One N Only Exclusive Cine Portal

ಮುಗ್ಧ ರಾಜೇಶನ ಮನೆಯೀಗ ಸ್ಮಶಾನ… only on cinibuzz

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ `ತಳಸಮುದಾಯಗಳ ಅಧ್ಯಯನ ಕೇಂದ್ರ’ದ ಡಾ. ಆರ್.ವಿ. ಚಂದ್ರಶೇಖರ್ ಮತ್ತವರ ತಂಡ ಜೇನು ಕುರುಬರ ಬಗ್ಗೆ ಅಧ್ಯಯನ ನಡೆಸಲು ಹೋದಾಗ ರಾಜೇಶನ ಮನೆಯ ಹೀನಾಯ ಪರಿಸ್ಥಿತಿಯ ಚಿತ್ರಣ ಸಿಕ್ಕಿದೆ.

ಹಳ್ಳಿಹೈದ ಪ್ಯಾಟೆಗ್ ಬಂದ ಎಂಬ ರಿಯಾಲಿಟಿ ಶೋ ಒಂದು ಬಂದಿತ್ತಲ್ಲಾ? ಅದು ನೆನಪಿಲ್ಲದವರೂ ರಾಜೇಶ್ ಎಂಬ ಮುಗ್ಧ ಮನಸಿನ ಹಳ್ಳಿ ಹುಡುಗನನ್ನು, ಆತನಿಗೆ ಬಂದೊದಗಿದ ದುರಂತ ಸಾವನ್ನು ಮರೆಯಲು ಸಾಧ್ಯವಿಲ್ಲ. ಮರೆತರೆ ಆ ಹುಡುಗನನ್ನು ಬೇಕಾದಂತೆ ಕುಣಿಸಿ ಟೀಆರ್‌ಪಿ ಗುಂಜಿಕೊಂಡ ವಾಹಿನಿಯ ಮಂದಿಗೂ ನಮಗೂ ಯಾವ ವ್ಯತ್ಯಾಸವೂ ಉಳಿಯೋದಿಲ್ಲ. ಅಂತೂ ಈ ವಾಹಿನಿಗಳಲ್ಲಿ ಬರೋ ರಂಗು ರಂಗಾದ ರಿಯಾಲಿಟಿ ಶೋಗಳ ಅಸಲೀ ಮುಖವನ್ನು ಉಸಿರು ಚೆಲ್ಲುವ ಮೂಲಕ ಅನಾವರಣಗೊಳಿಸಿ ಹೋದವನು ರಾಜೇಶ!


ರಾಜೇಶನೇನೋ ದುರಂತ ಅಂತ್ಯ ಕಂಡ. ಆದರೆ ಕಾಡು ಹಾಡಿಯೊಳಗೆ ತನ್ನ ಪಾಡಿಗೆ ತಾನಿದ್ದ ಮಗನನ್ನು ಒಂದು ರಿಯಾಲಿಟಿ ಶೋ ನುಂಗಿ ನೊಣೆದ ಬಳಿಕ ಆತನ ಹೆತ್ತವರ ಸ್ಥಿತಿ ಏನಾಗಿದೆ? ಅವರೀಗ ಎಲ್ಲಿದ್ದಾರೆ? ಅವನನ್ನೇ ನಂಬಿ ಬಂದಿದ್ದ ಹೆಂಡತಿಯ ಗತಿಯೇನಾಗಿದೆ ಎಂಬುದರ ಬಗ್ಗೆ ಈ ನೆಲದ ಒಂದಷ್ಟು ಮಾನವೀಯ ಮನಸುಗಳಿಗಾದರೂ ಕುತೂಹಲ ಇದ್ದೇ ಇರುತ್ತದೆ. ಈ ಬಗೆಗಿನ ಒಂದಷ್ಟು ಮಾಹಿತಿ ಮತ್ತು ಮನ ಕಲಕುವ ವಿವರಗಳನ್ನು ಸಿನಿಬಜ್ ಕಲೆ ಹಾಕಿದೆ. ಆ ವಿವರಗಳು ನಿಮಗಾಗಿ…


