Connect with us

ಸಿನಿಮಾ ಬಗ್ಗೆ

ಪೇರನ್ಬು ಎಂಬ ‘ದೇಹ ಪ್ರಕೃತಿ’ಯ ಕತೆ

Published

on

” ನೀನು ಚಂದಿರನ ಭಾಷೆಯಲ್ಲಿ ಹಾಡು ಗುನುಗಿದರೆ ನಾನು ಭೂಮಿಯ ಭಾಷೆಯಲ್ಲಿ ಹಾಡಲೇ ಮಗಳೇ..?”
ಅಮ್ಮನಿಲ್ಲದ 14 ವರ್ಷದ ಬುದ್ಧಿಮಾಂದ್ಯ ಮಗಳಿಗೆ ಅಪ್ಪ ಲಾಲಿ ಹಾಡು ಹೇಳುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಮಾತು ಬಾರದ, ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲದ ದೇವರ ಮಗುವನ್ನು ಪೋಷಿಸುವ ಅಕಾಲಿಕ ಹೊಣೆ ಅಪ್ಪನ ಹೆಗಲಿಗೆ ಬೀಳುತ್ತದೆ. ಅದಕ್ಕಾಗಿ ದುಬೈನಿಂದ ಭಾರತಕ್ಕೆ ಬಂದು ಮಗಳನ್ನು ಸೇರಿಕೊಳ್ಳುತ್ತಾನೆ. ಎಲ್ಲರಿಂದಲೂ ತಿರಸ್ಕಾರಕ್ಕೊಳಗಾದ ಮಗುವನ್ನು ಪ್ರಪಂಚದ ಪರಿವೆಗೆ ತಾಕದಂತೆ ಪ್ರಕೃತಿಯ ನಡುವೆ ಕರೆದುಕೊಂಡು ಹೊರಡುತ್ತಾನೆ.

ಮಲೆನಾಡಿನ ನಡುವಿನ ಸರೋವರದ ಅಂಚಿನಲ್ಲೊಂದು ಪುಟ್ಟ ಮನೆ. ಕಿವಿಗಿಚ್ಚುವ ಚಿಲಿಪಿಲಿ ಹಕ್ಕಿಗಳ ಹಾಡು. ಅಪ್ಪ ತನ್ನ ಮಗಳನ್ನು ಪೊರೆಯುವುದರಲ್ಲೇ ತನ್ನೆಲ್ಲ ಸಂತಸವನ್ನು ಕಂಡುಕೊಳ್ಳುತ್ತಾನೆ. ಸುಂದರ, ಮುಗ್ಧ ಲೋಕದಲ್ಲಿ ಎರಡು ಜೀವಗಳು ಉರಿಯುವಾಗ ಅಪ್ಪನಿಗೆ ವಿಕಲಚೇತನ ಮಗುವಿನ ‘ದೇಹ ಪ್ರಕೃತಿ’ ಅನೇಕ ಸವಾಲುಗಳನ್ನು ತಂದು ನಿಲ್ಲಿಸಿಬಿಡುತ್ತದೆ. ಅಪ್ಪ ಹೈರಾಣಾಗಿ ಹೋಗುತ್ತಾನೆ. ಸಿನಿಮಾ ಆರಂಭದಲ್ಲಿ..
” ಸಮುದ್ರದಲ್ಲಿ ದಾರಿ ಕಾಣದೆ ಮುಳುಗುವಾಗ
ದ್ವೀಪದಂತೆ ನೀ ಬಂದೆ..” ಎಂದು ಲಾಲಿಪದ ಹಾಡುವ ಅಪ್ಪ ಕೊನೆಯಲ್ಲಿ ಮಗಳೊಂದಿಗೆ ತಾನೂ ಆತ್ಮಾಹುತಿ ಮಾಡಿಕೊಳ್ಳಲು ಸಮುದ್ರದ ಮುಂದೆ ನಿಂತು ಬಿಡುತ್ತಾನೆ.!
ನಂತರ..?

