ಕವಿತಾ ಲಂಕೇಶ್ ನಿರ್ದೇಶನದ ಅವ್ವ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಮಿಂಚಿದ್ದ ನಟಿ ನಿವೇದಿತಾರನ್ನು ಕನ್ನಡದ ಪ್ರೇಕ್ಷಕರು ಮರೆಯಲು ಸಾಧ್ಯವಿಲ್ಲ. ಪಿ.ಲಂಕೇಶ್ ಅವರು ಸೃಷ್ಟಿಸಿದ್ದ ಆ ಪಾತ್ರದ ಮೂಲಕವೇ ಈಕೆ ಅಪ್ಪಟ ನಟಿ ಎಂಬ ವಿಚಾರ ಸಾಬೀತಾಗಿತ್ತು. ನಂತರದಲ್ಲಿ ಶುದ್ಧಿ ಚಿತ್ರದಲ್ಲಿ ಮನೋಜ್ಞವಾಗಿ ನಟಿಸಿ, ಗೆದ್ದ ನಂತರವೂ ಅದೇಕೋ ನಿವೇದಿತಾ ಕಣ್ಮರೆಯಾಗಿದ್ದರು. ಆದರೀಗ ಅವರು ವಾಪಾಸಾಗಿದ್ದಾರೆ!

ಹಾಗೆ ಬಹು ಕಾಲದ ನಂತರ ಮರಳಿರುವ ನಿವೇದಿತಾ ಕಾಣಿಸಿಕೊಂಡಿರೋದು ದುನಿಯಾ ಸೂರಿಯ ಮಂಕಿ ಟೈಗರ್ ಚಿತ್ರದ ಕ್ಯಾಂಪಿನಲ್ಲಿ!

ಧನಂಜಯ್ ನಾಯಕನಾಗಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ನಾಯಕಿ ಯಾರಾಗುತ್ತಾರೆಂಬ ಬಗ್ಗೆ ಎಲ್ಲರಲ್ಲಿಯೂ ಒಂದು ಕುತೂಹಲವಿತ್ತು. ಇದಕ್ಕಾಗಿ ಸೂರಿ ಕೂಡಾ ಎಲ್ಲ ದಿಕ್ಕುಗಳಿಂದಲೂ ತಲಾಶು ನಡೆಸಿದ್ದರು. ಕಡೆಗೂ ರಗಡ್ ಕಥಾನಕ ಹೊಂದಿರೋ ಈ ಚಿತ್ರಕ್ಕೆ ನಿವೇದಿತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸ್ಲಂ ಹುಡುಗನಾಗಿ ಕಾಣಿಸಿಕೊಂಡಿರೋ ಧನಂಜಯ ಅವರಿಗೆ ಜೊತೆಯಾಗಿದ್ದಾರೆ.

ಶುದ್ಧಿ ಚಿತ್ರ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿತ್ತು. ಅದರಲ್ಲಿ ನಿವೇದಿತಾ ನಟಿಸಿರೋ ಪಾತ್ರ ಕೂಡಾ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಈ ಚಿತ್ರದ ನಂತರದಲ್ಲಿ ಆಕೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಾರೆಂದೇ ಎಲ್ಲ ಅಂದುಕೊಂಡಿದ್ದರು. ಆದರೆ ಆ ಬಳಿಕ ನಿವೇದಿತಾ ಒಂದೇ ಒಂದು ಚಿತ್ರದಲ್ಲಿಯೂ ನಟಿಸಿರಲಿಲ್ಲ. ಹಾಗಂತ ಅವರಿಗೆ ಅವಕಾಶಗಳು ಬಂದಿರಲಿಲ್ಲ ಅಂತೇನೂ ಅಲ್ಲ. ಬಂದ ಅವಕಾಶಗಳೇಕೋ ಅವರಿಗೆ ಹಿಡಿಸಿರಲಿಲ್ಲವಂತೆ.

ಆದರೀಗ ಇಷ್ಟು ಸಮಯ ಕಾದಿದ್ದೂ ಸಾರ್ಥಕವಾಗಿದೆ. ಭಿನ್ನವಾದೊಂದು ಪಾತ್ರವನ್ನು ಸೂರಿ ನಿವೇದಿತಾಗೆ ಸೃಷ್ಟಿಸಿದ್ದಾರೆ. ಈ ಚಿತ್ರದ ಮೂಲಕವೇ ನಿವೇದಿತಾ ಒಂದು ದೊಡ್ಡ ಬ್ರೇಕ್ ಸಿಕ್ಕಿ ನೆಲೆಗೊಳ್ಳುವ ಲಕ್ಷಣಗಳಿವೆ.

#

LEAVE A REPLY

Please enter your comment!
Please enter your name here

20 + 7 =