ಚರಿಯೇನಿಲ್ಲ. ಯಾವ ಫೈವ್ ಸ್ಟಾರ್ ಹೋಟೆಲಿಗೂ ಕಮ್ಮಿಯಿಲ್ಲದ ಕನಸಿನ ಲೋಕದಂತಿರೋ ಆ ಮಹಲು ಕಟ್ಟಿದ ಮಂಜುನಾಥ್ ಅವರ ಯಶೋಗಾಥೆಯ ಹಿಂದಿರೋದು ಕಡು ಕಷ್ಟಗಳ ಸರಮಾಲೆ.


ಅತ್ಯಂತ ಕಷ್ಟದ ದಿನಗಳನ್ನೇ ಕಂಡುಂಡು ಬೆಳೆದವರು ಮಂಜುನಾಥ್. ಅವರ ಬಾಲ್ಯವನ್ನೂ ಕೂಡಾ ಆವರಿಸಿಕೊಂಡಿದ್ದದ್ದು ಕಡು ಬಡತನ. ಅದರ ಬೇಗೆ ಎಂಥಾದ್ದಿತ್ತೆಂದರೆ ಸಣ್ಣಗೊಂದು ಮಳೆ ಸುರಿಯಿತೆಂದರೆ ಮಂಜುನಾಥ್ ಅವರ ಕರಿ ಹೆಂಚಿನ ಮನೆಗೂ, ಆಕಾಶಕ್ಕೂ ನೇರಾ ನೇರ ಕನೆಕ್ಷನ್ನು ಸಿಕ್ಕಿದಂತಾಗುತ್ತಿತ್ತು. ಸರಿರಾತ್ರಿಯಲ್ಲಿ ಮಳೆ ಸುರಿದರೂ ಎಲ್ಲರೂ ಎದ್ದು ಒಡೆದ ಹೆಂಚಿನಿಂದ ಸೋರೋ ಹನಿಗಳಿಗೆ ಪಾತ್ರೆ ಹಿಡಿಯೋದೇ ಕೆಲಸವಾಗುತ್ತಿತ್ತು. ಇಂಥಾ ಮಳೆಗಾಲ, ಚಳಿಗಾಲದಲ್ಲಿ ಹೊದ್ದುಕೊಳ್ಳಲು ಕಂಬಳಿಗೂ ತತ್ವಾರದ ಸ್ಥಿತಿ. ಅಮ್ಮ ಇದ್ದುದರಲ್ಲೇ ತ್ಯಾಪೆ ಇಲ್ಲದ ಗೋಣಿ ಚೀಲವನ್ನು ಕೌದಿಯಂತೆ ಮಾಡಿ ಮಂಜುನಾಥ್ ಸೇರಿದಂತೆ ಮಕ್ಕಳನ್ನು ಬೆಚ್ಚಗಿಡಲು ಪಡಿಪಾಟಲು ಪಡುತ್ತಿದ್ದರು.


ಇಂಥಾ ವಾತಾವರಣದಲ್ಲಿ ಬೆಳೆದರೂ ಬಾಲ್ಯದಿಂದಲೇ ಸ್ವಾಭಿಮಾನಿಯಾಗಿ ಬಡತನಕ್ಕೆ ಸೆಡ್ಡು ಹೊಡೆಯೋ ಮನೋಭಾವದ ಮಂಜುನಾಥ್ ತೀರಾ ಸಣ್ಣ ವಯಸ್ಸಿನಿಂದಲೇ ಥರ ಥರದ ಕೆಲಸ ಮಾಡಿ ತಾಯಿಗೆ ನೆರವಾಗುತ್ತಿದ್ದರು. ಇಂಥಾ ಕೆಟ್ಟ ಸ್ಥಿತಿಯಲ್ಲೇ ಓದಿದ ಅವರಿಗೆ ಪೊಲೀಸ್ ಅಧಿಕಾರಿಯಾಗಬೇಕೆಂಬ ಮಹದಾಸೆ. ಅದಕ್ಕೆಂದೇ ಕಷ್ಟಪಟ್ಟು ಓದಿ ಕೆಲಸ ಹಿಡಿಯೋ ಹಂತ ತಲುಪಿದರಾದರೂ ಲಂಚವೆಂಬ ರಕ್ಕಸ ಆ ಅವಕಾಶವನ್ನೂ ಕಸಿದುಕೊಂಡಿತ್ತು. ಆರಂಭದಿಂದಲೇ ದೇಶಪ್ರೇಮ ಹೊಂದಿದ್ದ ಮಂಜುನಾಥ್ ಸೇನೆಗೆ ಸೇರಲು ಪ್ರಯತ್ನಿಸಿದರಾದರೂ ಅಲ್ಲಿ ದೈಹಿಕವಾಗಿ ಫಿಟ್ನೆಸ್ ಇಲ್ಲದಿದ್ದ ಕಾರಣ ಆ ಕನಸೂ ಕೈಗೂಡಲಿಲ್ಲ.


ಆದರೆ, ಹೇಗಾದರೂ ಮಾಡಿ ಕೈಗೂಡದ ಕನಸುಗಳನ್ನು ಯಾವ ರೂಪದಲ್ಲಿಯಾದರೂ ಮಾಡಿಯೇ ತೀರುವ ಹಠಕ್ಕೆ ಬಿದ್ದ ಮಂಜುನಾಥ್ ಸಣ್ಣ ಪುಟ್ಟ ವ್ಯವಹಾರ ಆರಂಭಿಸಿ, ಸ್ವಂತದ ಜೆಲ್ಲಿ ಕ್ರಶರ್ ಮಾಡಿಕೊಂಡು ಹಂತ ಹಂತವಾಗಿ ಮೇಲೆದ್ದು ಬಂದರು. ಅದೇ ಶ್ರಮದಿಂದಲೇ ಈ ಬಡ ಹುಡುಗ ಕಟ್ಟಿದ್ದೊಂದು ಅಚ್ಚರಿಯ ಸಾಮ್ರಾಜ್ಯ!