ಒಂದು ಸುಂದರ, ಸಂಕೀರ್ಣ ಸಿನಿಮಾ perenbu ನೀವು ಅನುಭವಿಸಲೇಬೇಕಾದ ದೃಶ್ಯ ಕಾವ್ಯ . ಅಪ್ಪ- ಮಗಳು ಎಂಬ ಭಾವುಕ ಲೋಕದ ಕುರಿತು ಪ್ರಪಂಚಕ್ಕೆ ಹೇಳಿಕೊಡಬೇಕೇ..! ಮೋಹನ್ ಲಾಲ್ ಅಭಿಮಾನಿಯಾದ ನನಗೆ ಮುಮ್ಮುಟ್ಟಿ ಮೊದಲ ಸಲ ಶ್ರೇಷ್ಠ ನಟರಾಗಿ ಇಷ್ಟವಾಗಿದ್ದಾರೆ. ಮುಮ್ಮುಟ್ಟಿ ಸಿನೆಮಾದಲ್ಲಿ ನಟಿಸಿಲ್ಲ.. ಬದಲಾಗಿ ಅಪ್ಪನ ಪಾತ್ರವಾಗಿ ಹೋಗಿದ್ದಾರೆ..! ಸಿನಿಮಾದಲ್ಲಿನ ಪಾತ್ರಗಳು ಸ್ವಾಭಾವಿಕವಾಗಿ ಕಾಣುವಂತೆ ಚಿತ್ರಿಸಿದ್ದಾರೆ ನಿರ್ದೇಶಕ ರಾಮ್. ಯುವನ್ ಶಂಕರ್ ಸಂಗೀತ ಈ ಸಿನೆಮಾದಲ್ಲಿ ಕಾಡಿನೊಳಗಿನ ಚಿಲಿಪಿಲಿ..! ತೇನಿ ಈಶ್ವರ್ ಕಲಾತ್ಮಕ ಕುಸುರಿ ಕ್ಯಾಮರಾದಲ್ಲಿ ಹೆಣೆದಿದ್ದಾರೆ. ” ಅನ್ಬೇ ಅನ್ಬಿನ್ …” ಹಾಡು ವಿಜಯ್ ಜೇಸುದಾಸ್ ದನಿಯಲ್ಲಿ ಪದೇಪದೇ ಕೇಳಿಸಿಕೊಳ್ಳುವಂತೆ ಇದೆ. ಚಿತ್ರದ ಆರಂಭದಿಂದ ಅಂತ್ಯದವರೆಗೆ ‘ ಪ್ರಕೃತಿ’ ಯನ್ನು adjective ಆಗಿ ತನ್ನ ಹಾಗೂ ಮಗಳ ಕತೆ ಹೇಳುವ ನಾಯಕ, ಮಗಳ ದೇಹ ಪ್ರಕೃತಿಯ ಜಂಜಾಟದಿಂದ ನರಳುವ ವಿಷಯ ನಮಗೆ ಅರ್ಥವಾಗಿ ಹೋಗುತ್ತದೆ. ತಾಯಿಯೊಂದಿಗೆ ಹೇಳಿಕೊಳ್ಳ ಬಹುದಾದ ಖಾಸಗಿತನದ ವಿಷಯಗಳನ್ನು ಹೇಳಿಕೊಳ್ಳಲಾಗದ, ಮಾತು ಬಾರದ ಮಗುವಿನ ಸಂಕಟವನ್ನು ಅಪ್ಪ ಅರ್ಥ ಮಾಡಿಕೊಳ್ಳಲು ಹೊರಡುವ ಜರ್ನಿ ಕಠಿಣವಾಗುತ್ತದೆ.

 

ಇಂತಹ ಸಂಕೀರ್ಣ ವಿಷಯವನ್ನು ಹೇಳುವ perenbu ಕಮಲ್ ರ ‘ಮಹಾನದಿ’, ಅಂಬರೀಶರ ‘ಮೌನರಾಗ’, ವಿಷ್ಣುರ ‘ಲಾಲಿ’, ರೈ ರ ‘ನಾನು ನನ್ನ ಕನಸು’, ವಿಕ್ರಮ್ ರ ‘ದೈವ ತಿರುಮಗನ್’ ಸಾಲಿನಲ್ಲಿ ನಿಲ್ಲುವ ದೃಶ್ಯ ಕಾವ್ಯ. Oscar ಚರಿತ್ರೆಯಲ್ಲಿ ಸೇರ ಬಹುದಾದಂತಹ masterpiece. Must watch movie.

ಸಿನಿಮಾ ಬಗ್ಗೆ

ವಿಚಿತ್ರ ಜಗತ್ತಿಗೆ ಕರೆದೊಯ್ಯುವ ಸೂಪರ್ ಡಿಲಕ್ಸ್!

