Connect with us

ಕಲರ್ ಸ್ಟ್ರೀಟ್

ನಾತಿಚರಾಮಿ: ಲೇಖಕಿ ಸಂಧ್ಯಾರಾಣಿಯವರ ಮೊದಲ ಸಿನಿಮಾ ಯಾನ!

Published

on

ಮಂಸೋರೆ ನಿರ್ದೇಶನದ ನಾತಿಚರಾಮಿ ಹೆಣ್ಣಿನ ಸಂವೇದನೆಗಳ ಪದರುರುಗಳನ್ನು ತೆರೆದಿಡುವ ಭಿನ್ನ ಬಗೆಯ ಚಿತ್ರ. ಈ ವಾರ ಬಿಡುಗಡೆಗೊಳ್ಳಲಿರೋ ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಆಸಕ್ತಿ ಹೊಂದಲು ದಂಡಿ ದಂಡಿ ಕಾರಣಗಳಿವೆ. ಎಲ್ಲವೂ ನೈಜತೆಗೆ ಹತ್ತಿರಾಗಿರಬೇಕೆಂದುಕೊಂಡ ಮಂಸೋರೆ ತಮ್ಮೊಳಗೆ ಚಿಗಿತುಗೊಂಡ ಕಥಾ ಎಳೆಯೊಂದನ್ನು ಲೇಖಕಿ ಸಂಧ್ಯಾರಾಣಿಯವರ ಸುಪರ್ದಿಗೊಪ್ಪಿಸಿದ್ದರ ಹಿಂದೆ, ಅದು ಆ ಮೂಲಕವೇ ಕಥೆಯಾಗಿ ಮೈದಾಳಿದ್ದರ ಹಿಂದೆಯೂ ಅಂಥಾದ್ದೇ ಕಾರಣಳಿದ್ದಾವೆ.

ಮಂಸೋರೆ ಪ್ರಕಾರ ಹೆಣ್ಣನ್ನು ಅರ್ಥ ಮಾಡಿಕೊಂಡೆ ಅಂತಂದುಕೊಂಡರೆ ಅದೊಂದು ಭಯಾನಕ ಭ್ರಮೆ. ಅದು ಕಡಲಿನ ತಡಿಯಲ್ಲಿ ನಿಂತು ಬಳಿ ಬಂದ ಅಲೆಯೊಂದನ್ನು ಸೋಕಿ ಇಡೀ ಸಮುದ್ರವೇ ಮುಷ್ಟಿಗೆ ಸಿಕ್ಕಿತೆಂದುಕೊಂಡಷ್ಟೇ ಅತಿಶಯ. ಒಂದು ಸ್ಥಿತಿಗೆ ಹೆಣ್ಣೊಬ್ಬಳು ಹೇಗೆಲ್ಲಾ ಪ್ರತಿಕ್ರಿಯಿಸುತ್ತಾಳೆ, ಆ ಕ್ಷಣದಲ್ಲಿ ಆಕೆಯ ಮನೋಪಲ್ಲಟ ಹೇಗಿರುತ್ತೆ ಅನ್ನೋದನ್ನೆಲ್ಲ ಕಲ್ಪಿಸಿಕೊಂಡೇ ಬರೆದರೆ ಕೃತ್ರಿಮ ಅನ್ನಿಸದಿರೋದಿಲ್ಲ. ಇದು ಕಥೆಯಾಗಿ ಅಚ್ಚಾಗೋ ಹಂತಕ್ಕೆ ಮಾತ್ರವೇ ಒಪ್ಪಬಹುದು. ಆದರೆ ಒಂದು ಚಿತ್ರವಾಗಿ, ಪಾತ್ರವಾಗಿ ಪ್ರೇಕ್ಷಕರೊಂದಿಗೆ ಸಂವಹನ ನಡೆಸೋ ಹೊತ್ತಿಗೆ ಕಲ್ಪನೆಯ ಲೋಕ ಕುಸಿದು ಬಿದ್ದಿರುತ್ತದೆ.

