One N Only Exclusive Cine Portal

ಪಿಆರ್‌ಓ ಸುಧೀಂದ್ರ ವೆಂಕಟೇಶ್ ಪುತ್ರನ ಕಕಾಕಿ!

ಕನ್ನಡ ಸಿನಿಮಾರಂಗದ ಖ್ಯಾತ ಪ್ರಚಾರಕರ್ತರಾದ ಸುಧೀಂದ್ರ ವೆಂಕಟೇಶ್ ಅವರ ಮಗ ಕಿರುಚಿತ್ರವೊಂದರ ಮೂಲಕ ಎಂಟ್ರಿ ಕೊಡಲು ತಯಾರಾಗಿದ್ದಾನೆ. `ಕಕಾಕಿ’- ಕಲಿಯುಗದ ಕಾಲೇಜ್ ಕಿಲಾಡಿಗಳು ಎಂಬ ಕಿರುಚಿತ್ರವೊಂದರ ಮೂಲಕ ಕಾಲೇಜು ಹುಡುಗರ ಬದುಕಿನ ವಿವಿಧ ಮಜಲುಗಳನ್ನು ಒಂದೊಳ್ಳೆ ಸಂದೇಶದ ಜೊತೆ ಅನಾವರಣಗೊಳಿಸಲು ವೆಂಕಟೇಶ್ ಪುತ್ರ ಪವನ್ ಅಣಿಗೊಂಡಿದ್ದಾನೆ.

ಅಂದಹಾಗೆ, ಈ ಕಿರುಚಿತ್ರಕ್ಕೆ ಸಿನಿಮಾ ಪತ್ರಕರ್ತ ವಿನಾಯಕ ರಾಮ್ ಕಲಗಾರು ಸಂಭಾಷಣೆ ಬರೆದಿದ್ದಾರೆ. ಮಲ್ಲೇಶ್ ಬರೆದಿರೋ ಕಥೆಯನ್ನು ವೆಂಕಟೇಶ್ ಅವರ ಪುತ್ರ ಪವನ್ ನಿರ್ದೇಶನ ಮಾಡಲಿದ್ದಾನೆ. ಈ ಕಿರುಚಿತ್ರ ದಿವಂಗತ ಡಿ.ವಿ ಸುಧೀಂದ್ರ ಅವರ ಆಶೀರ್ವಾದದೊಂದಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಲಾಂಛನದಡಿ ಮೂಡಿ ಬರಲಿದೆ.

ಪವನ್ ಕಾಲೇಜು ವಿದ್ಯಾರ್ಥಿ. ಆತ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಪಿಯುಸಿ ಮಾಡುತ್ತಿದ್ದಾನೆ. ಬಾಲ್ಯದಿಂದಲೂ ಸಿನಿಮಾ ವಾತಾವರಣದಲ್ಲಿಯೇ ಬೆಳೆದು, ನಿರ್ದೇಶಕನಾಗಬೇಕೆಂಬ ಆಸಕ್ತಿ ಹೊಂದಿದ್ದ ಪವನ್ `ಕಕಾಕಿ’ ಕಿರುಚಿತ್ರದ ಮೂಲಕ ತನ್ನ ಕನಸಿನ ಹಾದಿಯಲ್ಲೊಂದು ಹೆಜ್ಜೆ ಇಟ್ಟಿದ್ದಾನೆ. ಇದಕ್ಕೆ ಅನುಭವಿ ಸಿನಿಮಾ ಪತ್ರಕರ್ತ ವಿನಾಯಕರಾಮ್ ಕಲಗಾರ್ ಅವರೂ ಸಾಥ್ ನೀಡಿದ್ದಾರೆ.

ಆ ಹುಡುಗರನ್ನೆಲ್ಲ ತಂದೆ ತಾಯಿ ಭಾರೀ ಕನಸಿಟ್ಟುಕೊಂಡು ಪ್ರತಿಷ್ಠಿತವಾದ ಕಾಲೇಜಿಗೆ ಸೇರಿಸುತ್ತಾರೆ. ಆದರೆ ಮನೆಯವರ ಕಣ್ಗಾವಲಿನಾಚೆಗೆ ಮಜಾ ಉಡಾಯಿಸಬೇಕೆಂಬ ಮನಸ್ಥಿತಿಯ ಆ ಹುಡುಗರೆಲ್ಲ ಮನೆಯಿಂದ ಕಾಲೇಜು ದೂರವೆಂಬ ನೆಪ ಹೇಳಿ ಹಾಸ್ಟೆಲಿನಲ್ಲಿ ಉಳಿದುಕೊಳ್ಳುತ್ತಾರೆ. ಅಲ್ಲಿ ಕುಡಿತ, ಸಿಗರೇಟುಗಳ ಸಾಹಚರ್ಯವೂ ಅಂಟಿಕೊಳ್ಳುತ್ತೆ. ಇದೆಲ್ಲದರ ನಡುವೆ ಆ ಹುಡುಗರ ಬದುಕೇನಾಗುತ್ತೆ, ಸತ್ಯದ ಸಾಕ್ಷಾತ್ಕಾರವಾಗಿ ಓದಿನತ್ತ ಮರಳುತ್ತಾರಾ? ಚಟಗಳಲ್ಲಿಯೇ ಲೀನವಾಗುತ್ತಾರಾ? ಎಂಬ ಯುವ ಸಮೂಹದ ರೋಚಕ ಕಥೆಯೊಂದರ ಮೂಲಕ ಈ ಕಿರು ಚಿತ್ರ ತಯಾರಾಗುತ್ತಿದೆ. ಪವನ್ ಡಿ.ವಿ, ದರ್ಶನ್, ಮಲ್ಲೇಶ್, ಶ್ರೇಯಸ್ ಸೇರಿಕೊಂಡು ಈ ಕಿರು ಚಿತ್ರವನ್ನು ರೂಪಿಸಲು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image