Published

on

ಕಥೆ-1

ಪುಟ್ಟ ಮಗು, ಸುಂದರವಾದ ಹೆಂಡತಿ, ತುಂಬು ಕುಟುಂಬ – ಎಲ್ಲವನ್ನೂ ಬಿಟ್ಟು ಓಡಿ ಹೋಗಿ ಮುಂಬೈ ಸೇರಿದವನು. ಏಳು ವರ್ಷಗಳ ನಂತರ ಮತ್ತೆ ಮನೆಗೆ ಆಗಮಿಸುತ್ತಿದ್ದಾನೆ. ಮನೆಮಂದಿಯೆಲ್ಲಾ ಬಂದವನನ್ನು ಆರತಿ ಮಾಡಿ ಒಳಗಡೆ ಕರೆಡುಕೊಳ್ಳಲು ಕಾಯುತ್ತಾ ನಿಂತಿದ್ದಾರೆ. ಈಗ ಬಂತು ಆಗ ಬಂತು ಅಂತಾ ಕಾದವರ ಮುಂದೆ ಕಡೆಗೂ ಟ್ಯಾಕ್ಸಿ ಬಂದು ನಿಲ್ಲುತ್ತದೆ. ‘ಅಪ್ಪ ಬರ್ತಾರೆ, ಗಂಡ ಬರ್ತಾನೆ ಅಂತಾ ಕಾದವರ ಎದುರು ಪ್ರತ್ಯಕ್ಷವಾಗೋದು ಮೈತುಂಬ ಸೀರೆಯುಟ್ಟ, ಒಪ್ಪವಾಗಿ ಬಾಚಿದ ತಲೆಯ, ಹಣೆ ಕುಂಕುಮ, ಬಣ್ಣ ಮೆತ್ತಿದ ತುಟಿಗಳ ದೊಡ್ಡ ಗಾತ್ರದ ಹೆಂಗಸು!

ಊರುಬಿಟ್ಟವನು ಲಿಂಗಪರಿವರ್ತನೆ ಮಾಡಿಸಿಕೊಂಡು ಮಂಗಳಮುಖಿಯಾಗಿರುತ್ತಾನೆ. ಹಾಗೆ ಮಾರ್ಪಾಟು ಹೊಂದಿದವನು ತನ್ನವರನ್ನು ನೋಡಲು ಬಂದು ನಿಂತಿರುತ್ತಾನೆ.

ಕಥೆ-2

ಅವಳು ಮನೆಯವರ ಇಷ್ಟದಂತೆ ಮದುವೆಯಾದ ಹುಡುಗಿ. ಗಂಡ ಸಿನಿಮಾ ಹೀರೋ ಆಗಬಯಸಿದವನು. ನಟನೆ ಕಲಿಕೆಗಾಗಿ ಎರಡು ಗಂಟೆ ಹೊರಹೋಗಿರುತ್ತಾನೆ. ಆ ಸಂದರ್ಭದಲ್ಲೇ ಹುಡುಗಿಯ ಮಾಜಿ ಪ್ರಿಯಕರ ಕಾಲ್ ಮಾಡುತ್ತಾನೆ. ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡವನಂತೆ ಮಾತಾಡುತ್ತಾನೆ. ಎಷ್ಟಾದರೂ ಕಾಲೇಜು ಲವ್ವು, ಹಳೆಯದೆಲ್ಲಾ ನೆನಪಾದಂತಾಗಿ “ಚಿಂತೆ ಮಾಡಬೇಡ. ನನ್ನ ಮನೆಗೆ ಬಾ.. ಗಂಡ ಹೊರಗೆ ಹೋಗಿದ್ದಾನೆ. ಅವನು ಬರುವಷ್ಟರಲ್ಲಿ ನಿನ್ನನ್ನು ಸಮಾಧಾನಿಸಿ ಬಿಡುತ್ತೇನೆ ಎಂದು ಕರೆಯುತ್ತಾಳೆ. ಇಷ್ಟೆಲ್ಲಾ ಫೋನ್ ಸಂಭಾಷಣೆಯ ನಂತರ ದೃಶ್ಯ ಶುರುವಾಗುತ್ತದ. ಮಂಚದ ಮೇಲಿನ ನರಳಾಟದ ಸದ್ದು ನಿಲ್ಲುತ್ತದೆ.  ಸಮೃದ್ಧವಾದ್ದೊಂದು ಸಂಭೋಗದ ಸುಖ ನೀಡಿದ ತೃಪ್ತಿ ಈಕೆಯದ್ದು. ಮನೋವ್ಯಾಕುಲದಿಂದ ಕಂಗಾಲಾಗಿದ್ದವನು ಹಾಗೇ ಹಾಸಿಗೆಗೆ ಒರಗುತ್ತಾನೆ. ಇವಳು ಮತ್ತೆ ಎಬ್ಬಿಸೋ ಪ್ರಯತ್ನ ಮಾಡುತ್ತಾಳೆ. ಅತಿಯಾದ ದುಃಖದಲ್ಲಿದ್ದವನಿಗೆ ಸುಖದ ತೀವ್ರತೆ ತಡೆದುಕೊಳ್ಳಲು ಸಾಧ್ಯವಾಗದ ಕಾರಣವೋ ಏನೋ? ಚೆಲ್ಲಾಟ ಮುಗಿಸಿದವನು ಹಾಗೇ ಉಸಿರುಚೆಲ್ಲಿ ಮತ್ತೆಂದೂ ಅಲ್ಲಾಡದಂತೆ ಮಲಗಿಬಿಟ್ಟಿರುತ್ತಾನೆ. ಅಪಾರ್ಟ್‌ಮೆಂಟಿನ ಆ ರೂಮಿನಿಂದ ಇಣುಕಿದರೆ ಗಂಡ ಕ್ಲಾಸು ಮುಗಿಸಿ ಮನೆಗೆ ವಾಪಾಸು ಬರುತ್ತಿರುತ್ತಾನೆ…