ನಾತಿಚರಾಮಿಯ ವಿಧವೆ ಹೆಣ್ಣೊಬ್ಬಳ ಒಳತೋಟಿಗಳು ನೈಜವಾಗಿ ಮೂಡಿ ಬರಬೇಕೆಂಬ ಉದ್ದೇಶದಿಂದಲೇ ಮಂಸೋರೆ ಸಂಧ್ಯಾರಾಣಿಯವರಿಗೆ ಆ ಜವಾಬ್ದಾರಿ ಒಪ್ಪಿಸಿದ್ದರು. ಸಂಧ್ಯಾರಾಣಿ ಅಂಕಣಕಾರ್ತಿಯಾಗಿ, ಲೇಖಕಿಯಾಗಿ ತಮ್ಮ ಸೂಕ್ಷ್ಮ ಬರಹದಿಂದಲೇ ಚಿರಪರಿಚಿತರಾಗಿರುವವರು. ಸಿನಿಮಾ ಎಂಬುದು ಎಳವೆಯಿಂದಲೇ ಅವರನ್ನು ಸೆಳೆದುಕೊಂಡಿದ್ದ ಸೂಜಿಗಲ್ಲಿನಂಥಾದ್ದು. ಓದನ್ನು ಬಿಟ್ಟರೆ ಅವರ ಪಾಲಿಗೆ ತುಂಬಾ ಆಪ್ಯಾಯವಾದದ್ದು ಸಿನಿಮಾ ವೀಕ್ಷಣೆ. ಅದು ಅವರ ಪಾಲಿಗೆ ಹೊಸಾ ಜಗತ್ತೊಂದರತ್ತ ಮುಖಾಮಿಖಿಯಾದಂಥಾದ್ದೇ ಬೆರಗು. ವಿಶ್ವದ ವಿವಿಧ ಭಾಷೆಗಳ ಸಿನಿಮಾಗಳನ್ನು ನೋಡುತ್ತಾ, ಜಿ ಎನ್ ಮೋಹನ್ ಅವರ ಅವಧಿಯಲ್ಲಿ ಓದುರುಗರಿಗೂ ಹೊಸಾ ಬಗೆಯ ಸಿನಿಮಾ ನೋಡುವಿಕೆಯ ರುಚಿ ಹತ್ತಿಸಿದ್ದವರು ಸಂಧ್ಯಾರಾಣಿ.

ಒಂದು ವಿಶಿಷ್ಟವಾದ ಸಿನಿಮಾ ನೋಡಿದಾಗ ಚಿತ್ರವಿಚಿತ್ರ ತಲ್ಲಣಗಳು ಎದೆಗೆ ನಾಟಿಕೊಳ್ಳುತ್ತವೆ. ಅದರೆ ಅದನ್ನು ಮಾತಾಗಿಸೋದಾಗಲಿ, ಅಕ್ಷರವಾಗಿಸೋದಾಗಲಿ ಕಷ್ಟದ ಕೆಲಸ. ಅದೊಂಥರಾ ಮುಂಜಾವದ ಸವಿ ನಿದ್ರೆಯಲ್ಲಿ ಬಿದ್ದ ಸುಂದರ ಸ್ವಪ್ನವಿದ್ದಂತೆ. ಆದರೆ ಅದನ್ನೆಲ್ಲ ಸಾಮಾನ್ಯ ವೀಕ್ಷಕರಿಗೂ ತಲುಪುವಂತೆ ಅವಧಿಯಲ್ಲಿಯೇ ಜನಪ್ರಿಯ ಅಂಕಣವೊಂದನ್ನು ಬರೆಯುವ ಮೂಲಕವೂ ಸಂಧ್ಯಾರಾಣಿ ಬೆರಗು ಹುಟ್ಟಿಸಿದ್ದರು. ಇದನ್ನೆಲ್ಲ ನೋಡುತ್ತಾ ಬಂದಿದ್ದರಿಂದಲೇ ಮಂಸೋರೇ ನಾತಿಚರಾಮಿಯ ಕಥೆಗೆ ಅವರೇ ಜೀವತುಂಬ ಬೇಕೆಂದು ಬಯಸಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ.

