ಈ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಓ ಪ್ರೇಮವೇ ಚಿತ್ರದಲ್ಲಿ ನಟಿಸಿದ್ದರಲ್ಲಾ? ಅದೇ ಹೆಸರನ್ನಿಟ್ಟುಕೊಂಡಿರುವ ಮನೋಜ್ ನಟನೆಯ ಹೊಸಾ ಚಿತ್ರ ತೆರೆ ಕಂಡಿದೆ. ಹಳೇ ಓ ಪ್ರೇಮವೇ ಚಿತ್ರದ ಹ್ಯಾಂಗೋವರಿನಲ್ಲಿ ದೊಡ್ಡ ನಿರೀಕ್ಷೆ ಇಟ್ಟುಕೊಂಡು ಹೋದವರನ್ನೂ ಕೂಡಾ ಈ ಚಿತ್ರ ಅಪ್ಪಟ ಪ್ರೇಮ ಕಥಾನಕವೊಂದರ ಮೂಲಕ ಮುದಗೊಳಿಸುವಂತಿದೆ.
ಅಪ್ಪಟ ಪ್ರೀತಿ ಮತ್ತು ಆರ್ಥಿಕ ಲೆಕ್ಕಾಚಾರಗಳ ನಡುವಿನ ಹೊಯ್ದಾಟದ ಕಥಾ ಹಂದರ ಹೊಂದಿರೋ ಅದೆಷ್ಟೋ ಚಿತ್ರಗಳು ತೆರೆ ಕಂಡಿವೆ. ಆದರೆ ಕಸುಬುದಾರಿಕೆ ಇದ್ದವರ ಸಾರಥ್ಯವಿದ್ದರೆ ಪ್ರೇಮವೆಂಬುದು ಚಿತ್ರಗಳ ಪಾಲಿಗೆ ಯಾವತ್ತಿಗೂ ಹಳತಾಗುವುದಿಲ್ಲ. ಆ ನಿಟ್ಟಿನಲ್ಲಿ ನಾಯಕ ಮನೋಜ್ ನಿರ್ದೇಶಕನಾಗಿಯೂ ಇಲ್ಲಿ ಗಮನ ಸೆಳೆಯುತ್ತಾರೆ. ನಟನಾಗಿಯೂ ಮಿಂಚಿದ್ದಾರೆ.
ಬದುಕಿನ ಬಗ್ಗೆ ಬಣ್ಣ ಬಣ್ಣದ ಹೈಫೈ ಕನಸುಗಳನ್ನು ಹೊಂದಿರೋ ಮಧ್ಯಮವರ್ಗದ ಹುಡುಗಿ, ಕಾಸು ಅಂಗೈಲಿ ಕುಣಿದಾಡುತ್ತಿದ್ದರೂ ಒಳ್ಳೆತನಕ್ಕಷ್ಟೇ ಹಂಬಲಿಸೋ ಮನಸ್ಥಿತಿಯ ಹಣವಂತ ಹುಡುಗಿ ಮತ್ತು ಬೇಕಾರ್ ಪ್ರೇಮಿಯೊಬ್ಬನ ಸುತ್ತ ನಡೆಯುವ ಪ್ರೇಮ ಸಲ್ಲಾಪದ ಒಟ್ಟಾರೆ ಸಾರಾಂಶ `ಓ ಪ್ರೇಮವೇ’.
ನಿಕ್ಕಿ ಗಲ್ರಾಣಿ ಮಧ್ಯಮವರ್ಗದ ಹುಡುಗಿಯಾಗಿ ನಟಿಸಿದ್ದಾಳೆ. ಈಕೆಗೆ ಲೆಕ್ಕವಿಟ್ಟು ಖರ್ಚು ಮಾಡೋ ಕರ್ಮದ ಮಧ್ಯಮವರ್ಗದ ಪಡಿಪಾಟಲುಗಳು ಬೋರು ಹೊಡೆಸಿರುತ್ತವೆ. ಹಣವಂತ ಕುಳವೊಂದರ ಜೊತೆ ಪರ್ಮನೆಂಟಾಗಿ ಸೆಟಲ್ ಆಗುವುದರ ಸುತ್ತಲಿನ ಬಣ್ಣ ಬಣ್ಣದ ಕನಸು ಈ ಹುಡುಗಿಯದ್ದು. ಇಂಥವಳಿಗೆ ಸದಾ ದುಬಾರಿ ಕಾರುಗಳಲ್ಲಿ ರೌಂಡು ಹೊಡೆಯೋ ನಾಯಕ ಮನೋಜನ ಪರಿಚಯವಾಗುತ್ತೆ. ಸದಾ ಹೈಟೆಕ್ ಕಾರುಗಳಲ್ಲಿ ಅಡ್ಡಾಡುವ ಆತ ಶ್ರೀಮಂತ ಅಂತ ತಿಳಿದುಕೊಳ್ಳೋ ಅಂಜಲಿ ಹಿಂದೆ ಬಿದ್ದು ಪ್ರೀತಿಸುತ್ತಾಳೆ. ಮನೋಜ್ ಕೂಡಾ ಡೀಪ್ ಆಗಿಯೇ ಪ್ರೀತಿಸಲಾರಂಭಿಸುತ್ತಾನೆ.