ಕಥೆ-3

ಸ್ಲಂನಂಥಾ ಪ್ರದೇಶ. ನಾಲ್ಕು ಜನ ಹುಡುಗರು ಶಾಲೆಯ ನೆಪ ಹೇಳಿ ಮತ್ತೊಬ್ಬ ಗೆಳೆಯನ ಮನೆಯಲ್ಲಿ ಪಾರ್ಟಿ ಅರೇಂಜು ಮಾಡಿಕೊಳ್ಳುತ್ತಾರೆ. ದೇವರ ಸಿನಿಮಾ ನೋಡೋದು ಆ ಕೂಟದ ಮುಖ್ಯ ಉದ್ದೇಶ. ಮುಂಬಾಗಿಲಿನಿಂದ ಬೀಗ ಹಾಕಿ, ಕೀಲಿಯನ್ನು ಪಕ್ಕದ ಮನೆಗೆ ಕೊಟ್ಟು, ಬ್ಯಾಕ್ ಡೋರಿಂದ ಎಂಟ್ರಿ ಕೊಟ್ಟು ಮತ್ತೆ ಎಲ್ಲರೂ ಮನೆ ಒಳ ಸೇರುತ್ತಾರೆ. ಬರೋದಾರಿಯಲ್ಲಿ ಸಿಡಿ ಅಂಗಡಿಯಿಂದ ದೇಹವಿಜ್ಞಾನಕ್ಕೆ ಸಂಬಂಧಿಸಿದ ಸಿಡಿಯನ್ನು ತಂದಿರುತ್ತಾರೆ. ಅದನ್ನು ಪ್ಲೇಯರಿಗೆ ಹಾಕುತ್ತಾರೆ. ದೃಶ್ಯ ಆರಂಭವಾಗುತ್ತದೆ. ಸೆರಗು ಜಾರಿಸಿದವಳ ಬೆನ್ನ ಮೇಲೆ ಕಡುಗಪ್ಪು ಮಚ್ಚೆ. ಹುಡುಗರ ಮುಖದಲ್ಲಿ ಆಶ್ಚರ್ಯ, ಗಾಬರಿ. ಆ ಸೆಕ್ಸು ಸಿನಿಮಾ ನೋಡಲು ಬಂದ ನಾಲ್ಕು ಜನ ಹುಡುಗರ ಪೈಕಿ ಒಬ್ಬನಂತೂ ಕೋಪದಿಂದ ಕೈಲಿದ್ದ ಬಾಟಲಿಯನ್ನು ಎಸೆದು ಟೀವಿ ಒಡೆದುಹಾಕುತ್ತಾನೆ. ಯಾಕೆಂದರೆ, ಟೀವಿಯಲ್ಲಿ ಪ್ರತ್ಯಕ್ಷವಾದವವಳು ಅವನ ತಾಯಿ!

–    ಹೀಗೆ ಬಿಡಿಬಿಡಿಯಾಗಿ ತೆರೆದುಕೊಳ್ಳುವ ಮೂರು ವಿಚಿತ್ರ ಕಥೆಗಳು, ಒಂದಕ್ಕೊಂದು ಸೂತ್ರ ಸಂಬಂಧವಿಲ್ಲದಂತೆ ಬಂದು ಹೋಗುತ್ತಿರುತ್ತವೆ. ಕಡೆಗೆ ಮೂರೂ ಕತೆಗಳು ಒಂದೇ ಬಿಂದುವಿನಲ್ಲಿ ಕೂಡಿಕೊಳ್ಳುತ್ತವೆ. ಈ ತಮಿಳು ಸಿನಿಮಾದ ಹೆಸರು ಸೂಪರ್ ಡಿಲಕ್ಸ್.