ಆರಂಭದಲ್ಲಿ ಮಂಸೋರೆ ಇಂಥಾದ್ದೊಂದು ಪ್ರಸ್ತಾಪವಿಟ್ಟಾಗ ಸಂಧ್ಯಾರಾಣಿ ಹಿಂದೇಟು ಹಾಕಿದ್ದರಂತೆ. ಹೇಗೋ ಒಪ್ಪಿಕೊಂಡು ಅಹೋಕಾಲ ಅದನ್ನೇ ಧ್ಯಾನಿಸಿ ಮೊದಲ ವರ್ಷನ್ ಬರೆದು ನಿರಾಳವಾದರಾದರೂ ಮಂಸೋರೆ ಅದನ್ನು ಸಾರಾಸಗಟಾಗಿ ನಿರಾಕರಿಸಿದ್ದರಂತೆ. ಮತ್ತೊಂದು ವರ್ಷನ್ ಬರೆಯಲು ಕುಳಿತ ಅವರು ಅದೊಂದು ಮಧ್ಯರಾತ್ರಿಯಲ್ಲಿ ತನಗಿದನ್ನು ಬರೆಯಲು ಸಾಧ್ಯವೇ ಇಲ್ಲ ಅನ್ನಿಸಿದಾಗ ಮಂಸೋರೆಗೂ ಅದನ್ನೇ ಹೇಳಿದ್ದರಂತೆ. ಆದರೆ ಮಂಸೋರೆ ಕಡೆಯಿಂದ ಬಂದದ್ದು ಇದನ್ನು ನೀವೇ ಮಾಡುತ್ತೀರಿ, ನಿಮಗೆ ಆ ಕಸುವಿದೆ ಎಂಬ ಭರವಸೆ. ಅಲ್ಲಿಂದಾಚೆಗೆ ಸಂಧ್ಯಾರಾಣಿ ಕಥಾ ನಾಯಕಿ ಗೌರಿಯನ್ನು ಆವಾಹಿಸಿಕೊಂಡು ಕಥೆ ಬರೆಯಲಾರಂಭಿಸಿದ್ದರು. ಕಥೆ ಮುಗಿಯೋ ಹೊತ್ತಿಗೆಲ್ಲ ಗೌರಿಯೇ ಆಗಿಹೋದಂತೆ ಅದರೊಳಗೇ ಇಳಿದು ಹೋಗಿದ್ದರು. ಅದು ಮಂಸೋರೆಗೆ ಮೆಚ್ಚುಗೆಯಾಗಿ ಕಡೆಗೆ ಸಂಭಾಷಣೆಯನ್ನೂ ಕೂಡಾ ಸಂಧ್ಯಾರಾಣಿಯವರೇ ಬರೆದಿದ್ದರು.

ಈ ಚಿತ್ರ ಮುಂಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದೂ ಕೂಡಾ ವಿಶಿಷ್ಟವಾದ ಕಥಾ ಹಂದರ ಹೊಂದಿದ ಸಿನಿಮಾ ವಿಭಾಗದಲ್ಲಿಯೇ. ಅದು ಸಂಧ್ಯಾರಾಣಿಯವರ ಶ್ರಮ ಮತ್ತು ಪ್ರತಿಭೆಗೆ ಸಿಕ್ಕ ಮನ್ನಣೆಯೂ ಹೌದು. ಇದುವರೆಗೆ ಸಾಹಿತ್ಯಕ ಸಾಹಚರ್ಯದಲ್ಲಿ ಬೆರೆತಿದ್ದ ಅವರು ನಾತಿಚರಾಮಿಯ ಮೂಲಕ ಚಿತ್ರರಂಗಕ್ಕೂ ಅಡಿಯಿರಿಸಿದ್ದಾರೆ. ಆರಂಭದ ಹೆಜ್ಜೆಗೇ ಗೆಲುವಿನ ಸೂಚನೆಯ ಸ್ವಾಗತ ಸಿಕ್ಕಿದೆ. ಬಹುಶಃ ಮುಂದೆ ಅವರು ಕನ್ನಡ ಚಿತ್ರರಂಗದಲ್ಲಿ ವಿರಳವಾಗಿರೋ ಮಹಿಳಾ ನಿರ್ದೇಶಕಿಯಾಗಿ ಹೊಸಾ ಯಾನ ಆರಂಭಿಸಲೂ ಬಹುದು. ಹಾಗಾಗಲೆಂಬುದು ಹಾರೈಕೆ…

