One N Only Exclusive Cine Portal

ಸಾಹಸ ಸಿಂಹ ಹೇಳಿದ ಕಥೆಯೇ `ಪಡ್ಡೆಹುಲಿ’ಯಾಯ್ತು!

ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಮೊದಲ ಚಿತ್ರ ಪಡ್ಡೆಹುಲಿಯ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ. ಭಾರತಿ ವಿಷ್ಣುವರ್ಧನ್ ಮತ್ತು ಕೀರ್ತಿ ಅವರುಗಳು ಜ್ಯೋತಿ ಬೆಳಗುವ ಮೂಲಕ ಪಡ್ಡೆಹುಲಿ ಚಿತ್ರಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಕ್ಲ್ಯಾಪ್ ಮಾಡಿ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಪಡ್ಡೆಹುಲಿ ಚಿತ್ರಕ್ಕೆ ಚಾನೆ ನೀಡಿದ್ದಾರೆ. ವಾರದ ಹಿಂದಷ್ಟೇ ಫಸ್ಟ್ ಲುಕ್ ಪೋಸ್ಟರ್ ಮೂಲಕ ಸಿನಿಮಾ ಪ್ರೇಮಿಗಳೆಲ್ಲರ ಗಮನ ಸೆಳೆದಿದ್ದ ಪಡ್ಡೆಹುಲಿಯ ಅಬ್ಬರ ಈ ಮೂಲಕ ಶಾಸ್ತ್ರೋಕ್ತವಾಗಿಯೇ ಆರಂಭವಾಗಿದೆ.


ಇದೇ ಸಂದರ್ಭದಲ್ಲಿ ನಿರ್ಮಾಪಕರಾದ ಕೆ ಮಂಜು ಅವರು ಈ ಕಥೆ ಹುಟ್ಟಿದ್ದರ ಹಿಂದಿನ ರಸವತ್ತಾದ ಕಥೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಅಂದಹಾಗೆ ಶ್ರೇಯಸ್ನನ್ನು ಹಾಕಿಕೊಂಡು ಚಿತ್ರ ಮಾಡಲು ಬಹು ಕಾಲದಿಂದಲೂ ಒಂದಷ್ಟು ಮಂದಿ ಪ್ರಪೋಸಲ್ ಮುಂದಿಟ್ಟಿದ್ದರಂತೆ. ಆದರೆ ತಮ್ಮ ಮಗ ಶ್ರೇಯಸ್ ಸರ್ವ ರೀತಿಯಿಂದಲೂ ಹೀರೋ ಆಗಲು ಫಿಟ್ ಅನ್ನಿಸಿದಾಗ ಮಾತ್ರವೇ ಅದಕ್ಕೆ ಒಪ್ಪಿಗೆ ಸೂಚಿಸೋ ನಿರ್ಧಾರವನ್ನು ಮಂಜು ಹೊರ ಹಾಕಿದ್ದರಂತೆ.


ಆ ಸಂದರ್ಭದಲ್ಲಿ ಬರೋಬ್ಬರಿ ತೊಂಬತ್ತು ಕೆಜಿ ಇದ್ದ ಶ್ರೇಯಸ್ ಬಾಡಿ ಫಿಟ್ ಮಾಡಿಕೊಂಡು ನಟನೆ, ಫೈಟಿಂಗ್ ಮುಂತಾದವುಗಳಲ್ಲಿ ತರಬೇತಿ ಪಡೆದು ಬಂದ ನಂತರ ಮಂಜು ಒಪ್ಪಿಗೆ ಸೂಚಿಸುವ ಮನಸು ಮಾಡಿದ್ದರಂತೆ. ಆ ಸಂದರ್ಭದಲ್ಲಿ ಮಂಜು ಅವರಿಗೆ ತಮಿಳಿನ ಪಿಚ್ಚಕಾರನ್ ಚಿತ್ರವನ್ನು ರೀಮೇಕ್ ಮಾಡುವ ಉದ್ದೇಶವಿತ್ತಾದರೂ ಆರಂಭದ ಚಿತ್ರವೇ ರೀಮೇಕ್ ಮಾಡಲು ಶ್ರೇಯಸ್ ಒಪ್ಪಿಕೊಳ್ಳಲಿಲ್ಲವಂತೆ. ಆ ಸಂದರ್ಭದಲ್ಲಿ ನಿರ್ಮಾಪಕ ಮಂಜು ಅವರಿಗೆ ನೆನಪಾದದ್ದು ಹಿಂದೆ ಸಾಹಸಸಿಂಹ ವಿಷ್ಣವರ್ಧನ್ ಹೇಳಿದ್ದ ಕಾಲೇಜು ದಿನಗಳದ್ದೊಂದು ಕಥಾ ಎಳೆ. ಅದನ್ನೇ ನಿರ್ದೇಶಕ ಗುರುದೇಶಪಾಂಡೆ ಅವರಿಗೆ ಹೇಳಿದ್ದಾರೆ. ಆ ಕಥಾ ಎಳೆಯನ್ನು ಗುರುದೇಶಪಾಂಡೆಯವರು ಈ ದಿನಮಾನಕ್ಕೆ ಪಕ್ಕಾ ಸೂಟ್ ಆಗುವಂತೆ ರೂಪಿಸಿದ್ದಾರೆ. ಇದೆಲ್ಲದರ ಭಾಗವಾಗಿ ಪಡ್ಡೆಹುಲಿ ಚಿತ್ರ ಜೀವತಳೆದಿದೆ!

Leave a Reply

Your email address will not be published. Required fields are marked *


CAPTCHA Image
Reload Image