ಇಲ್ಲಿ ಸ್ಟಾರ್ ನಟ ವಿಜಯ್ ಸೇದುಪತಿ ಮಂಗಳಮುಖಿಯಾಗಿ ನಟಿಸಿದ್ದಾನೆ. ರಮ್ಯಾ ಕೃಷ್ಣ ವಯಸ್ಕರ ಸಿನಿಮಾದ ನಾಯಕಿಯಾಗಿಯೂ, ವಯಸ್ಸಿಗೆ ಬಂದ ಹುಡುಗನ ತಾಯಿಯಾಗಿಯೂ, ಖ್ಯಾತ ನಟಿ ಸಮಂತಾ ಗಂಡ ಇಲ್ಲದ ಸಮಯದಲ್ಲಿ ಸ್ನೇಹಿತನನ್ನು ಕರೆದು ಮಲಗಿಸಿಕೊಳ್ಳುವಂತಾ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಾಗಿದ್ದಿದ್ದರೆ ಇಂಥಾ ಸಿನಿಮಾವನ್ನು ಮಾಡಲು ಸ್ಟಾರ್‌ಗಳು ಇಮೇಜು ಅಡ್ಡ ಬರುತ್ತದೆ ಅನ್ನುತ್ತಿದ್ದರೇನೋ. ಆದರೆ ಸೂಪರ್ ಡಿಲಕ್ಸ್‌ನಲ್ಲಿ ಪಾತ್ರ ನಿಭಾಯಿಸಿರುವ ಪ್ರತಿಯೊಬ್ಬರೂ ಇಮೇಜನ್ನು ಕಿತ್ತೆಸೆದು ಅಪ್ಪಟ ಕಲಾವಿದರಂತೆ ಪಾತ್ರ ಪೋಷಿಸಿದ್ದಾರೆ.

ತ್ಯಾಗರಾಜನ್ ಕುಮಾರರಾಜ ನಿರ್ದೇಶನದ ಈ ಸಿನಿಮಾ ನೋಡುಗರನ್ನು ಬೇರೊಂದು ಜಗತ್ತಿಗೆ ಕರೆದುಕೊಂಡು ಹೋಗಿ ನಿಲ್ಲಿಸಿಬಿಡುತ್ತದೆ.

Continue Reading

ಸಿನಿಮಾ ಬಗ್ಗೆ

ಲಂಡನ್‌ನಲ್ಲಿ ಲಂಬೋದರ: ಸಂಗೀತ ನಿರ್ದೇಶಕ ಪ್ರಣವ್ ಗಾನ ಯಾನ!

Published

on

ರಾಜ್ ಸೂರ್ಯ ನಿರ್ದೇಶನದ ಲಂಡನ್ ನಲ್ಲಿ ಲಂಬೋದರ ಚಿತ್ರ ಇದೇ ಮಾರ್ಚ್ ಇಪ್ಪತ್ತೊಂಬತ್ತರಂದು ತೆರೆ ಕಾಣುತ್ತಿದೆ. ಈ ಸಿನಿಮಾ ಇದೀಗ ಎಲ್ಲರ ಗಮನ ಸೆಳೆದಿದೆಯಲ್ಲಾ? ಅದರಲ್ಲಿ ಪಕ್ಕಾ ಭಿನ್ನ ಧ್ವನಿ ಹೊಂದಿರೋ ಹಾಡುಗಳ ಪಾತ್ರವೂ ದೊಡ್ಡದಿದೆ. ಕೇಳಿದವರಿಗೆಲ್ಲ ಹೊಸಾ ಫೀಲ್ ಹುಟ್ಟಿಸುತ್ತಿರೋ ಈ ಹಾಡುಗಳನ್ನು ಎರಡು ವರ್ಷಗಳ ಕಾಲ ತಪಸ್ಸಿನಂತೆ ರೂಪಿಸಿರುವವರು ಸಂಗೀತ ನಿರ್ದೇಶಕ ಪ್ರಣವ್ ಅಯ್ಯಂಗಾರ್!
ಬೆಂಗಳೂರಿನಲ್ಲಿರುವ ಪ್ರಣವ್ ಸ್ಟುಡಿಯೋಸ್ ಮಾಲೀಕರೂ ಆಗಿರೋ ಪ್ರಣವ್ ಅಯ್ಯಂಗಾರ್ ಪಾಲಿಗದು ಕನಸಿನ ಕೂಸು. ಈಗಾಗಲೇ ಈ ಸ್ಟುಡಿಯೋ ಮೂಲಕ ಹಲವಾರು ಧಾರಾವಾಹಿಗಳ ಟೈಟಲ್ ಸಾಂಗ್ ಅನ್ನೂ ಪ್ರಣವ್ ರೂಪಿಸಿಕೊಟ್ಟಿದ್ದಾರೆ. ಇದಕ್ಕಾಗಿಯೇ ಆರ್ಯಭಟ ಪ್ರಶಸ್ತಿಯನ್ನೂ ಪಡೆದುಕೊಂಡಿರೋ ಹೆಮ್ಮೆ ಅವರದ್ದು. ನಮ್ಮಮ್ಮ ಶಾರದೆ, ಅರಸಿ ೨, ಅಶ್ವಿನಿ ನಕ್ಷತ್ರ ಮುಂತಾದ ಹತ್ತಕ್ಕೂ ಹೆಚ್ಚು ಜನಪ್ರಿಯ ಧಾರಾವಾಹಿಗಳಿಗೆ ಟೈಟಲ್ ಸಾಂಗ್ ರೂಪಿಸಿರುವ ಪ್ರಣವ್ ಆ ಮೂಲಕವೇ ಕಿರುತೆರೆ ಜಗತ್ತಿನಲ್ಲಿಯೂ ಹೆಜ್ಜೆಗುರುತು ಮೂಡಿಸಿದ್ದಾರೆ.