Advertisement
Click to comment

Leave a Reply

Your email address will not be published. Required fields are marked *

ಕಲರ್ ಸ್ಟ್ರೀಟ್

ಇದೇ ಶನಿವಾರ ಬರಲಿದೆ ಸುವರ್ಣ ಸುಂದರಿ ಟ್ರೈಲರ್!

Published

on


ಅದ್ದೂರಿ ವೆಚ್ಚದಲ್ಲಿ ತಯಾರಾಗಿರುವ ಸುವಣ್ ಸುಂದರಿ ಸಿನಿಮಾ ಆರಂಭದಿಂದಲೂ ಸುದ್ದಿಯಾಗುತ್ತಲೇ ಬಂದಿದೆ. ಇದೀಗ ಚಿತ್ರತಂಡ ಈ ಸಿನಿಮಾದ ಟ್ರೈಲರ್ ಲಾಂಚ್ ಮಾಡಲು ತಯಾರಾಗಿದೆ. ಇದೇ ೧೯ನೇ ತಾರೀಕಿನ ಶನಿವಾರದಂದು ಸುವರ್ಣ ಸುಂದರಿ ಟ್ರೈಲರ್ ಬಿಡುಗಡೆಯಾಗಲಿದೆ.

ಎಸ್ ಟೀಮ್ ಪಿಕ್ಚರ್‍ಸ್ ಲಾಂಛನದಡಿಯಲ್ಲಿ ತಯಾರಾಗಿರುವ `ಸುವರ್ಣ ಸುಂದರಿ’ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ತೆಲುಗಿನಲ್ಲಿ ಈಗಾಗಲೇ ಒಂದಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿರುವ ಸೂರ್ಯ ನಿರ್ದೇಶನದ ಈ ಚಿತ್ರ ನಾಲಕ್ಕು ಕಾಲಮಾನಗಳ ವಿಶಿಷ್ಟವಾದ ಕಥಾ ಹಂದರ ಹೊಂದಿದೆ.
ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕ ಕಾಲದಲ್ಲಿ ತಯಾರಾಗಿರೋ ಈ ಚಿತ್ರಕ್ಕೆ ರಾಂಗೋಪಾಲ್ ವರ್ಮಾ ಅವರ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಸಾಯಿ ಕಾರ್ತಿಕ್ ಅವರೇ ರಾಗ ಸಂಯೋಜನೆ ಮಾಡಿರೋದು ವಿಶೇಷ. ಬೆಂಗಳೂರು, ಅನಂತಪುರಂ, ಹೈದರಾಬಾದ್, ಬೀದರ್, ಕೇರಳ ಮುಂತಾದೆಡೆಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡಿರೋ ಈ ಚಿತ್ರವೀಗ ಅಂತಿಮ ಹಂತಕ್ಕೆ ತಲುಪಿಕೊಂಡಿದೆ. ಇದರ ಜೊತೆಗೇ ಒಂದು ಸುಂದರವಾದ ಟ್ರೈಲರ್ ಕೂಡಾ ಇಗಾಗಲೆ ಬಿಡುಗಡೆಗೊಂಡಿದೆ. ಇದೀಗ ವಿಶಿಷ್ಟವಾದ ಎರಡನೇ ಟ್ರೈಲರ್ ನೋಡೋ ಕಾಲ ಹತ್ತಿರಾಗಿದೆ.

