One N Only Exclusive Cine Portal

ಹಸಿದವರ ಸಂಕಟಕ್ಕೆ ಮಿಡಿಯುವ ಶಿವಕುಮಾರ್‌ರ ಸಿನಿಮಾ ಹಸಿವು!

ತನ್ನ ಹೆಸರಿನ ಕಾರಣದಿಂದಲೇ ಒಂದಷ್ಟು ಕುತೂಹಲ ಹುಟ್ಟು ಹಾಕಿರುವ ಚಿತ್ರ `ಮುಖ್ಯಮಂತ್ರಿ ಕಳೆದೋದ್ನಪೋ’. ಈ ಚಿತ್ರವನ್ನು ಬಹಳಷ್ಟು ಇಷ್ಟಪಟ್ಟು ನಿರ್ದೇಶನ ಮಾಡಿ, ನಿರ್ಮಾಣದ ಹೊಣೆಯನ್ನೂ ತಾವೇ ಹೊತ್ತುಕೊಂಡು, ನಟನೆಯನ್ನೂ ಮಾಡಿರುವವರು ಶಿವಕುಮಾರ್. ಇವರ ಪುತ್ರ ಭರತ್ ಭದ್ರಪ್ಪ ಈ ಚಿತ್ರದ ಮೂಲಕ ಹೀರೋ ಆಗಿ ಹೊರ ಹೊಮ್ಮುತ್ತಿದ್ದಾರೆ.

ಅತ್ಯಂತ ಶ್ರದ್ಧೆಯಿಂದ, ತಪಸ್ಸಿನಂತೆ ಮಾಡುವ ಯಾವ ಕೆಲಸವೂ ವ್ಯರ್ಥವಾಗೋದಿಲ್ಲ ಎಂಬುದು ಪರಂಪರಾಗತ ನಂಬಿಕೆ. ಅದರ ಆಧಾರದಲ್ಲಿ ನೋಡ ಹೋದರೆ `ಮುಖ್ಯಮಂತ್ರಿ ಕಳೆದೋದ್ನಪೋ’ ಚಿತ್ರ ಭರ್ಜರಿ ಗೆಲುವೊಂದನ್ನು ದಾಖಲಿಸಬೇಕು. ಯಾಕೆಂದರೆ ಈ ಚಿತ್ರದ ಸೃಷ್ಟಿಕರ್ತರಾದ ಶಿವಕುಮಾರ್ ಅವರ ಹಿನ್ನೆಲೆ ಅದಕ್ಕೆ ಪೂರಕವಾಗಿದೆ!

ಸಿನಿಮಾ ಎಂಬುದು ಶಿವಕುಮಾರ್ ಅವರ ವರ್ಷಾಂತರಗಳ ಕನಸು. ಜಗತ್ತಿನತ್ತ ಕಣ್ಣು ತೆರೆಯುತ್ತಲೇ ನಟನಾಗಬೇಕೆಂಬ ಹಂಬಲವನ್ನು ಎದೆ ತುಂಬಿಸಿಕೊಂಡಿದ್ದವರು ಶಿವಕುಮಾರ್. ನಟನಾಗಬೇಕೆಂಬ ಅದಮ್ಯ ಆಸೆಯಿಂದ ಅವರು ಅವಕಾಶ ಕೇಳಲು ಹೋಗಿದ್ದರಂತೆ. ಆದರೆ ಅಲ್ಯಾರೋ ಬೈದು ಕಳಿಸಿದ್ದರಂತೆ. ಆ ನಿರಾಸೆ, ಅವಮಾನವನ್ನೇ ಸವಾಲಾಗಿ ಸ್ವೀಕರಿಸಿದ ಶಿವಕುಮಾರ್ ಚಿತ್ರರಂಗದಲ್ಲಿ ಏನಾದರೊಂದು ಸಾಧಿಸಿ ತೋರಿಸಬೇಕೆಂಬ ಛಲದಿಂದ ಕಾರ್ಯಪ್ರವೃತ್ತರಾಗಿದ್ದರು. ಈಗ್ಗೆ ಹದಿನೈದು ವರ್ಷಗಳಷ್ಟು ಹಿಂದೆಯೇ ಅಪ್ಪಟ ಸಾಮಾಜಿಕ ಕಳಕಳಿಯ ಒಂದು ಕಥೆಯನ್ನೂ ಸಿದ್ಧಪಡಿಸಿಕೊಂಡಿದ್ದರು. ಇದೀಗ ಅವರ ಕನಸು ಕೈಗೂಡಿದೆ.

