One N Only Exclusive Cine Portal

‘ಅಲ್ಲಿ ಮನುಷ್ಯರೇ ಇರಲಿಲ್ಲವಾ… ಇದೇನಿದು ಎಲ್ಲ ಕಪಿಮಯ’ ಅಂದರು ಜಗ್ಗೇಶ್!

ಸಿಂಗಾಪೂರ್‌ನಂಥಾ ಪ್ರದೇಶಕ್ಕೆ ಪ್ರವಾಸ ಹೋದಾಗ ಅಲ್ಲಿ ನೋಡಬೇಕಾದ ಸ್ಥಳಗಳು, ಮಾಡಬೇಕಾದ ಕೆಲಸ ಕಾರ್ಯಗಳಿಗೊಂದು ಸಿದ್ಧಸೂತ್ರಗಳಿರುತ್ತವೆ. ಬಹುಶಃ ಅದನ್ನು ಬ್ರೇಕ್ ಮಾಡಿ ಬೇರ‍್ಯಾವುದರತ್ತಲೋ ದೃಷ್ಟಿ ನೆಟ್ಟು ಹುಡುಕಾಡಿದರೆ ಮಾತ್ರವೇ ನವರಸನಾಯಕ ಜಗ್ಗೇಶ್ ಮಡದಿ ಪರಿಮಳಾ ಜಗ್ಗೇಶ್‌ರಿಗೆ ಸಿಕ್ಕಂಥಾ ದಿವ್ಯಾನುಭೂತಿ ಸಿಗಲು ಸಾಧ್ಯವೇನೋ…

ಪರಿಮಳಾ ಜಗ್ಗೇಶ್ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಶಿಷ್ಟ ಬಗೆಯ ಪ್ರಾಣಿಗಳಿಗೆ ಆಹಾರ ಕೊಡುತ್ತಾ, ಪುಟ್ ಪುಟ್ಟವುಗಳಿಗೆ ಬಾಟಲಿಯಲ್ಲಿ ಹಾಲು ಕುಡಿಸುವ ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದರು. ಜನ್ಮಾಂತರಗಳಿಂದ ಪರಿಚಯವಿದೆಯೇನೋ ಎಂಬಂತೆ ಪರಿಮಳಾ ಅವರು ಪ್ರಾಣಿಗಳ ಒಡನಾಟದಲ್ಲಿರುವ ಇಂಥಾ ಫೋಟೋಗಳು ಎಲ್ಲರ ಅಚ್ಚರಿಗೆ ಕಾರಣವಾಗಿದ್ದವು.

ಅಂದಹಾಗೆ, ಇದು ಪರಿಮಳಾ ಜಗ್ಗೇಶ್ ಅವರು ಸಂಬಂಧಿಕರ ಜೊತೆ ಸಿಂಗಾಪುರಕ್ಕೆ ತೆರಳಿದ್ದಾಗಿನ ಚಿತ್ರಗಳಂತೆ. ಪರಿಮಳಾ ಅವರಿಗೆ ಆರಂಭದಿಂದಲೂ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಯಾವುದೇ ದೇಶಕ್ಕೆ ಹೋದರೂ ವಿಶಿಷ್ಟ ರೀತಿಯ ಪ್ರಾಣಿ ಪಕ್ಷಿಗಳಿರೋ ಪ್ರದೇಶಗಳನ್ನೇ ಅವರು ಮೊದಲು ಹುಡುಕುತ್ತಿದ್ದರಂತೆ. ಆದರೆ ಜ಼ೂನಂಥ ಬಲವಂತದಿಂದ ಪ್ರಾಣಿಗಳನ್ನು ಕೂಡಿ ಹಾಕಲಾಗಿರೋ ಸ್ಥಳಗಳೆಂದರೆ ಅವರಿಗೆ ಏನೋ ಕಸಿವಿಸಿ. ಹೀಗಾದಾಗೆಲ್ಲ ಪ್ರಾಣಿಗಳು ಸ್ವಚ್ಛಂದವಾಗಿ ಓಡಾಡುತ್ತಾ ಕೈಗೆ ಸಿಗುವ ಸ್ಥಳಗಳ ಹುಡುಕಾಟದಲ್ಲಿದ್ದಾಗ ಪರಿಮಳಾರ ಗಮನ ಸೆಳೆದದ್ದು ಸಿಂಗಾಪುರದ ಸಿಲಂಗೂರ್ ಎಂಬ ಪ್ರದೇಶ!