ಹೆಚ್ ಡಿ ಕೋಟೆಯ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಗೆ ಬರೋ ಬಳ್ಳೆ ಎಂಬ ಹಾಡಿಯ ಜೇನುಕುರುಬ ಸಮುದಾಯದ ಹುಡುಗ ರಾಜೇಶ. ಆ ದಟ್ಟ ಕಾಡು, ಅದರ ವಾತಾವರಣ ಕರುಣಿಸೋ ಮುಗ್ಧತೆ ಬೆರೆತ ಹುಂಬತನಗಳ ಜೊತೆಗೇ ಅಪ್ಪ ಅಮ್ಮನೊಂದಿಗೆ ಆರಾಮಾಗಿದ್ದ ಆತ ಬಲಿಯಾಗಿ ಐದು ವರ್ಷವಾಗುತ್ತಾ ಬಂದಿದೆ. ಆದರೆ ಈಗ ಆತನ ಅಪ್ಪ ಅಮ್ಮ ಹೇಗಿದ್ದಾರೆ? ಅವನ ಮನೆಯ ಸ್ಥಿತಿ ಹೇಗಿದೆ ಅಂತ ನೋಡ ಹೋದರೆ ಕಣ್ಣಿಗೆ ಬೀಳೋದು ಎಂಥವರೂ ಮರುಗುವಂಥಾ ಅಸಲೀ ದುರಂತ!


ರಾಜೇಶನ ಸಾವು ಆತನ ಹೆತ್ತವರ ಬದುಕನ್ನೇ ಹಿಂಡಿ ಹಾಕಿದೆ. ಆವಾಗ ಬಳ್ಳೆ ಎಂಬ ಹಾಡಿಯಲ್ಲಿ ಜೋಪಡಿಯಾದರೂ ಜೀವಂತಿಕೆಯಿಂದ ನಳನಳಿಸುತ್ತಿತ್ತಲ್ಲಾ ರಾಜೇಶನ ಮನೆ? ಅದೀವತ್ತು ಅಕ್ಷರಶಃ ಸ್ಮಶಾನವಾಗಿದೆ. ಅಲ್ಲೀಗ ಯಾರೂ ಇಲ್ಲ. ರಾಜೇಶನ ಅಪ್ಪ ಕೃಷ್ಣಪ್ಪ ಮತ್ತು ಅಮ್ಮ ಲಕ್ಷ್ಮಿ ಆ ಜಾಗಕ್ಕೆ ಕಾಲಿಟ್ಟೇ ವರ್ಷ ಕಳೆದಿದೆ. ಅವರಿಬ್ಬರೂ ಈಗ ಕೆ ಬಿ ಕುಪ್ಪೆ ರಸ್ತೆಯ ಹ್ಯಾಂಡ್‌ಪೋಸ್ಟ್ ಬಳಿ ಕೂಲಿ ನಾಲಿ ಮಾಡಿಕೊಂಡು ಬದುಕುತ್ತಿದ್ದಾರೆ. ಬಳ್ಳೆ ಹಾಡಿಯಲ್ಲಿರೋ ರಾಜೇಶನ ಸಮಾಧಿಗೂ ಮನೆಗೂ ಈಗ ಯಾವ ವ್ಯತ್ಯಾಸವೂ ಉಳಿದಿಲ್ಲ.


ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ `ತಳಸಮುದಾಯಗಳ ಅಧ್ಯಯನ ಕೇಂದ್ರ’ದ ಡಾ. ಆರ್.ವಿ. ಚಂದ್ರಶೇಖರ್ ಮತ್ತವರ ತಂಡ ಜೇನು ಕುರುಬರ ಬಗ್ಗೆ ಅಧ್ಯಯನ ನಡೆಸಲು ಹೋದಾಗ ರಾಜೇಶನ ಮನೆಯ ಹೀನಾಯ ಪರಿಸ್ಥಿತಿಯ ಚಿತ್ರಣ ಸಿಕ್ಕಿದೆ.