ಇದರ ಜೊತೆಗೇ ಪ್ರಣವ್ ಜಾಹೀರಾತು ಲೋಕಕ್ಕೂ ಚಿರಪರಿಚಿತರೇ. ಅನೇಕ ಕಾರ್ಪೋರೇಟ್ ಆಡ್, ಡಾಕ್ಯುಮೆಂಟರಿಗಳನ್ನೂ ಕ್ರಿಯೇಟಿವ್ ಆಗಿಯೇ ತಯಾರು ಮಾಡೋ ಮೂಲಕ ಪ್ರಣವ್ ಸ್ಟುಡಿಯೋಸ್ ಸಂಸ್ಥೆಯನ್ನು ಜನಪ್ರಿಯವಾಗಿಸಿದ್ದಾರೆ. ಹೀಗೆ ಪ್ರಣವ್ ಸ್ಟುಡಿಯೋಸ್ ಮೂಲಕ ಕಿರುತೆರೆ, ಜಾಹೀರಾತು ಲೋಕದಲ್ಲಿ ತೊಡಗಿಸಿಕೊಂಡಿರೋ ಪ್ರಣವ್ ಮೂಲತಃ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸಿಕೊಂಡಿರುವವರು. ಇದರೊಂದಿಗೆ ಪಾಶ್ಚಾತ್ಯ ಸಂಗೀತದತ್ತಲೂ ಆಸಕ್ತಿ ಹೊಂದಿ ಅದರಲ್ಲಿಯೂ ಛಾಪು ಮೂಡಿಸಿದ್ದಾರೆ. ಅವರೀಗ ಲಂಡನ್ ನಲ್ಲಿ ಲಂಬೋದರ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡೋ ಮೂಲಕ ತಮ್ಮ ಮೂಲ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಸಂಗೀತ ನಿರ್ದೇಶಕನಾಗಬೇಕು ಅನ್ನೋದನ್ನೇ ಪ್ರಧಾನ ಕನಸಾಗಿಸಿಕೊಂಡಿದ್ದ ಪ್ರಣವ್ ಅಯ್ಯಂಗಾರ್ ಮೂಲತಃ ಮೈಸೂರಿನವರು. ಅಲ್ಲಿಯೇ ಶಾಲೇ ಕಾಲೇಜು, ಸಂಗೀತಾಭ್ಯಾಸವನ್ನೆಲ್ಲ ಮುಗಿಸಿಕೊಂಡ ಅವರು ಬೆಂಗಳೂರಿಗೆ ಬಂದು ನೆಲೆಸಿ ಹದಿನಾಲಕ್ಕು ವರ್ಷಗಳು ಕಳೆದಿವೆ. ಪ್ರಣವ ಸ್ಟುಡಿಯೋಸ್ ಮೂಲಕ ಸಂಗೀತದ ಸಾಹಚರ್ಯದಲ್ಲಿಯೇ ತೊಡಗಿಕೊಂಡದ್ದ ಅವರ ಪಾಲಿಗೆ ಸಂಗೀತ ನಿರ್ದೇಶನ ಕನಸು. ಈ ಸಂಬಂಧವಾಗಿ ೨೦೧೦ರಲ್ಲಿಯೇ ಒಂದು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರಂತೆ. ಆದರೆ ಆ ನಂತರದಲ್ಲಿ ಧಾರಾವಾಹಿಗಳ ಶೀರ್ಷಿಕೆ ಗೀತೆ ಮತ್ತು ಜಾಹೀರಾತುಗಳನ್ನು ರೂಪಿಸುವ ಕಾರ್ಯದಲ್ಲಿ ಬ್ಯುಸಿಯಾಗಿದ್ದ ಪ್ರಣವ್ ಅವರಿಗೆ ಲಂಡನ್ ನಲ್ಲಿ ಲಂಬೋದರ ಚಿತ್ರದ ಸಂಗೀತ ನಿರ್ದೇಶನ ಮಾಡೋ ಅವಕಾಶ ಕೂಡಿ ಬಂದಿದ್ದು ಈಗ್ಗೆ ಎರಡು ವರ್ಷಗಳ ಹಿಂದೆ.