ಬಾಹುಬಲಿ ಚಿತ್ರಕ್ಕೆ ಸಿಜಿ ವರ್ಕ್ ಮಾಡಿದ್ದ ತಂತ್ರಜ್ಞರೇ ಈ ಚಿತ್ರಕ್ಕೆ ನಲವತೈದು ನಿಮಿಷಗಳ ಸಿಜಿ ವರ್ಕ್ ಮಾಡಿದ್ದಾರಂತೆ. ಪೂರ್ಣ, ಸಾಕ್ಷಿ, ತಿಲಕ್, ಸಾಯಿ ಕುಮಾರ್, ಜೈ ಜಗಧೀಶ್, ರಾಮ್, ಅವಿನಾಶ್, ಇಂದಿರಾ, ಸತ್ಯಪ್ರಕಾಶ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಎಲ್ಲಾ ಕೆಲಸ ಕಾರ್ಯಗಳನ್ನೂ ಸಂಪೂರ್ಣವಾಗಿ ಮಗಿಸಿಕೊಂಡಿರುವ ಚಿತ್ರತಂಡ ಇದೀಗ ಟ್ರೈಲರ್ ತೋರಿಸಲು ಮುಂದಾಗಿದೆ.

Continue Reading

ಕಲರ್ ಸ್ಟ್ರೀಟ್

ಯಜಮಾನನ ಅಬ್ಬರದ ಮುಂದೆ ತಮಿಳು ಚಿತ್ರಗಳೂ ಥಂಡ! ಯೂಟ್ಯೂಬಿನಲ್ಲಿ ಶಿವನಂದಿಗೆ ಎದುರು ನಿಲ್ಲೋರಿಲ್ಲ!

Published

on


ಸಂಕ್ರಾಂತಿಯ ಶುಭ ಘಳಿಗೆಯಲ್ಲಿ ದರ್ಶನ್ ಅಭಿಮಾನಿಗಳ ಪಾಲಿಗೆ ಭರ್ಜರಿ ಸಂಭ್ರಮವೇ ಸಿಕ್ಕಿ ಬಿಟ್ಟಿದೆ. ಅದಕ್ಕೆ ಕಾರಣವಾಗಿರೋದು ಯಜಮಾನ ಚಿತ್ರದ ಶಿವನಂದಿ ಹಾಡಿನ ನಾಗಾಲೋಟ. ಯೂಟ್ಯೂಬ್‌ನಲ್ಲಿ ಈ ಹಾಡಿನ ಹವಾ ಅದ್ಯಾವ ಥರ ಇದೆಯೆಂದರೆ, ಅದರ ಮುಂದೆ ತಮಿಳು ಚಿತ್ರಗಳೂ ಥಂಡಾ ಹೊಡೆದು ಬಿಟ್ಟಿವೆ.

ಸಂಕ್ರಾಂತಿಯಂದು ಬಿಡುಗಡೆಯಾಗಿದ್ದ ಶಿವನಂದಿ ಆ ದಿನವೇ ಬಹುತೇಕ ದಾಖಲೆಗಳನ್ನು ಬ್ರೇಕ್ ಮಾಡಿತ್ತು. ಅದಾಗಿ ಮಾರನೇ ದಿನ, ಅಂದರೆ ಈ ಕ್ಷಣದ ವರೆಗೇ ಶಿವನಂದಿ ಹಾಡು ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿದೆ. ಇದರ ಅಬ್ಬರದ ಮುಂದೆ ತಮಿಳಿನ ಚಿಯಾನ್ ವಿಕ್ರಂ ಚಿತ್ರವೇ ಮಂಕಾಗಿ ಬಿಟ್ಟಿದೆ!

