One N Only Exclusive Cine Portal

ನೀರು ತಂದವರು ಸಿನಿಮಾ ಉತ್ಸವಕ್ಕೆ ಬಂದರು!

ಈ ನೆಲದ ಸಮಸ್ಯೆಗಳಿಗೆ, ಜನಸಾಮಾನ್ಯರ ದುಮ್ಮಾನಗಳಿಗೆ ಕಣ್ಣಾಗುವ ಚಿತ್ರಗಳ ಕೊರತೆ ಕನ್ನಡದಲ್ಲಿದೆ. ಅದನ್ನು ನೀಗುವಂತೆ ತಯಾರಾಗಿರುವ `ನೀರು ತಂದವರು’ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮಾ ಉತ್ಸವಕ್ಕೆ ಆಯ್ಕೆಯಾಗಿದೆ.
ಕನ್ನಡದ ಖ್ಯಾತ ಕಥೆಗಾರರಾದ ಅಮರೇಶ್ ನುಗಡೋಣಿ ಅವರ ಕಥೆಯೊಂದನ್ನು ಆಧರಿಸಿರುವ ಈ ಚಿತ್ರ ಉತ್ತರ ಕರ್ನಾಟಕದ ಜನ ಜೀವನವನ್ನು ಪರಿಣಾಮಕಾರಿಯಾಗಿ, ಸೃಜನಾತ್ಮಕವಾಗಿ ತೆರೆದಿಡುವಲ್ಲಿ ಯಶ ಕಂಡಿದೆ. ಹೀಗೆ ಕಲಾತ್ಮಕ ದೃಷ್ಯಗಳ ಮೂಲಕವೇ ಗಮನ ಸೆಳೆದಿರುವ ಈ ಚಿತ್ರ ಗುಣಮಟ್ಟದ ಕಾರಣದಿಂದಲೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಪ್ರದರ್ಶನ ಕಾಣಲು ಆಯ್ಕೆಯಾಗಿದೆ.


ಸಾಹಿತಿಯಾಗಿ, ಪುಸ್ತಕ ಪ್ರಕಾಶಕರಾಗಿ ಕನ್ನಡಿಗರಿಗೆ ಚಿರಪರಿಚಿತರಾಗಿರುವ ನಿಡಸಾಲೆ ಪುಟ್ಟಸ್ವಾಮಯ್ಯನವರು ನೀರು ತಂದವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಮಠ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಟಿಸುವ ಮೂಲಕ ಅತ್ಯುತ್ತಮ ನಟ ಅಂತಲೇ ಹೆಸರಾಗಿರುವವರು ಆಸಿಫ್. ಅವರೀಗ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ.

ಚಲನ ಚಿತ್ರ ಎಂಬುದು ಯಾವತ್ತಿದ್ದರೂ ಪರಿಣಾಮಕಾರಿ ಮಾಧ್ಯಮ. ಅದರ ಮೂಲಕವೇ ಜನರ ಬದುಕನ್ನು ಹಸಿಯಾಗಿ ತೆರೆದಿಟ್ಟು ಅವರ ದುಃಖ ಧಾವಂತಗಳನ್ನು ಮುಖ್ಯಭೂಮಿಕೆಗೆ ದಾಟಿಸುವ ಚಿತ್ರವಾಗಿ ನೀರು ತಂದವರು ಚಿತ್ರ ಗಮನಾರ್ಹವಾಗುತ್ತದೆ. ಈ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗುವ ಮೂಲಕ ಈ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗಮನ ಸೆಳೆದಿದೆ.


ಫೆಬ್ರವರಿ 23ರ ಶುಕ್ರವಾರ ಸಂಜೆ 3.50 ಕ್ಕೆ ಪಿ.ವಿ.ಆರ್ ಸಿನೆಮಾಸ್, ಒರಾಯನ್ ಮಾಲ್, ರಾಜಾಜಿನಗರ ಮತ್ತು ಫೆಬ್ರವರಿ 24ರ ಶನಿವಾರ ಮಧ್ಯಾಹ್ನ 12.15ಕ್ಕೆ ಡಾ. ರಾಜ್ ಭವನ, ಕನ್ನಡ ಸಾಹಿತ್ಯ ಪರಿಷತ್ತಿನ ಎದುರು ನೀರು ತಂದವರು ಚಿತ್ರ ಪ್ರದರ್ಶನಗೊಳ್ಳಲಿದೆ. ಸದಭಿರುಚಿಯ ಸಿನಿಮಾಗಳಿಗಾಗಿ ಹಂಬಲಿಸುವ ಚಿತ್ರಪ್ರೇಮಿಗಳು ಮಿಸ್ ಮಾಡದೇ ನೀರು ತಂದವರು ನೋಡಬಹುದು.

Leave a Reply

Your email address will not be published. Required fields are marked *


CAPTCHA Image
Reload Image