One N Only Exclusive Cine Portal

ಮುತ್ತಪ್ಪ ರೈ ಚಿತ್ರ ನಿಂತಿಲ್ಲ ಅಂದ್ರು ರಾಂಗೋಪಾಲ್ ವರ್ಮಾ!

ಖ್ಯಾತ ನಿರ್ದೇಶಕ ರಾಂಗೋಪಾಲ್ ವರ್ಮಾ ಖಾಲಿಯಾಗಿದ್ದಾರಾ ಅಥವಾ ಸದಾ ಪಬ್ಲಿಸಿಟಿಯಲ್ಲಿರೋದಕ್ಕೆ ಹೊಸಾ ಹಾದಿ ಕಂಡುಕೊಂಡಿದ್ದಾರಾ? ಹೀಗೊಂದು ಸಂಶಯ ಅವರನ್ನು ಒಂದು ಕಾಲದಲ್ಲಿ ಬಹುವಾಗಿ ಮೆಚ್ಚಿಕೊಂಡಿದ್ದವರನ್ನೇ ಕಾಡುತ್ತಿದ್ದರೆ ಅಚ್ಚರಿಯೇನಿಲ್ಲ.

ಯಾಕೆಂದರೆ ಅವರು ಸಿನಿಮಾಗಳನ್ನು ಘೋಷಣೆ ಮಾಡಿ ಆ ಮೂಲಕ ಭಾರೀ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಅದೇನೋ ಕ್ರಾಂತಿಯಂಥಾ ಸಂಚಲನವೆಬ್ಬಿಸುತ್ತಾರೆ. ಆದರೆ ವರ್ಷಗಳೇ ಕಳೆದರೂ ಅಂಥಾ ಸಿನಿಮಾಗಳ ಪತ್ತೆಯೂ ಇರುವುದಿಲ್ಲ. ಸದ್ಯ ಭಾರೀ ವಿವಾದವೆಬ್ಬಿಸಿರೋ ಗಾಡ್ ಸೆಕ್ಸ್ ಆಂಡ್ ಟ್ರುತ್ ಚಿತ್ರದ ಕಥೆ ಅದೇನಾಗಿದೆಯೋ ಗೊತ್ತಿಲ್ಲ. ಆದರೆ ವರ್ಮಾ ಕನ್ನಡದಲ್ಲಿ ಮಾಡುತ್ತೇನೆ ಅಂದಿದ್ದ ‘ರೈ’ ಚಿತ್ರದ ಕಥೆ ಏನಾಗಿದೆ ಎಂಬ ಪ್ರಶ್ನೆ ಮೊನ್ನೆ ವರ್ಮಾ ಟಗರು ಚಿತ್ರದ ಬಗ್ಗೆ ಮಾತಾಡಿದಾಗಿನಿಂದಲೂ ಕನ್ನಡದ ಪ್ರೇಕ್ಷಕರಲ್ಲಿದೆ. ಟಗರು ಚಿತ್ರದ ನೆಪದಲ್ಲಿಯೇ ವರ್ಮಾ ಅದಕ್ಕೆ ಉತ್ತರವನ್ನೂ ನೀಡಿದ್ದಾರೆ.

ಶಿವಣ್ಣ ಹೀರೋ ಆಗಿದ್ದ ಕಿಲ್ಲಿಂಗ್ ವೀರಪ್ಪನ್ ಚಿತ್ರದ ಜೊತೆ ಜೊತೆಗೇ ವರ್ಮಾ ರೈ ಚಿತ್ರ ಮಾಡೋದಾಗಿ ಹೇಳಿಕೊಂಡಿದ್ದರು. ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹವಾ ಎಬ್ಬಿಸಿ ಸದ್ಯ ಅದೆಲ್ಲದರಿಂದ ಹೊರ ಬಂದಿರುವ ಡಾನ್ ಮುತ್ತಪ್ಪ ರೈ ಜೀವನಾಧಾರಿತ ಕಥೆ ಎಂಬ ಕಾರಣದಿಂದಲೇ ಕುತೂಹಲಕ್ಕೆ ಕಾರಣವಾಗಿತ್ತು. ಈ ಚಿತ್ರದಲ್ಲಿ ರೈ ಪಾತ್ರವನ್ನು ಬಾಲಿವುಡ್ ನಟ ವಿವೇಕ್ ಓಬೇರಾಯ್ ನಟಿಸುತ್ತಿರೋ ವಿಚಾರವೂ ಜಾಹೀರಾಗಿತ್ತು. ಅವರ ಖಡಕ್ ಲುಕ್ಕಿನ ಪೋಸ್ಟರುಗಳೂ ಅನಾವರಣಗೊಂಡಿದ್ದವು.

ಆದರೆ ವರ್ಷಗಳೇ ಕಳೆದರೂ ವರ್ಮಾ ಬೇರೆ ಚಿತ್ರಗಳು, ವಿವಾದಗಳಲ್ಲಿ ಬ್ಯುಜಿಯಾದರೇ ಹೊರತು ರೈ ಚಿತ್ರದ ಕಥೆ ಏನಾಗಿದೆ ಎಂಬುದರ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಆದರೀಗ ರೈ ಚಿತ್ರ ನಿಂತು ಹೋಗಿಲ್ಲ ಬದಲಾಗಿ ಕೊಂಚ ಮುಂದೆ ಹೋಗಿದೆಯಷ್ಟೇ ಅಂತ ವರ್ಮಾ ಹೇಳಿದ್ದಾರೆ.
ಆದರೆ ರೈ ಚಿತ್ರ ಯಾವಾಗ ಶುರುವಾಗುತ್ತೆಂಬುದರ ಬಗ್ಗೆ ಮಾತ್ರ ವರ್ಮಾ ಸ್ಪಷ್ಟವಾಗಿ ಹೇಳಿಕೊಂಡಿಲ್ಲ.

Leave a Reply

Your email address will not be published. Required fields are marked *


CAPTCHA Image
Reload Image