One N Only Exclusive Cine Portal

ಇದು ಪ್ರಥಮ್ ಬಿಲ್ಡಪ್!

ಡಿಂಚಾಕ್ ಪೂಜಾ ಗೊತ್ತಲ್ಲ? ತನ್ನ ಅಸಡಾ ಬಸಡಾ ಶೈಲಿಯ ಹಾಡುಗಳನ್ನು ಹಾಡಿ ರಾತ್ರೋರಾತ್ರಿ ಜಗತ್ ಪ್ರಸಿದ್ದಿ ಪಡೆದವಳು. ಈಕೆ ತಾನೇ ಹಾಡಿದ ವಿಚಿತ್ರ ಹಾಡುಗಳನ್ನು ತನ್ನ ಯೂಟ್ಯೂಬ್‌ಗೆ ಅಪ್ ಲೋಡ್ ಮಾಡಿದಳೆಂದರೆ ಒಂದೆರಡು ದಿನಗಳಲ್ಲೇ ಕೋಟಿಗಟ್ಟಲೆ ಜನ ನೋಡಿಬಿಡುತ್ತಾರೆ. ಆಕೆಯ ವಿಲಕ್ಷಣ ಹಾವಭಾವಗಳನ್ನು ನೋಡಲೆಂದೇ ಜನ ಮತ್ತೆ ಮತ್ತೆ ಕ್ಲಿಕ್ ಮಾಡೋದುಂಟು!

ಇಂಥ ಡಿಂಚಾಕ್ ಪೂಜಾಳನ್ನು ಪ್ರಥಮ್ ಬಿಲ್ಡಪ್ ಚಿತ್ರದಲ್ಲಿ ನಟಿಸಲು ಒಪ್ಪಿಸಿದ್ದಾರೆ. ‘ಇಂಟರ್ ನ್ಯಾಷನಲ್ ಕ್ರಶ್ ಒಬ್ಬಳು ನನ್ನ ಸಿನಿಮಾದಲ್ಲಿ ನಟಿಸಲಿದ್ದಾಳೆ’ ಅಂತಾ ಪ್ರಥಮ್ ಒಂದಷ್ಟು ದಿನದಿಂದ ಹೇಳಿಕೊಳ್ಳುತ್ತಲೇ ಇದ್ದರು. ಈಗ ಆ ಇಂಟರ್ ನ್ಯಾಷನಲ್ ಕ್ರಶ್ ಡಿಂಚಕ್ ಪೂಜಾ ಅನ್ನೋದನ್ನು ತಿಳಿದ ಜನ ನಿಜಕ್ಕೂ ಶಾಕ್ ಆಗಿದ್ದಾರೆ. ದೆಹಲಿ ತನಕ ಹೋಗಿ ಡಿಂಚಕ್ ಪೂಜಾಳನ್ನು ಹಿಡಿದು ಒಂದು ಹಾಡು ಮತ್ತು ಕೆಲವು ದೃಶ್ಯಗಳಲ್ಲಿ ನಟಿಸಲು ಒಪ್ಪಿಸಿಕೊಂಡುಬಂದಿರುವ ಪ್ರಥಮ್ ಈಗ ಮತ್ತೊಬ್ಬರನ್ನು ಒಪ್ಪಿಸುವ ಸಾಹಸಕ್ಕೆ ಮುಂದಾಗಿದ್ದಾರೆ. ಚಿತ್ರದಲ್ಲಿ ಡಿಂಚಕ್ ಪೂಜಾ ತಂದೆಯ ಪಾತ್ರಕ್ಕೆ ವಿಶೇಷ ವ್ಯಕ್ತಿಯೊಬ್ಬರ ಅವಶ್ಯಕತೆಯಿದೆಯಂತೆ. ಹೀಗಾಗಿ ಕನ್ನಡನಾಡಿನ ಎವರ್‌ಗ್ರೀನ್ ಹೋರಾಟಗಾರ, ರಾಜಕಾರಣಿ ವಾಟಾಳ್ ನಾಗರಾಜ್ ಅವರನ್ನು ಬಿಲ್ಡಪ್ ಚಿತ್ರದಲ್ಲಿ ಡಿಂಚಕ್ ಪೂಜಾಳ ತಂದೆಯಾಗಿ ನಟಿಸಿ ಎಂದು ಅವರ ಬೆನ್ನತ್ತಿ ಕೂತಿದ್ದಾರೆ ಪ್ರಥಮ್.

ಸರಿಸುಮಾರು 70ರ ದಶಕದಲ್ಲೇ ಸಿನಿಮಾ ರಂಗಕ್ಕೆ ಬರೋ ಮನಸ್ಸು ಮಾಡಿದ್ದ ವಾಟಾಳ್ ನಂತರ ಪೂರ್ಣಾವಧಿ ಹೋರಾಟಗಾರರಾದರು. ಈಗ ಕನ್ನಡವೇ ಬಾರದ ಡಿಂಚಾಕ್ ಪೂಜಾಳಿಗೆ ಪ್ರಥಮ್ ಕನ್ನಡ ಕಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ ವಾಟಾಳ್ ಅವರೇ ಆಕೆಯ ತಂದೆಯ ಪಾತ್ರದಲ್ಲಿ ನಟಿಸಬೇಕೆಂದು ಪ್ರಥಮ್ ಪಟ್ಟು ಹಿಡಿದು ಕೂತಿರೋದರ ಹಿಂದೆ ಏನೋ ಬಲವಾದ ಕಾರಣವೇ ಇದ್ದಂತಿದೆ.

ಇದೆಲ್ಲದರ ನಡುವೆ, ಬ್ಯಾಡ ಅಂದರೂ ಬಿಡದ ಪ್ರಥಮ್ ಕಾಟ ತಡೆದುಕೊಳ್ಳಲಾರದ ವಾಟಾಳ್ ‘ಆಗಿದ್ದಾಗ್ಲಿ ಪಾರ್ಟು ಮಡೇಬುಡ್ಲಾ?’ ಅಂತಾ ಟೋಪಿ ಮೇಲಿಂದಲೇ ತಲೆ ಕೆರೆದುಕೊಳ್ಳುತ್ತಾ ಯೋಚಿಸುತ್ತಿದ್ದಾರಂತೆ!

Leave a Reply

Your email address will not be published. Required fields are marked *


CAPTCHA Image
Reload Image