ಇದೇ ದಿನ ಚಿಯಾನ್ ವಿಕ್ರಂ ಅಭಿಯದ ಕೊಡರಂ ಕೊಂಡನ್ ಟೀಸರ್ ಮತ್ತು ಪ್ರಭುದೇವ ನಟನೆಯ ಚಾರ್ಲಿ ಚಾಪ್ಲಿನ್ ೨ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು. ಈ ಎರಡಕ್ಕೂ ವೀಕ್ಷಣೆ ಸಿಕ್ಕಿದೆಯಾದರೂ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಯಜಮಾನನ ಶಿವನಂದಿಯನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಈಗಿರೋ ಹವಾ ನೋಡಿದರೆ ಅದು ಅಷ್ಟು ಸಲೀಸಾಗಿ ಸಾಧ್ಯವಾಗೋದೂ ಇಲ್ಲ.
ಇದು ಯಜಮಾನ ಚಿತ್ರದ ಆರಂಭಿಕ ಯಶಸ್ಸು ಎಂಬುದರಲ್ಲಿ ಎರಡು ಮಾತಿಲ್ಲ. ಈ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊ ಬೇರೆಯದ್ದೇ ರೀತಿಯಲ್ಲಿ ಅಭಿಮಾನಿಗಳ ಮುಂದೆ ಬರಲು ಅಣಿಯಾಗಿದ್ದಾರೆ. ಒಟ್ಟಾರೆ ಕಥೆ ಭಿನ್ನವಾಗಿದೆ ಎಂಬುದೂ ಸೇರಿದಂತೆ ಈಗಾಗಲೇ ಯಜಮಾನನ ಬಗ್ಗೆ ಅಭಿಮಾನದಾಚೆಯೂ ಪ್ರೇಕ್ಷಕರು ಆಕರ್ಷಿತರಾಗಿದ್ದಾರೆ.

Continue Reading

ಕಲರ್ ಸ್ಟ್ರೀಟ್

ಕನ್ನಡದ ಹೆಮ್ಮೆಯ ಕಥೆಗಾರ ಟಿ.ಕೆ. ದಯಾನಂದ ಅವರ ಬೆಲ್ ಬಾಟಮ್

Published

on

ಟಿ.ಕೆ. ದಯಾನಂದ ಅನ್ನೋ ಹೆಸರು ಕನ್ನಡ ಚಿತ್ರರಂಗಕ್ಕೆ ತೀರಾ ಹೊಸದೇನಲ್ಲ. ಈ ಹಿಂದೆ ‘ಬೆಂಕಿ ಪಟ್ಣ’ ಅನ್ನೋ ಸಿನಿಮಾ ತೆರೆಗೆ ಬಂದಿತ್ತಲ್ಲಾ? ನಿರೂಪಕಿ ಅನುಶ್ರೀ ನಾಯಕಿಯಾಗಿ ನಟಿಸಿದ ಸಿನಿಮಾ… ಅದನ್ನು ನಿರ್ದೇಶನ ಮಾಡಿದ್ದವರು ಇದೇ ದಯಾನಂದ್. ಕಥೆ ಬರೆಯೋನಿಗೆ ಜೀವನದ ಕಷ್ಟ ಸುಖಗಳ ಬಗ್ಗೆ ಇಂಚಿಂಚೂ ಅನುಭವವಿರಬೇಕು. ಸಮಾಜಜ್ಞಾನ ಕೂಡಾ ಇರಬೇಕು. ದಯಾನಂದ್ ವಿಚಾರದಲ್ಲಿ ಇವೆಲ್ಲವೂ ಒಂಚೂರು ಹೆಚ್ಚೇ ಇದೆ. ಕಡು ಕಷ್ಟದ ಹಿನ್ನೆಲೆಯಿಂದ ಬಂದ ದಯಾನಂದ್ ಓದು ಮುಗಿಸಿ ಟೀವಿ ನೈನ್ ಚಾನೆಲ್ಲಿನಲ್ಲಿ ಡೆಸ್ಕ್ ಎಡಿಟರ್ ಆಗಿದ್ದವರು. ಅದರ ಜೊತೆಗೆ ಅಗ್ನಿ, ಲಂಕೇಶ್ ಸೇರಿದಂತೆ ಸಾಕಷ್ಟು ಪತ್ರಿಕೆಗಳಿಗೆ ಬರೆಯುತ್ತಿದ್ದವರು. ಜಗತ್ತಿನ ಎಲ್ಲ ಭಾಷೆಗಳ ಸಿನಿಮಾಗಳನ್ನು ನೋಡಿ ಅದರ ಕುರಿತು ಬರೆಯುತ್ತಿದ್ದ ದಯಾನಂದ್ ತಳಸಮುದಾಯಗಳ ಅಧ್ಯಯನಗಳನ್ನು ಕುರಿತ ಸಾಕಷ್ಟು ಡಾಕ್ಯುಮೆಂಟರಿಗಳನ್ನೂ ತಯಾರಿಸಿದ್ದಾರೆ. ಜೀವವನ್ನು ಪಣಕ್ಕಿಟ್ಟು ಮ್ಯಾನ್ ಹೋಲ್ ಗಳಲ್ಲಿ ಇಳಿಯುವ ಸಫಾಯಿಕರ್ಮಚಾರಿಗಳ ಕುರಿತಾಗಿ ದಯಾನಂದ ಮಾಡಿರುವ ಸಂಶೋಧನೆಗಳು ಸಾಕಷ್ಟು. ಇವತ್ತೇನಾದರೂ ಸಫಾಯಿಕರ್ಮಚಾರಿಗಳ ಬದುಕಲ್ಲಿ ಬೆಳಕು ಕಾಣಿಸೋ ಸೂಚನೆ ಕಂಡಿದೆಯೆಂದರೆ ಅದಕ್ಕೆ ದಯಾನಂದ್ ಮಾಡಿರುವ ಆಧ್ಯಯನ ವರದಿಗಳ ಪಾತ್ರ ದೊಡ್ಡದು.