ಸಿಲಂಗೂರ್ ಏರಿಯಾದಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಅಪರೂಪವಾಗಿರುವ ಸಿಲ್ವರ್ ಲೀಫ್ ಮಂಕೀಸ್ ಇವೆ. ಅವುಗಳನ್ನು ಲಾಂಗೂರ‍್ಸ್ ಎಂದೂ ಕರೆಯಲಾಗುತ್ತದೆ. ನಮ್ಮಲ್ಲಿನ ಕಪಿಗಳ ಪ್ರಬೇಧದವುಗಳೇ ಆಗಿದ್ದರೂ ಭಿನ್ನವಾದ ಗುಣಲಕ್ಷಣಗಳನ್ನು ಹೊಂದಿರುವ ಲಾಂಗೂರ‍್ಸ್ ಸಿಲಂಗೂರ್ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿವೆಯಂತೆ. ಅವುಗಳಿಗೆ ಯಾವ ನಿರ್ಭಂಧವೂ ಇಲ್ಲ. ಮನುಷ್ಯರ ಜೊತೆ ಅವು ಎಷ್ಟು ಚೆಂದಗೆ ಹೊಂದಿಕೊಂಡಿವೆಯೆಂದರೆ, ಯಾರೇ ಈ ಪ್ರದೇಶಕ್ಕೆ ಭೇಟಿ ನೀಡಿದರೂ ಅವು ಚಿಕ್ಕ ಮಕ್ಕಳ ರೀತಿಯಲ್ಲೇ ಮಡಿಲೇರಿ ಕೂರುತ್ತವೆ. ಮೈ ತುಂಬ ಹರಿದಾಡುತ್ತವೆ.

ಇಂಥಾ ಲಂಗೂರ‍್ಸ್ ಆಹಾರ ಕೊಟ್ಟರೆ ಖುಷಿಯಾಗಿ ತಿನ್ನುತ್ತವಂತೆ. ಆಹಾರವನ್ನು ತನಗೇ ಕೊಡುವಂತೆಯೂ ಲಾಂಗೂರ‍್ಸ್ ತಮ್ಮದೇ ರೀತಿಯಲ್ಲಿ ಓಲೈಸುತ್ತವಂತೆ. ಇನ್ನೊಂದು ವಿಶೇಷವೆಂದರೆ, ಇಲ್ಲಿ ನೂರಾರು ಸಂಖ್ಯೆಯಲ್ಲಿ ಈ ಪ್ರಾಣಿಗಳಿವೆ. ಆದರೆ ಆಹಾರಕ್ಕಾಗಿ ಅವು ಕಿತ್ತಾಡುವುದಿಲ್ಲ. ಬೇರೆಯವರ ಆಹಾರವನ್ನು ಕಿತ್ತುಕೊಳ್ಳುವುದೂ ಇಲ್ಲವಂತೆ. ಈ ನಿಟ್ಟಿನಲ್ಲಿಯೂ ಇವು ಭಾರತದ ಮಂಗಗಳಿಗಿಂತ ಭಿನ್ನ!

ಹೀಗೆ ಸಿಲಂಗೂರಿನ ಲಾಂಗೂರ‍್ಸ್ ಜೊತೆ ಒಂದಷ್ಟು ಕಾಲ ಕಲೆತು ಖುಷಿ ಪಟ್ಟಿರುವ ಪರಿಮಳಾ ಜಗ್ಗೇಶ್ ಅವರು ಈ ಪ್ರಾಣಿಗಳ ಬಗೆಗಿನ ಇಷ್ಟೆಲ್ಲಾ ಪೂರ್ವಾಪರಗಳನ್ನು ಕಲೆ ಹಾಕಿದ್ದಾರೆ. ಈ ಮುದ್ದಾದ ಪ್ರಾಣಿಗಳು ಪರಿಮಳಾ ಅವರಿಗೆ ಅದೆಷ್ಟು ಇಷ್ಟವಾಗಿದೆಯೆಂದರೆ, ಅವರ ಈ ಬಾರಿಯ ಸಿಂಗಾಪುರ್ ಪ್ರವಾಸವೆಲ್ಲ ಲಾಂಗೂರ‍್ಸ್ ಮಯವಾಗಿದೆ. ಇದನ್ನು ಕಂಡು ಜಗ್ಗೇಶ್ ‘ಸಿಂಗಪೂರದಲ್ಲಿ ಮನುಷ್ಯರೇ ಇರಲಿಲ್ಲವಾ… ಇದೇನಿದು ಎಲ್ಲ ಕಪಿಮಯ’ ಅಂತ ಕಿಚಾಯಿಸಿದ್ದರಂತೆ!

ಒಟ್ಟಾರೆಯಾಗಿ ಪರಿಮಳಾ ಜಗ್ಗೇಶ್ ಲಾಂಗೂರ‍್ಸ್ ಸಾಹಚರ್ಯದಿಂದ ಖುಷಿಗೊಂಡಿದ್ದಾರೆ. ಆ ಒಡನಾಟದ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರು ಮಾಡಿ ಖುಷಿ ಹಂಚಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image