ಆ ಕ್ಷಣದಿಂದಲೇ ಪ್ರಣವ್ ಲಂಡನ್ ನಲ್ಲಿ ಲಂಬೋದರ ಚಿತ್ರದ ಸಂಗೀತದ ಜವಾಬ್ದಾರಿ ವಹಿಸಿಕೊಂಡು ಕಾರ್ಯಾರಂಭ ಮಾಡಿ ಬಿಟ್ಟಿದ್ದರು. ಅವರ ಮುಂದೆ ಎಲ್ಲ ಹಾಡುಗಳನ್ನೂ ಕೂಡಾ ಭಿನ್ನವಾಗಿಯೇ ರೂಪಿಸುವ ಸ್ಪಷ್ಟವಾದ ಆಕಾಂಕ್ಷೆಯಿತ್ತು. ಆದ್ದರಿಂದಲೇ ಭಿನ್ನವಾದ ಸಂಗೀತ ಮತ್ತು ಸೌಂಡಿಂಗ್ ನೊಂದಿಗೆ ಈ ಸಿನಿಮಾದ ಐದೂ ಹಾಡುಗಳನ್ನವರು ರೂಪಿಸಿದ್ದಾರೆ. ಇದರಲ್ಲಿ ಒಂದು ಹಾಡನ್ನು ನಿರ್ದೇಶಕ ಸಿಂಪಲ್ ಸುನಿ ಬರೆದಿದ್ದರೆ. ಲಂಬೋದರನ ಜರ್ನಿ ಮತ್ತು ಇಂಗ್ಲಿಷ್ ವ್ಯಾಮೋಹ ಸಾರುವ ಹಾಡೊಂದನ್ನು ಖುದ್ದು ಪ್ರಣವ್ ಅವರೇ ಬರೆದಿದ್ದಾರೆ. ಇನ್ನೊಂದು ರೊಮ್ಯಾಂಟಿಕ್ ಹಾಡನ್ನು ನಾಯಕಿ ಶ್ರುತಿ ಪ್ರಕಾಶ್ ಮತ್ತು ದೀಪಕ್ ದೊಡ್ಡೇರಾ ಹಾಡಿದ್ದಾರೆ. ಇನ್ನೊಂದು ಹಾಡನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ಇದೆಲ್ಲ ಹಾಡುಗಳೂ ಹಿಟ್ ಆಗಿವೆ. ಈ ಮೂಲಕವೇ ಪ್ರಣವ್ ಭರವಸೆಯ ಸಂಗೀತ ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ.

 

ಇಂಥಾದ್ದೊಂದು ಗೆಲುವಿಗೆ ಪ್ರೋಗಾಂ ಮಿಕ್ಸಿಂಗ್ ಮಾಡಿರೋ ಹೃದಯ್ ಗೋಸ್ವಾಮಿ, ಅಸಿಸ್ಟೆಂಟ್ ಪ್ರೋಗ್ರಾಮರ್ ಗಳಾದ ವಿಜೇತ್, ನಿಖಿಲ್ ಮುಂತಾದವರ ಶ್ರಮವೂ ಇದೆ. ಇನ್ನುಳಿದಂತೆ ಪ್ರಣವ್ ಮತ್ತು ಶಾಮ್ ಹಿನ್ನೆಲೆ ಸಂಗೀತವನ್ನೂ ನೀಡಿದ್ದಾರೆ. ಈ ಅವಧಿಯಲ್ಲಿ ಲಂಬೋದರನ ಹಾಸ್ಯ ಪ್ರವೃತ್ತಿಗೆ ತಕ್ಕಂತಾ ಸಂಗೀತ ಸೃಷ್ಟಿಸೋ ಕೆಲಸವನ್ನವರು ಭರ್ಜರಿಯಾಗಿ ಎಂಜಾಯ್ ಮಾಡುತ್ತಲೇ ನಿರ್ವಹಿಸಿದ್ದಾರಂತೆ. ಒಟ್ಟಾರೆಯಾಗಿ ಲಂಡನ್ ನಲ್ಲಿ ಲಂಬೋದರ ಒಂದು ವಿಶಿಷ್ಟ ಚಿತ್ರವಾಗಿ ನೆಲೆ ನಿಲ್ಲುತ್ತದೆ, ಅದ್ದೂರಿ ಗೆಲುವು ಪಡೆದುಕೊಳ್ಳುತ್ತದೆ ಎಂಬ ಭರವಸೆ ಪ್ರಣವ್ ಅವರದ್ದು.