ಚಾಕು ಸಾಣೆ ಹಿಡಿಯೋರು, ಹಾವಾಡಿಗರು, ಕರಡಿ ಕುಣಿಸೋರು… ಹೀಗೆ ಬದುಕಿಗಾಗಿ ನಾನಾ ಕಸುಬುಗಳನ್ನು ಮಾಡುವ ಜನರ ಕುರಿತು ದಯಾನಂದ್ ಬರೆದ ‘ರಸ್ತೆನಕ್ಷತ್ರಗಳು’ ಪುಸ್ತಕ ಹೊಸ ಸಾಮಾನ್ಯ ಜನರಿಗೆ ಗೊತ್ತಿಲ್ಲದ ಹೊಸ ಲೋಕವನ್ನು ಪರಿಚಯಿಸುತ್ತದೆ. ಇವರ ನಾಯಿಬೇಟೆ ಕಥೆಗಾಗಿ ಪ್ರಜಾವಾಣಿಯ ಪ್ರತಿಷ್ಟಿತ ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿತ್ತು. ವಿಜಯ ನೆಕ್ಸ್ಟ್ ಪತ್ರಿಕೆಯ ಕಥಾಸ್ಪರ್ಧೆಯಲ್ಲಿ ಇವರ ಒಂದಾನೊಂದು ಊರಿನಲ್ಲಿ ಕಥೆ ಕೂಡಾ ಮೊದಲ ಕಥೆಯಾಗಿ ಆಯ್ಕೆಯಾಗಿತ್ತು. ಕಣ್ಣೆದುರೇ ನಡೆಯುತ್ತಿದ್ದರೂ ಯಾರೂ ಕಣ್ಣೆತ್ತಿನೋಡದ ವಿಚಾರಗಳನ್ನೇ ಕಥೆಗಳನ್ನಾಗಿಸಿ, ರೋಚಕವೆನ್ನುವಂತೆ ಬರೆಯೋದು ದಯಾನಂದ್ ಅವರಿಗೆ ಸಿದ್ದಿಸಿದೆ.

ಕನ್ನಡದ ಹೆಮ್ಮೆಯ ಕಥೆಗಾರ ದಯಾನಂದ್ ‘ಬೆಲ್‌ಬಾಟಮ್’ ಸಿನಿಮಾಗೆ ಕಥೆ ಒದಗಿಸಿದ್ದಾರೆ. ಇಂಥ ಸಿನಿಮಾಗಳು ಗೆದ್ದರೆ ಕನ್ನಡದಲ್ಲೂ ಸಾಕಷ್ಟು ಹೊಸ ಕಂಟೆಂಟುಗಳ ಸಿನಿಮಾ ಬರೋದು ಗ್ಯಾರೆಂಟಿ. ಈ ಕಾರಣಕ್ಕಾದರೂ ನಾವು ಬೆಲ್ ಬಾಟಮ್ ಸಿನಿಮಾವನ್ನೊಮ್ಮೆ ನೋಡಲೇಬೇಕು.

Continue Reading

Trending

Copyright © 2018 Cinibuzz