ಅದೊಂದು ದಿನ ಅಂಜಲಿ ತನ್ನ ತಂದೆಯ ಫಿಯೆಟ್ ಕಾರು ಮಾಡಲು ಡೀಲರ್ ಆಫೀಸೊಂದಕ್ಕೆ ಹೋದಾಗ ಅಲ್ಲಿ ಮನೋಜನ ಅಸಲೀ ಅವತಾರ ಕಂಡು ಕೆಂಡಾ ಮಂಡಲವಾಗುತ್ತಾಳೆ. ಯಾಕೆಂದರೆ ಆತ ಕಾರ್ ಡೀಲಿಂಗ್ ಕೆಲಸ ನಡೆಸುತ್ತಿರುತ್ತಾನೆ. ಅಲ್ಲಿ ಸಡನ್ನಾಗಿ ಬ್ರೇಕಪ್ಪು. ತನ್ನ ಪಾಡಿಗೆ ತಾನಿದ್ದ ಮನೋಜ ಪಾಗಲ್ ಆಗಿ ಬಾರು ಸೇರಿ ಅಹೋರಾತ್ರಿ ಕುಡಿದು ನಡು ರಸ್ತೆಯಲ್ಲಿಯೇ ಕುಡಿದು ತೂರಾಡೋ ಮಾಮೂಲಿ ವರಸೆ… ಹಾಗೆಯೇ ಒಂದು ಸಲ ಹಾಡ ಹಗಲೇ ನಡು ರೋಡಲ್ಲಿ ಕುಡಿದು ಬಿದ್ದಿದ್ದಾಗ ಕಾರ್ಪೋರೇಟ್ ಕಂಪೆನಿ ಸಿಇಓ ಒಬ್ಬಳ ಅಚಾನಕ್ ಭೇಟಿ. ಆಕೆಗೆ ಬಡವನ ಮೇಲೆ ಹುಟ್ಟೋ ಪ್ರೀತಿ.
ಕಡೆಗೂ ಹಣಕಾಸಿನ ಲೆಕ್ಕಾಚಾರ ಗೆಲ್ಲುತ್ತಾ ಅಥವಾ ಪ್ರೀತಿಯೇ ಅಲ್ಟಿಮೇಟ್ ಎಂಬ ಸತ್ಯದ ಸಾಕ್ಷಾತ್ಕಾರವಾಗುತ್ತಾ ಎಂಬುದು ಅಸಲೀ ಕುತೂಹಲ. ಒಟ್ಟಾರೆಯಾಗಿ ನಡುನಡುವೆ ಕಾಣಿಸಿಕೊಳ್ಳುವ ಟ್ವಿಸ್ಟು, ಪ್ರೇಮದ ತೀವ್ರತೆಗಳಿಂದ ಓ ಪ್ರೇಮವೇ ಕಾಡುವಂತಿದೆ. ನಟನೆಯ ವಿಚಾರದಲ್ಲಿ ಎಲ್ಲರೂ ಅವರವರ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದಾರೆ. ಸಂಗೀತ, ನಿರ್ದೇಶನ ಎಲ್ಲವೂ ಓಕೆ. ಕಿರಣ್ ಹಂಪಾಪುರ ಅವರ ಕ್ಯಾಮೆರಾ ಕೆಲಸವನ್ನು ಈ ಚಿತ್ರದ ಮತ್ತೊಂದು ಶಕ್ತಿಯಾಗಿ ಖಂಡಿತಾ ಪರಿಗಣಿಸಬಹುದು.