One N Only Exclusive Cine Portal

ಹುಚ್ಚ-2 ನಿರ್ದೇಶಕ ಓಂಪ್ರಕಾಶ್ ರಾವ್ ಬಚ್ಚಿಟ್ಟ ವಿಚಾರ…

ನಿರ್ದೇಶಕ ಓಂಪ್ರಕಾಶ್ ರಾವ್ ಒಂದು ಸುದೀರ್ಘವಾದ ವಿರಾಮದ ನಂತರ ಹುಚ್ಚ-2 ಚಿತ್ರದ ಮೂಲಕ ಮತ್ತೆ ಮರಳಿದ್ದಾರೆ. ಇನ್ನೇನು ತೆರೆ ಕಾಣಲಿರುವ ಈ ಚಿತ್ರದ ಬಗ್ಗೆ ರಸವತ್ತಾದ ಕೆಲ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಅವರು ವರ್ಷಾಂತರಗಳ ಹಿಂದೆ ತಮಿಳಿನಲ್ಲಿ ಸಿಕ್ಕಿದ್ದ ಚಿನ್ನದಂಥಾ ಅವಕಾಶವೊಂದು ಕೈ ತಪ್ಪಿದ ವಿಚಾರವನ್ನೂ ಜಾಹೀರು ಮಾಡಿದ್ದಾರೆ!

ತಮಿಳು ಚಿತ್ರರಂಗದಲ್ಲಿ ಹಿಟ್ ಚಿತ್ರಗಳಿಗೆ ಹೆಸರಾದ ಸ್ಟಾರ್ ನಿರ್ಮಾಪಕ ವಿ ರವಿಚಂದ್ರನ್. ಆಸ್ಕರ್ ಫಿಲಮ್ಸ್ ಮೂಲಕ ಒಂದರ ಹಿಂದೊಂದರಂತೆ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ರವಿ ಅವರನ್ನು ಭೇಟಿಯಾಗೋದೇ ಒಂದು ಸಾಹಸ. ಈ ಬಗ್ಗೆ ಬಣ್ಣ ಬಣ್ಣದ ಕಥೆಗಳೇ ಇದ್ದಾವೆ. ಇಂಥಾದ್ದರಲ್ಲಿ ಓಂಪ್ರಕಾಶ್ ರಾವ್ ರವಿ ಅವರನ್ನು ಭೇಟಿಯಾಗಿ, ಇವರ ಕಥೆಗವರು ಫಿದಾ ಆಗಿ ಇನ್ನೇನು ಪ್ರಾಜೆಕ್ಟು ಶುರುವಾಗಬೇಕೆಂಬಷ್ಟರಲ್ಲಿ ಅದು ಕೈ ತಪ್ಪಿ ಹೋದದ್ದೊಂದು ಥ್ರಿಲ್ಲರ್ ಕಥಾನಕ.

ವರ್ಷಾಂತರಗಳ ಹಿಂದೆ ಓಂಪ್ರಕಾಶ್ ರಾವ್ ರವಿಚಂದ್ರನ್ ಅವರನ್ನು ಭೇಟಿಯಾಗಿದ್ದರಂತೆ. ರವಿ ಒಂಥರಾ ವಿಚಿತ್ರ ಜೀವಿ. ಅದೆಂಥಾ ಗಣ್ಯರೇ ಬಂದರೂ ಅಂಥವರಿಗೆ ತನ್ನೊಂದಿಗೆ ಮಾತಾಡಲು ಕೇವಲ ಇಪ್ಪತ್ತು ನಿಮಿಷ ಕಾಲಾವಕಾಶವನ್ನಷ್ಟೇ ನೀಡುತ್ತಾರೆ. ಓಂಪ್ರಕಾಶ್ ಅವರಿಗೂ ನಿಗಧಿಯಾಗಿದ್ದದ್ದು ಅಷ್ಟೇ ಕಾಲಾವಕಾಶ. ಅದರಲ್ಲಿಯೇ ಓಂ ಕಥೆ ಹೇಳಿದ್ದರಂತೆ. ಹತ್ತು ನಿಮಿಷಕ್ಕೆಲ್ಲ ಕಥೆ ನಿಲ್ಲಿಸುವಂತೆ ಹೇಳಿ ಟೀ ತರಿಸಿದ ರವಿ ಅಖಂಡ ಎರಡು ಘಂಟೆಗಳ ಕಾಲ ಓಂಪ್ರಕಾಶ್ ಅವರಿಂದ ಕಥೆ ಕೇಳಿದ್ದರಂತೆ!

ತಮಿಳಿಗರಲ್ಲದಿದ್ದರೂ ಇಲ್ಲಿನ ನೇಟಿವಿಟಿಯನ್ನು ಇಷ್ಟು ಚೆಂದಗೆ ಅರ್ಥ ಮಾಡಿಕೊಂಡಿದ್ದೀರಲ್ಲಾ ಎಂಬ ಮೆಚ್ಚುಗೆ ಸೂಚಿಸಿ ಕಥೆಯನ್ನು ಒಪ್ಪಿಕೊಂಡ ರವಿ ಓಂ ಕೇಳಿದ್ದ ತಮಿಳಿನ ಸ್ಟಾರ್ ಹೀರೋಗೂ ಓಕೆ ಅಂದಿದ್ದರಂತೆ. ತಮ್ಮ ಪರ್ಸನಲ್ ನಂಬರ್ ಕೊಟ್ಟು ಯಾವಗ ಬೇಕಾದರೂ ಭೇಟಿಯಾಗುವಂತೆ ಹೇಳಿದ್ದರಂತೆ.

ಆದರೆ ಆ ಕಾಲದಲ್ಲಿ ಓಂಪ್ರಕಾಶ್ ರಾವ್ ಅಯ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದರಂತೆ. ಸಾಹುಕಾರ, ಕಲಾಸಿಪಾಳ್ಯ ಮತ್ತು ಅಯ್ಯ ಚಿತ್ರಗಳು ಒಟ್ಟೊಟ್ಟಿಗೇ ಚಿತ್ರೀಕರಣಗೊಳ್ಳುತ್ತಿದ್ದುದರಿಂದ ತಮಿಳಿನ ಖ್ಯಾತ ನಿರ್ಮಾಪಕ ರವಿ ಅವರೇ ಖುದ್ದು ಫೋನು ಮಾಡಿದರೂ ಓಂಪ್ರಕಾಶ್ ಏನೂ ಮಾಡದ ಸ್ಥಿತಿ ತಲುಪಿದ್ದರಂತೆ. ಒಂದಷ್ಟು ಕಾಲ ನೋಡಿದ ರವಿ ನಂತರ ಫೋನ್ ಮಾಡೋದನ್ನೂ ನಿಲ್ಲಿಸುವ ಮೂಲಕ ಓಂಪ್ರಕಾಶ್ ರಾವ್ ತಮಿಳು ಎಂಟ್ರಿಗೆ ಬ್ರೇಕು ಬಿದ್ದಿತಂತೆ!

Leave a Reply

Your email address will not be published. Required fields are marked *


CAPTCHA Image
Reload Image