Continue Reading

ಸಿನಿಮಾ ಬಗ್ಗೆ

ಆಂಜಿಗೆ ಜೋಡಿಯಾದ ಜಾಕಿ ಭಾವನಾ!

Published

on

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎ ಹರ್ಷ ನಿರ್ದೇಶನದಲ್ಲಿ ಮತ್ತೆ ನಟಿಸುತ್ತಿರೋ ವಿಚಾರ ಗೊತ್ತೇ ಇದೆ. ಮೈ ನೇಮ್ ಈಸ್ ಆಂಜಿ ಎಂಬ ಶೀರ್ಷಿಕೆಯ ಈ ಸಿನಿಮಾ ಬಗ್ಗೆ ಶಿವಣ್ಣನ ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ಈ ಆಂಜಿಗೆ ಯಾರು ನಾಯಕಿಯಾಗ್ತಾರೆ ಎಂಬ ಕುತೂಹಲ ಮಾತ್ರ ಹಾಗೆಯೇ ಉಳಿದುಕೊಂಡಿತ್ತು. ಇದೀಗ ಅದೂ ಪರಿಹಾರವಾಗಿದೆ!

ಮೈ ನೇಮ್ ಈಸ್ ಆಂಜಿ ಚಿತ್ರಕ್ಕೆ ಜಾಕಿ ಭಾವನಾ ನಾಯಕಿಯಾಗೋದು ಬಹುತೇಕ ಖಚಿತವಾಗಿದೆ. ಭಾವನಾ ಮತ್ತು ಶಿವಣ್ಣ ಯಶಸ್ವಿ ಜೋಡಿ ಎಂದೇ ಹೆಸರಾಗಿದ್ದಾರೆ. ಈ ಹಿಂದೆ ಸೂಪರ್ ಹಿಟ್ ಆಗಿದ್ದ ಟಗರು ಚಿತ್ರದಲ್ಲಿಯೂ ಈ ಜೋಡಿ ಒಟ್ಟಾಗಿ ನಟಿಸಿತ್ತು. ಇದೀಗ ಭಾವನಾ ಮೈ ನೇಮ್ ಈ ಸ್ ಆಂಜಿ ಮೂಲಕ ಮತ್ತೆ ಕನ್ನಡಕ್ಕೆ ಮರಳಿದ್ದಾರೆ.

ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ ಚಿತ್ರದ ಮೂಲಕವೇ ಕನ್ನಡಕ್ಕೆ ಪರಿಚಯವಾದ ಮಲೆಯಾಳಿ ಚೆಲುವೆ ಭಾವನಾ. ಆ ನಂತರದಲ್ಲಿ ಹೆಚ್ಚಾಗಿ ಕನ್ನಡದಲ್ಲಿಯೇ ಗುರುತಿಸಿಕೊಂಡಿದ್ದ ಭಾವನಾ ಇಲ್ಲಿನ ಮುಖ್ಯ ನಟಿಯಾಗಿಯೂ ಹೊರ ಹೊಮ್ಮಿದ್ದರು. ಈಗಂತೂ ಕನ್ನಡದ ಸೊಸೆಯಾಗಿರೋ ಭಾವನಾ ಆಂಜಿ ಮೂಲಕ ಇಲ್ಲಿಯೇ ಮತ್ತೆ ಮುಂದುವರೆಯೋ ಲಕ್ಷಣಗಳಿವೆ.

ಇನ್ನು ಇದು ಎ ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್ನಿನ ಮೂರನೇ ಚಿತ್ರ ಅನ್ನೋ ಕಾರಣದಿಂದಲೂ ಒಂದಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಭಜರಂಗಿ, ವಜ್ರಕಾಯದಂಥಾ ಹಿಟ್ ಚಿತ್ರ ಕೊಟ್ಟಿದ್ದ ಈ ಜೋಡಿ ಮೈ ನೇಮ್ ಈಸ್ ಆಂಜಿ ಮೂಲಕ ಅದನ್ನು ಮುಂದುವರೆಸುತ್ತಾ ಅನ್ನೋದನ್ನು ಕಾದು ನೋಡ ಬೇಕಿದೆ.

Continue Reading

Trending

Copyright © 2018 Cinibuzz