ಇದು ಸಾಮಾಜಿಕ ಕಳಕಳಿಯ ಚಿತ್ರವಾಗಿ ಹೊರ ಹೊಮ್ಮಲು ಪ್ರೇರಕವಾಗಿರುವುದು ಶಿವಕುಮಾರ್ ಅವರು ಬದುಕುತ್ತಿರುವ ರೀತಿ ಮತ್ತು ಅವರ ಕೌಟುಂಬಿಕ ಹಿನ್ನೆಲೆ. ಶಿವಕುಮಾರ್ ರಾಜಾಜಿನಗರ ಸೀಮೆಯ ಪ್ರಸಿದ್ಧ ವ್ಯಾಪಾರಿಗಳೂ, ಸಾಮಾಜಿಕ ಕಳಕಳಿ ಹೊಂದಿದ್ದವರೂ ಆದ ಬಾಳೆಎಲೆ ವ್ಯಾಪಾರಿ ಭದ್ರಯ್ಯನವರ ಮಗ. ಈಗ ರಾಜಾಜಿನಗರ ಭಾಷ್ಯಂ ಸರ್ಕಲ್ಲಿನಲ್ಲಿ ಈ ಬಾಳೆ ಎಲೆ ವ್ಯಾಪಾರ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಆದರೆ ಭದ್ರಯ್ಯನವರು ಈ ವ್ಯಾಪಾರವನ್ನು ಫುಟ್ಪಾತಿನ ಸಣ್ಣ ಅಂಗಡಿಯಿಂದ ಉದ್ಯಮವನ್ನು ಈ ಹಂತಕ್ಕೇರಿಸಿದ್ದರು.

ಬಹುಶಃ ಭದ್ರಯ್ಯನವರು ವ್ಯಾಪಾರಕ್ಕೆ ಮಾತ್ರವೇ ಸೀಮಿತವಾಗಿದ್ದರೆ ಅವರನ್ನು ಜನ ನೆನಪಿಟ್ಟುಕೊಳ್ಳುತ್ತಿರಲಿಲ್ಲ. ಅವರು ಇಂದಿಗೂ ಪ್ರಸ್ತಯುತವಾಗಿರೋದು ಸಾಮಾಜಿಕ ಸೇವಾ ಕಾರ್ಯಗಳಿಂದ. ಅವರು ಆ ಕಾಲದಲ್ಲಿಯೇ ಸುತ್ತಲ ಏರಿಯಾಗಳ ಬಸ್ ಸ್ಟಾಪುಗಳಲ್ಲಿ ದಿನವೂ ತಾವೇ ಓಡಾಡಿ ಕುಡಿಯುವ ನೀರಿಡುವ ವ್ಯವಸ್ಥೆ ಮಾಡುತ್ತಿದ್ದರು. ದೇವಸ್ಥಾನಗಳಿಗೂ ದಾನ ಧರ್ಮ ಮಾಡುತ್ತಿದ್ದರು. ನಲವತ್ತಕ್ಕೂ ಹೆಚ್ಚು ಸುಸಜ್ಜಿತವಾದ ಬಸ್ ಶೆಲ್ಟರುಗಳನ್ನು ಸ್ಥಾಪಿಸಿದ್ದರು. ತಂದೆ ಭದ್ರಯ್ಯನವರ ಇಂಥಾ ಸೇವಾ ಕಾರ್ಯಗಳಿಂದ ಪ್ರಭಾವಿತರಾಗಿ ಬೆಳೆದು ಬಂದ ಶಿವಕುಮಾರ್ ಅವರು ಕೂಡಾ ಸಾಮಾಜಿಕ ಕಾರ್ಯಗಳಿಂದ ಮುಖ್ಯವಾಗಿ ಗಮನ ಸೆಳೆಯುತ್ತಾರೆ.

ಶಿವಕುಮಾರ್ ಅವರು ಅದೇನೇ ಒತ್ತಡವಿದ್ದರೂ ಪ್ರತೀ ದಿನ ಕಲ್ಯಾಣ ಮಂಟಪಗಳಲ್ಲಿ ಹೆಚ್ಚಾಗಿ ಎಸೆಯುವಂಥಾ ಆಹಾರಗಳನ್ನು ಶೇಖರಿಸಿ ಅದನ್ನು ಹಸಿದವರಿಗೆ ಹಂಚುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ. ಹೀಗೆ ಕಲ್ಯಾಣ ಮಂಟಪಗಳಿಂದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಸ್ಲಂ, ರೈಲ್ವೇ ಸ್ಟೇಷನ್ ಮುಂತಾದ ಏರಿಯಾಗಳ ನಿರ್ಗತಿಕರಿಗೆ ಹಂಚುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಹೀಗೆ ವ್ಯಾಪಾರ, ಸಾಮಾಜಿಕ ಕೆಲಸ ಕಾರ್ಯಗಳ ಜೊತೆಗೇ ಶಿವಕುಮಾರ್ ಸಿನಿಮಾ ಎಂಬ ಕನಸನ್ನು ಕೈಗೂಡಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಇವರೂ ಮುಖ್ಯವಾದ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರವನ್ನು ನೋಡಿದ ಸೆನ್ಸಾರ್ ಮಂಡಳಿ ಅಧಿಕಾರಿಗಳೂ ಕೂಡಾ ಬೆನ್ತಟ್ಟಿ ಪ್ರೋತ್ಸಾಹಿಸಿದ್ದಾರೆ. ಜನರೂ ಕೂಡಾ ಈ ಚಿತ್ರವನ್ನು ಒಪ್ಪಿಕೊಳ್ಳುತ್ತಾರಾ ಎಂಬುದಕ್ಕೆ ದಿನದೊಪ್ಪತ್ತಿನಲ್ಲಿಯೇ ಉತ್ತರ ಸಿಗಲಿದೆ.

Leave a Reply

Your email address will not be published. Required fields are marked *


CAPTCHA Image
Reload Image