ಏಕಾಏಕಿ ರಿಯಾಲಿಟಿ ಶೋ ಮೂಲಕ ಮಿಂಚಿ ಹೆಣವಾಗಿ ಮರಳಿದ ರಾಜೇಶನ ದುರಂತವಿದೆಯಲ್ಲಾ? ಅದು ಈ ಭಾಗದ ಕಾಡಿನಲ್ಲಿ ಬದುಕೋ ಜನರಲ್ಲಿ ಶಾಶ್ವತ ಭಯವೊಂದನ್ನು ಜೀವಂತವಾಗಿಟ್ಟಿದೆ. ತಮ್ಮ ಮಕ್ಕಳನ್ನು ಕೆಲಸಕ್ಕೆ ಬೆಂಗಳೂರಿನಂಥಾ ನಗರಗಳಿಗೆ ಕಳಿಸಲೂ ಭಯ. ತೀರಾ ಪುಟ್ಟ ಮಕ್ಕಳನ್ನು ಶಾಲೆಗೆ ಕಳಿಸಲೂ ಇಲ್ಲಿನ ಜನ ಹಿಂದೇಟು ಹಾಕುತ್ತಿದ್ದಾರೆ. ತಮ್ಮದೇ ಕಣ್ಮುಂದೆ ಆಡಿಕೊಂಡು ಬೆಳೆದ ರಾಜೇಶನಂತೆಯೇ ನಗರ ಬದುಕು ತಮ್ಮ ಮಕ್ಕಳನ್ನೂ ಬಲಿ ಬೀಳಿಸುತ್ತದೇನೋ ಎಂಬ ಭಯದಿಂದ ಕಂಗಾಲಾಗಿರೋ ಅಲ್ಲಿನ ಜನ ಪೇಟೆಯ ಪೋಶಾಕು ಹೊಂದಿರೋ ಜನ ಹಾಡಿಯೊಳಗೆ ಕಾಲಿಟ್ಟರೂ ಬೆಚ್ಚಿ ಬೀಳುತ್ತಾರೆ!


ಇದು ಟೀಆರ್‌ಪಿ ಹುಚ್ಚಿಗೆ ಹುಟ್ಟಿದ ರಿಯಾಲಿಟಿ ಶೋವೊಂದು ಕಾಡೊಳಗೆ ತಮ್ಮ ಪಾಡಿಗೆ ತಾವಿದ್ದ ಜನರ ಬದುಕನ್ನೇ ಕಂಗಾಲು ಮಾಡಿ ಹಾಕಿದ ರೀತಿ. ಈವತ್ತಿಗೆ ರಾಜೇಶನ ಮನೆ, ಅಲ್ಲಿನ ಜನರ ವಾತಾವರಣ ನೋಡಿದರೆ ಖಾಸಗಿ ವಾಹಿನಿಯ ಮಂದಿ ಈ ಹಾಡಿಗೆ ನುಗ್ಗಿ ರಾಜೇಶನನ್ನು ಕುರಿಯಂತೆ ಹೊತ್ತೊಯ್ದ ಕ್ಷಣಗಳು ಕಣ್ಮುಂದೆ ಬರುತ್ತವೆ. ಥೇಟು ಬಲಿಗೆ ಪ್ರಾಣಿಯನ್ನು ಕರೆದೊಯ್ಯುವಂತೆ ರಾಜೇಶನನ್ನು ವಾಹನದಲ್ಲಿ ಹಾಡಿಯಿಂದ ಕರೆದೊಯ್ದ ವಾಹಿನಿ ಮಂದಿ ನಾನಾ ಪೋಸು ಕೊಟ್ಟಿದ್ದರು. ಆದರೆ ಈ ಹುಡುಗ ರಾಜೇಶ ಹೇಗೋ ತಪ್ಪಿಸಿಕೊಂಡು ಮತ್ತೆ ಕಾಡೊಳಗಿನ ಹಾಡಿ ಸೇರಿದ್ದ. ಆ ಹೊತ್ತಿಗೆಲ್ಲಾ ಇವನು ಟೀಆರ್‌ಪಿ ಸರಕೆಂಬುದನ್ನು ಪಕ್ಕಾ ಮಾಡಿಕೊಂಡಿದ್ದವರು ಮತ್ತೆ ಹಾಡಿಗೆ ನುಗ್ಗಿ ರಾಜೇಶನನ್ನು ರಿಯಾಲಿಟಿ ಶೋಗೆ ಕರೆ ತಂದಿದ್ದರು. ಆ ನಂತರ ಆ ಶೋದಲ್ಲಿ ಹಳ್ಳಿ ಹುಡುಗರನ್ನು ನಡೆಸಿಕೊಂಡ ವಿಕೃತಿ ಅಸಹ್ಯವನ್ನಷ್ಟೇ ಉಳಿಸಿದೆ.