ಇಂದು ಸಂಯುಕ್ತ-೨ ಎಂಬ ಹಾರರ್ ಚಿತ್ರದಲ್ಲಿಯೂ ದೇಶಭಕ್ತಿ ಪ್ರದರ್ಶಿಸಿರೋ ಮಂಜುನಾಥ್ ಅವರ ಕನಸಿನ ಹಿಂದೆ ಅವರಾಳದಲ್ಲಿ ಉಳಿದು ಹೋಗಿದ್ದ ಸೈನಿಕನಾಗೋ ಕನಸಿದೆ. ಬಹುಶಃ ಅದಷ್ಟು ಆಳವಾಗಿ ಇಲ್ಲದೇ ಹೋಗಿದ್ದಿದ್ದರೆ ಅವರ ಪ್ರಯಯತ್ನ ಈ ಪರಿ ಯಶಸ್ಸು ಕಾಣುತ್ತಿರಲಿಲ್ಲ. ಇನ್ನು ಈ ಚಿತ್ರದಲ್ಲಿ ಕಟ್ಟುಮಸ್ತಾದ ದೇಹವನ್ನೇ ಆಕರ್ಷಣೆಯ ಪ್ರಮುಖಾಂಶವಾಗಿಸಿ ಒಂದು ಮುಖ್ಯ ಪಾತ್ರ ಮಾಡಿರೋದರ ಹಿಂದೆಯೂ ಆವತ್ತು ದೈಹಿಕ ಫಿಟ್ನೆಸ್ ಇಲ್ಲ ಎಂಬ ಕಾರಣದಿಂದ ಸೈನಿಕನಾಗೋ ಅವಕಾಶ ಕಳೆದುಕೊಂಡ ನೋವಿದೆ!


ಸಿನಿಮಾ ಎಂಬುದು ಮಂಜುನಾಥ್ ಅವರ ಪಾಲಿಗೆ ಪ್ರಮುಖ ಆಸಕ್ತಿ. ಸಂಯುಕ್ತ-೨ ಚಿತ್ರದಲ್ಲಿ ಅವರು ನಿರ್ವಹಿಸಿರೋ ಪಾತ್ರವೇ ಕಲೆಯ ಬಗ್ಗೆ ಅವರ ಅಸಲೀ ಆಸಕ್ತಿಗೆ ತಾಜಾ ಉದಾಹರಣೆ. ಇನ್ನು ಮುಂದೆ ವರ್ಷಕ್ಕೊಂದು ಚಿತ್ರ ಮಾಡಬೇಕೆಂಬ ಆಸೆ ಹೊಂದಿರೋ ಮಂಜುನಾಥ್ ಸ್ಟಾರ್‌ಗಳ ಸಿನಿಮಾ ಜೊತೆ ಜೊತೆಗೇ ಹೊಸಬರನ್ನೂ ಪ್ರೋತ್ಸಾಹಿಸೋ ಉದ್ದೇಶ ಹೊಂದಿದ್ದಾರೆ.


ಇಷ್ಟೆಲ್ಲ ಮೈಲಿಗಲ್ಲುಗಳನ್ನು ದಾಟಿಕೊಂಡು ಬಂದಿರೋ ಮಂಜುನಾಥ್ ಅವರಿಗೆ ಭಾರೀ ವಯಸ್ಸಾಗಿರ ಬಹುದೇನೋ ಅನ್ನಿಸೋದು ಸಹಜವೇ. ಆದರೆ ಅವರದ್ದಿನ್ನೂ ಮೂವತೈದರ ಆಸುಪಾಸು. ಬಡತನ ಎಂಬುದನ್ನು ಛಲವೊಂದಿದ್ದರೆ ಲೀಜಾಜಾಲವಾಗಿ ಮೀರಿಕೊಳ್ಳಬಹುದೆಂಬುದಕ್ಕೆ, ಕೈಗೂಡದ ಕನಸುಗಳ ಬಗ್ಗೆ ಕೊರಗುತ್ತಾ ಕೂರೋ ಬದಲು ಕನಸಿಗೂ ಮೀರಿದ ಗೆಲುವು ಕಾಣಬಹುದೆಂಬುದಕ್ಕೆ ಮಂಜುನಾಥ್ ಸೂಕ್ತ ಉದಾಹರಣೆ. ಎಲ್ಲೋ ದುಡಿದ ಕಾಸನ್ನು ಇಮ್ಮಡಿ ಮಾಡಿಕೊಳ್ಳಲು ಚಿತ್ರರಂಗಕ್ಕೆ ಬರುವವರ ಸಂಖ್ಯೆ ಸಾಕಷ್ಟಿದೆ. ಆದರೆ ಕಲೆಯ ಹಸಿವಿನೊಂದಿಗೆ ಬರೋ ಮಂಜುನಾಥ್‌ರಂಥವರ ಅವಶ್ಯಕತೆ ಖಂಡಿತಾ ಚಿತ್ರ ರಂಗಕ್ಕಿದೆ. ಅವರ ಮುಂದಿನ ಯೋಜನೆಗಳೆಲ್ಲವೂ ಗೆಲುವು ಕಾಣಲೆಂದು ಹಾರೈಸೋಣ…

 

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image