One N Only Exclusive Cine Portal

ಪ್ರಥಮ್ ನಟ ಭಯಂಕರ ಚಿತ್ರಕ್ಕೂ ಕಿಚ್ಚನಿಗೂ ಏನು ಸಂಬಂಧ?

ಬಿಗ್‌ಬಾಸ್ ವಿನ್ನರ್ ಪ್ರಥಮ್ ಒಂದು ಚಿತ್ರವಾದೇಟಿಗೆ ಸಣ್ಣ ಗ್ಯಾಪನ್ನೂ ಕೊಡದೆ ಮತ್ತೊಂದರಲ್ಲಿ ಬ್ಯುಸಿಯಾಗುತ್ತಿದ್ದಾರೆ. ದೇವ್ರಂಥಾ ಮನುಷ್ಯ ಚಿತ್ರ ಬಿಡುಗಡೆಯಾಗಿ, ಎಂಎಲ್‌ಎ ಚಿತ್ರ ಬಿಡುಗಡೆಯ ಸನ್ನಾಹದಲ್ಲಿರುವಾಗಲೇ ಪ್ರಥಮ್ ಮತ್ತೊಂದು ಚಿತ್ರದ ಟೈಟಲ್ ಲಾಂಚ್ ಆಗಿದೆ!

ಅಂದಹಾಗೆ ಪ್ರಥಮ್ ಮುಂದಿನ ಚಿತ್ರದ ಹೆಸರು ‘ನಟಭಯಂಕರ’. ರೋರಿಂಗ್ ಸ್ಟಾರ್ ಶ್ರೀ ಮುರುಳಿ ಈ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ್ದಾರೆ. ಶ್ರೀ ಮುರಳಿ ಈ ಟೈಟಲ್ಲನ್ನು ಮೆಚ್ಚಿಕೊಳ್ಳುತ್ತಲೇ ಪ್ರಥಮ್‌ಗೆ ಶುಭ ಹಾರೈಸಿದ್ದಾರೆ. ಸ್ವಾರಸ್ಯ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣಗೊಳಲಿರುವ ಈ ಚಿತ್ರವನ್ನು ಪ್ರಥಮ್ ಸ್ವತಃ ನಿರ್ದೇಶನ ಮಾಡುತ್ತಿರೋದು ಅಸಲೀ ವಿಶೇಷ. ಅಂದಹಾಗೆ ಈ ಬಾರಿ ಪ್ರಥಮ್ ಗೆದ್ದೇ ತೀರ ಬೇಕೆಂಬ ಛಲದೊಂದಿಗೆ ಪ್ರಾಮಾಣಿಕ ಪ್ರಯತ್ನವೊಂದಕ್ಕೆ ಮುಂದಾಗಿರುವ ಸ್ಪಷ್ಟ ಸೂಚನೆಗಳಿವೆ.

ಈ ಟೈಟಲ್ ನೋಡಿದರೇನೇ ಈ ಚಿತ್ರದ ಕಥಾ ಹಂದರ ಏನೆಂಬ ಕುತೂಹಲ ಹುಟ್ಟಿಕೊಳ್ಳುತ್ತದೆ. ಆದರೆ ಅದರ ಸಣ್ಣ ಸುಳಿವನ್ನೂ ಕೂಡಾ ಪ್ರಥಮ್ ಬಿಟ್ಟುಕೊಟ್ಟಿಲ್ಲ. ಆದರೆ ಪಕ್ಕಾ ಡಿಫರೆಂಟಾದೊಂದು ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎಂಬ ಸ್ಪಷ್ಟ ಸುಳಿವು ನೀಡಿದ್ದಾರೆ. ಅಷ್ಟಕ್ಕೂ ಪ್ರಥಮ್ ಒಂದಷ್ಟು ಸದ್ದು ಮಾಡಿದ್ದೇ ನಿರ್ದೇಶನ ವಿಭಾಗದಲ್ಲಿ. ಬಿಗ್‌ಬಾಸ್ ಶೋ ಮುಗಿಸಿಕೊಂಡು ಬಂದ ನಂತರ ಅದೇಕೋ ಹೀರೋ ಆಗುವತ್ತಲೇ ಹೆಚ್ಚು ಫೋಕಸ್ ಮಾಡಿದ್ದರು. ಇದೀಗ ನಟಭಯಂಕರ ಚಿತ್ರದ ಮೂಲಕ ಪ್ರಥಮ್ ನಿರ್ದೇಶನವನ್ನೂ ಕೈಗೆತ್ತಿಕೊಂಡಿದ್ದಾರೆ.