ಆ ನಂತರ ರಾಜೇಶನೇ ಆ ಶೋ ವಿನ್ನರ್ ಆಗಿ, ಅತ್ತ ಹಳ್ಳಿ ಬದುಕಿಗೂ ಒಗ್ಗದೆ, ಪೇಟೆಯಲ್ಲೂ ಇರಲಾರದೆ ಸಿನಿಮಾ ನಟನಾಗೋ ಭ್ರಮೆಗೆ ಬಿದ್ದ ರಾಜೇಶ ಅಕ್ಯೂಟ್ ಮೇನಿಯಾ ಎಂಬ ಮಾನಸಿಕ ಕಾಯಿಲೆಗೆ ತುತ್ತಾದ. ನಂತರ ಮಹಡಿ ಮೇಲಿಂದ ಬಿದ್ದು ಸತ್ತು ಹೋದ. ಆತನ ಸಾವನ್ನೂ ಲಾಭಕ್ಕೆ ಬಸಿದುಕೊಂಡು ಕೈತೊಳೆದುಕೊಂಡ ಮಂದಿಗೀಗ ನಾಗರಹೊಳೆ ಅಭಯಾರಣ್ಯದ ಬಳ್ಳೆ ಹಾಡಿಯತ್ತ ಸುಳಿಯುವ ಮನಸೂ ಇಲ್ಲ. ಆದರೆ ರಾಜೇಶನ ಸಮಾಧಿ ಮತ್ತು ಅದರ ಇಕ್ಕೆಲದಲ್ಲಿರೋ ಸಮಾಧಿಯಂಥಾ ಮನೆ ನಾಗರಿಕ ಜಗತ್ತಿನ ದುಷ್ಟತನಕ್ಕೆ ಸಿಕ್ಕ ಅಮಾಯಕ ಹಳ್ಳಿಮಕ್ಕಳ ಆರ್ತನಾದ ಹೊರಡಿಸುತ್ತಿರುವಂತೆ ಭಾಸವಾಗುತ್ತದೆ. ರಾಜೇಶನ ಶ್ರದ್ದಾಂಜಲಿ ಫೋಟೋ ಮುಂದೆ ಇಟ್ಟಿರುವ ವಾಹಿನಿಯವರು ನೀಡಿದ ಚೆಕ್ ನ ಬೋರ್ಡು ಆತನ ಬದುಕು ಬರ್ಬಾದಾದುದರ ಸಂಕೇತದಂತೆ ಗೋಚರಿಸುತ್ತಿದೆ.


ಇಂಥಾ ಹಳ್ಳಿ ಮಕ್ಕಳನ್ನು ಟೀಆರ್‌ಪಿಗಾಗಿ ಬಳಸಿಕೊಂಡ ಮಂದಿಗೆ ಕನಿಷ್ಠ ಆತನ ಮನೆಮಂದಿಗೆ ಒಂದಿಷ್ಟು ಸಹಾಯ ಮಾಡೋ ಮಾನವೀಯತೆಯೂ ಇಲ್ಲದೇ ಹೋದದ್ದು ಅಮಾನವೀಯ ದುರಂತ!

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image