ಇದಕ್ಕಿಂತಲೂ ವಿಶೇಷವಾದ ಸುದ್ದಿ ಮತ್ತೊಂದಿದೆ. ಅದು ನಟಭಯಂಕರ ಚಿತ್ರಕ್ಕೂ ಕಿಚ್ಚಾ ಸುದೀಪ್ ಅವರಿಗೂ ಇರುವ ಲಿಂಕು. ಪ್ರಥಮ್ ಪ್ರಕಾರ ಈ ಚಿತ್ರ ಶುರುವಾಗಲು ಪ್ರಧಾನ ಕಾರಣ ಸುದೀಪ್ ಅವರಂತೆ. ಪ್ರಥಮ್ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಗೆದ್ದಾದ ನಂತರ ತನ್ನ ತಾಯಿ ಸುದೀಪ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಆಸೆ ವ್ಯಕ್ತಪಡಿಸಿದ ವಿಚಾರ ಹೇಳಲು ಸುದೀಪ್ ಅವರ ಬಳಿ ಹೋಗಿದ್ದರಂತೆ. ಅದೇ ಸಂದರ್ಭದಲ್ಲಿ ಬಿಗ್‌ಬಾಸ್ ಮನೆಯಲ್ಲಿ ತಮ್ಮಿಂದೇನದರೂ ತಪ್ಪಾಗಿದ್ದರೆ ಮನ್ನಿಸುವಂತೆಯು ಮನವಿ ಮಾಡಿಕೊಮಡಿದ್ದರಂತೆ. ಈ ಸಂದರ್ಭದಲ್ಲಿ ಆತ್ಮೀಯವಾಗಿ ಮಾತಾಡಿದ ಸುದೀಪ್, ಜನರು ನಿಮ್ಮನ್ನು ಮೆಚ್ಚಿಕೊಂಡಿದ್ದರಿಂದಲೇ ನೀವು ಗೆದ್ದಿದ್ದೀರಿ. ಆದರೆ ಹೊರಗೆ ಹೋದ ನಂತರ ಜನರ ನಿರೀಕ್ಷೆಯನ್ನು ನೀವು ಹೇಗೆ ನಿಜವಾಗಿಸುತ್ತೀರಿ ಅನ್ನೋದು ಮುಖ್ಯ. ಬಹುಶಃ ನೀವು ನಟನಾಗಬಹುದು. ಆದರೆ ನೀವು ಬಿಗ್‌ಬಾಸ್ ಮನೆಯೊಲಗೆ ಗುರುತಿಸಿಕೊಂಡಿದ್ದು ನಿರ್ದೇಶಕನಾಗಿ. ನಾನೂ ಕೂಡಾ ನಿಮ್ಮನ್ನು ಒಂದೊಳ್ಳೆ ಚಿತ್ರದ ಮೂಲಕ ನಿರ್ದೇಶಕನನ್ನಾಗಿ ನೋಡಲು ಇಷ್ಟ ಪಡುತ್ತೇನೆ ಅಂದಿದ್ದರಂತೆ.

ಅದನ್ನೇ ಮನಸಲ್ಲಿಟ್ಟುಕೊಂಡಿದ್ದ ಪ್ರಥಮ್ ಆ ನಂತರ ನಟನಾಗಲು ಬಂದ ಅವಕಾಶಗಳನ್ನು ಒಪ್ಪಿಕೊಂಡರೂ ಅಖಂಡ ಒಂದು ವರ್ಷಗಳಿಂದ ನಟಭಯಂಕರ ಚಿತ್ರಕ್ಕಾಗಿ ಅಣಿಗೊಂಡಿದ್ದರಂತೆ. ಸುದೀಪ್ ಅವರ ಆಶಯದಂತೆ ನಿರ್ದೇಶಕನಾಗಿ ಗೆಲ್ಲಲು ಗಂಭೀರವಾದ ತಯಾರಿ ಮಾಡಿಕೊಂಡೇ ಪ್ರಥಮ್ ಈ ಚಿತ್ರವನ್ನು ಶುರು ಮಾಡಿದ್ದಾರೆ. ಇನ್ನೇನು ವಾರದೊಪ್ಪತ್ತಿನಲ್ಲಿಯೇ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಲಿದೆ.

 

 

Leave a Reply

Your email address will not be published. Required fields are marked *


CAPTCHA Image
Reload Image